‘ರೈತರಿಗೆ ಚಿನ್ನಕ್ಕೆ ಶೇ 4 ಬಡ್ಡಿಯಲ್ಲಿ ಸಾಲ ನೀಡಲು ಸೂಚಿಸುವಂತೆ ರಾಹುಲ್‌ ಗಾಂಧಿಗೆ ಮನವಿ’

7

‘ರೈತರಿಗೆ ಚಿನ್ನಕ್ಕೆ ಶೇ 4 ಬಡ್ಡಿಯಲ್ಲಿ ಸಾಲ ನೀಡಲು ಸೂಚಿಸುವಂತೆ ರಾಹುಲ್‌ ಗಾಂಧಿಗೆ ಮನವಿ’

Published:
Updated:

ಚಿಕ್ಕಮಗಳೂರು: ‘ಸಹಕಾರ ಬ್ಯಾಂಕುಗಳಿಗೆ ₹ 5 ಸಾವಿರ ಕೋಟಿ ಬಿಡುಗಡೆ ಮಾಡಿ, ರೈತರು ಅಡವಿಟ್ಟ ಚಿನ್ನಕ್ಕೆ ಶೇ 4 ಬಡ್ಡಿ ದರದಲ್ಲಿ ಸಾಲ ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮನವಿ ಮಾಡಲಾಗುವುದು’ ಎಂದು ಕೆಪಿಸಿಸಿ ಕಿಸಾನ್‌ ಖೇತ್‌ ಮಜ್ದೂರ್‌ ಅಧ್ಯಕ್ಷ ಸಚಿನ್‌ ಮೀಗಾ ಇಲ್ಲಿ ಶನಿವಾರ ತಿಳಿಸಿದರು.

‘ರಾಜ್ಯ ಪ್ರವಾಸದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಆಗ ಮನವಿ ನೀಡಲಾಗುವುದು. ರೈತರು ಖಾಸಗಿ ಫೈನಾನ್ಸ್‌ ಸಂಸ್ಥೆಗಳಲ್ಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟು ಬಡ್ಡಿ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಸಾಲ ತೀರಿಸಲಾಗದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ರಕ್ಷಣೆ ನಿಟ್ಟಿನಲ್ಲಿ ಸಹಕಾರ ಬ್ಯಾಂಕುಗಳಿಗೆ ಚಿನ್ನಾಭರಣ ಸಾಲಕ್ಕೆ ₹ 5 ಸಾವಿರ ಕೋಟಿ ಬಿಡುಗಡೆ ಮಾಡಿ ಅದಕ್ಕೆ ಶೇ 6 ಸಬ್ಸಿಡಿ ನೀಡಬೇಕು. ಶೇ 4 ಬಡ್ಡಿ ದರದಲ್ಲಿ ಸಾಲ ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರನ್ನು ಕೋರಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಫಿ, ಅಡಿಕೆ, ತೆಂಗು ಇತರ ವಾಣಿಜ್ಯ ಬೆಳೆ ಕೃಷಿಕರು ಫಸಲು ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಬಡ್ಡಿಮನ್ನಾ ಪ್ರಯೋಜನ ಪಡೆಯಲು ವಿಫಲರಾಗಿದ್ದಾರೆ. ಬಡ್ಡಿ ಮನ್ನಾಕ್ಕೆ ನಿಗದಿಪಡಿಸಿದ್ದ ಅವಧಿ ಮುಗಿದಿದೆ. ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಬಡ್ಡಿ ಮನ್ನಾ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು ಎಂದು ಮನವಿ ಮಾಡಲಾಗುವುದು’ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದುತ್ವ, ಕೋಮುವಾದ, ದ್ವೇಷ ರಾಜಕೀಯದಲ್ಲಿ ಮುಳುಗಿದ್ದಾರೆ. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು.

‘ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ಮನ್ನಾ , ಪ್ರಧಾನಮಂತ್ರಿ ಬೆಳೆ ವಿಮೆಯಡಿ ವ್ಯಕ್ತಿಗತವಾಗಿ ವಿಮೆ ಪರಿಹಾರ ಸಿಗುವಂತೆ ವಿಮಾ ಯೋಜನೆಯ ಮಾನದಂಡ ಬದಲಾಯಿಸಬೇಕು, ಗೋರಖ್‌ ಸಿಂಗ್‌ ವರದಿ ಆಧಾರಿತವಾಗಿ ಹಳದಿ ಎಲೆ ರೋಗಬಾಧಿತ ಅಡಿಕೆ ಬೆಳೆಗಾರರ ಸಾಲಮನ್ನಾ, ಸ್ವಾಮಿನಾಥನ್‌ ವರದಿಯಂತೆ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ 50 ಲಾಭ ನಿಗದಿ, ಕಳಸ–ಬಂಡೂರಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಿ ಇತ್ಯರ್ಥಪಡಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಫಸಲ್‌ ಬಿಮಾ ಯೋಜನೆಯಡಿ ಯೂನಿವರ್ಸಲ್‌ ಸೊಂಪೊ ವಿಮಾ ಕಂಪನಿಯವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಪ್ರಧಾನಿ ವಿರುದ್ಧ ಸಿಬಿಐಗೆ ದೂರು ಸಲ್ಲಿಸಲಾಗಿದೆ. ಇದೇ 24ರಂದು ಸಿಬಿಐ ವರದಿ ಸಲ್ಲಿಸಬೇಕಿತ್ತು. ಇದೇ 30ರೊಳಗೆ ವರದಿ ಸಲ್ಲಿಸದಿದ್ದರೆ, ಬೆಂಗಳೂರಿನ ಸಿಬಿಐ ಕಚೇರಿ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ರಾಹುಲ್‌ ಗಾಂಧಿ ಅವರು ಎರಡನೇ ಹಂತದ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ, ತರೀಕೆರೆ, ಕಡೂರು, ಚಿಕ್ಕಮಗಳೂರು, ಶೃಂಗೇರಿಗೆ ಭೇಟಿ ನೀಡುವರು’ ಎಂದರು. ಕಾಂಗ್ರೆಸ್‌ ಮುಖಂಡರಾದ ಅಕ್ಮಲ್‌, ಪೃಥ್ವಿರಾಜ್‌, ಪ್ರಸಾದ್‌, ಆನಂದ್‌, ನಯಾಜ್‌, ಸುಜಿತ್‌, ಸುಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry