21 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ

7

21 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ

Published:
Updated:
21 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ

ಧಾರವಾಡ: ಮತದಾನದ ಮಹತ್ವವನ್ನು ಜನತೆಗೆ ಸಾರುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 21 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳು ಬೃಹತ್ ಮಾನವ ಸರಪಳಿ ನಿರ್ಮಿಸಿದರು.

ಇಲ್ಲಿನ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಪ್ರಜಾತಂತ್ರ ಬಲಪಡಿಸುವಲ್ಲಿ ಮತದಾರ ಮತ್ತು ಮತದಾನದ ಪಾತ್ರ ಬಹುಮುಖ್ಯವಾಗಿದ್ದು. ಇದರ ಮಹತ್ವವನ್ನು ಪ್ರತಿ ಕುಟುಂಬದ ಸದಸ್ಯರಿಗೆ ತಲುಪಿಸಲು ಯುವ ಸಮುದಾಯ ಸಂದೇಶ ವಾಹಕರಂತೆ ಕಾರ್ಯ ನಿರ್ವಹಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವುದು ತೀರಾ ಅಗತ್ಯವಿದೆ’ ಎಂದರು.

‘ಮತದಾರರ ಪಟ್ಟಿಗೆ ಹೊಸ ಮತದಾರರು ಈಗಲೂ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ, ‘ಮತದಾನದ ಹಕ್ಕು ಪಡೆಯದ ವಿದ್ಯಾರ್ಥಿಗಳನ್ನು ಭವಿಷ್ಯದ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜುಗೊಳಿಸುವ ಪ್ರಯತ್ನವಾಗಿದೆ. ರಾಷ್ಟ್ರದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸುಭದ್ರಗೊಳಿಸುವ ಆಶಯ ಹೊಂದಲಾಗಿದೆ’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಮೋದ ಗಾಯಿ ಮಾತನಾಡಿ, ‘ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಮತದಾನ ಎಂದರೆ ಅದೊಂದು ರಾಷ್ಟ್ರೀಯ ಹಬ್ಬವಿದ್ದಂತೆ. ಸಮರ್ಥ ರಾಷ್ಟ್ರ ನಿರ್ಮಾಣದಲ್ಲಿ ಮತದಾರರ ಪಾತ್ರ ಪ್ರಮುಖವಾಗಿದೆ’ ಎಂದು ಹೇಳಿದರು.

ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಪ್ರಬಂಧ, ಚಿತ್ರಕಲೆ ಮತ್ತು ಕೊಲಾಜ್ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹರ್ಲಾಪುರದ ಯುವಜನ ಮತ್ತು ಸಾಂಸ್ಕೃತಿಕ ಕೇಂದ್ರ ತಂಡದ ಸದಸ್ಯರು, ಮತದಾರರ ಜಾಗೃತಿ ಕುರಿತು ಕಿರು ನಾಟಕ ಹಾಗೂ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಜಿ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಸ್‌.ಜಿ.ಕೊರವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅವ್ಯವಸ್ಥೆ: ಪರದಾಡಿದ ಮಕ್ಕಳು

ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿತ್ತು. ಮೈಕ್ ಸರಿಯಾಗಿಲ್ಲದ ಕಾರಣ, ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಮಕ್ಕಳಿಗೆ ಫಲಾಹಾರದ ವ್ಯವಸ್ಥೆ ಪ್ರದೇಶದಲ್ಲೂ ಅಚ್ಚುಕಟ್ಟು ಇಲ್ಲದ್ದರ ಕುರಿತು ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಣ್ಣ ದ್ವಾರದ ಮೂಲಕ ಹೊರಹೋಗಲು ಅವಕಾಶ ಮಾಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry