ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬ್ಯಾಂಕ್‌ ಭದ್ರಪಡಿಸಲು ‘ಒಂದು ಪುಸ್ತಕ– ಒಂದು ಮತಗಟ್ಟೆ’

224 ಕ್ಷೇತ್ರಗಳಲ್ಲಿ ವಿನೂತನ ಅಭಿಯಾನ ಕೈಗೊಳ್ಳಲು ಕೆಪಿಸಿಸಿ ತೀರ್ಮಾನ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮೊದಲು ತನ್ನ ಮತ ಬ್ಯಾಂಕ್‌ ಗಟ್ಟಿಗೊಳಿಸಲು ಮುಂದಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ), ಎಲ್ಲ 224 ಕ್ಷೇತ್ರಗಳಲ್ಲಿ ‘ಒಂದು ಪುಸ್ತಕ– ಒಂದು ಮತಗಟ್ಟೆ’ ಹಾಗೂ ‘ಒಂದು ಪುಟ– ಒಂದು ಕುಟುಂಬ’ ಎಂಬ ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.

ಈ ಉದ್ದೇಶದಿಂದ ಇದೇ 30ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಅರಮನೆ ಮೈದಾನದಲ್ಲಿರುವ ನಲಪಾಡ್ ಪೆವಿಲಿಯನ್‌ನಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರ ಸಭೆ ಆಯೋಜಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಈ ಸಭೆಯಲ್ಲಿ ಭಾಗವಹಿಸಲಿದ್ದು, ಹೊಸ ಅಭಿಯಾನದ ಬಗ್ಗೆ  ಪದಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ, ಕೆಪಿಸಿಸಿ ವತಿಯಿಂದ ಈವರೆಗೆ ಆಯೋಜಿಸಿದ್ದ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪದಾಧಿಕಾರಿಗಳ ಜವಾಬ್ದಾರಿ ನಿರ್ವಹಣೆಯ ಪ್ರಗತಿ ಪರಿಶೀಲನೆ ಕೂಡಾ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆ ನಡೆಯಲಿರುವ ಜಾಗದಲ್ಲಿ ಎಲ್ಲ 224 ಕ್ಷೇತ್ರಗಳಿಗೆ ತಲಾ ಒಂದರಂತೆ 224 ಟೇಬಲ್‌ ಅಳವಡಿಸಲಾಗುವುದು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪಕ್ಷದ ಎರಡು ಬ್ಲಾಕ್‌ ಘಟಕಗಳ ಅಧ್ಯಕ್ಷರು ಮತ್ತು ಉಸ್ತುವಾರಿ ಪದಾಧಿಕಾರಿಗಳು ಈ ಟೇಬಲ್‌ಗಳಲ್ಲಿ ಆಸೀನರಾಗಲಿದ್ದಾರೆ. ಅವರ ಜೊತೆ ಪರಮೇಶ್ವರ ಮತ್ತು ವೇಣುಗೋಪಾಲ್‌ ತಲಾ 5ರಿಂದ 10 ನಿಮಿಷ ಚರ್ಚೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ಈ ಸಭೆಗೆ ಬರುವಾಗ ತಮ್ಮ ಘಟಕಗಳ ಪದಾಧಿಕಾರಿಗಳ ಪಟ್ಟಿ ತರಬೇಕು. ಪಟ್ಟಿಯಲ್ಲಿ ಎಲ್ಲ ಪದಾಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಬೇಕು. ಮನೆ ಮನೆಗೆ ಕಾಂಗ್ರೆಸ್ ಅಭಿಯಾನ, ಬೂತ್ ಸಮಿತಿ, ಬೂತ್‌ ಮಟ್ಟದ ಏಜೆಂಟರು, ಸದಸ್ಯತ್ವ ನೋಂದಣಿ ಕುರಿತು ಮಾಹಿತಿ ನೀಡಬೇಕು ಎಂದೂ ಸೂಚಿಸಲಾಗಿದೆ.

‘ಮತದಾರರನ್ನು ಗಮನದಲ್ಲಿಟ್ಟು ಕ್ಷೇತ್ರವಾರು ನಡೆಸಲಾಗುವ ಹೊಸ ಅಭಿಯಾನವನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಪರಮೇಶ್ವರ ಉದ್ದೇಶಿಸಿದ್ದಾರೆ. ಈಗಾಗಲೇ ಹಮ್ಮಿಕೊಂಡ ಮನೆ ಮನೆ ಕಾಂಗ್ರೆಸ್‌ ಅಭಿಯಾನದ ಮುಂದುವರಿದ ಭಾಗವಾಗಿ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರ ಜತೆಗೆ ಇನ್ನಷ್ಟು ತಳಮಟ್ಟದಲ್ಲಿ ವಸ್ತುಸ್ಥಿತಿ ಅರಿಯಲು ಇದು ಸಹಕಾರಿ ಆಗಲಿದೆ’ ಎಂದೂ ಮೂಲಗಳು ಹೇಳಿವೆ.
**
ಏನಿದು ಅಭಿಯಾನ?

ಪ್ರತಿ ಮತಗಟ್ಟೆಗೆ 300 ಪುಟಗಳಿರುವ ಒಂದು ಪುಸ್ತಕ ನೀಡಲಾಗುವುದು. ಈ ಪುಸ್ತಕದ ಪ್ರತಿ ಪುಟದಲ್ಲಿ ಒಂದು ಕುಟುಂಬದಂತೆ, 300 ಕುಟುಂಬಗಳ ಅಂಕಿ ಅಂಶಗಳನ್ನು ನಮೂದಿಸಬೇಕು. ಕುಟುಂಬದಲ್ಲಿರುವ ಒಟ್ಟು ಮತದಾರರ ಸಂಖ್ಯೆ, ಅವರು ಯಾವ ಪಕ್ಷದ ಕಡೆಗೆ ಒಲವು ಹೊಂದಿದ್ದಾರೆ, ತಟಸ್ಥರಾಗಿದ್ದರೆ ಅದಕ್ಕೆ ಕಾರಣ ಮತ್ತಿತರ ಅಂಶಗಳನ್ನು ದಾಖಲಿಸಬೇಕು ಎಂದು ಬೂತ್‌ ಮಟ್ಟದ ಸಮಿತಿಗಳ ಸದಸ್ಯರಿಗೆ ಕೆಪಿಸಿಸಿ ಸೂಚಿಸಲಿದೆ.

‘ಭರ್ತಿ ಮಾಡಿದ ಎಲ್ಲ ಪುಸ್ತಕಗಳನ್ನು ಕೆಪಿಸಿಸಿಗೆ ತಲುಪಿಸಬೇಕು. ಅದರಲ್ಲಿ ದಾಖಲಾಗಿರುವ ಮಾಹಿತಿಗಳನ್ನು ಆಧರಿಸಿ ಚುನಾವಣಾ ಪ್ರಚಾರ ಕಾರ್ಯತಂತ್ರಕ್ಕೆ ಹೊಸ ಸ್ವರೂಪ ನೀಡಲು ಪಕ್ಷ ಉದ್ದೇಶಿಸಿದೆ’ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT