ಮೂರೂ ಪಕ್ಷಗಳಲ್ಲಿ ಟಿಕೆಟ್‌ಗೆ ಪೈಪೋಟಿ

7

ಮೂರೂ ಪಕ್ಷಗಳಲ್ಲಿ ಟಿಕೆಟ್‌ಗೆ ಪೈಪೋಟಿ

Published:
Updated:

ಧಾರವಾಡ: ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರವನ್ನು ಉಳಿಸಿಕೊಳ್ಳುವ ತವಕ ಬಿಜೆಪಿಗೆ, ಮರಳಿ ಪಡೆಯುವ ಹಠ ಕಾಂಗ್ರೆಸ್‌ಗೆ ಹಾಗೂ ಖಾತೆ ತೆರೆಯುವ ಉತ್ಸಾಹ ಜೆಡಿಎಸ್‌ ಪಕ್ಷದ ನಾಯಕರಲ್ಲಿದ್ದರೂ, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಕಳೆದ ಮೂರು ದಶಕಗಳ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇ ಈ ಕ್ಷೇತ್ರದಲ್ಲಿ ಮೇಲೆ ಪ್ರಾಬಲ್ಯ ಮೆರೆದಿವೆ. 1983ರಿಂದ ಇಲ್ಲಿಯವರೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಆರ್‌.ಮೋರೆ ಹಾಗೂ ಬಿಜೆಪಿಯಲ್ಲಿದ್ದ ಚಂದ್ರಕಾಂತ ಬೆಲ್ಲದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಈಗ ಚಂದ್ರಕಾಂತ ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ  ಶಾಸಕರಾಗಿದ್ದಾರೆ.

ಬಿಜೆಪಿಯಲ್ಲಿ ಅರವಿಂದ ಬೆಲ್ಲದ ಒಬ್ಬರೇ ಆಕಾಂಕ್ಷಿಯಾಗಿದ್ದರು. ಈಗ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಈರೇಶ ಅಂಚಟಗೇರಿ, ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುವ ಮೂಲಕ ಟಿಕೆಟ್‌ಗೆ ಪೈಪೋಟಿ ಆರಂಭಿಸಿದ್ದಾರೆ. ಅಂಚಟಗೇರಿ ಅವರು, ಸಂಸದ ಪ್ರಹ್ಲಾದ ಜೋಶಿ ಅವರ ಆಪ್ತ ಎಂಬ ಕಾರಣಕ್ಕೆ ಅವರ ಉಮೇದುವಾರಿಕೆಯನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ದಂಡೇ ಸಜ್ಜಾಗಿದೆ. ಈಗಾಗಲೇ ಎಂಟು ಮಂದಿ, ತಾವೂ ಆಕಾಂಕ್ಷಿಗಳು ಎಂದು ಘೋಷಿಸಿಕೊಂಡಿದ್ದಾರೆ. ಕ್ಷೇತ್ರದ ಹಳೆಯ ಹುರಿಯಾಳು ಎಸ್‌.ಆರ್‌.ಮೋರೆ ಅವರು ನೇಪಥ್ಯಕ್ಕೆ ಸರಿದರು ಎಂದುಕೊಳ್ಳುವಾಗಲೇ ಸಾಮೂಹಿಕ ವಿವಾಹ ಆಯೋಜಿಸಿ, ಮುಖ್ಯಮಂತ್ರಿ ಅವರನ್ನು ಆಹ್ವಾನಿಸುವ ಮೂಲಕ ಟಿಕೆಟ್‌ ಆಕಾಂಕ್ಷಿ ಎಂಬ ಸಂದೇಶವನ್ನು ಪಕ್ಷದ ಮುಖಂಡರಿಗೆ ಪರೋಕ್ಷ ಮುಟ್ಟಿಸಿದ್ದಾರೆ.

ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಅವರೂ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನ ಅಂಡಮಾನ್ ವೀಕ್ಷಕರಾಗಿರುವ ಇವರು, ಟಿಕೆಟ್‌ ಪಡೆಯಲು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಮೂಲಕ ನೇರವಾಗಿ ಹೈಕಮಾಂಡ್‌ ಕದ ತಟ್ಟಿದ್ದಾರೆ. ಇಸ್ಮಾಯಿಲ್‌ ತಮಟಗಾರ, ನಾಗರಾಜ ಗೌರಿ, ಶರಣಪ್ಪ ಕೊಟಗಿ, ಸ್ವಾತಿ ಮಾಳಗಿ, ದಾಕ್ಷಾಯಿಣಿ ಬಸವರಾಜ, ರಜಿಯಾ ಬೇಗಂ ಸಂಗೊಳ್ಳಿ ಕೂಡಾ ಟಿಕೆಟ್ ನೀಡಿದರೆ, ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಸ್.ಆರ್.ಮೋರೆ, ದೀಪಕ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಟಗಾರ ನಡುವೆ ಪೈಪೋಟಿ ತೀವ್ರವಾಗಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸೀಮರದ, ಪಾಲಿಕೆ ಸದಸ್ಯ ಅಲ್ತಾಫ್‌ ಕಿತ್ತೂರ, ಮೋಹನ ಮೋರೆ, ಡಾ. ಎನ್.ಬಿ.ಶೂರಪಾಲಿ ಅವರು ಆಕಾಂಕ್ಷಿಗಳಿದ್ದಾರೆ.

ಟಿಕೆಟ್‌ ಖಚಿತ: ಬೆಲ್ಲದ

ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್‌ ನನಗೆ ಖಚಿತ. ಈ ಹಿಂದೆ ಕಲಘಟಗಿ ಅಥವಾ ಹುಬ್ಬಳ್ಳಿ ಕೇಂದ್ರ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ಅವೆಲ್ಲವೂ ಊಹಾಪೋಹ. ವರಿಷ್ಠರ ಸೂಚನೆಯಂತೆ ಈಗಾಗಲೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ

 ಅರವಿಂದ ಬೆಲ್ಲದ, ಶಾಸಕ, ಹುಬ್ಬಳ್ಳಿ–ಧಾರವಾಡ ಪಶ್ಚಿಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry