ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಉಳಿವಿಗೆ ಮಾತೆಯೇ ಪ್ರಾಣದಾತೆ

Last Updated 28 ಜನವರಿ 2018, 9:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕನ್ನಡದಲ್ಲಿ ನಮ್ಮ ಮಕ್ಕಳಿಗೆ ಬೋಧನೆ ಮಾಡದ ಹೊರತು ನಮ್ಮ ಮಕ್ಕಳು ಕನ್ನಡ ಕಲಿಯುವುದಿಲ್ಲ. ಮಾತೆಯಾದವಳು ಮಾತೃಭಾಷೆಯನ್ನು ನಿರಾಕರಿಸಿದರೆ ಆ ಭಾಷೆಯನ್ನು ಯಾರೂ ಉಳಿಸಲು ಸಾಧ್ಯವಿಲ್ಲ. ಆದ್ದರಿಂದ ಕನ್ನಡ ಉಳಿಯಬೇಕಾದರೆ ಮಾತೆಯರೇ ಮುಂದೆ ಬಂದು ಅಭಿಮಾನದಿಂದ ಮಕ್ಕಳಿಗೆ ಕನ್ನಡ ಕಲಿಸಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಗುಡಿಬಂಡೆಯಲ್ಲಿ ಶನಿವಾರ ಆರಂಭಗೊಂಡ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಇವತ್ತು ನಾವು ಪಕ್ಕದ ಮನೆಯವರೊಂದಿಗೆ ಇಂಗ್ಲೆಂಡ್‌ ಭಾಷೆಯಲ್ಲಿ ಸಂಭಾಷಣೆ ಮಾಡುವ ಹಂತಕ್ಕೆ ತಲುಪಿದ್ದೇವೆ. ಇದು ಲಜ್ಜೆಗೇಡಿತನದ ಅವಸ್ಥೆ. ಭಾರತದವರು ಮನಸು ಮಾಡಿದರೆ ಏನೆಲ್ಲ ಮಾಡಬಹುದು. ಆದರೆ ನಾವು ಬ್ರಿಟಿಷರ ದಾಸ್ಯದಿಂದ ಇನ್ನೂ ಹೊರಬಂದಿಲ್ಲ. ಅವರು ಹೋದ ಬಳಿಕವೂ ನಾವು ಅವರು ರೂಪಿಸಿಕೊಟ್ಟ ಶಿಕ್ಷಣ ವ್ಯವಸ್ಥೆಯಲ್ಲೇ ಮುಂದುವರಿದಿರುವುದು ನಮ್ಮ ದುರ್ದೈವ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬ್ರಿಟಿಷರು ಸಂಸ್ಕೃತದಲ್ಲಿ ಇರುವುದು ಸುಳ್ಳು, ಇಂಗ್ಲಿಷ್‌ನಲ್ಲಿರುವುದು ನಿಜ ಎಂದದ್ದನ್ನು ನಂಬಿ ನಾವು ಸಂಸ್ಕೃತ ತಿರಸ್ಕರಿಸಿದೆವು. ಅದರ ಜತೆಗೆ ಆ ಭಾಷೆಯಲ್ಲಿದ್ದ ಅನೇಕ ಶಾಸ್ತ್ರ, ವಿದ್ಯೆಗಳನ್ನು ತಿರಸ್ಕರಿಸಿದೆವು. ಹೀಗಾಗಿ ಇದೀಗ ನಾವು ಇವತ್ತು ಹೊಸ ಶಾಸ್ತ್ರಗಳನ್ನು ಕನ್ನಡದಲ್ಲಿ ಆರಂಭಿಸಬೇಕಿದೆ. ಭೌತವಿಜ್ಞಾನ, ರಾಸಾಯನ ವಿಜ್ಞಾನ ಕನ್ನಡದಲ್ಲಿ ಬರಬೇಕಾಗಿವೆ’ ಎಂದು ಪ್ರತಿಪಾದಿಸಿದರು.

‘ಇವತ್ತು ಬಹುಪಾಲು ಶಿಕ್ಷಕರು ಭೌತವಿಜ್ಞಾನ, ರಾಸಾಯನ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಯಾಕೆ ಸಾಧ್ಯವಿಲ್ಲ? ವಿಜ್ಞಾನಿ ಸಿ.ಎನ್.ಆರ್.ರಾವ್ ಅವರೇ ಒಂದು ಬಾರಿ ಭೌತವಿಜ್ಞಾನವನ್ನು ಅಚ್ಚ ಕನ್ನಡದಲ್ಲಿ ಕಲಿಸಿದ್ದಾರೆ. ಆದರೆ ಅದನ್ನು ನಮ್ಮ ಶಿಕ್ಷಕರು ನಂಬುವುದಿಲ್ಲ. ನಮ್ಮ ದೇಶದ ಯಾವುದೇ ಭಾಷೆಯಲ್ಲಿ ಎಲ್ಲಾ ವಿದ್ಯೆಗಳನ್ನು ಕಲಿಸಲು ಸಾಧ್ಯ. ಆದರೆ ಆ ನಿಟ್ಟಿನಲ್ಲಿ ನಾವು ಇನ್ನೂ ಮನಸು ಮಾಡಿಲ್ಲ. ಇನ್ನಾದರೂ ಮಾಡಬೇಕಿದೆ’ ಎಂದು ಹೇಳಿದರು.

ಕನ್ನಡ ಅನ್ನದ ಭಾಷೆಯಾಗಲಿ: ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ಭಾಷೆಯೊಂದು ಅನ್ನ, ವ್ಯಾಪಾರ ಮತ್ತು ಅಧಿಕಾರದ ಭಾಷೆಯಾಗುವ ಮುಖಾಂತರ ಬೆಳೆಯುತ್ತದೆ. ಆದರೆ ಇವತ್ತು ಕನ್ನಡಕ್ಕೆ ಇಂಗ್ಲಿಷ್‌ ಭಾಷೆಗೆ ಇರುವ ವ್ಯಾಪಾರಿ ಗುಣ ಮತ್ತು ಮೌಲ್ಯವಿಲ್ಲ. ಅನ್ನದ ಭಾಷೆಯಾಗುವುದೂ ಕಷ್ಟವಾಗಿದೆ. ಇವತ್ತು ಇಂಗ್ಲಿಷ್ ಕಲಿತರೆ ಬುದ್ಧಿವಂತರಾಗುವುದು ಅಷ್ಟೇ ಅಲ್ಲ ಉದ್ಯೋಗ ಸಿಗುತ್ತದೆ. ಅನುಕೂಲಸ್ಥರಾಗಿ ಎಲ್ಲರಂತೆ ಮುಂದೆ ಬರುತ್ತೇವೆ ಎನ್ನುವ ಮನೋಭಾವ ಎಲ್ಲರಲ್ಲೂ ಬರುತ್ತಿರುವುದರಿಂದ ಇಂಗ್ಲಿಷ್‌ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಇದಕ್ಕೆ ಮೊದಲಿನಿಂದಲೂ ಆಡಳಿತ ನಡೆಸಿಕೊಂಡು ಬಂದವರೇ ಕಾರಣ. ಕನ್ನಡ ಕಲಿತರೆ ಉದ್ಯೋಗ ಖಾತ್ರಿ ಇದೆ ಎನ್ನುವ ವಾತಾವರಣ ನಿರ್ಮಿಸಿದರೆ ಜನರು ಇಂಗ್ಲಿಷ್‌ ಶಾಲೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ಬಿಟ್ಟು ಕನ್ನಡ ಶಾಲೆಗಳಿಗೆ ಮುಗಿಬೀಳುತ್ತಾರೆ. ಸರ್ಕಾರ ಕನ್ನಡದ ಉದ್ಧಾರಕ್ಕೆ ನೂರಾರು ಸುತ್ತೋಲೆ ಹೊರಡಿಸುವುದು ಬೇಕಿಲ್ಲ. ಕನ್ನಡ ಕಲಿತವರಿಗೆ ಅನ್ನ, ಉದ್ಯೋಗ ಸಿಗುತ್ತದೆ ಎನ್ನುವ ವಾತಾವರಣ ನಿರ್ಮಿಸಿದರೆ ಸಾಕು’ ಎಂದು ತಿಳಿಸಿದರು.

‘ಬರೀ ಭಾಷಣದಿಂದ ಕನ್ನಡದ ಉದ್ಧಾರ ಮಾಡಲು ಆಗುವುದಿಲ್ಲ. ತಾಯಿ, ತಾಯ್ನುಡಿ ಮತ್ತು ತಾಯ್ನಾಡು ಇವುಗಳ ಮಹತ್ವ ನಾವು ಕಂಡುಕೊಂಡು ಪ್ರಥಮ ಸ್ಥಾನ ಕೊಡಲೇ ಬೇಕು. ನಮ್ಮ ನುಡಿಯನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು. ಕನ್ನಡ ಅನ್ನದ ಭಾಷೆಯಾಗದೇ ಹೋದರೆ ಅದನ್ನು ಏಕೆ ಕಲಿಯಲು ಹೋಗುತ್ತಾರೆ? ಆಗ ಅದು ಮನೆ ಮಾತಾಗಿ ಮನೆಯೊಳಗೆ ಉಳಿದುಕೊಳ್ಳುತ್ತದೆ’ ಎಂದರು.

ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಗುಡಿಬಂಡೆ ಊರು ಚಿಕ್ಕದಿರಬಹುದು. ಆದರೆ ಕೀರ್ತಿ ದೊಡ್ಡದು. ಇಲ್ಲಿ ಹೆಚ್ಚಿನವರ ಮಾತೃಭಾಷೆ ತೆಲುಗು ಇರಬಹುದು. ಆದರೆ ನಮ್ಮ ಜನ ಕನ್ನಡವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ. ಆದರೆ ಇವತ್ತು ನಗರದಲ್ಲಿ ಕನ್ನಡ ಮಾತನಾಡುವುದೇ ನಾಚಿಕೆ ಸಂಗತಿ ಎನ್ನುವ ವಾತಾವರಣ ಮನೆ ಮಾಡುತ್ತಿದೆ. ಸಭೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ಅಧಿಕಾರಿಗಳು ಏನು ಅರಿಯದವರ ರೀತಿ ವರ್ತಿಸುತ್ತಾರೆ’ ಎಂದು ಹೇಳಿದರು.

‘ಪಟ್ಟಣಕ್ಕೆ ಹೋಗಿ ಸೂಟು–ಬೂಟು ತೊಡುವ ಮಕ್ಕಳು ಹಳ್ಳಿಯಿಂದ ಪಂಚೆ ಉಟ್ಟು ಬಂದ ಅಪ್ಪ–ಅಮ್ಮನನ್ನು ತಮ್ಮ ತಂದೆ–ತಾಯಿ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ರೀತಿಯಲ್ಲಿ ಇವತ್ತು ಜನರು ಕನ್ನಡ ಮಾತನಾಡಲು ನಾಚಿಕೆಪಟ್ಟುಕೊಳ್ಳುತ್ತಿದ್ದಾರೆ. ಇದಕ್ಕಿಂತ ಬೇಸರದ ಸಂಗತಿ ಇಲ್ಲ. ನಮ್ಮ ನಾಡು, ಗುರುಹಿರಿಯರು, ಪೋಷಕರನ್ನು ನಾವು ಮೊದಲು ಗೌರವಿಸಬೇಕು. ಇಲ್ಲದಿದ್ದರೆ ನಾವು ಯಾವುದೇ ಪ್ರಶಸ್ತಿ ಪಡೆದರೂ ವ್ಯರ್ಥ. ಗುಡಿಬಂಡೆಯಲ್ಲಿ ಕನ್ನಡ ಭವನಕ್ಕೆ ಜಾಗ ಒದಗಿಸಲು ಮತ್ತು ಅದಕ್ಕೆ ಬೇಕಾದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಬಿ.ಗಂಗಾಧರಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಸಾಹಿತಿ ಕೆ.ಬಿ.ಸಿದ್ದಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವರಲಕ್ಷ್ಮೀ ಎವಿಟಿ ನಾರಾಯಣಸ್ವಾಮಿ, ಗಾಯತ್ರಿ ನಂಜುಂಡಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಅನುರಾಧಾ ಆನಂದ್ ಉಪಸ್ಥಿತರಿದ್ದರು.

ಬ್ರಿಟಿಷರು ಭಾರತಕ್ಕೆ ಬಂದು ಆಡಳಿತ ನಡೆಸಿದ್ದರಿಂದ ಕೆಟ್ಟದ್ದಕ್ಕಿಂತ ಹೆಚ್ಚು ಒಳ್ಳೆಯದಾಗಿದೆ. ಭಾರತೀಯರ ಮೂರನೇ ಕಣ್ಣು ತೆರೆಸಿದ್ದು ಬ್ರಿಟಿಷರ ಶಿಕ್ಷಣ ಪದ್ಧತಿ ಎಂದು ಹೇಳಲು ನನಗೆ ಸಂಕೋಚವಿಲ್ಲ. ಅವರ ಶಿಕ್ಷಣದಿಂದಲೇ ನಮ್ಮಲ್ಲಿ ಬದಲಾವಣೆಯಾಯಿತು. ಒಂದೊಮ್ಮೆ ಬ್ರಿಟಿಷ್ ಪೂರ್ವದ ವ್ಯವಸ್ಥೆ ನಮ್ಮಲ್ಲಿ ಹಾಗೇ ಮುಂದುವರಿದಿದ್ದರೆ ಇಂದಿಗೂ ನಮಗೆ ಅಸ್ಪೃಶ್ಯತೆ, ಜಾತಿ ತಾರತಮ್ಯ, ಹೆಣ್ಣು–ಗಂಡಿನ ಭೇದ ತಪ್ಪು ಎಂದು ಎನಿಸುತ್ತಿರಲಿಲ್ಲ’ ಎಂದು ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದರು.

‘ಬ್ರಿಟಿಷರು ಇಲ್ಲಿ ಸಾಕಷ್ಟು ದೋಚಿದ್ದಾರೆ. ಕುಯುಕ್ತಿಯಿಂದ ಸಮಾಜದಲ್ಲಿ ವಿಭಜನೆಯ ಬೀಜ ಹಾಕಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ತಿರಸ್ಕಾರದಿಂದ ನೋಡುವ ವಾತಾವರಣ ಸೃಷ್ಟಿಸಿದ್ದು ನಿಜ. ಆದರೆ 56 ರಾಜ್ಯಗಳನ್ನು ಒಂದುಗೂಡಿಸಿ ಆಡಳಿತಾತ್ಮಕವಾಗಿ ಒಂದು ದೇಶದ ಕಲ್ಪನೆ ತಂದುಕೊಟ್ಟರು. ಜಾತಿ, ಮತಭೇದವಿಲ್ಲದೆ ಏಕರೂಪದ ಶಿಕ್ಷಣ, ಆಡಳಿತ ವ್ಯವಸ್ಥೆ ತಂದರು’ ಎಂದು ತಿಳಿಸಿದರು.

‘ಬ್ರಿಟಿಷ್ ಪೂರ್ವ ಭಾರತದಲ್ಲಿ ವರ್ಣ ವ್ಯವಸ್ಥೆಯ ನೀತಿಯಿಂದಾಗಿ ಶಿಕ್ಷಣ, ವ್ಯಾಪಾರ, ಉದ್ಯೊಗ ಕೆಲವರಿಗೆ ಸೀಮಿತವಾಗಿದ್ದವು. ಬ್ರಿಟಿಷರು ನಮ್ಮನ್ನು ಶಿಕ್ಷಿತರನ್ನಾಗಿ ಮಾಡದಿದ್ದರೆ ಯಾವುದೆಲ್ಲ ಸಮಾಜವನ್ನು ದುರ್ಬಲಗೊಳಿಸುತ್ತ ಬಂದಿದ್ದವೋ ಅವು ತಪ್ಪು ಎಂದು ನಮಗೆ ಅನಿಸುತ್ತಿರಲಿಲ್ಲ. ನಾವು ಎಷ್ಟೊಂದು ಬದಲಾದರೂ ನಮ್ಮಲ್ಲಿ ಮನುವನ್ನು ಪೂಜ್ಯ ಭಾವನೆಯಿಂದ ಕಾಣುವ ಮಹನೀಯರು ಇನ್ನೂ ಈ ದೇಶದಲ್ಲಿದ್ದಾರೆ. ವರ್ಣ ವ್ಯವಸ್ಥೆ ಪವಿತ್ರ ಎಂದು ಹೇಳುವ ಜನರಿದ್ದಾರೆ. ಹಳೆಯ ಶಾಸ್ತ್ರಗಳು ಪ್ರಶ್ನಾತೀತ, ದೈವಕೃತ ಎಂದು ಹೇಳುವವರೂ ಇದ್ದಾರೆ’ ಎಂದರು.

‘ನಮ್ಮ ಪರಂಪರೆಯಲ್ಲಿ ಇರುವುದೆಲ್ಲವೂ ನಾವು ನಿರಾಕರಿಸಬೇಕು ಎನ್ನುವುದು ಒಳ್ಳೆಯಲ್ಲ. ಅದರಲ್ಲೂ ಉದಾತ್ತ ಮೌಲ್ಯಗಳು, ದರ್ಶನಗಳಿವೆ. ಅದ್ಭುತವಾದ ಪ್ರಯೋಗಶೀಲತೆ ಇದೆ. ನಮ್ಮಲ್ಲಿ ಮಹಾ ಸಂಸ್ಕೃತಿ, ಬಹು ದೊಡ್ಡ ಮೇಧಾಶಕ್ತಿ, ಹೃದಯವಂತಿಕೆ ಇದೆ. ಅದೇ ರೀತಿ ಸಾಕಷ್ಟು ದೋಷ, ದೌರ್ಬಲ್ಯ, ಕ್ರೌರ್ಯ, ಹಿಂಸೆ ಇದೆ. ಹಳತು ಮತ್ತು ಹೊಸತರಲ್ಲಿರುವ ಒಳ್ಳೆಯದು ಉಳಿಸಿಕೊಳ್ಳೋಣ. ಕೆಟ್ಟದ್ದು ಕೈಬಿಡೋಣ. ಈ ನಿಟ್ಟಿನಲ್ಲಿ ಮರು ಚಿಂತನೆ ನಡೆಸುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.

* * 

9–10ನೇ ಶತಮಾನದ ಕನ್ನಡಿಗರಲ್ಲಿದ್ದ ಕ್ಷಾತ್ರ ಗುಣ 21ನೇ ಶತಮಾನದ ಕನ್ನಡಿಗರ<br/>ಲ್ಲಿಲ್ಲ. ನಾಡು, ನುಡಿ ವಿಚಾರದಲ್ಲಿ ಅಭಿ<br/>ಮಾನ ಬಂದಾಗಷ್ಟೇ ಗೌರವ ಬರುತ್ತದೆ.
ವೀರಭದ್ರಚನ್ನಮಲ್ಲ ಸ್ವಾಮೀಜಿ,
ನಿಡುಮಾಮಿಡಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT