ಕೋಚ್‌ ಇಲ್ಲದೆ ಸೊರಗುತ್ತಿವೆ ಕ್ರೀಡೆಗಳು!

7

ಕೋಚ್‌ ಇಲ್ಲದೆ ಸೊರಗುತ್ತಿವೆ ಕ್ರೀಡೆಗಳು!

Published:
Updated:
ಕೋಚ್‌ ಇಲ್ಲದೆ ಸೊರಗುತ್ತಿವೆ ಕ್ರೀಡೆಗಳು!

ಕಲಬುರ್ಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಸಮುಚ್ಚಯದಲ್ಲಿ ಅತ್ಯಾಧುನಿಕ ಸೌಕರ್ಯ ಇರುವ, ಅಂತರರಾಷ್ಟ್ರೀಯ ಗುಣಮಟ್ಟದ ವಿವಿಧ ಕ್ರೀಡೆಗಳ ಕೋರ್ಟ್‌ಗಳಿವೆ. ಆದರೆ, ಇಲಾಖೆಯ ತರಬೇತುದಾರರು ಇಲ್ಲದ ಕಾರಣ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಜತೆಗೆ ಕ್ರೀಡಾಪಟುಗಳಿಗೆ ವೃತ್ತಿಪರ ತರಬೇತಿಯೂ ಸಿಗುತ್ತಿಲ್ಲ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ಸಮುಚ್ಚಯದಲ್ಲಿ ಟೆನಿಸ್, ಬ್ಯಾಡ್ಮಿಂಟನ್‌, ವಾಲಿಬಾಲ್, ಬಾಸ್ಕೆಟ್‌ಬಾಲ್ ಸೇರಿದಂತೆ ಸುಮಾರು 21 ಕ್ರೀಡಾ ಅಂಕಣಗಳಿವೆ. ಅವುಗಳಲ್ಲಿ ಹಾಕಿ ಹೊರತುಪಡಿಸಿದರೆ ಉಳಿದ ಯಾವ ಕ್ರೀಡೆಗಳಿಗೂ ಕಾಯಂ ಕೋಚ್ ಇಲ್ಲ.

ಬ್ಯಾಡ್ಮಿಂಟನ್, ಟೆನಿಸ್ ಟೂರ್ನಿಗಳು ನಡೆದಿದ್ದು ಬಿಟ್ಟರೆ ಉಳಿದ ಕ್ರೀಡಾ ಚಟುವಟಿಕೆಗಳು ನಡೆದದ್ದು ತೀರಾ ವಿರಳ. ಹೀಗಾಗಿ ಇಲ್ಲಿನ ಕ್ರೀಡಾಂಗಣಗಳು ಇದ್ದೂ ಉಪಯೋಗಕ್ಕೆ ಬಾರದಂತಾಗಿವೆ. ಅಲ್ಲದೆ, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಬೇಕೆಂದು ಬರುವ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ.

ಹನ್ನೆರಡು ವರ್ಷಗಳಿಂದ ವಾಲಿಬಾಲ್‌ಗೆ ಕಾಯಂ ಕೋಚ್‌ ಇಲ್ಲ.  ಹಿಂದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಾಲಿಬಾಲ್‌ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದರು. ಈಗ ಅಂತಹ ಕ್ರೀಡಾಪಟುಗಳು ಹೊರಹೊಮ್ಮುತ್ತಿಲ್ಲ. ಅದಕ್ಕೆ ತರಬೇತಿ ಇಲ್ಲದಿರುವುದು ಕಾರಣ ಎಂದು ಬೇಸರದಿಂದ ನುಡಿಯುತ್ತಾರೆ ಕಲಬುರ್ಗಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಭೋಜನಗೌಡ.

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಥ್ಲೆಟಿಕ್ಸ್‌ಗಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗಿದೆ. ಆದರೆ, ರಾಜ್ಯಮಟ್ಟದ ಯಾವುದೇ ಅಥ್ಲೆಟಿಕ್ಸ್ ಕ್ರೀಡಾಕೂಟಗಳು ನಡೆದಿಲ್ಲ. ಇದರಿಂದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಬಾಸ್ಕೆಟ್‌ಬಾಲ್ ಅಂಕಣ ವೈಜ್ಞಾನಿಕವಾಗಿಲ್ಲ. ನಿರ್ವಹಣೆಯೂ ಸರಿಯಾಗಿಲ್ಲದ ಕಾರಣ ಅಂಕಣದ ರಿಂಗ್‌ಗಳು ಹಾಳಾಗಿವೆ. ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಬಾಸ್ಕೆಟ್‌ಬಾಲ್‌ನಲ್ಲಿ ಆಸಕ್ತಿ ಮೂಡುತ್ತಿದ್ದು, ಅವರಿಗೆ ತರಬೇತುದಾರರಿಲ್ಲದಿರುವುದು ಸಮಸ್ಯೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿ  ಬಿಟ್ಟರೆ ಯಾವುದೇ ಟೂರ್ನಿಗಳು ನಡೆದಿಲ್ಲ ಎಂದು ಬಾಸ್ಕೆಟ್‌ಬಾಲ್ ಕೋಚ್ ಶಂಕರ್ ಸುರೆ ಹೇಳಿದರು.

ಕೋಚ್‌ಗಳ ಕೊರತೆ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ ಅವರನ್ನು ಮಾತನಾಡಿಸಿದಾಗ, ಇಲಾಖೆಯಿಂದ ಅಥ್ಲೆಟಿಕ್ಸ್, ಹಾಕಿ, ವಾಲಿಬಾಲ್ ಕೋಚ್‌ಗಳನ್ನು ಬೇರೆಡೆಯಿಂದ ಇಲ್ಲಿಗೆ ವರ್ಗಾವಣೆ ಮಾಡಿದ್ದಾರೆ. ಅದರಲ್ಲಿ ಹಾಕಿ ಕೋಚ್‌ ಬಿಟ್ಟರೆ ಉಳಿದವರು ಇಲ್ಲಿಗೆ ಬಂದಿಲ್ಲ. ಹಿಂದುಳಿದ ಪ್ರದೇಶ ಎಂಬ ಕಾರಣಕ್ಕೆ ಕೋಚ್‌ಗಳು ಇಲ್ಲಿಗೆ ಬರಲು ಆಸಕ್ತಿ ತೋರುವುದಿಲ್ಲ ಎಂದರು.

‘ಸದ್ಯ ಹಾಕಿಗೆ ಮಾತ್ರ ಕಾಯಂ ಕೋಚ್‌ ಇದ್ದಾರೆ. ಉಳಿದಂತೆ ಅಥ್ಲೆಟಿಕ್ಸ್, ಟೆನಿಸ್, ಈಜು, ಜೂಡೊ, ಜಿಮ್‌ಗೆ ತಾತ್ಕಾಲಿಕ ಕೋಚ್ ಇದ್ದಾರೆ. ಎಲ್ಲ ಕ್ರೀಡೆಗಳಿಗೆ ಅಲ್ಲದಿದ್ದರೂ ಪ್ರಮುಖ ಕ್ರೀಡೆಗಳಿಗಾದರೂ ಕಾಯಂ ಕೋಚ್‌ಗಳನ್ನು ನೇಮಕ ಮಾಡಿದರೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಸಹಾಯಕವಾಗುತ್ತದೆ ಮತ್ತು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಸಿಗುತ್ತದೆ’ ಎಂದು ಹೇಳಿದರು. 

‘ಅಭಿವೃದ್ಧಿಗೆ ಕ್ರಮ’

ನಾನು ಇಲ್ಲಿಗೆ ಬಂದು ಐದು ತಿಂಗಳಾಗಿವೆ. ಈ ಅವಧಿಯಲ್ಲಿ ಸಾಕಷ್ಟು ಕ್ರೀಡಾಕೂಟಗಳನ್ನು ಆಯೋಜಿಸಿದ್ದೇನೆ. ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಲಬುರ್ಗಿಗೆ ವಾಲಿಬಾಲ್ ಅಕಾಡೆಮಿ ಮಂಜೂರಾಗಿದ್ದು, ಪೂರ್ಣಪ್ರಮಾಣದ ಕೋಚ್‌ ನೇಮಕ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಆರ್‌.ಜಿ.ನಾಡಗೀರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry