ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಅವಘಡ: ಎಂಆರ್‌ಐ ಯಂತ್ರ ಸೆಳೆದು ವ್ಯಕ್ತಿ ಸಾವು

7

ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಅವಘಡ: ಎಂಆರ್‌ಐ ಯಂತ್ರ ಸೆಳೆದು ವ್ಯಕ್ತಿ ಸಾವು

Published:
Updated:
ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಅವಘಡ: ಎಂಆರ್‌ಐ ಯಂತ್ರ ಸೆಳೆದು ವ್ಯಕ್ತಿ ಸಾವು

ಮುಂಬೈ: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಎಂಆರ್‌ಐ (ಮ್ಯಾಗ್ನೆಟಿಕ್ ರೆಸನನ್ಸ್ ಇಮೇಜಿಂಗ್) ಯಂತ್ರವು ರಾಜೇಶ್‌ ಮರು (32) ಎಂಬ ವ್ಯಕ್ತಿಯನ್ನು ಸೆಳೆದುಕೊಂಡು ಆ ವ್ಯಕ್ತಿ ಮೃತಪಟ್ಟಿದ್ದಾರೆ.

ಬೃಹನ್‌ ಮುಂಬೈ ನಗರಪಾಲಿಕೆ ನಿರ್ವಹಣೆಯಲ್ಲಿರುವ ನಾಯರ್ ಆಸ್ಪತ್ರೆಯಲ್ಲಿ ರಾಜೇಶ್ ಅವರ ಸಂಬಂಧಿ ಲಕ್ಷ್ಮೀಬಾಯಿ ಸೋಲಂಕಿ ಚಿಕಿತ್ಸೆ ಪಡೆಯುತ್ತಿದ್ದರು. ಲಕ್ಷ್ಮಿ ಅವರನ್ನು ತಪಾಸಣೆಗೆಂದು ಎಂಆರ್‌ಐ ಕೊಠಡಿಗೆ ರಾಜೇಶ್ ಕರೆದುಕೊಂಡು ಹೋದಾಗ ಅವಘಡ ಸಂಭವಿಸಿದೆ.

‘ಲಕ್ಷ್ಮಿ ಅವರ ಉಸಿರಾಟಕ್ಕೆಂದು ನೀಡಲಾಗಿದ್ದ ದ್ರವ ಆಮ್ಲಜನಕದ ಸಿಲಿಂಡರ್‌ ಅನ್ನು ರಾಜೇಶ್ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ಲಕ್ಷ್ಮಿ ಅವರನ್ನು ಕರೆದುಕೊಂಡು ರಾಜೇಶ್ ಅವರು ಎಂಆರ್‌ಐ ಕೊಠಡಿ ಪ್ರವೇಶಿಸಿದ ತಕ್ಷಣ ಯಂತ್ರವು ಸಿಲಿಂಡರ್ ಅನ್ನು ಸೆಳೆದುಕೊಂಡಿತು. ಸಿಲಿಂಡರ್ ಜತೆಗೆ ರಾಜೇಶ್ ಸಹ ಯಂತ್ರಕ್ಕೆ ಅಪ್ಪಳಿಸಿದರು’ ಎಂದು ರಾಜೇಶ್ ಕುಟುಂಬದವರು ದೂರಿದ್ದಾರೆ.

ಎಂಆರ್‌ಐ ತಪಾಸಣೆ ವೇಳೆ ಕರ್ತವ್ಯದಲ್ಲಿದ್ದ ವೈದ್ಯ, ವಾರ್ಡ್‌ ಬಾಯ್ ಮತ್ತು ಎಂಆರ್‌ಐ ಕೊಠಡಿ ಸಹಾಯಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಂತ್ರವು ಸೆಳೆದುಕೊಂಡಾಗ ಸಿಲಿಂಡರ್‌ನ ಕೊಳವೆ ತುಂಡಾಗಿ, ಅದರಿಂದ ದ್ರವ ಆಮ್ಲಜನಕ ಸೋರಿಕೆಯಾಗಿದೆ. ದ್ರವ ಆಮ್ಲಜನಕವನ್ನು ಉಸಿರಾಡಿದ ಕಾರಣ ರಾಜೇಶ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

ಎಂಆರ್‌ಐ ಯಂತ್ರಗಳು ಚಾಲನೆಯಲ್ಲಿದ್ದಾಗ ಪ್ರಬಲ ಅಯಸ್ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತವೆ. ಆ ಸಂದರ್ಭದಲ್ಲಿ ಅದರ ಸಮೀಪಲ್ಲಿರುವ ಲೋಹಗಳನ್ನು ಅದು ಸೆಳೆದುಕೊಳ್ಳುತ್ತದೆ.

‘ಸಿಲಿಂಡರ್‌ ಅನ್ನು ಎಂಆರ್‌ಐ ಯಂತ್ರದ ಬಳಿ ಕೊಂಡೊಯ್ಯಬಾರದು ಎಂದು ವೈದ್ಯರಾಗಲೀ, ವಾರ್ಡ್‌ ಬಾಯ್ ಆಗಲೀ ಹೇಳಲಿಲ್ಲ. ಅವರ ನಿರ್ಲಕ್ಷ್ಯದಿಂದ ರಾಜೇಶ್ ಸಾಯುವಂತಾಯಿತು’ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry