ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದೇವ್‌ ಉನದ್ಕತ್‌, ಗೌತಮ್‌ಗೆ ‘ರಾಜಸ್ಥಾನ’, ಕ್ರಿಸ್‌ ಗೇಲ್‌ ಕೈಹಿಡಿದ ಕಿಂಗ್ಸ್‌

ಐಪಿಎಲ್ ಹರಾಜು
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಿಂದ ಕುತೂಹಲ ಮೂಡಿಸಿದ್ದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌ ಐಪಿಎಲ್ ಹರಾಜು ಪ್ರಕ್ರಿಯೆಯ ಕೊನೆಯ ಹಂತದಲ್ಲಿ ಮೂಲಬೆಲೆಗೆ ಮಾರಾಟವಾದರು. ಅವರಿಗೆ ಅಂತಿಮವಾಗಿ ಮನ್ನಣೆ ನೀಡಿದರೂ ಇಯಾನ್ ಮಾರ್ಗನ್‌, ಶಾನ್ ಮಾರ್ಷ್‌, ನೇಥನ್ ಲಯನ್‌ ಮುಂತಾದ ಅನುಭವಿ ಆಟಗಾರರ ಕಡೆಗೆ ತಿರುಗಿಯೂ ನೋಡದ ಫ್ರಾಂಚೈಸ್‌ಗಳು ಯುವ ಆಟಗಾರರಿಗೆ ಮಣೆ ಹಾಕಿದರು.

ಇಲ್ಲಿ ಭಾನುವಾರ ಮುಕ್ತಾಯೊಗೊಂಡ ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರರು ಕೋಟಿ ಸಾಧನೆ ಮಾಡಿದರು. ಸೌರಾಷ್ಟ್ರದ ಎಡಗೈ ವೇಗಿ ಜಯದೇವ ಉನದ್ಕತ್‌ ₹ 11.5 ಕೋಟಿ ಮೊತ್ತಕ್ಕೆ ಮಾರಾಟವಾಗಿ ಈ ಬಾರಿ ಗರಿಷ್ಠ ಬೆಲೆಗೆ ಹರಾಜಾದ ಭಾರತೀಯ ಆಟಗಾರ ಎಂದೆನಿಸಿಕೊಂಡರೆ ಕರ್ನಾಟಕದ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ ₹ 6.20 ಕೋಟಿ ಗಳಿಸಿದರು. ಈ ಮೂಲಕ ಕನ್ನಡಿಗರ ಪೈಕಿ ಅತಿ ಹೆಚ್ಚು ಮೊತ್ತ ಗಳಿಸಿದ ಮೂರನೇ ಆಟಗಾರ ಆದರು. ಆಸ್ಟ್ರೇಲಿಯಾದ ವೇಗಿ ಆಂಡ್ರ್ಯೂ ಟೈ ₹ 7.20 ಕೋಟಿ ಮೊತ್ತಕ್ಕೆ ಮಾರಾಟವಾದರು.

17 ವರ್ಷದ ಮುಜೀಬ್‌ ಜದ್ರಾನ್, ಅಭಿಷೇಕ್ ಶರ್ಮಾ, ಸಂದೀಪ್ ಲಮಿಚಾನೆ, 18 ವರ್ಷದ ವಾಷಿಂಗ್ಟನ್ ಸುಂದರ್‌, ರಾಹುಲ್‌ ಚಾಹರ್‌, 19 ವರ್ಷದ ಮನಜ್ಯೋತ್ ಕಾರ್ಲಾ, ಜಹೀರ್ ಖಾನ್ ಪಕ್ಟೀನ್‌, 26 ವರ್ಷದ ಎವಿನ್ ಲೂಯಿಸ್‌, ಮನ್‌ದೀಪ್ ಸಿಂಗ್‌ ಮುಂತಾ ದವರು ಉತ್ತಮ ಮೊತ್ತಕ್ಕೆ ಮಾರಾಟವಾದರು. 34 ವರ್ಷದ ಶಾನ್ ಮಾರ್ಷ್‌, 33 ವರ್ಷದ ಲೆಂಡ್ಲ್‌ ಸಿಮನ್ಸ್‌, 32 ವರ್ಷದ ಕಾಲಿನ್‌ ಇಂಗ್ರಾಮ್‌ ಮುಂತಾದವರು ಹರಾಜಾಗದೇ ಉಳಿದರು. ಹರಾಜಾದ ಹಿರಿಯರ ಪೈಕಿ ಅನೇಕರು ಮೂಲಬೆಲೆಗೇ ತೃಪ್ತಿಪಡಬೇಕಾಯಿತು.

‘ಕಿಂಗ್ಸ್‌’ ಹಗ್ಗಜಗ್ಗಾಟ; ಉನದ್ಕತ್‌ಗೆ ಲಾಭ: ಜಯದೇವ ಉನದ್ಕತ್‌ಗೆ ನಿಗದಿಯಾಗಿದ್ದ ಮೂಲಬೆಲೆ ಒಂದೂವರೆ ಕೋಟಿ. ಅವರನ್ನು ಪಡೆದುಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕಿಂಗ್ಸ್‌ ಇಲೆವನ್‌ ಪಂಜಾಬ್ ಫ್ರಾಂಚೈಸ್‌ನವರು ನಿರಂತರ ಬಿಡ್ ಸಲ್ಲಿಸಿದರು. ಅಂತಿಮವಾಗಿ ₹ 11 ಕೋಟಿಗೆ ಅವರನ್ನು ಕಿಂಗ್ಸ್‌ ಇಲೆವನ್ ಪಡೆದುಕೊಳ್ಳುವುದು ಖಚಿತವಾಗಿತ್ತು. ಅಷ್ಟರಲ್ಲಿ ಏಕಾಏಕಿ ಬಿಡ್‌ಗೆ ಮುಂದಾದ ರಾಯಲ್ಸ್‌ ₹ 11.50 ಕೋಟಿಗೆ ತಮ್ಮ ತೆಕ್ಕೆಗೆ ಸೆಳೆದುಕೊಂಡರು.

ದೇಶಿ ಕ್ರಿಕೆಟ್‌ನಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಕೆ.ಗೌತಮ್‌ ಅವರ ಮೂಲಬೆಲೆ ₹ 20 ಲಕ್ಷ ಆಗಿತ್ತು. ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅವರನ್ನು ಸೆಳೆದುಕೊಳ್ಳಲು ಆರ್‌ಸಿಬಿ, ಕೋಲ್ಕತ್ತ ನೈಟ್ ರೈಡರ್ಸ್‌ ಹಾಗೂ ರಾಜಸ್ಥಾನ್ ರಾಯಲ್ಸ್‌ ಪ್ರಯತ್ನಿಸಿತು. ಮುಂಬೈ ಇಂಡಿಯನ್ಸ್ ಕೂಡ ಕೆಲ ಹೊತ್ತು ಬಿಡ್‌ ಸಲ್ಲಿಸಿತು. ಆದರೆ ಪಟ್ಟು ಬಿಡದ ರಾಜಸ್ಥಾನ್ ರಾಯಲ್ಸ್ ಕೊನೆಗೆ ತಮ್ಮ ತಂಡಕ್ಕೆ ಪಡೆದುಕೊಂಡಿತು.

ಎಕ್ಸಲರೇಷನ್ ಸುತ್ತಿನ ಮೊದಲ ಹಂತದಲ್ಲೂ ಗೇಲ್ ಹೆಸರು ಇತ್ತು. ಆದರೆ ಅವರನ್ನು ಯಾರೂ ಖರೀದಿಸಲಿಲ್ಲ. ಎರಡನೇ ಹಂತದಲ್ಲೂ ಅವರ ಬಗ್ಗೆ ಫ್ರಾಂಚೈಸ್‌ಗಳು ಹೆಚ್ಚು ಆಸಕ್ತಿ ವಹಿಸಲಿಲ್ಲ. ಕೊನೆಯ ಕ್ಷಣದಲ್ಲಿ ಮೂಲಬೆಲೆಗೇ ಖರೀದಿಸಲು ಕಿಂಗ್ಸ್ ಇಲೆವನ್ ಮುಂದಾಯಿತು.

ಅನಿರುದ್ಧ, ಪವನ್‌ಗೆ ‘ಮೊದಲ’ ಸಂಭ್ರಮ: ರಾಜ್ಯದ ಕೆ.ಸಿ.ಕಾರ್ಯಪ್ಪ, ಜೆ.ಸುಚಿತ್, ಶಿವಿಲ್‌ ಕೌಶಿಕ್, ಅಭಿಮನ್ಯು ಮಿಥುನ್‌, ಎಸ್‌.ಅರ ವಿಂದ, ಸಿ.ಎಂ.ಗೌತಮ್‌ ಮುಂತಾದವರನ್ನು ಫ್ರಾಂಚೈಸ್‌ಗಳು ಕೈಬಿಟ್ಟಾಗ ಆಫ್‌ ಸ್ಪಿನ್ನರ್‌ ‌ಅನಿರುದ್ಧ ಜೋಶಿ ಮತ್ತು ಆಲ್‌ರೌಂಡರ್‌ ಪವನ್ ದೇಶಪಾಂಡೆ ಗಮನ ಸೆಳೆದರು. ಈ ಮೂಲಕ ಮೊದಲ ಬಾರಿ ಐಪಿಎಲ್‌ನಲ್ಲಿ ಆಡುವ ಕನಸು ನನಸಾಗಿಸುವ ಹಾದಿಯಲ್ಲಿ ಹೆಜ್ಜೆ ಹಾಕಿದರು. ಆರ್‌.ವಿನಯ ಕುಮಾರ್‌ ಹಾಗೂ ಶ್ರೇಯಸ್ ಗೋಪಾಲ್‌ ಅವರಿಗೆ ಮೂಲಬೆಲೆ ಮಾತ್ರ ಸಿಕ್ಕಿತು.

ಚೆನ್ನೈ ‘ಲುಂಗಿ’ ಡ್ಯಾನ್ಸ್‌: ಭಾರತ ವಿರುದ್ಧದ ದಕ್ಷಿಣ ಆಫ್ರಿಕಾದ ಟೆಸ್‌ ಸರಣಿಯಲ್ಲಿ ಅಮೋಘ ಸಾಧನೆ ಮಾಡಿದ ಲುಂಗಿಸಾನಿ ಗಿಡಿ ಅವರನ್ನು ಖರೀದಿಸಿ ಚೆನ್ನೈ ಸೂಪರ್‌ ಕಿಂಗ್ಸ್ ತಮ್ಮ ಬೌಲಿಂಗ್ ಬಳಗವನ್ನು ಬಲಿಷ್ಠಗೊಳಿಸಿತು. ಈ ಬಿರುಗಾಳಿ ವೇಗದ ಬೌಲರ್‌ ಕಿಂಗ್ಸ್‌ಗೆ ಕೇವಲ ₹ 20 ಲಕ್ಷಕ್ಕೆ ಲಭಿಸಿದರು. ವಿಷಯ ತಿಳಿದ ಗಿಡಿ ಕೆಲವೇ ಕ್ಷಣಗಳಲ್ಲಿ ‘ಲುಂಗಿ ಡ್ಯಾನ್ಸ್‌ ವಿಷಯ ಈಗ ತಾನೆ ತಿಳಿಯಿತು. ಇದು ನನಗೆ ರೋಮಾಂಚನ ಮೂಡಿಸಿದೆ’ ಎಂದು ಟ್ವೀಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT