ಪ್ರಶಸ್ತಿ ಸಂಭ್ರಮದಲ್ಲಿ ದಿರಿಸಿನೊಲವು

7

ಪ್ರಶಸ್ತಿ ಸಂಭ್ರಮದಲ್ಲಿ ದಿರಿಸಿನೊಲವು

Published:
Updated:
ಪ್ರಶಸ್ತಿ ಸಂಭ್ರಮದಲ್ಲಿ ದಿರಿಸಿನೊಲವು

ಬಾಲಿವುಡ್‌ ಮಂದಿ ಸೇರುವ ಪ್ರಶಸ್ತಿ ಪ್ರದಾನ ಸಮಾರಂಭಗಳೆಂದರೆ ಸಿನಿಮಾಭಿಮಾನಿಗಳ ಕಣ್ಣು ಅಲ್ಲೇ ನೆಟ್ಟಿರುತ್ತದೆ. ಕೆಂಪು ಹಾಸಿನ ಮೇಲೆ ಬೆಕ್ಕಿನ ಹೆಜ್ಜೆ ಇಟ್ಟು ಬರುವ ನಟ ನಟಿಯರ ಅಂದ ಚೆಂದ ಕಣ್ತುಂಬಿಕೊಳ್ಳುವುದು ಒಂದು ರೀತಿಯಲ್ಲಿ ಹಬ್ಬವಿದ್ದಂತೆ. ಬಣ್ಣ ಬಣ್ಣದ ವಿಭಿನ್ನ ವಿನ್ಯಾಸದ ದಿರಿಸು ತೊಟ್ಟು, ತಾನೇ ಕಂಗೊಳಿಸಬೇಕು ಎನ್ನುವ ನೆಪದಲ್ಲಿ ತಿಂಗಳಿನಿಂದ ತಯಾರಿ ನಡೆಸುವುದು ನಟ ನಟಿಯರಿಗೆ ವಾಡಿಕೆ. ಇತ್ತಿಚೆಗೆ ನಡೆದ 63ನೇ ಜಿಯೊ ಫಿಲ್ಮ್‌ಫೇರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿಯೂ ಹೀಗೆ ಆಯಿತು. ಜನಪ್ರಿಯ ವಿನ್ಯಾಸಕಾರರ ಕೈಯಲ್ಲರಳಿದ ದಿರಿಸು ತೊಟ್ಟು ಕ್ಯಾಮೆರಾಕ್ಕೆ ಪೋಸು ಕೊಟ್ಟಿದ್ದೇ ಕೊಟ್ಟಿದ್ದು. ಕೆಂಪು ಹಾಸಿಗೆ ಕಾಲಿಟ್ಟ ರಣವೀರ್‌, ಶಾಹಿದ್‌, ಆಲಿಯಾ ಭಟ್‌, ಕಾಜೊಲ್‌, ಪ್ರಣೀತಿ ಚೋಪ್ರಾ ತಮ್ಮ ದಿರಿಸಿನಿಂದ ಮೆಚ್ಚುಗೆ ಗಳಿಸಿದರು. ಅಂಥವರಲ್ಲಿ ಕೆಲ ಚೆಂದದ ನೋಟವನ್ನು ನಿಮಗಾಗಿ ಇಲ್ಲಿ ಸಂಗ್ರಹಿಸಿದ್ದೇವೆ.

ಕಾಜಲ್‌: ಕಾಜೊಲ್‌ ವೈನ್‌ ಬಣ್ಣದ ಆಫ್‌ ಶೋಲ್ಡರ್‌ ಗೌನ್‌ ತೊಟ್ಟು ಮಿಂಚಿದರು. ದಿರಿಸಿಗೆ ಹೊಂದುವ ಬಣ್ಣದ ಲಿಪ್‌ಸ್ಟಿಕ್‌ ಅವರ ಅಂದಕ್ಕೆ ಮೆರುಗು ನೀಡಿತು. ಅಲ್ಲದೆ ಕೈತೋಳಿನಲ್ಲಿದ್ದ ಸೂಕ್ಷ್ಮ ಕುಸುರಿ ವಿನ್ಯಾಸ ಫ್ಯಾಷನ್‌ ಪ್ರಿಯರ ಗಮನ ಸೆಳೆಯಿತು. ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಅವರ ಚಿತ್ರಕ್ಕೆ ನಾಲ್ಕು ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಸಿಕ್ಕಿವೆ.

ಪ್ರಣೀತಿ: ಕಪ್ಪು ಚುಕ್ಕೆ ಇರುವ ಬೆಳ್ಳಿ ಬಣ್ಣದ ಗೌನ್‌ ತೊಟ್ಟು ರಾಣಿಯಂತೆ ಕಂಗೊಳಿಸಿದವರು ಪ್ರಣೀತಿ ಚೋಪ್ರಾ. ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಅವರು ಸೆಲೆಬ್ರಿಟಿ ಸ್ಟೈಲಿಸ್ಟ್‌ ಸಂಜನಾ ಬಾತ್ರಾ ಅವರಿಗೆ ಧನ್ಯವಾದವನ್ನೂ ಸೂಚಿಸಿದ್ದಾರೆ. ಅವರ ಚಿತ್ರಕ್ಕೆ ಐದು ಲಕ್ಷ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್‌: ಮುದ್ದಾದ ಬೇಬಿ ಡಾಲ್ ಎಂದೇ ಕರೆಸಿಕೊಳ್ಳುವ ಆಲಿಯಾ ಭಟ್‌ ಇಲ್ಲಿಯೂ ತಮ್ಮ ಇಮೇಜ್‌ ಅನ್ನು ಉಳಿಸಿಕೊಂಡರು. ತೆಳು ನೇರಳೆ ಬಣ್ಣದ ಗೌನ್‌ ತೊಟ್ಟಿದ್ದ ಆಲಿಯಾ ಸರಳ ಮೇಕಪ್‌ ಮಾಡಿಕೊಂಡಿದ್ದರು. ಕೇಶ ವಿನ್ಯಾಸ ಅವರನ್ನು ಮತ್ತಷ್ಟು ಮುದ್ದುಮುದ್ದಾಗಿ ಕಾಣುವಂತೆ ಮಾಡಿತ್ತು.

ನೇಹಾ ಧುಪಿಯಾ: ಕೆಂಪು ಹಾಸಿನ ಮೇಲೆ ಹಳದಿ ದಿರಿಸು ತೊಟ್ಟ ಬೆಳದಿಂಗಳಂತೆ ಕಂಗೊಳಿಸಿದ್ದು ನೇಹಾ. ತೋಳಿನ ವಿಶೇಷ ವಿನ್ಯಾಸದಿಂದಾಗಿ ಫ್ಯಾಷನ್‌ ಪ್ರಿಯರ ಮನ ಗೆದ್ದಿದೆ ಈ ದಿರಿಸು. ಈ ವಿಶೇಷ ವಿನ್ಯಾಸವನ್ನು 34ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.

ಸೋನಂ ಕಪೂರ್‌: ಫ್ಯಾಷನ್‌, ಸ್ಟೈಲ್‌ ಎಂದಮೇಲೆ ಸೋನಂ ಹೆಸರು ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸೋನಂ ಕಪೂರ್‌ ಫ್ಯಾಷನ್‌ ಪ್ರಿಯೆ. ಫ್ಯಾಷನ್‌ ಐಕಾನ್‌ ಎಂದೇ ಗುರುತಿಸಿಕೊಂಡಿರುವ ಅವರು ಈ ಬಾರಿಯ ಪ್ರಶಸ್ತಿ ಪ್ರಧಾನಕ್ಕೆ ವಿಭಿನ್ನವಾಗಿಯೇ ತಯಾರಾಗಿದ್ದರು. ಕಪ್ಪು ಬಣ್ಣ ಅವರ ಆಯ್ಕೆ. ಬ್ಲೇಜರ್‌ ಹಾಗೂ ಮೊಣಕಾಲಿನವರೆಗೆ ಚಾಚಿದ ಪ್ಯಾಂಟ್‌ ಅವರ ಆಯ್ಕೆಯಾಗಿತ್ತು. ಹೈಹೀಲ್ಡ್‌ ಧರಿಸಿದ್ದ ಅವರು ದೊಡ್ಡದಾದ ಬಂಗಾರ ಬಣ್ಣದ ಕಿವಿಯೋಲೆ, ಸರಳ ಕೇಶವಿನ್ಯಾಸದಿಂದ ಮಿಂಚಿದರು. ಅನೇಕರು ಕೆಂಪು ಹಾಸಿನ ಮೇಲೆ ಕಂಡ ಕೆಟ್ಟ ದಿರಿಸು ಎಂದೂ ಕಮೆಂಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry