ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಘಟ್ಟೆಯ ದುರ್ಗಾಂಬ ದೇವಿ ರಥೋತ್ಸವ ಸಂಪನ್ನ

Last Updated 28 ಜನವರಿ 2018, 9:48 IST
ಅಕ್ಷರ ಗಾತ್ರ

ಕಡೂರು ತಾಲ್ಲೂಕಿನ ಅಂತರಘಟ್ಟೆಯ ದುರ್ಗಾಂಬ ದೇವಿ ರಥೋತ್ಸವ ಸಾವಿರಾರು ಭಕ್ತರ ಶ್ರದ್ಧಾಭಕ್ತಿಯ ನಡುವೆ ಸಡಗರ ಸಂಭ್ರಮಗಳಿಂದ ನಡೆಯಿತು. ಶನಿವಾರ ಬೆಳಿಗ್ಗೆಯಿಂದಲೇ ರಥೋತ್ಸವದ ವಿಧಿವಿಧಾನಗಳು ಆರಂಭವಾದವು. ದುರ್ಗಾಂಭ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಉತ್ಸವ ಮೂರ್ತಿಯನ್ನು ಆಲಂಕೃತ ರಥದ ಸುತ್ತ ಮೂರು ಸುತ್ತು ತರಲಾಯಿತು. ಈ ಸಂದರ್ಭ ಕಡೂರು ಶಾಸಕ ವೈ.ಎಸ್.ವಿ ದತ್ತ ಮತ್ತು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಇಬ್ಬರೂ ದೇವರ ಅಡ್ಡೆಯನ್ನು ಹೊತ್ತು ಸಾಗಿದ್ದು ವಿಶೇಷವಾಗಿತ್ತು.

ಭಕ್ತರ ಜಯಘೋಷದ ನಡುವೆ ದೇವಿಯನ್ನು ರಥಾರೋಹಣ ಮಾಡಿಸಲಾಯಿತು. ಸಾವಿರಾರು ಭಕ್ತರು ಬಾಳೆ ಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಸಂಭ್ರಮಿಸಿದರು. ರಥದೊಳಗೆ ಆಸೀನಳಾದ ದೇವಿಗೆ ಮಹಾ ಮಂಗಳಾರತಿ ಮಾಡಿದ ನಂತರ ರಥಕ್ಕೆ ಪೂಜೆ ನಡೆಯಿತು. ನೂರಾರು ತೆಂಗಿನಕಾಯಿಗಳನ್ನು ರಥಕ್ಕೆ ಭಕ್ತರು ಒಡೆದರು. ನಂತರ ಬಲಿ ಪೂಜೆ ನಡೆದ ನಂತರ ಭಕ್ತರು ಜಯಘೋಷಗಳನ್ನು ಕೂಗುತ್ತ ರಥವನ್ನು ಉತ್ಸಾಹದಿಂದ ಎಳೆದರು.

ಈ ಭಾಗದ ಗ್ರಾಮೀಣ ಜನತೆಯ ಮೆಚ್ಚಿನ ದೇವರಾದ ಅಂತರಘಟ್ಟೆಯ ದುರ್ಗಾಂಬ ದೇವಿ ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಅಲಂಕೃತ ಎತ್ತನ ಗಾಡಿಗಳಲ್ಲಿ ಜನರು ಬಂದು ಮೂರ್ನಾಲ್ಕು ದಿನ ಇಲ್ಲಿಯೇ ತಂಗುತ್ತಾರೆ. ಇದಲ್ಲದೆ ಹೊರ ಜಿಲ್ಲೆಗಳಿಂದಲೂ ಭಕ್ತರ ದಂಡೇ ಬರುತ್ತದೆ. ಭಕ್ತರ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದ ಸಮಿತಿಯಿಂದ ಮಾಡಲಾಗಿತ್ತು.

ಜನರು ಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತ ದೇವಿ ದರ್ಶನ ಪಡೆದರು. ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಆಡಳಿತ ಜಾತ್ರಾ ಮಹೋತ್ಸವದಲ್ಲಿ ಮೂಲ ಸೌಕರ್ಯ ಒದಗಿಸಿತ್ತು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರೆ, ಆರೋಗ್ಯ ಇಲಾಖೆಯಿಂದ ತುರ್ತು ಸಂದರ್ಭಕ್ಕಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT