ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ತ್ರಿವಳಿ ತಲಾಖ್‌ ರದ್ದು ಮಸೂದೆ ಅಂಗೀಕಾರಕ್ಕೆ ಸರ್ಕಾರ ಪಣ

7

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ತ್ರಿವಳಿ ತಲಾಖ್‌ ರದ್ದು ಮಸೂದೆ ಅಂಗೀಕಾರಕ್ಕೆ ಸರ್ಕಾರ ಪಣ

Published:
Updated:
ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ತ್ರಿವಳಿ ತಲಾಖ್‌ ರದ್ದು ಮಸೂದೆ ಅಂಗೀಕಾರಕ್ಕೆ ಸರ್ಕಾರ ಪಣ

ನವದೆಹಲಿ: ತ್ರಿವಳಿ ತಲಾಖ್‌ ರದ್ದತಿ ಮಸೂದೆಯು ಅಂಗೀಕಾರವಾಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಸಹಮತ ಮೂಡಿಸುವುದಕ್ಕಾಗಿ ರಾಜಕೀಯ ಪಕ್ಷಗಳ ಜತೆ ಮಾತನಾಡಲಾಗುವುದು ಎಂದು ಬಜೆಟ್‌ ಅಧಿವೇಶನದ ಮುನ್ನಾ ದಿನ ನಡೆದ ಸರ್ವ ಪಕ್ಷ ಸಭೆಯಲ್ಲಿ ಸರ್ಕಾರ ತಿಳಿಸಿದೆ.

ಸಂಸತ್ತಿನ ಸ್ಥಾಯಿ ಸಮಿತಿ ವ್ಯವಸ್ಥೆಯು ಸಹಭಾಗಿ ಪ್ರಜಾಪ್ರಭುತ್ವದ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸಂಸತ್ತನ್ನು ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಈ ರೀತಿ ಅವರು ತಿರುಗೇಟು ನೀಡಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಅವರು ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಮೋದಿ ಮಾತನಾಡಿದರು. ತ್ರಿವಳಿ ತಲಾಖ್‌ ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸರ್ಕಾರ ತಿರಸ್ಕರಿಸಿದೆ. ಸೋಮವಾರ ಬಜೆಟ್‌ ಅಧಿವೇಶನ ಆರಂಭವಾಗಲಿದೆ.

ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಅಧ್ಯಕ್ಷತೆಯಲ್ಲಿಯೂ ಸರ್ವ ಪಕ್ಷಗಳ ಮುಖಂಡರ ಸಭೆ ನಡೆದಿದೆ. ಸದನ ಸುಗಮವಾಗಿ ನಡೆಯಲು ಸಹಕರಿಸುವಂತೆ ಅವರು ಕೋರಿದರು.

ಬಜೆಟ್‌ ಅಧಿವೇಶನದ ಕಲಾಪದ ದಿನಗಳನ್ನು ಸರ್ಕಾರ ಕಡಿತಗೊಳಿಸಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧದ ಹೇಳಿಕೆಗಳು ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರದ ಮೇಲೆ ಮುಗಿಬೀಳುವುದಾಗಿ ವಿರೋಧ ಪಕ್ಷಗಳು ಹೇಳಿವೆ.

ಸೋಮವಾರ ಬೆಳಿಗ್ಗೆ ವಿರೋಧ ಪಕ್ಷಗಳ ಮುಖಂಡರು ಭೇಟಿಯಾಗಿ ಸರ್ಕಾರವನ್ನು ಹೇಗೆ ಬದಿಗೊತ್ತಬಹುದು ಎಂಬ ಕಾರ್ಯತಂತ್ರವನ್ನು ಚರ್ಚಿಸಲಿದ್ದಾರೆ.

ಅಧಿವೇಶನ ವಿವರ

ಬಜೆಟ್‌ ಅಧಿವೇಶನದ ಮೊದಲ ಭಾಗ: ಸೋಮವಾರದಿಂದ ಫೆ. 9ರವರೆಗೆ  (8 ದಿನಗಳ ಕಲಾಪ)

ಬಜೆಟ್‌ ಅಧಿವೇಶನದ ಎರಡನೇ ಭಾಗ: ಮಾರ್ಚ್‌ 5ರಿಂದ ಏಪ್ಇರಲ್‌ 9 (23 ದಿನಗಳ ಕಲಾಪ)

ಪ್ರಮುಖ ದಿನಗಳು:

ಜ. 29: * ಲೋಕಸಭೆ, ರಾಜ್ಯಸಭೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಷಣ

* ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಂದ ಆರ್ಥಿಕ ಸಮೀಕ್ಷೆ ಮಂಡನೆ

ಫೆ. 1: ಜೇಟ್ಲಿ ಅವರಿಂದ ಕೇಂದ್ರ ಬಜೆಟ್‌ ಮಂಡನೆ

ಚರ್ಚೆಗೆ ಬರಲಿರುವ ಮಸೂದೆಗಳು

* ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್‌ ರದ್ದತಿ ಮಸೂದೆ)

* ಮೋಟರ್‌ ವಾಹನ (ತಿದ್ದುಪಡಿ) ಮಸೂದೆ 2017

* ಗ್ರಾಹಕರ ರಕ್ಷಣೆ ಮಸೂದೆ 2018

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry