ಫಲಪುಷ್ಪ ಪ್ರದರ್ಶನ: 4.35 ಲಕ್ಷ ಮಂದಿ ವೀಕ್ಷಣೆ : ಹತ್ತು ದಿನಗಳಲ್ಲಿ ₹1.64 ಕೋಟಿ ಸಂಗ್ರಹ

7

ಫಲಪುಷ್ಪ ಪ್ರದರ್ಶನ: 4.35 ಲಕ್ಷ ಮಂದಿ ವೀಕ್ಷಣೆ : ಹತ್ತು ದಿನಗಳಲ್ಲಿ ₹1.64 ಕೋಟಿ ಸಂಗ್ರಹ

Published:
Updated:
ಫಲಪುಷ್ಪ ಪ್ರದರ್ಶನ: 4.35 ಲಕ್ಷ ಮಂದಿ ವೀಕ್ಷಣೆ : ಹತ್ತು ದಿನಗಳಲ್ಲಿ ₹1.64 ಕೋಟಿ ಸಂಗ್ರಹ

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಹತ್ತು ದಿನಗಳ ಫಲಪುಷ್ಪ ಪ್ರದರ್ಶನ ಭಾನುವಾರ ಸಂಪನ್ನಗೊಂಡಿತು.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ಹತ್ತು ದಿನಗಳಲ್ಲಿ ಒಟ್ಟು 4.35 ಲಕ್ಷ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. ಒಟ್ಟು ₹1.64 ಕೋಟಿ ಸಂಗ್ರಹವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ವೇಳೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಹೋಲಿಸಿದರೆ ಗಣರಾಜ್ಯೋತ್ಸವದ ವೇಳೆಯ ಪ್ರದರ್ಶನಕ್ಕೆ ಬರುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಆದರೆ, ಈ ಬಾರಿ  ದಾಖಲೆ ಸಂಖ್ಯೆಯಲ್ಲಿ ಜನ ಬಂದಿದ್ದಾರೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ  ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದರು.

ಪ್ರದರ್ಶನದ ಕೊನೆಯ ದಿನವಾದ ಭಾನುವಾರ 54 ಸಾವಿರ ಮಂದಿ ಪ್ರದರ್ಶನ ವೀಕ್ಷಿಸಿದ್ದು, ₹23.71 ಲಕ್ಷ ಸಂಗ್ರಹವಾಗಿದೆ.

ಹದ್ದನ್ನು ರಕ್ಷಿಸಲು ಮರವೇರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದನ್ನು ಹೊರತು ಪಡಿಸಿ, ಈ ಬಾರಿ ಬೇರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿಯ ಪ್ರದರ್ಶನ ಸುಗಮವಾಗಿ ಕೊನೆಗೊಂಡಿದೆ.

ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದ ಬಾಹುಬಲಿಯ ಸೊಬಗನ್ನು ಕಣ್ತುಂಬಿಕೊಂಡರು.

‌ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನಜಂಗುಳಿ ಇತ್ತು. ಟಿಕೆಟ್‌ ಖರೀದಿಸಲು ಕೌಂಟರ್‍ಗಳಿಗೆ ಜನ ಮುಗಿಬಿದ್ದಿದ್ದರು. ಪ್ರವೇಶ ದ್ವಾರಗಳ ಬಳಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದರು. ಈ ಬಾರಿ ಸಂಚಾರ ದಟ್ಟಣೆ ಸಮಸ್ಯೆ ಅಷ್ಟಾಗಿ ಕಂಡುಬರಲಿಲ್ಲ.

ಮರದಿಂದ ಬಿದ್ದ ಯುವಕ

ಬೆಂಗಳೂರು: ಗಾಳಿಪಟದ ಸೂತ್ರ ಕಾಲಿಗೆ ಸಿಕ್ಕಿಕೊಂಡು ಒದ್ದಾಡುತ್ತಿದ್ದ ಹದ್ದನ್ನು ರಕ್ಷಿಸಲು ಮರವೇರಿದ್ದ ವಿಶಾಲ್ (25) ಎಂಬುವರು ಆಯತಪ್ಪಿ ಬಿದ್ದಿದ್ದಾರೆ.

ಲಾಲ್‌ಬಾಗ್‌ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಈ ಪ್ರಸಂಗ ನಡೆದಿದ್ದು, ವಿಶಾಲ್ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರದ ವಿಶಾಲ್, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ವಿಲ್ಸನ್‌ ಗಾರ್ಡನ್‌ನಲ್ಲಿ ನೆಲೆಸಿದ್ದಾರೆ. ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ವಾಯುವಿಹಾರ ಮಾಡಲು ಸ್ನೇಹಿತರೊಂದಿಗೆ ಲಾಲ್‌ಬಾಗ್‌ಗೆ ತೆರಳಿದ್ದರು. ಈ ವೇಳೆ ಹದ್ದು ಒದ್ದಾಡುತ್ತಿರುವುದನ್ನು ಕಂಡ ಅವರು, ರಕ್ಷಿಸಲು ಮರ ಹತ್ತಿದ್ದರು. ಸುಮಾರು 20 ಅಡಿಯಷ್ಟು ಮೇಲೆ ಹೋದಾಗ, ಕೊಂಬೆ ಮುರಿದಿದ್ದರಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಹದ್ದನ್ನು ರಕ್ಷಣೆ ಮಾಡಿದ್ದಾರೆ.

‘ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೃಷಿ ಇಲಾಖೆ ಲಾಲ್‌ಬಾಗ್‌ನಲ್ಲಿ ‘ಸುಗ್ಗಿ-ಹುಗ್ಗಿ’ ಕಾರ್ಯಕ್ರಮ ಆಯೋಜಿಸಿತ್ತು. ಆ ವೇಳೆ ಕೆಲವರು ಗಾಳಿಪಟ ಹಾರಿಸಿದ್ದರು. ಅದರ ಸೂತ್ರಗಳು ಮರಕ್ಕೆ ಸುತ್ತಿಕೊಂಡಿದ್ದವು. ಈ ದಾರ

ಗಳು ಹದ್ದಿನ ಕಾಲಿಗೆ ಸಿಲುಕಿದ್ದವು’ ಎಂದು ಪೊಲೀಸರು ಹೇಳಿದ್ದಾರೆ.

‘ಅದು ಗಟ್ಟಿ ಮರವಲ್ಲ. ಹತ್ತುವುದು ಬೇಡ. ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡೋಣ ಎಂದು ವಿಶಾಲ್‌ಗೆ ಬುದ್ಧಿ ಹೇಳಿದೆವು. ಆದರೆ, ಮಾತು ಕೇಳದೆ ಮರವೇರಿದ್ದ. ಆತನ ತಲೆ, ಬೆನ್ನಿಗೆ ಗಂಭೀರ ಪೆಟ್ಟು ಬಿದ್ದಿದೆ’ ಎಂದು ವಿಶಾಲ್ ಸ್ನೇಹಿತರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry