ಹಾವೇರಿ ವಿಧಾನಸಭಾ ಕ್ಷೇತ್ರ: ಶತ್ರುವಿನ ಶತ್ರುಗಳೇ ಮಿತ್ರರು

7

ಹಾವೇರಿ ವಿಧಾನಸಭಾ ಕ್ಷೇತ್ರ: ಶತ್ರುವಿನ ಶತ್ರುಗಳೇ ಮಿತ್ರರು

Published:
Updated:
ಹಾವೇರಿ ವಿಧಾನಸಭಾ ಕ್ಷೇತ್ರ: ಶತ್ರುವಿನ ಶತ್ರುಗಳೇ ಮಿತ್ರರು

ಹಾವೇರಿ: ‘ಶತ್ರುವಿನ ಶತ್ರು ಮಿತ್ರ. ಆದರೆ, ಶತ್ರುವಿಗಿಂತಲೂ ಅಪಾಯಕಾರಿ ಜೊತೆಗಿರುವ ಹಿತಶತ್ರು’ ಎಂಬ ಮಾತು ‘ಹಾವೇರಿ ಪಂಚಾಯ್ತಿ’ ಖ್ಯಾತಿಯ ಇಲ್ಲಿನ ವಿಧಾನ ಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರದಲ್ಲಿ ಕೇಳಿಬರುತ್ತಿದೆ.

ಕೆಜೆಪಿ ಹುಟ್ಟಿದ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆದ, ಮೂಲತಃ ‘ಅಹಿಂದ’ ಚಳವಳಿಯ ಬೇರೂರಾದ ಹಾವೇರಿಯಲ್ಲಿ ಆಂತರಿಕ ಸಂಘರ್ಷಗಳೇ ಚುನಾವಣೆಯ ದಿಶೆಯನ್ನು ನಿರ್ಧರಿಸುತ್ತಾ ಬಂದಿವೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕದ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಜಗ್ಗಾಟದಲ್ಲಿ ಕಮಲ ಅರಳಿದರೆ, 2013ರಲ್ಲಿ ಕೆಜೆಪಿ–ಬಿಜೆಪಿ ಜಗ್ಗಾಟದಲ್ಲಿ ಕಾಂಗ್ರೆಸ್ ಸುರಕ್ಷಿತವಾಗಿ ದಡ ಸೇರಿತ್ತು.

ಆದರೆ, 2016ರ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಉಂಟಾದ ಆಂತರಿಕ ‘ಒಡಕು’ಗಳು 2018ರ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕಾರಣವಾಗಬಹುದು ಎಂಬ ಮಾತುಗಳು ಮತದಾರರ ನಡುವೆ ಕೇಳಿಬರುತ್ತಿವೆ.

ಆಕಾಂಕ್ಷಿ–ಅಭ್ಯರ್ಥಿ: ಹಾಲಿ ಶಾಸಕರಾದ (ಜಿಲ್ಲಾ ಉಸ್ತವಾರಿ ಸಚಿವರೂ) ರುದ್ರಪ್ಪ ಲಮಾಣಿ ಕಾಂಗ್ರೆಸ್ ಅಭ್ಯರ್ಥಿ ಎಂದು ಸಾಧನಾ ಸಮಾವೇಶಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಹೀಗಾಗಿ, ಅವರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಇತ್ತ ಶಿವಕುಮಾರ ತಾವರಗಿ ಕೂಡಾ ಟಿಕೆಟ್ ಪ್ರಯತ್ನದಲ್ಲಿದ್ದಾರೆ. ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾವೇರಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲಿಲ್ಲ. ಇದು ಬಹು ನಿರೀಕ್ಷೆಯಲ್ಲಿದ್ದ ನೆಹರೂ ಓಲೇಕಾರ ಬೆಂಬಲಿಗರಿಗೆ ಬೇಸರ ಮೂಡಿಸಿತ್ತು.

ಆದರೆ, ಉಳಿದ ಆಕಾಂಕ್ಷಿಗಳು ತೆರೆಮರೆಯಲ್ಲೇ ನಿಟ್ಟುಸಿರು ಬಿಟ್ಟಿದ್ದರು. ಆದರೆ, ‘ಹೊಳೆಸಾಲು’ (ತುಂಗಾಭದ್ರ ಮತ್ತು ವರದಾ ನದಿ ದಡಗಳು) ಪ್ರದೇಶದಲ್ಲಿ ನಮ್ಮದೇ ಬಲ. ಹೀಗಾಗಿ ಈ ಬಾರಿ ಓಲೇಕಾರ ಸ್ಪರ್ಧೆ ಖಚಿತ ಎಂದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಉಳಿದ ಆಕಾಂಕ್ಷಿಗಳೂ ತಮ್ಮ ಅಂಕಿ ಅಂಶಗಳನ್ನು ಮುಂದಿಡುತ್ತಾರೆ. ಇನ್ನೊಂದೆಡೆ ಕಳೆದ ಜಿಲ್ಲಾ ಪಂಚಾಯ್ತಿ ಚುನಾವಣೆಯ ಬಳಿಕ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೇ ಇದೆ.

ಈ ಪೈಕಿ ‘ಕೈ’ ಹಾಗೂ ‘ತೆನೆ ಹೊತ್ತ ಮಹಿಳೆ’ಯನ್ನು ಬಿಟ್ಟು ಬಂದವರೂ ಇದ್ದಾರೆ. ಅಲ್ಲದೇ, ಪಕ್ಷದ ‘ಮೂಲ ನಿವಾಸಿ’ಗಳೂ ನಿರಂತರ ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಮಾಜಿ ಶಾಸಕ ನೆಹರೂ ಓಲೇಕಾರ, ಮಹದೇವಪ್ಪ ನಾಗಮ್ಮನವರ, ಈರಪ್ಪ ಲಮಾಣಿ, ಪರಮೇಶಪ್ಪ ಮೇಗಳಮನಿ, ಸುರೇಶ ದೊಡ್ಮನಿ, ಡಿ.ಎಸ್. ಮಾಳಗಿ, ಡಾ. ಮಲ್ಲೇಶಪ್ಪ ಹರಿಜನ, ಶಿವರಾಜ ಹರಿಜನ, ಶ್ರೀಪಾದ ಬೆಟಗೇರಿ, ಮಾಲತೇಶ ಜಾಧವ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿವೆ.

‘ಟಿಕೆಟ್ ಪೈಪೋಟಿಯಲ್ಲಿ ಕೆಲವರು ಪ್ರಮುಖ ಸ್ಪರ್ಧಿಗಳಾದರೆ, ಇನ್ನೂ ಕೆಲವರು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಿದ್ದರೂ ತಮ್ಮ ಹೆಸರನ್ನು ತಾವೇ ತೇಲಿ ಬಿಟ್ಟಿದ್ದಾರೆ’ ಎನ್ನುತ್ತಾರೆ ಕಾರ್ಯಕರ್ತರೊಬ್ಬರು. ಈ ಹಿಂದೆ ಕೆಜೆಪಿಯಲ್ಲಿ ಗುರುತಿ ಸಿಕೊಂಡವರು ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಆಶೀರ್ವಾದ ಪಡೆಯಲು ಯತ್ನಿಸುತ್ತಿದ್ದರೆ, ಮೂಲ ಬಿಜೆಪಿಯಲ್ಲಿ ಗುರುತಿಸಿಕೊಂಡವರು ‘ಪರಿವಾರ’ ಹಾಗೂ ಕೆ.ಎಸ್. ಈಶ್ವರಪ್ಪ ಬಳಗದ ದುಂಬಾಲು ಬಿದ್ದಿದ್ದಾರೆ.

ಇತ್ತ ಡಾ. ಸಂಜಯ ಡಾಂಗೆ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಿದೆ. ಈ ನಡುವೆಯೇ ಸ್ಥಳೀಯರಿಗೆ ಅವಕಾಶ ಕಲ್ಪಿಸಿ, ಎಡಗೈ–ಬಲಗೈ ಸಮುದಾಯಗಳು, ಮೂಲ–ವಲಸಿಗರು ಮತ್ತಿತರ ಚರ್ಚೆಗಳೂ ಎಲ್ಲೆಡೆ ನಡೆಯುತ್ತಿವೆ. ಒಟ್ಟಾರೆ, ಹಾಲಿ ಶಾಸಕರನ್ನು ಹೊರತು ಪಡಿಸಿ, ಉಳಿದ ಪಕ್ಷಗಳಲ್ಲಿ ಆಕಾಂಕ್ಷಿಗಳ ಕುತೂಹಲ ಮುಂದುವರಿಯಲಿದೆ.

ಅಂದು ಪರಸ್ಪರ ವಿರೋಧ ಬಣಗಳಲ್ಲಿ ಗುರುತಿಸಿಕೊಂಡ ಕೆಲವರು ಈಗ ಒಂದಾಗಿದ್ದಾರೆ. ಟಿಕೆಟ್‌ಗಾಗಿ ವಿವಿಧ ರೀತಿಯ ಕಸರತ್ತು, ಪ್ರಚಾರಗಳು, ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಆಕಾಂಕ್ಷಿಗಳ ಬಣ ಬದಲಾವಣೆಯು ಟಿಕೆಟ್ ಘೋಷಣೆಯ ಬಳಿಕವೂ ಮುಂದುವರಿದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry