ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮ ಪ್ರಶಸ್ತಿಗೆ ಶಿಫಾರಸು ಬೇಕಿಲ್ಲ: ಮೋದಿ

ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ: ಮನದ ಮಾತಿನಲ್ಲಿ ಪ್ರಧಾನಿ ಪ್ರತಿಪಾದನೆ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರತಿಷ್ಠಿತ ‘ಪದ್ಮ’ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ವರ್ಷಗಳಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದ್ದು, ಯಾವುದೇ ಶಿಫಾರಸುಗಳಿಗೆ ಮಣೆ ಹಾಕುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಪ್ರಸಾರವಾದ ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಆಯ್ಕೆ ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು ಸಂಪೂರ್ಣ ಪಾರದರ್ಶಕವಾಗಿದೆ ಎಂದರು.

ವ್ಯಕ್ತಿಗಳ ಹೆಸರಿನ ಬದಲು ಅವರು ಮಾಡಿದ ಕೆಲಸವನ್ನು ಪ್ರಶಸ್ತಿಗೆ ಮುಖ್ಯ ಮಾನದಂಡವಾಗಿ ಪರಿಗಣಿಸಲಾಗಿದೆ. ಹೀಗಾಗಿ ಜನಸಾಮಾನ್ಯರಿಗೂ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳು ಒಲಿಯುತ್ತಿವೆ ಎಂದು ಮೋದಿ ಹೇಳಿದ್ದಾರೆ.

ಪ್ರಶಸ್ತಿ ಪಡೆಯುವ ವ್ಯಕ್ತಿಗಳ ಹೆಸರು, ಫೋಟೊ ಪ್ರತಿದಿನ ಪತ್ರಿಕೆ, ಟಿ.ವಿಗಳಲ್ಲಿ ಕಾಣಿಸಿಕೊಳ್ಳಬೇಕು ಮತ್ತು ಅಂಥವರು ಮಹಾನಗರಗಳ ವಾಸಿಗಳಾಗಿರಬೇಕು ಎಂಬ ಮಿಥ್ಯೆಗಳಿಗೆ ಅಂತ್ಯ ಹಾಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಮತ್ತು ಪ್ರಚಾರದಲ್ಲಿ ಇಲ್ಲದ ಅರ್ಹ ವ್ಯಕ್ತಿಗಳನ್ನು ಪದ್ಮ ಪ್ರಶಸ್ತಿಗಳು ಅರಸಿಕೊಂಡು ಹೋಗಿವೆ. ಯಾವುದೇ ವ್ಯಕ್ತಿ ಯಾರ ಹೆಸರನ್ನಾದರೂ ಪ್ರಶಸ್ತಿಗೆ ಸೂಚಿಸಬಹುದು. ಜನಸಾಮಾನ್ಯರೂ ಈ ಪ್ರಶಸ್ತಿಗೆ ಅರ್ಹರು. ಅವರಿಗೆ ಯಾವುದೇ ಗಣ್ಯರ ಶಿಫಾರಸಿನ ಅಗತ್ಯವಿಲ್ಲ ಎಂದು ಮೋದಿ ಹೇಳಿದರು.

ನಾರಿಶಕ್ತಿಯ ಶ್ಲಾಘನೆ : ಎಲ್ಲ ಅಡೆತಡೆಗಳನ್ನು ಮೀರಿ ದೇಶದ ಮಹಿಳೆಯರು ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ವಾವಲಂಬನೆ ಮತ್ತು ನಾಯಕತ್ವ ಜವಾಬ್ದಾರಿ ನಿರ್ವಹಿಸುವಲ್ಲಿ ಅವರು ತಮ್ಮ ಸಾಮರ್ಥ್ಯ ಸಾಬೀತು ಪಡಿಸುತ್ತಿದ್ದಾರೆ ಎಂದು ಪ್ರಧಾನಿ ಪ್ರಶಂಸಿಸಿದರು.

ಮಹಿಳಾ ಸಶಕ್ತೀಕರಣ ಕುರಿತು ಪ್ರಸ್ತಾಪಿಸಿದ ಅವರು, ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದರು.

ನಕ್ಸಲ್‌ ಪ್ರಭಾವವಿರುವ ಛತ್ತೀಸಗಡದ ದಾಂತೇವಾಡದಲ್ಲಿ ಬುಡಕಟ್ಟು ಮಹಿಳೆಯರು ವಿದ್ಯುತ್‌ ಚಾಲಿತ ರಿಕ್ಷಾ ಚಲಾಯಿಸುತ್ತಿದ್ದಾರೆ. ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೂ ಕೈಜೋಡಿಸಿದ್ದಾರೆ ಎಂದರು.

ಮುಂಬೈನ ಮಾತುಂಗಾ ರೈಲ್ವೆ ನಿಲ್ದಾಣದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಗಗನಯಾತ್ರಿ ಕಲ್ಪನಾ ಚಾವ್ಲಾ ಸಾಧನೆ ಮಹಿಳೆಯರಿಗೆ ನೀಡಿದ ಪ್ರೇರಣೆ ಅಪಾರ ಎಂದು ಅವರು ಸ್ಮರಿಸಿದರು. ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಬಿಹಾರದಲ್ಲಿ ಆಯೋಜಿಸಿದ್ದ 13 ಸಾವಿರ ಕಿ.ಮೀ ಉದ್ದದ ಮಾನವ ಸರಪಳಿಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.
**
ಅಗ್ಗದ ದರದ ಜನೌಷಧಿ: ಪ್ರಧಾನಿ ಶ್ಲಾಘನೆ

ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಔಷಧ ಪೂರೈಸಲು ದೇಶದಾದ್ಯಂತ ಸ್ಥಾಪಿಸಲಾಗಿರುವ 3,000 ಜನೌಷಧಿ ಕೇಂದ್ರಗಳು ಆರೋಗ್ಯ ಸೇವೆ ಸುಗಮಗೊಳಿಸಿವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಈ ಕುರಿತು ಮೈಸೂರಿನ ಶ್ರೀರಾಮ್‌ ದರ್ಶನ್‌ ಎಂಬುವರು ಬರೆದ ಪತ್ರವನ್ನು ಭಾಷಣದಲ್ಲಿ ಉಲ್ಲೇಖಿಸಿದ ಅವರು, ಜನೌಷಧಿ ಮಳಿಗೆಗಳು ಹೊಸ ಉದ್ಯೋಗ ಅವಕಾಶ ಸೃಷ್ಟಿಸಿವೆ ಎಂದರು.

ಮಾರುಕಟ್ಟೆಯಲ್ಲಿ ದೊರೆಯುವ ಔಷಧಿಗಳಿಗೆ ಹೋಲಿಸಿದರೆ ಇಲ್ಲಿ ದೊರೆಯುವ ಔಷಧಿಗಳು ಶೇ 50ರಿಂದ ಶೇ 90ರಷ್ಟು ಅಗ್ಗವಾಗಿರುತ್ತವೆ ಎಂದರು.
**
ಸೀತವ್ವ ಸಾಧನೆ ಬಣ್ಣಿಸಿದ ಪ್ರಧಾನಿ

ಮಹಿಳಾ ಸಬಲೀಕರಣಕ್ಕಾಗಿ ಹೋರಾಡಿದ ಕರ್ನಾಟಕದ ಸೀತವ್ವ ಜೋಡಟ್ಟಿ ಅವರ ಹೆಸರನ್ನು ಮೋದಿ ಪ್ರಸ್ತಾಪಿಸಿದರು. ಅನನ್ಯ ಸಾಧನೆ ಮಾಡಿದ ಶ್ರೀಸಾಮಾನ್ಯರಿಗೂ ಪದ್ಮ ಪ್ರಶಸ್ತಿ ಮುಡಿಗೇರಿದೆ. ಅದಕ್ಕೆ ಬೆಳಗಾವಿಯ ಸೀತವ್ವ ನಿದರ್ಶನ ಎಂದರು.

ಬೆಳಗಾವಿಯ ಗ್ರಾಮೀಣ ಪ್ರದೇಶಗಳ ದೇವದಾಸಿಯರು ಮತ್ತು ದಲಿತ ಮಹಿಳೆಯರ ಸಬಲೀಕರಕ್ಕಾಗಿ 30 ವರ್ಷಗಳಿಂದ ಹೋರಾಡು
ತ್ತಿರುವ ಸೀತವ್ವ ಅವರನ್ನು ಮೋದಿ ‘ಮಹಿಳಾ ಸಶಕ್ತೀಕರಣದ ದೇವಿ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT