‘ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಿ’

7

‘ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಿ’

Published:
Updated:

ಚಾಮರಾಜನಗರ: ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಘಟಕದಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಉಪ್ಪಾರ ಜನಾಂಗದ ಹೋರಾಟಗಾರರು, ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಎದುರು ಸಮಾವೇಶಗೊಂಡು ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ತೆರಳಿದರು.

ಉಪ್ಪಾರರು ಅತಿ ಹಿಂದುಳಿದ ಮತ್ತು ಶೋಷಿತ ಜನಾಂಗದವರಾಗಿದ್ದಾರೆ. ಜನಾಂಗವನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರೂ, ಇದುವರೆಗೆ ಯಾವ ಸರ್ಕಾರವೂ ನಮ್ಮ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ, ನಮ್ಮ ಹಕ್ಕು ಪಡೆದುಕೊಳ್ಳಲು ರಾಜ್ಯದಾದ್ಯಂತ ಸಂಘಟಿತರಾಗಿ ಹೋರಾಟದ ಹಾದಿ ಅನುಸರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಜನಾಂಗವನ್ನು ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಬೆಂಗಳೂರಿನಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಿದ್ದರು. ಆದರೆ, ಇದುವರೆಗೂ ಅದನ್ನು ನೆರವೇರಿಸಿಲ್ಲ ಎಂದು ಆರೋಪಿಸಿದರು.

ಉಪ್ಪಾರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು ಸಮಿತಿ ರಚಿಸಬೇಕು. ಜನಾಂಗದವರು ವಾಸಿಸುವ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಂತೆ ಜನಾಂಗದ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ಪುನಃ ಆರಂಭಿಸಬೇಕು. ಉಪ್ಪಾರ ಜನಾಂಗದವರು ವಾಸವಿರುವ ಮೋಳೆ, ಗ್ರಾಮ, ದೊಡ್ಡಿ, ಹಟ್ಟಿ ಮುಂತಾದೆಡೆ ಮದ್ಯದಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಸಭೆ ಮತ್ತು ವಿಧಾನಪರಿಷತ್‌ಗೆ ಉಪ್ಪಾರ ಜನಾಂಗದವರನ್ನು ನೇಮಿಸಬೇಕು ಇಲ್ಲವೇ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿ ನೀಡಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ನಿಗಮದ ಮೂಲಕ ಬಡ್ಡಿರಹಿತ ಸಾಲ ಒದಗಿಸಿ ಸ್ವಯಂ ಉದ್ಯೋಗಕ್ಕೆ ಸೌಲಭ್ಯ ನೀಡಬೇಕು. ಉಪ್ಪಾರ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಹೊಸದುರ್ಗದ ಭಗೀರಥ ಪೀಠದ ಅಭಿವೃದ್ಧಿಗಾಗಿ ಪ್ರತಿ ವರ್ಷ ₹10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ಸ್ವಸಹಾಯ ಸ್ತ್ರೀಶಕ್ತಿ ಸಂಘಗಳಿಗೆ ಸರ್ಕಾರದ ವತಿಯಿಂದ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಮಹಿಳಾ ಸಂಘಗಳನ್ನು ಖಾಸಗಿ ಫೈನಾನ್ಸ್‌ಗಳಿಂದ ಸಾಲಮುಕ್ತಗೊಳಿಸಬೇಕು. ಮೈಸೂರಿನ ಉಪ್ಪಾರ ಹಾಸ್ಟೆಲ್‌ನ ಮೇಲೆ ಇರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಮಲೆಮಹದೇಶ್ವರ ಬೆಟ್ಟದಲ್ಲಿ ಎಣ್ಣೆ ಮಜ್ಜನ ಸೇವೆಯನ್ನು ಉಪ್ಪಾರ ಜನಾಂಗಕ್ಕೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ರಾಜ್ಯ ಮಹಿಳಾ ಕಾರ್ಯದರ್ಶಿ ಮಂಗಳಮ್ಮ, ಉಪಾಧ್ಯಕ್ಷೆ ಎಸ್‌.ಎಂ. ಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ಸಿ.ಕೆ. ರಂಗರಾಮು, ಮುಖಂಡರಾದ ಬಂಗಾರಶೆಟ್ಟಿ, ಮಲ್ಲೇಶ ಶೆಟ್ಟಿ, ಪುಟ್ಟಸ್ವಾಮಿ, ಶಿವಣ್ಣ, ಮಯೂರ, ಗೋವಿಂದಶೆಟ್ಟಿ, ಎಚ್‌.ಎಂ. ಸೋಮಣ್ಣ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry