ಲ್ಯಾಟಿನ್‌ ಅಮೆರಿಕದಲ್ಲಿ...

7

ಲ್ಯಾಟಿನ್‌ ಅಮೆರಿಕದಲ್ಲಿ...

Published:
Updated:
ಲ್ಯಾಟಿನ್‌ ಅಮೆರಿಕದಲ್ಲಿ...

ಸಿನಿಮಾ ಬಗೆಗೆ ವಿಪರೀತ ಪ್ರೀತಿ ಬೆಳೆಸಿಕೊಂಡಿದ್ದ ಪ್ರಭಾಕರ್‌ ಶರಣ್‌ ಅವರ ಕಥಾನಕವೂ ಚಿತ್ರಕಥೆಯಷ್ಟೇ ಸ್ವಾರಸ್ಯಕರ. ಕಷ್ಟಗಳ ಅಲೆಯಲ್ಲಿ ಮಿಂದೆದ್ದರೂ ಆತ್ಮವಿಶ್ವಾಸ ಬಿಡದೆ ಗೆದ್ದವರು. ಬಿಹಾರದಲ್ಲಿ ಹುಟ್ಟಿದ ಅವರು ಹರಿಯಾಣದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಅಷ್ಟೊತ್ತಿಗಾಗಲೇ ಕಟ್ಟುಮಸ್ತಾಗಿ ದೇಹವನ್ನು ಕಟೆದುಕೊಂಡಿದ್ದ ಅವರು ಸಿನಿಮಾ ಜಗತ್ತಿನ ಬಗೆಗೆ ಮಹಾನ್‌ ಕನಸು ಕಂಡು ಮುಂಬೈ ದಾರಿ ಹಿಡಿದರು. ಬಾಲಿವುಡ್‌ ಗಲ್ಲಿಯಲ್ಲಿ ಯಾರ ಕಣ್ಣಿಗೂ ಪ್ರಭಾಕರ್‌ ಆಕರ್ಷಕವಾಗಿ ಕಾಣಿಸಲೇ ಇಲ್ಲ.

ಈ ಕ್ಷೇತ್ರ ತನಗಾಗದು ಎಂದುಕೊಂಡು ಅಮೆರಿಕತ್ತ ಮುಖ ಮಾಡುವ ಮನಸು ಮಾಡಿದರು. ಅವರ ಪಯಣ ನಿಂತಿದ್ದು ಮಾತ್ರ ಕೋಸ್ಟಾರಿಕಾದಲ್ಲಿ. ಅಲ್ಲಿಯೇ ಒಂದು ಹುಡುಗಿಯ ಮೇಲೆ ಅವರಿಗೆ ಪ್ರೇಮಾಂಕುರವಾಯಿತು. ಮದುವೆಯೂ ಆಯಿತು. ಪ್ರಭಾಕರ್‌ ಜವಳಿ ಉದ್ಯಮಕ್ಕೆ ಕೈಹಾಕಿದರು. ಅಲ್ಲಿಯೂ ತಕ್ಕಮಟ್ಟಿನ ಲಾಭವಿಲ್ಲದೆ ಬೇರೆಯೊಂದು ವ್ಯಾಪಾರಕ್ಕಿಳಿದರು. ಸಿನಿಮಾ ವಿತರಕರಾಗಿಯೂ ಕೆಲಸ ಮಾಡಿದರು. ಮೊನ್ಸಟರ್‌ ಟ್ರಕ್‌ ಜಾಮ್‌ ಶೋಗಳನ್ನೂ ನಡೆಸಿದರು. ಪ್ರಭಾಕರ್‌ ಕೈ ಹಾಕಿದ ಯಾವ ಉದ್ಯಮವೂ ಅವರ ಕೈಹಿಡಿಯಲಿಲ್ಲ. ಹೂಡಿದ ಬಂಡವಾಳವನ್ನೆಲ್ಲಾ ಕಳೆದುಕೊಂಡು ತವರಿಗೆ ವಾಪಸಾದರು. ಇದೇ ಸಿಟ್ಟಿನಲ್ಲಿ  ಅವರ ಪತ್ನಿ ಮಗಳನ್ನೂ ಕರೆದುಕೊಂಡು ದೂರಾವಾದರು.

ಸೋಲಿನ ಮೇಲೆ ಸೋಲುಂಡರೂ ಪ್ರಭಾಕರ್‌ ಧೃತಿಗೆಡಲಿಲ್ಲ. ಮತ್ತೆ ಕೋಸ್ಟಾರಿಕಾಕ್ಕೆ ತೆರಳಿ ಉದ್ಯಮ ಪ್ರಾರಂಭಿಸುವ ಮನಸು ಮಾಡಿದರು. ಅಲ್ಲಿ ಅವರಿಗೆ ಇನ್ನೊಂದು ಪ್ರೀತಿಯೂ ದಕ್ಕಿದ್ದಲ್ಲದೆ ಹೊಸ ಅವಕಾಶಗಳ ಬಾಗಿಲೂ ತೆರೆಯಿತು. ಸದ್ಯ ಪ್ರಭಾಕರ್‌, ಲ್ಯಾಟಿನ್‌ ಅಮೆರಿಕನ್‌ ಚಿತ್ರ ಜಗತ್ತಿನಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ಎನ್ರೆಡಾಡೋಸ್‌: ಲಾ ಕನ್‌ಫ್ಯೂಷನ್‌’ ಬಿಡುಗಡೆಗೂ ಮುನ್ನವೇ ಬಹಳ ಸದ್ದು ಮಾಡುತ್ತಿದೆ. ಭಾರತೀಯ ಸಿನಿಮಾಗಳಲ್ಲಿ ಇರುವಂತೆ ಹಾಡು, ನೃತ್ಯಗಳೂ ಈ ಚಿತ್ರದಲ್ಲಿದ್ದು ಲ್ಯಾಟಿನ್‌ ಅಮೆರಿಕದಲ್ಲಿ ನಿರ್ಮಾಣ ಕಂಡ ಈ ಶೈಲಿಯ ಮೊದಲ ಚಿತ್ರ ಇದು ಎನ್ನಲಾಗಿದೆ. ಸ್ಪ್ಯಾನಿಶ್‌ ಭಾಷೆಯ ಈ ಚಿತ್ರದಲ್ಲಿ ಪ್ರಭಾಕರ್‌ ಅವರದ್ದು ಕೋಸ್ಟಾರಿಕಾ ಪ್ರಜೆಯ ಪಾತ್ರವೇ ಆಗಿದೆ.

ಕೋಸ್ಟಾರಿಕಾದ ಜನಪ್ರಿಯ ಟಿ.ವಿ. ಕಾರ್ಯಕ್ರಮದ ನಿರೂಪಕಿ ನ್ಯಾನ್ಸಿ ಡೊಬ್ಲೆಸ್‌ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ನಟರಾದ ಮಾರಿಯೊ ಚಾಕೋನ್‌ ಹಾಗೂ ಜೋಸ್‌ ಕ್ಯಾಸ್ಟ್ರೊ ಕೂಡ ಚಿತ್ರದಲ್ಲಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ ಹಾಗೂ ಹಾಲಿವುಡ್‌ನ ಬಹುಬೇಡಿಕೆಯ ನಟ ಸ್ಕಾಟ್‌ ಸ್ಟೇನರ್‌ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿನ ಸಂಗೀತ, ನೃತ್ಯಗಳನ್ನು ಹೊಸೆದಿದ್ದು ಬಾಲಿವುಡ್‌ ಮಂದಿಯೇ ಎನ್ನುವುದು ಮತ್ತೊಂದು ವಿಶೇಷ.

ಚಿತ್ರ ಫೆಬ್ರುವರಿ 9ರಂದು ತೆರೆಕಾಣಲಿದ್ದು ಕೋಸ್ಟಾರಿಕಾ ಹಾಗೂ ಅಮೆರಿಕದ ಮಾಧ್ಯಮಗಳು ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಿದ್ದಾರೆ. ಅಲ್ಲದೆ ಚಿತ್ರ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಡಬ್‌ ಆಗುತ್ತಿದ್ದೆ. ರೊಮ್ಯಾನ್ಸ್‌, ಆ್ಯಕ್ಷನ್‌, ಹಾಸ್ಯ ಚಿತ್ರದ ಜೀವಾಳ. ಚಿತ್ರದ ನಾಯಕ ಲಿಯೊ ಹಣವನ್ನು ದರೋಡೆ ಮಾಡುತ್ತಾನೆ. ಪ್ರಿಯತಮೆ ಆನಾ ಸಿಕ್ಕಮೇಲೆ ಆತನ ಬದುಕೇ ಬದಲಾಗುತ್ತದೆ. ಆದರೆ ಕೊನೆಗೆ ಹಣ ಹಾಗೂ ಪ್ರೀತಿಯ ನಡುವೆ ಒಂದನ್ನು ಆಯ್ದುಕೊಳ್ಳುವ ಸಂದಿಗ್ಧ ಪರಿಸ್ಥಿತಿ ನಾಯಕನಿಗೆ ಎದುರಾಗುತ್ತದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್‌ಗೆ ಕೂಡಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ದೃಶ್ಯಗಳು ಕುತೂಹಲ ಹುಟ್ಟುಹಾಕುವಲ್ಲಿಯಂತೂ ಯಶಸ್ಸು ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry