ಕಂತಿನಲ್ಲಿ ಖರೀದಿಸಿದ ಬ್ಯಾಟ್‌ ಮತ್ತು ₹ 20 ಲಕ್ಷದ ಬಿಡ್‌

7

ಕಂತಿನಲ್ಲಿ ಖರೀದಿಸಿದ ಬ್ಯಾಟ್‌ ಮತ್ತು ₹ 20 ಲಕ್ಷದ ಬಿಡ್‌

Published:
Updated:

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ದೇಶಿ ಕ್ರಿಕೆಟ್‌ನಲ್ಲಿ ಮಿಂಚಿನ ಆಟವಾಡಿ ಗಮನ ಸೆಳೆದ ಧಾರವಾಡದ ಪವನ್ ದೇಶಪಾಂಡೆ ‘ಮಿಲಿಯನ್‌ ಡಾಲರ್‌ ಬೇಬಿ’ ಐಪಿಎಲ್‌ಗೆ ಹರಾಜಾದ ವಿಷಯ ತಿಳಿದಾಗ ಮೊದಲು ನೆನಪಾದದ್ದು ಅಪ್ಪ ಕಂತಿನಲ್ಲಿ ಖರೀದಿಸಿಕೊಟ್ಟ ಬ್ಯಾಟ್‌.

ಭಾನುವಾರ ಸಂಜೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ಸ್ವತ: ಈ ವಿಷಯವನ್ನು ಹೇಳಿದರು.

ಹುಬ್ಬಳ್ಳಿ–ಧಾರವಾಡ ನಡುವಿನ ನವನಗರ ಗ್ರಾಮದಲ್ಲಿ ಹುಟ್ಟಿದ ‍ಪವನ್‌ ತಂದೆ ಪತ್ರಿಕಾ ವಿತರಕರಾಗಿದ್ದರು. ಈಗ ಅಗರಬತ್ತಿ ಮಾರಾಟದ ಅಂಗಡಿ ಇರಿಸಿಕೊಂಡಿದ್ದಾರೆ. ಕ್ರಿಕೆಟ್‌ನ ’ಅ..ಆ..ಇ..ಈ’ ಕಲಿಯಲು ಪವನ್‌ ನಿತ್ಯವೂ ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿಗೆ ಬಸ್‌ನಲ್ಲಿ ಹೋಗುತ್ತಿದ್ದರು.

‘ಬ್ಯಾಟ್ ಬೇಡಿಕೆ ಇರಿಸಿದಾಗ ತಂದೆ ಸಾಲ ಮಾಡಿ ₹ 1100 ಬೆಲೆಯ ಬ್ಯಾಟ್ ಖರೀದಿಸಿದರು. ಸಾಲವನ್ನು ಏಳು ಕಂತಿನಲ್ಲಿ ತೀರಿಸಿದ್ದರು. ಅದನ್ನು ನೆನೆದುಕೊಂಡಾಗಲೆಲ್ಲ ನಾನು ಭಾವುಕನಾಗುತ್ತೇನೆ’ ಎಂದು ಪವನ್‌ ಹೇಳಿದರು.

‘ಐಪಿಎಲ್‌ನಲ್ಲಿ ಹರಾಜಾಗುವ ಭರವಸೆ ಇರಲಿಲ್ಲ. ತಾಯಿ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಸಂತಸದ ಅಲೆಯಲ್ಲಿ ತೇಲಿದೆ’ ಎಂದ ಅವರು ‘ಆಡಲು ಅವಕಾಶ ಲಭಿಸಿದರೆ ನನ್ನ ಸಂಪೂರ್ಣ ಸಾಮರ್ಥ್ಯವನ್ನು ತೋರುತ್ತೇನೆ’ ಎಂದರು.

16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಪವನ್‌ ಮೊದಲು ಜಾಲಿ ಕ್ರಿಕೆಟರ್ಸ್ ಕ್ಲಬ್‌ನಲ್ಲಿ ಆಡಿದರು. ಈಗ ಎಂಟು ವರ್ಷಗಳಿಂದ ವಲ್ಚರ್ಸ್‌ ಕ್ಲಬ್‌ನಲ್ಲಿದ್ದಾರೆ. ‘ಕೆಪಿಎಲ್‌ ಮತ್ತು ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಆಟ ಆಡಿದ್ದು ಐಪಿಎಲ್‌ ಫ್ರಾಂಚೈಸ್‌ಗಳ ಗಮನ ಸೆಳೆಯಲು ಸಹಕಾರಿ ಆಗಿರಬೇಕು’ ಎಂದು ಅವರು ಹೇಳಿದರು.

ಅಪ್ಪನೇ ಮೊದಲ ಕೋಚ್‌

ಅನಿರುದ್ಧ ಜೋಶಿ ಕೂಡ ಹರಾಜಿನ ವಿಷಯ ತಿಳಿದು ರೋಮಾಂಚನಗೊಂಡಿದ್ದರು. ಹಿರಿಯ ಸ್ಪಿನ್ನರ್ ಸುನಿಲ್ ಜೋಶಿ ಅವರ ಅಣ್ಣನ ಮಗನಾದ ಅನಿರುದ್ಧ ಹುಟ್ಟಿ ಬೆಳೆದದ್ದು ಗದಗ ನಗರದಲ್ಲಿ.

‘ನಮ್ಮದು ಕ್ರಿಕೆಟ್‌ ಹಿನ್ನೆಲೆಯ ಕುಟುಂಬ. ವಿಶ್ವವಿದ್ಯಾಲಯ ಮಟ್ಟದ ವರೆಗೆ ಆಡಿದ ತಂದೆಯೇ ನನಗೆ ಮೊದಲ ಕೋಚ್‌. ಚಿಕ್ಕಪ್ಪನೂ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಕ್ರಿಕೆಟ್‌ನಲ್ಲಿ ಬೆಳೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದರು. ಗದಗ ಸಿಟಿ ಕ್ರಿಕೆಟರ್ಸ್‌ ಕ್ಲಬ್‌ಗಾಗಿ ಆಡಿದ ಜೋಶಿ ಈಗ ಬೆಂಗಳೂರಿನಲ್ಲಿ ವಲ್ಚರ್ಸ್ ಕ್ಲಬ್‌ ಸದಸ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry