ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕರ್ನಾಟಕದಿಂದ ಆದೇಶ ಉಲ್ಲಂಘನೆ'

ಗೋವಾ ಸ್ಪೀಕರ್‌ ನೇತೃತ್ವದ ನಿಯೋಗ ಕಣಕುಂಬಿಗೆ ಭೇಟಿ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಕಣಕುಂಬಿಯಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಸುವ ಮೂಲಕ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮಂಡಳಿಯ ಆದೇಶಗಳನ್ನು ಉಲ್ಲಂಘಿಸಿದೆ’ ಎಂದು ಗೋವಾ ವಿಧಾನಸಭಾಧ್ಯಕ್ಷ ಪ್ರಮೋದ ಸಾವಂತ್‌ ಭಾನುವಾರ ಇಲ್ಲಿ ಗಂಭೀರ ಆರೋಪ ಮಾಡಿದರು.

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮಕ್ಕೆ ಭೇಟಿ ನೀಡಿ, ಪ್ರಸ್ತುತ ಸ್ಥಗಿತಗೊಂಡಿರುವ ಕಳಸಾ ಕಾಲುವೆ ಕಾಮಗಾರಿ ವೀಕ್ಷಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಅಕ್ರಮವಾಗಿ 10 ಮೀಟರ್‌ ನಾಲೆ ನಿರ್ಮಿಸಿ ನೀರನ್ನು ಕರ್ನಾಟಕದ ಕಡೆಗೆ ತಿರುಗಿಸಿಕೊಳ್ಳಲಾಗಿದೆ. ಇದರ ಬಗ್ಗೆ ಗೋವಾ ವಿಧಾನಸಭೆ ಗಮನಕ್ಕೆ ತರಲಾಗುವುದು. ನ್ಯಾಯಮಂಡಳಿ ಎದುರು ವಾದ ಮಂಡಿಸಲಾಗುವುದು. ಕರ್ನಾಟಕದ ಕಾಮಗಾರಿ ಗೋವಾಕ್ಕೆ ಮಾರಕವಾಗಿದೆ’ ಎಂದು ಅವರು ದೂರಿದರು.

‘ನಮ್ಮ ವಿಧಾನಸಭೆ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದಂತೆ ಇಲ್ಲಿಗೆ ಭೇಟಿ ನೀಡಿದ್ದೇವೆ. ಗೋವಾದ ಕಡೆಗೆ ನೈಸರ್ಗಿಕವಾಗಿ ಹರಿಯುವ ನೀರನ್ನು ಕರ್ನಾಟಕ ತನ್ನ ಕಡೆಗೆ ತಿರುಗಿಸಿಕೊಳ್ಳಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಇದನ್ನು ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಬೇಕು. ಸಮಿತಿ ರಚಿಸಿ, ತನಿಖೆ ನಡೆಸಬೇಕು. ಕಾಮಗಾರಿಗೆ ಎಷ್ಟು ವೆಚ್ಚವಾಗಿದೆ, ಉಲ್ಲಂಘನೆಯ ಪ್ರಮಾಣ ಎಷ್ಟು ಎನ್ನುವುದನ್ನು ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಕರ್ನಾಟಕ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ಕಾಮಗಾರಿ ನಡೆಸಿದ್ದು ಏಕೆ’ ಎಂದು ಗೋವಾ ವಿಧಾನಸಭೆ ಉಪಸಭಾಧ್ಯಕ್ಷ ಮೈಕೆಲ್‌ ಲೋಬೋ ಪ್ರಶ್ನಿಸಿದರು.

‘ನಮ್ಮ ಜಲಸಂಪನ್ಮೂಲ ಸಚಿವರು ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಕರ್ನಾಟಕದವರು ನಮ್ಮ ಸಹೋದರರಿದ್ದಂತೆ. ಅವರನ್ನು ಗೌರವಿಸುತ್ತೇವೆ. ಇಲ್ಲಿಂದ ಗೋವಾಕ್ಕೆ ಬರುವಂತಹ ನೀರನ್ನು ನಾವು ಕುಡಿಯುವುದಕ್ಕೆ ಬಳಸುತ್ತೇವೆ. ಕರ್ನಾಟಕ ಕೈಗೊಳ್ಳುವ ಕಾಮಗಾರಿಯಿಂದ ನಮಗೆ ನೀರಿನ ತೊಂದರೆಯಾಗಬಾರದು’ ಎಂದು ಹೇಳಿದರು.

ಕಣಕುಂಬಿಯ ಮಲಪ್ರಭಾ ನದಿ ಉಗಮ ಸ್ಥಾನದ ಬಳಿಯ ಮಾವುಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಿಯೋಗ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತು. ಮೂವರು ಶಾಸಕರು, ವಿಧಾನಸಭೆಯ ನಾಲ್ವರು ಮಾಜಿ ಅಧ್ಯಕ್ಷರು, ಐವರು ಮಾಜಿ ಶಾಸಕರು ಸೇರಿ 40ಕ್ಕೂ ಹೆಚ್ಚು ಮಂದಿ ಗೋವಾ ನಿಯೋಗದಲ್ಲಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಿಂಗಳಲ್ಲಿ ಮೂರನೇ ತಂಡ ಭೇಟಿ: ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ಗೋವಾದ ತಂಡಗಳು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿವೆ. ಅಲ್ಲಿನ ಜಲಸಂ‍ಪನ್ಮೂಲ ಇಲಾಖೆ ಅಧಿಕಾರಿಗಳ ತಂಡ, ನಂತರ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ ನೇತೃತ್ವದ ತಂಡ ಭೇಟಿ ನೀಡಿತ್ತು.

‘ಗೋವಾ ನಿಯೋಗ ಕಣಕುಂಬಿಗೆ ಭೇಟಿ ನೀಡುವ ಕುರಿತು ಶನಿವಾರ ನಮಗೆ ಮಾಹಿತಿ ಬಂದಿತ್ತು. ಹೀಗಾಗಿ, ಸ್ಥಳದಲ್ಲಿ ಭದ್ರತೆ ನೀಡಿದ್ದೆವು’ ಎಂದು ಹೆಚ್ಚುವರಿ ಎಸ್ಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿದರು.

ಆಕ್ರಮಣಶೀಲ ಮನೋಭಾವ: ‘ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಗೋವಾದವರು ಆಗಾಗ ಭೇಟಿ ನೀಡುತ್ತಿರುವುದು ಆಕ್ರಮಣಶೀಲ ಮನೋಭಾವದ ನಿಲುವಾಗಿದೆ. ಇದನ್ನು ಕರ್ನಾಟಕ ಸರ್ಕಾರ ತಕ್ಷಣ ತಡೆಯಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಪ್ರಯತ್ನವನ್ನು ಗೋವಾ ಮಾಡಿದೆ. ಫೆ.6ರಿಂದ ಮಹದಾಯಿ ನ್ಯಾಯಮಂಡಳಿ ಎದುರು ಅಂತಿಮ ಸುತ್ತಿನ ವಾದ– ವಿವಾದಗಳು ಆರಂಭಗೊಳ್ಳುತ್ತಿವೆ. ಇದರಿಂದಾಗಿ, ಗೋವಾದ ಎಲ್ಲ ಪಕ್ಷಗಳೂ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಆದರೆ, ನಮ್ಮ ರಾಜ್ಯದ ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT