ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಿಗೆಗೆ ಜೀವ ತುಂಬುವ ಶಿಲ್ಪಿ ಕಮ್ಮಾರ

Last Updated 28 ಜನವರಿ 2018, 10:22 IST
ಅಕ್ಷರ ಗಾತ್ರ

ಶಿಲ್ಪ ಕಲೆಗಾಗಿ ಇಡೀ ಬದುಕನ್ನೇ ಮೀಸಲಿಟ್ಟಿರುವ ಅಪರೂಪದ ಕಲಾವಿದ ವೀರಪ್ಪ ಧರ್ಮಪ್ಪ ಕಮ್ಮಾರ. ಇವರು ನೂತನ ಗಜೇಂದ್ರಗಡ ತಾಲ್ಲೂಕಿನ ಜಕ್ಕಲಿ ಗ್ರಾಮದವರು. ಕಲಾ ಸರಸ್ವತಿಯ ಪುತ್ರ ಎಂದೇ ಸ್ಥಳೀಯವಾಗಿ ಪರಿಚಿತರು. ಕಮ್ಮಾರ ಅವರ ಕೈಯಲ್ಲಿ ಕೊರಡು ಕೊನರಾಗಿ ಅರಳುತ್ತದೆ. ಒಂದೇ ಕಟ್ಟಿಗೆಯಲ್ಲಿ, ನಾಡಿನ ಹೆಸರಾಂತ ಶಿಲ್ಪಕಲಾ ವೈಭವವನ್ನು ಮರು ಸೃಷ್ಟಿಸಬಲ್ಲ ಇವರ ಕೈಚಳಕ ಬೆರಗು ಮೂಡಿಸುವಂಥದ್ದು.

ಜಕ್ಕಲಿಯಲ್ಲಿ ಅಬ್ಬಿಗೇರಿ ರಸ್ತೆಯ ಸಮೀಪ ಸುಳಿದರೆ ಸಾಕು ಮನೆಯೊಳಗಿನಿಂದ ‘ಕಟ್‌ ಕಟ್‌’ ಎಂಬ ಶಬ್ದ ದಾರಿಹೋಕರನ್ನು ಸೆಳೆಯುತ್ತದೆ. ಶಬ್ದದ ಜಾಡು ಹಿಡಿದು ಹೋದರೆ, ಕಟ್ಟಿಗೆಯಲ್ಲಿ ಕೆತ್ತನೆ ಮಾಡುತ್ತಿರುವ ಈ ಕಲೆಗಾರ ಕಾಣುತ್ತಾನೆ. ಕೋಣೆಯ ಒಳಹೊಕ್ಕರೆ ಕಲಾಕೃತಿಗಳ ದೃಶ್ಯ ವೈಭವವೇ ಕಣ್ಣಿಗೆ ಕಾಣುತ್ತದೆ. ಸಾಗವಾನಿ, ಬೀಟೆ, ಬೇವಿನ ಮರದ ಕಟ್ಟಿಗೆಯಲ್ಲಿ, ಅರಳಿದ ಕಲಾಕೃತಿಗಳು ಜೀವಕಳೆ ಪಡೆದಂತೆ ಪಡಿಮೂಡಿವೆ. ಮನೆಯ ಬಾಗಿಲು, ಕಿಟಕಿ, ಹೊಸ್ತಿಲು, ದೇವರ ಕೋಣೆ, ಚಾವಣಿ, ಕಪಾಟು, ಗೋಡೆ, ಬೀರು ಹೀಗೆ ನೂರಾರು ಮನೆಗಳಲ್ಲಿ ವೀರಪ್ಪ ಅವರ ಕುಸರಿ ಕೆತ್ತನೆಗಳು ಸ್ಥಾನ ಪಡೆದು, ಮನೆಯ ಅಂದ ಹೆಚ್ಚಿಸಿವೆ.

ಮರದ ಕುಸರಿ ಕೆತ್ತನೆಯು ಅವರ ಜೀವನದ ಭಾಗವಾಗಿದೆ. ವಿಶ್ವ ವಿಖ್ಯಾತ ಹಂಪಿ ಕಲ್ಲಿನ ರಥ ಕೂಡ ಇವರ ಕೈಯಲ್ಲಿ ಅರಳಿದೆ. ಇದನ್ನು ಒಂದೇ ಕಟ್ಟಿಗೆಯಲ್ಲಿ ಕೆತ್ತಿರುವುದು ಬಲು ಅಪರೂಪ ಮತ್ತು ಅಷ್ಟೇ ವಿಶೇಷ. ನಾಲ್ಕು ದಿಕ್ಕಿನಿಂದಲೂ ಇದರ ಕೆತ್ತನೆ ಶೈಲಿ ಆಕರ್ಷಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಸಂಗೋಳಿ ರಾಯಣ್ಣ ಅವರ ಮೂರ್ತಿಯನ್ನು ಕೆತ್ತಿ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಡುಗೊರೆಯಾಗಿಯೂ ನೀಡಿದ್ದಾರೆ. ನಟರಾಜನ ಮೂರ್ತಿ, ಮಹಾಭಾರತದ ಅರ್ಜುನ ರಥ, ಅಂಬೇಡ್ಕರ್ ಮೂರ್ತಿ, ಗಣಪತಿ, ವಿಶ್ವಕರ್ಮ, ಏಕ ಸರಪಳಿ ಸೇರಿದಂತೆ ಹಲವು ಕಲಾಕೃತಿಗಳು ಅವರ ಪ್ರತಿಭೆಗೆ ಸಾಕ್ಷ್ಯ ನುಡಿಯುತ್ತವೆ.

ಸ್ವಗ್ರಾಮದ ವೀರಭದ್ರೇಶ್ವರ ಹಾಗೂ ಹಿರೇಮಠಕ್ಕೆ ಹುಚ್ಚಯ್ಯ ಕಲಾಕೃತಿಯನ್ನು ನೀಡಿದ್ದಾರೆ. ‘ಇದು ವಂಶಪಾರಂಪರ್ಯವಾಗಿ ಬಂದ ಕಲೆ. ತಂದೆಯಿಂದ ನನಗೆ ಬಂತು. ನಮ್ಮ ಕುಟುಂಬಸ್ಥರೊಬ್ಬರು ಗಾಂಧೀಜಿ ಅವರ ಮೂರ್ತಿಯನ್ನು ಒಂದೇ ಕಟ್ಟಿಗೆಯಲ್ಲಿ ಕೆತ್ತಿ, ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಪ್ರೀತಿಗೆ ಪಾತ್ರರಾಗಿದ್ದರು’ ಎಂದು ವೀರಪ್ಪ ಸ್ಮರಿಸಿದರು.

ಜಕ್ಕಲಿಯಂತಹ ಚಿಕ್ಕ ಗ್ರಾಮದಲ್ಲಿ ಎಲೆಮರೆ ಕಾಯಂತೆ ಹಲವು ವರ್ಷಗಳಿಂದ ಕಲಾಸೇವೆ ಮಾಡುತ್ತಾ ಬಂದಿರುವ, ಈ ಕಲೆಗಾರನನ್ನು ಅನೇಕ ಸಂಘಸಂಸ್ಥೆಗಳು ಗುರುತಿಸಿ, ಸನ್ಮಾನಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವವೂ ಲಭಿಸಿದೆ.

‘ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತರು ಪ್ರಚಾರ ಬಯಸದೇ ಬಸವಣ್ಣನವರ ‘ಕಾಯಕವೇ ಕೈಲಾಸ ತತ್ವದಡಿ ಕಾರ್ಯನಿರತರಾಗಿದ್ದಾರೆ. ಆ ಸಾಲಿಗೆ ಇವರೂ ಸೇರುತ್ತಾರೆ’ ಎಂದು ಗ್ರಾಮದ ಹಿರಿಯರಾದ ಸಂಗಮೇಶ ಮೇಣಸಗಿ ಅಭಿಪ್ರಾಯಪಟ್ಟರು. ‘ಇಂತಹ ಅಪರೂಪದ ಕಲೆಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ’ ಎಂದು ಗ್ರಾಮದ ಅಶೋಕಪ್ಪ ಯಾವಗಲ್ಲ ಹೇಳಿದರು.

‘ಪ್ರತಿ ಕಟ್ಟಿಗೆಗೂ ಜೀವ ತುಂಬುವ ಆಸೆ ನನ್ನದು. ಕೆತ್ತನೆ ಮಾಡುವಾಗ ಅದರ ರುಚಿಯ ಸ್ವಾದವೂ ಕಲಾಕಾರನಿಗೆ ತಿಳಿದಿರಬೇಕು. ಆಗ ಕಲಾಕೃತಿಗೆ ಜೀವಕಳೆ ಬರುತ್ತದೆ. ತಂದೆಯವರು ಕೊಡುತ್ತಿದ್ದ ಪ್ರತಿ ಕೆತ್ತನೆಯ ಪೆಟ್ಟು ನನ್ನನ್ನು ಗಾಢವಾಗಿ ಪ್ರಭಾವಿಸಿತು. ನನ್ನನ್ನೂ ಸುಂದರ ಮೂರ್ತಿಯಾಗಿ ಹೊರಹೊಮ್ಮುವಂತೆ ಅವರು ಕೆತ್ತಿದ್ದಾರೆ. ಹಾಗಾಗಿ, ಮನೆಯೇ ನನಗೆ ಪಾಠಶಾಲೆಯಾಯಿತು’ ಎನ್ನುತ್ತಾರೆ ವೀರಪ್ಪ ಧರ್ಮಪ್ಪ ಕಮ್ಮಾರ.

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT