ನಿಶ್ಚಿತಾರ್ಥಕ್ಕೆ ವಧು, ಮದುವೆಗೆ ವರ ನಾಪತ್ತೆ

7
ಶನಿವಾರ ಆರತಕ್ಷತೆ, ಭಾನುವಾರ ವಿವಾಹ ನಿಗದಿ

ನಿಶ್ಚಿತಾರ್ಥಕ್ಕೆ ವಧು, ಮದುವೆಗೆ ವರ ನಾಪತ್ತೆ

Published:
Updated:

ಮಾಲೂರು: ನಿಶ್ಚಿತಾರ್ಥಕ್ಕೆ ವಧು ನಾಪತ್ತೆಯಾದರೆ, ಮದುವೆಗೆ ವರನೇ ನಾಪತ್ತೆಯಾದ ನಾಟಕೀಯ ಬೆಳವಣಿಗೆ ಶನಿವಾರ ಮತ್ತು ಭಾನುವಾರ ಇಲ್ಲಿ ನಡೆದಿದೆ.

ತಾಲ್ಲೂಕಿನ ಚನ್ನಕಲ್‌ ಗ್ರಾಮದ ಎನ್‌. ಗುರೇಶ್‌ ಮತ್ತು ಬಂಗಾರಪೇಟೆ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಎನ್‌. ಸೌಮ್ಯಾ ಅವರ ವಿವಾಹ ನಿಶ್ಚಯವಾಗಿತ್ತು. ಗುರುಹಿರಿಯರ ಸಮ್ಮುಖದಲ್ಲಿ ಶನಿವಾರ ಆರತಕ್ಷತೆ ಹಾಗೂ ಭಾನುವಾರ ಬೆಳಿಗ್ಗೆ ವಿವಾಹ ಮುಹೂರ್ತ ನಡೆಯಲು ಇಲ್ಲಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಎಲ್ಲ ಸಿದ್ಧತೆ ಮುಗಿದಿದ್ದವು. ಆದರೆ ರಾತ್ರಿಯಾದರೂ ವಧು ಮತ್ತು ಅವರ ಕುಟುಂಬದವರ ಪತ್ತೆ ಇಲ್ಲ. ಗಾಬರಿಯಾದ ವರನ ಕುಟುಂಬದವರು ವಿಚಾರಿಸಿದಾಗ ವಧು ನಾಪತ್ತೆಯಾಗಿದ್ದು ಗೊತ್ತಾಯಿತು.

ಹೀಗಾಗಿ ವರನ ಕುಟುಂಬದವರು ನಲ್ಲಹಳ್ಳಿ ಗ್ರಾಮದ ವಧುವಿನ ದೊಡ್ಡಮ್ಮನ ಮಗಳು ವೆಂಕಟರತ್ನಮ್ಮ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದರು.

ಬೆಳಿಗ್ಗೆ ಮದುವೆ ಮಂಟಪದಲ್ಲಿ ವಧು ಸಿದ್ಧವಾಗಿ ನಿಂತಿದ್ದಾಳೆ. ಆದರೆ ವರ ಕಾಣೆಯಾಗಿದ್ದ. ಎರಡೂ ಕುಟುಂಬದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮುಹೂರ್ತ ನಡೆಸಲು ಬಂದಿದ್ದ ಪುರೋಹಿತರು ಕಾದು ಸುಸ್ತಾಗಿ ವಾಪಸಾದರು. ನಂತರ ವಧು ವೆಂಕಟರತ್ನಮ್ಮ ಕುಟುಂಬದವರು ವರ ಗುರೇಶ್‌ ಮತ್ತು ಅವರ ಕುಟುಂಬದವರ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry