ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕೃಪಾಂಕ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಪಾಲನೆ *ಆರು ಡಿವೈಎಸ್ಪಿಗಳಿಗೆ ಸಿಗಲಿದೆ ಹಿಂಬಡ್ತಿ

42 ಪೊಲೀಸರ ಸೇವಾ ಜ್ಯೇಷ್ಠತೆ ಕಡಿತ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 42 ಪೊಲೀಸರಿಗೆ ನೀಡಲಾಗಿದ್ದ ಐದು ವರ್ಷಗಳ ಸೇವಾ ಜ್ಯೇಷ್ಠತೆಯನ್ನು ಕಡಿತಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪು ಉಲ್ಲಂಘಿಸಿ 2003ರಲ್ಲಿ ಈ ಪೊಲೀಸರಿಗೆ ಜ್ಯೇಷ್ಠತೆ ನಿಗದಿ ಮಾಡಲಾಗಿತ್ತು. ಈಗಿನ ಪರಿಷ್ಕೃತ ಆದೇಶದಿಂದ ಆರು ಡಿವೈಎಸ್ಪಿಗಳಿಗೆ ಹಿಂಬಡ್ತಿ ಸಿಗಲಿದೆ. ಈ ಬೆಳವಣಿಗೆಯು ಇಲಾಖೆಯ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ಏನಿದು ವಿವಾದ: 1996ರ ಫೆ.19ರಂದು ಇಲಾಖೆಯು ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಪ್ರಕ್ರಿಯೆ ಪೂರ್ಣಗೊಂಡು 1999ರ ಜನವರಿಯಲ್ಲಿ 200 ಅಭ್ಯರ್ಥಿಗಳು ಇಲಾಖೆ ಸೇರಿಕೊಂಡರು. ಅವರಲ್ಲಿ 50 ಮಂದಿ ಗ್ರಾಮೀಣ ಕೃಪಾಂಕ ಆಧಾರದಡಿ ನೇಮಕವಾಗಿದ್ದರು.

ಆದರೆ, ಗ್ರಾಮೀಣ ಕೃಪಾಂಕದಡಿ ಆಯ್ಕೆಯಾಗಿದ್ದ ನೌಕರರ ನೇಮಕಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ 2001ರಲ್ಲಿ ತೀರ್ಪು ನೀಡಿತು. ಆಗ ಇಲಾಖೆ ಆ 50 ಪಿಎಸ್‌ಐಗಳನ್ನು ವಜಾಗೊಳಿಸಿ, ಅವರ ಸ್ಥಾನಗಳಿಗೆ ಮೆರಿಟ್ ಆಧಾರದಡಿ ನಗರ ಪ್ರದೇಶಗಳ
ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿತು.

ಇಷ್ಟಕ್ಕೇ ವಿವಾದ ಬಗೆಹರಿಯಲಿಲ್ಲ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳ ಸೇವೆಯನ್ನು ಯಾವ ವರ್ಷದಿಂದ ಪರಿಗಣಿಸಬೇಕು ಎಂಬ ವಿಚಾರಕ್ಕೆ ಕಾನೂನು ಸಂಘರ್ಷ ಉಂಟಾಗಿ, ವಿವಾದ ಮತ್ತೆ ಕೋರ್ಟ್ ಮೆಟ್ಟಿಲೇರಿತು. ಅಭ್ಯರ್ಥಿ ಕೆಲಸಕ್ಕೆ ಸೇರಿದ ದಿನಾಂಕವನ್ನೇ ಸೇವಾವಧಿಗೆ ಪರಿಗಣಿಸುವಂತೆ ನ್ಯಾಯಪೀಠ ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಗೃಹ ಇಲಾಖೆ, ಆ 50 ಅಭ್ಯರ್ಥಿಗಳಿಗೂ 1999ರ ಜ.4ರಿಂದಲೇ ಜ್ಯೇಷ್ಠತೆ ನಿಗದಿಪಡಿಸಿತು. ಈ ಮೂಲಕ ಅವರಿಗೆ ಪುಕ್ಕಟೆಯಾಗಿ ಐದು ವರ್ಷಗಳ ಜ್ಯೇಷ್ಠತೆಯನ್ನು ನೀಡಿತು. ಇದು ಬ್ಯಾಚ್‌ನ ಉಳಿದ ಅಧಿಕಾರಿಗಳ ಬೇಸರಕ್ಕೆ ಕಾರಣವಾಯಿತು. ಈ ಗೊಂದಲ ಬಗೆಹರಿಸುವಂತೆ ಅವರು ಹಿಂದಿನ ಡಿಜಿ–ಐಜಿಪಿಗಳ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ.

‘‌1999ರ ಬ್ಯಾಚ್‌ನ ಎಲ್ಲ ಅಭ್ಯರ್ಥಿಗಳು ಈಗ ರಾಜ್ಯದ ವಿವಿಧೆಡೆ ಇನ್‌ಸ್ಪೆಕ್ಟರ್‌ಗಳಾಗಿ, ಡಿವೈಎಸ್ಪಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುಕ್ಕಟೆಯಾಗಿ ಜ್ಯೇಷ್ಠತೆ ಪಡೆದವರೂ ಡಿವೈಎಸ್ಪಿಗಳಾಗಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ’ ಎಂದು ಅಭ್ಯರ್ಥಿಗಳು (ಈಗ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿರುವವರು) ಡಿಜಿಪಿ ನೀಲಮಣಿ ರಾಜು ಬಳಿ ಇತ್ತೀಚೆಗೆ ಅಳಲು ತೋಡಿಕೊಂಡಿದ್ದರು.

ಆಕ್ಷೇಪಣೆಗೆ ವಾರದ ಗಡುವು: ಎಲ್ಲ ಕಮಿಷನರೇಟ್‌ಗಳು, ಐಜಿಪಿ ಹಾಗೂ ಎಸ್ಪಿ ಕಚೇರಿಗಳಿಗೂ ಜ.25ರಂದು ಡಿಜಿಪಿ ಕಚೇರಿಯಿಂದ ತಿದ್ದುಪಡಿ ಆದೇಶ ರವಾನೆಯಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್‌ಸ್ಪೆಕ್ಟರ್‌/ಡಿವೈಎಸ್ಪಿಗಳಿಗೆ ಈ ವಿಚಾರ ತಿಳಿಸಬೇಕು. ಆಕ್ಷೇಪಣೆಗಳು ಇದ್ದಲ್ಲಿ ವಾರದೊಳಗೆ ಡಿಜಿಪಿ ಕಚೇರಿಗೆ ಸಲ್ಲಿಸಲು ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಾಣಿಕ್ಯ ಪ್ರಕರಣದ ತೀರ್ಪು ಅನ್ವಯ

ನ್ಯಾಯಾಧೀಶ ಎಸ್‌.ಆರ್. ಮಾಣಿಕ್ಯ ಮತ್ತು ಇತರರು ನ್ಯಾಯಾಂಗ ಇಲಾಖೆಯಲ್ಲಿನ ಸೇವಾ ಜ್ಯೇಷ್ಠತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಆಯಾ ಅಭ್ಯರ್ಥಿಗಳ ನೇಮಕಾತಿ ದಿನದ ಆಧಾರದ ಮೇಲೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು 2015ರಲ್ಲಿ ಆದೇಶಿಸಿತ್ತು.

ಮಾಣಿಕ್ಯ ಪ್ರಕರಣದ ತೀರ್ಪು ಕೆಸಿಎಸ್‌ಆರ್ (ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ) ನಿಯಮಕ್ಕೆ ವಿರುದ್ಧವಾಗಿದೆ. ಈಗಾಗಲೇ ಇತ್ಯರ್ಥವಾಗಿರುವ ವಿಷಯಗಳನ್ನು ಮತ್ತೆ ಅಸ್ಥಿರಗೊಳಿಸಿದೆ. ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಆಗ ಕಾನೂನು ಇಲಾಖೆ ಸರ್ಕಾರಕ್ಕೆ ಲಿಖಿತ ಸಲಹೆ ನೀಡಿತ್ತು.

ಆದರೆ, ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿವಾದಿಯಾಗದ ಕಾರಣ ಈ ಕುರಿತು ಮೇಲ್ಮನವಿ ಸಲ್ಲಿಸಿರಲಿಲ್ಲ. ಈಗ ಪೊಲೀಸ್‌ ಇಲಾಖೆ ಮಾಣಿಕ್ಯ ಪ್ರಕರಣ ಆಧಾರವಾಗಿಟ್ಟುಕೊಂಡು ಪಟ್ಟಿ ಪರಿಷ್ಕರಿಸಿದೆ.

ಹಿಂಬಡ್ತಿ ಪಡೆಯಲಿರುವ ಡಿವೈಎಸ್ಪಿಗಳು

l  ರವೀಂದ್ರ ಎಸ್‌.ಜಾಗೀರ್‌ದಾರ್

l  ಎಂ.ಸಿ.ಶಿವಕುಮಾರ್

l  ಜಿ.ಎಸ್.ತಿಪ್ಪೇರುದ್ರ

l  ಜೆ.ಮೋಹನ್

l  ಜೆ.ಎಸ್.ತಿಪ್ಪೇಸ್ವಾಮಿ

l  ಜೆ.ಜೆ.ತಿರುಮಲೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT