ಪ್ರತಿ ಶೂಟರ್‌ನಲ್ಲೂ ಒಲಿಂಪಿಕ್ಸ್‌ ಕನಸು...

7

ಪ್ರತಿ ಶೂಟರ್‌ನಲ್ಲೂ ಒಲಿಂಪಿಕ್ಸ್‌ ಕನಸು...

Published:
Updated:
ಪ್ರತಿ ಶೂಟರ್‌ನಲ್ಲೂ ಒಲಿಂಪಿಕ್ಸ್‌ ಕನಸು...

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಶೂಟರ್‌ಗಳು ಇವರಲ್ಲಿ ಅದೆಷ್ಟು ಜನ ಇದ್ದಾರೋ?.. ಹೀಗೆ ಭರವಸೆಯೊಂದಿಗೆ ಮಾತು ಆರಂಭಿಸಿದ್ದು ಒಲಿಂಪಿಯನ್‌ ಶೂಟರ್‌ ಕರ್ನಾಟಕದ ಸುಮಾ ಶಿರೂರ.

ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ವಾಣಿಜ್ಯ ನಗರಿಯಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ರಾಷ್ಟ್ರಮಟ್ಟದ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳನ್ನು ನೋಡಿ ಅವರು ಈ ಮಾತು ಹೇಳಿದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕದ ಸಾಧನೆ ಮಾಡಿರುವ ಶೂಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಶೂಟಿಂಗ್‌ ಚಟುವಟಿಕೆಗಳು ಈಗ ಉತ್ತರ ಕರ್ನಾಟಕದಲ್ಲಿಯೂ ನಡೆಯುತ್ತಿವೆ. ಇದರಿಂದ ಈ ಭಾಗದ ಶೂಟರ್‌ಗಳಲ್ಲಿ ದೊಡ್ಡ ಸಾಧನೆಯ ಕನಸು ಮೂಡಿದೆ. ಆದ್ದರಿಂದಲೇ ಸುಮಾ ‘ಇಲ್ಲಿರುವ ಪ್ರತಿ ಶೂಟರ್‌ನಲ್ಲಿಯೂ ಒಲಿಂಪಿಕ್ಸ್‌ ಕನಸಿದೆ. ಸಣ್ಣ ಹೆಜ್ಜೆಗಳೇ ದೊಡ್ಡ ಕನಸಿಗೆ ನಾಂದಿಯಾಗುತ್ತವೆ’ ಎಂದರು.

ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಚಿಕ್ಕಬಳ್ಳಾಪುರದ ಸುಮಾ ಈಗ ನವಿಮುಂಬೈನಲ್ಲಿ ನೆಲೆಸಿದ್ದಾರೆ. ಲಕ್ಷ್ಯ ಶೂಟಿಂಗ್‌ ಆಕಾಡೆಮಿ ಆರಂಭಿಸಿ ನೂರಾರು ಮಕ್ಕಳ ಕನಸಿಗೆ ನೆರವಾಗುತ್ತಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.

 ನೀವು ವೃತ್ತಿಪರ ಶೂಟಿಂಗ್‌ ಆರಂಭಿಸಿದ ದಿನಗಳ ಬಗ್ಗೆ ಹೇಳಿ?

ಕರ್ನಾಟಕದಲ್ಲಿ ಹುಟ್ಟಿದರೂ ಹೆಚ್ಚು ಒಡನಾಟ ಮತ್ತು ಬದುಕು ಕಳೆದಿದ್ದು ನವಿ ಮುಂಬೈನಲ್ಲಿ. ಆದ್ದರಿಂದ ಅಲ್ಲಿಯೇ ತರಬೇತಿ ಆರಂಭಿಸಿದೆ. ಆಗ ನವಿ ಮುಂಬೈನಿಂದ ನಿತ್ಯ ನಾಲ್ಕು ಗಂಟೆ ಪ್ರಯಾಣಿಸಿ ತರಬೇತಿ ಪಡೆಯಬೇಕಿತ್ತು.  ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಇದೆ ಎಂಬುದೇ ಗೊತ್ತಿರಲಿಲ್ಲ. ಶೂಟಿಂಗ್‌ಗೆ ಅಗತ್ಯವಿರುವ ಸೌಲಭ್ಯ ಹೊಂದಿಸಿಕೊಳ್ಳಲು ಸಾಕಷ್ಟು ವರ್ಷಗಳ ಕಳೆದವು. ಶೂಟಿಂಗ್‌ನ ವೈಜ್ಞಾನಿಕ ತಳಹದಿ, ಈ ಕ್ಷೇತ್ರದ ಸಾಧಕರ ಬಗ್ಗೆ ಮಾಹಿತಿ ತಿಳಿಯಲು ಸಾಕಷ್ಟು ಸಮಯ ಹಿಡಿಯಿತು.  ಆದರೆ ಈಗಿನ ಮಕ್ಕಳಿಗೆ ಯಾವ ಸಮಸ್ಯೆಯೂ ಇಲ್ಲ. ಎಲ್ಲವೂ ಸಿದ್ಧ ಆಹಾರ. ಮಹಾರಾಷ್ಟ್ರದಲ್ಲಿ ಬಹುತೇಕ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಶೂಟಿಂಗ್‌ ತರಬೇತಿ ನೀಡುತ್ತಾರೆ. ಶೂಟಿಂಗ್‌ ರೇಂಜ್‌ಗಳೂ ಇವೆ. ಎಲ್ಲಾ ಸೌಲಭ್ಯಗಳು ಭಾರತದಲ್ಲಿಯೇ ಸಿಗುತ್ತವೆ. ರಾಜ್ಯವರ್ಧನ ಸಿಂಗ್‌ ರಾಠೋಡ್‌, ಅಭಿನವ್‌ ಬಿಂದ್ರಾ, ಗಗನ್‌ ನಾರಂಗ, ವಿಜಯ ಕುಮಾರ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಬಳಿಕ ಭಾರತದ ಶೂಟಿಂಗ್‌ನಲ್ಲಿ ಕ್ರಾಂತಿಯಾಗಿದೆ. ಇದು ಈಗಿನ ಮಕ್ಕಳಿಗೆ ಸ್ಫೂರ್ತಿಯಾಗಬೇಕು.

ಶೂಟಿಂಗ್‌ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?

ನಮ್ಮ ಮನೆಯಲ್ಲಿ ಎಲ್ಲರೂ ವಿಜ್ಞಾನಿಗಳೇ. ನಾನೂ ವಿಜ್ಞಾನ ವಿಷಯದಲ್ಲಿ ಪದವೀಧರೆ. ಆದರೆ ಆಕಸ್ಮಿಕವಾಗಿ ಶೂಟಿಂಗ್‌ಗೆ ಬಂದೆ. ನನಗೆ ಗೊತ್ತಿಲ್ಲದಂತೆ ಶೂಟಿಂಗ್‌ ಆರಂಭಿಸಿದೆ. ಇದನ್ನೇ ವೃತ್ತಿಪರವಾಗಿ ಸ್ವೀಕರಿಸುತ್ತೇನೆ ಅಂದುಕೊಂಡಿರಲಿಲ್ಲ. ಆರಂಭದ ಕೆಲವು ವರ್ಷ ಎನ್‌.ಸಿ.ಸಿ. ಸೇರಿದ್ದೆ. ಎರಡು ವರ್ಷಗಳ ಬಳಿಕ ಮಹಾರಾಷ್ಟ್ರ ರೈಫಲ್‌ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ಪಡೆದೆ.

ವೃತ್ತಿಪರ ಶೂಟಿಂಗ್‌ ಆರಂಭಿಸಿದಾಗ ಇಷ್ಟೊಂದು ಎತ್ತರದ ಸಾಧನೆ ಮಾಡುತ್ತೇನೆ ಎನ್ನುವ ನಿರೀಕ್ಷೆ ಇತ್ತಾ?

ಖಂಡಿತವಾಗಿಯೂ ಇರಲಿಲ್ಲ. ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಆದರೆ ಯಾವ ದಾರಿಯಲ್ಲಿ ಹೋಗಬೇಕು, ಹೇಗೆ ಕೆಲಸ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಪ್ರತಿದಿನವೂ ಕಠಿಣ ಅಭ್ಯಾಸ ಮಾಡುವುದಷ್ಟೇ ತಿಳಿದಿತ್ತು. ಆ ಶ್ರಮವೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

ಇಷ್ಟೆಲ್ಲಾ ಸಾಧನೆಗೆ ಪ್ರೇರಣೆ ಯಾರು?

ದೊಡ್ಡ ಸಾಧನೆಗೆ ಗಟ್ಟಿ ಬುನಾದಿ ಮುಖ್ಯವಾಗುತ್ತದೆ. ನನ್ನ ಮೊದಲ ಕೋಚ್‌ ಸಂಜಯ ಚಕ್ರವರ್ತಿ ಆ ಬುನಾದಿ ಕಟ್ಟಿಕೊಳ್ಳಲು ನೆರವಾದರು. ಬಿ.ಪಿ. ರಾಮ್‌ ಮಾನಸಿಕವಾಗಿ ನನ್ನನ್ನು ಗಟ್ಟಿಗೊಳಿಸಿದ್ದರಿಂದ ಒಲಿಂಪಿಕ್ಸ್‌ ಫೈನಲ್‌ವರೆಗೂ ತಲುಪಲು ಸಾಧ್ಯವಾಯಿತು.

ಕರ್ನಾಟಕದಲ್ಲಿ ಶೂಟಿಂಗ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳಿ?

1990ರ ದಶಕದಲ್ಲಿ ಕರ್ನಾಟಕದಲ್ಲಿ ಹೇಳಿಕೊಳ್ಳುವಂಥ ಶೂಟರ್‌ಗಳು ಯಾರೂ ಇರಲಿಲ್ಲ. ಆದರೆ ಇತ್ತೀಚೆನ ವರ್ಷಗಳಲ್ಲಿ ಮಹಾರಾಷ್ಟ್ರಕ್ಕೆ ಸವಾಲೊಡ್ಡುವಷ್ಟರ ಮಟ್ಟಿಗೆ ಶೂಟರ್‌ಗಳು ಬಂದಿದ್ದಾರೆ. ಪಿ.ಎನ್‌. ಪ್ರಕಾಶ್‌ ಅವರಂಥ ಒಲಿಂಪಿಯನ್‌ಗಳು ಇದ್ದಾರೆ.

ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೂಟಿಂಗ್‌ ಪ್ರಗತಿ ಹೇಗಿದೆ?

ಮಹಾರಾಷ್ಟ್ರದಲ್ಲಿ ಗಟ್ಟಿ ಬುನಾದಿಯಿದೆ. ಅಂತರರಾಷ್ಟ್ರೀಯ ಶೂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿ ಊರಿನಲ್ಲಿ, ಶಾಲಾ, ಕಾಲೇಜುಗಳಲ್ಲಿ ಶೂಟಿಂಗ್‌ ರೇಂಜ್‌ಗಳಿವೆ. ಆದ್ದರಿಂದ ತರಬೇತಿ ಆರಂಭಿಸಬೇಕು ಅಂದುಕೊಂಡವರಿಗೆ ಏನೂ ಕಷ್ಟವಾಗುವುದಿಲ್ಲ. ಆದರೆ ಕರ್ನಾಟಕದಲ್ಲಿ ತರಬೇತಿ ಕೇಂದ್ರಗಳು ಕಡಿಮೆಯಿವೆ. ಸೌಲಭ್ಯಗಳು ಹೆಚ್ಚಿದಂತೆಲ್ಲಾ ಶೂಟರ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.

ಶೂಟಿಂಗ್‌ ಸ್ಪರ್ಧೆಗೆ ಪ್ರಾಯೋಜಕರು ಸಿಗುವುದಿಲ್ಲ ಎನ್ನುವ ದೂರು ಇದೆಯಲ್ಲಾ?

ಮೊದಲು ಈ ಸಮಸ್ಯೆ ಆಗುತ್ತಿತ್ತು. ಒಲಿಂಪಿಕ್ಸ್‌ನಲ್ಲಿ ಪದಕಗಳು ಬಂದ ಬಳಿಕ ಪ್ರಾಯೋಜಕರೇ ಶೂಟರ್‌ಗಳ ಬಳಿ ಬರುತ್ತಿದ್ದಾರೆ. ನಾನು ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ರೈಲ್ವೆಯಿಂದ ಸೌಲಭ್ಯಗಳು ಸಿಗುತ್ತಿದ್ದವು.

ಮಹಾರಾಷ್ಟ್ರದಿಂದ ಸಿಕ್ಕಷ್ಟು ಪ್ರೋತ್ಸಾಹ ಕರ್ನಾಟಕದಿಂದಲೂ ಸಿಗಬೇಕಿತ್ತು ಅನಿಸಿದೆಯೇ?

1997ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಜಯಿಸಿದ್ದೆ. ಆ ಬಳಿಕ ಮುಂದಿನ ರಾಷ್ಟ್ರೀಯ ಕೂಟದಲ್ಲಿಯೂ ಕರ್ನಾಟಕವನ್ನೇ ಪ್ರತಿನಿಧಿಸಬೇಕು ಎನ್ನುವ ಆಸೆ ಇತ್ತು. ಅದರೆ ರಾಜ್ಯದಿಂದ ಹೆಚ್ಚು ಶೂಟರ್‌ಗಳು ಬರಲಿಲ್ಲವಾದ್ದರಿಂದ ಮಹಾರಾಷ್ಟ್ರದ ಪರವೇ ಶೂಟಿಂಗ್‌ ಮುಂದುವರಿಸಿದೆ. ಆದ್ದರಿಂದ ಕರ್ನಾಟಕದಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಿಲ್ಲ.

ಚಿಕ್ಕಬಳ್ಳಾಪುರದಿಂದ ಒಲಿಂಪಿಕ್ಸ್‌ ಅಂಗಳದವರಗೆ...

ಹಲವಾರು ಅಂತರರಾಷ್ಟ್ರೀಯ ಕ್ರೀಡಾಕೂಟ ಮತ್ತು 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಸುಮಾ ಶಿರೂರ ಚಿಕ್ಕಬಳ್ಳಾಪುರದವರು. ಓದು, ವೃತ್ತಿಪರ ಶೂಟಿಂಗ್ ತರಬೇತಿ, ಅಕಾಡೆಮಿ ಸ್ಥಾಪನೆ ಎಲ್ಲವೂ ನವಿಮುಂಬೈನಲ್ಲಿ ಮಾಡಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು.

10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ 2002ರ ಬೂಸಾನ್‌ ಮತ್ತು 2006ರ ದೋಹಾ ಏಷ್ಯನ್‌ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಜರುಗಿದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಎರಡು ಮತ್ತು 2010ರ ನವದೆಹಲಿ ಕಾಮನ್‌ವೆಲ್ತ್ ಕೂಟದಲ್ಲಿ ಒಂದು ಪದಕ ಪಡೆದಿದ್ದರು. 1994ರಲ್ಲಿ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ವಿಶ್ವದಾಖಲೆಯ ಶೂಟರ್‌

2004ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಅವರು ಒಟ್ಟು 400 ಅಂಕಗಳಿಗೆ 400 ಅಂಕ ಗಳಿಸಿ ಜಂಟಿ ವಿಶ್ವದಾಖಲೆ ಮಾಡಿದ್ದಾರೆ. ಇದರಿಂದ ಅವರಿಗೆ 2004ರ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ್ದರು.

ಕರ್ನಾಟಕದಿಂದ ಗೆದ್ದಿದ್ದು ಒಂದೇ ಪದಕ

1997ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸುಮಾ ಕರ್ನಾಟಕವನ್ನು ಪ್ರತಿನಿಧಿಸಿ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ರಾಜ್ಯ ತಂಡದ ಪರ ಆಡಿ ಗೆದ್ದ ಮೊದಲ ಮತ್ತು ಕೊನೆಯ ಪದಕವಿದು.

‘ಬೇರೆ ರಾಜ್ಯಕ್ಕೆ ಹೋಗಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತವರೂರಿನಲ್ಲಿ ಸಿಕ್ಕಷ್ಟು ಖುಷಿ ಬೇರೆಲ್ಲಿಯೂ ಸಿಗುವುದಿಲ್ಲ. ಕರ್ನಾಟಕವನ್ನು ಪ್ರತಿನಿಧಿಸಿ ಗೆದ್ದ ಒಂದು ಪದಕವೇ ಇಂದಿಗೂ ಸವಿನೆನಪಾಗಿ ಉಳಿದಿದೆ’ ಎಂದು ಸುಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry