2 ಸ್ಟ್ರೋಕ್ ಆಟೊ ಗುಜರಿಗೆ: ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಕೆಗೂ ಸಿಗಲಿದೆ ಸಬ್ಸಿಡಿ

7

2 ಸ್ಟ್ರೋಕ್ ಆಟೊ ಗುಜರಿಗೆ: ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಕೆಗೂ ಸಿಗಲಿದೆ ಸಬ್ಸಿಡಿ

Published:
Updated:
2 ಸ್ಟ್ರೋಕ್ ಆಟೊ ಗುಜರಿಗೆ: ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಕೆಗೂ ಸಿಗಲಿದೆ ಸಬ್ಸಿಡಿ

ಬೆಂಗಳೂರು: 2 ಸ್ಟ್ರೋಕ್ ಆಟೊಗಳನ್ನು ಗುಜರಿಗೆ ಹಾಕಬೇಕೆಂಬ ಸೂಚನೆಗೆ ತಿದ್ದುಪಡಿ ತಂದು, ಅಂಥ ಆಟೊಗಳಿಗೆ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ಅವರು ಇಲಾಖೆಯ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ, 2 ಸ್ಟ್ರೋಕ್‌ ಆಟೊಗಳ ಸಂಚಾರವನ್ನು ನಗರದಲ್ಲಿ ಏಪ್ರಿಲ್‌ 1ರಿಂದ ನಿಷೇಧಿಸಲಾಗುತ್ತಿದೆ. ಆ ಆಟೊಗಳನ್ನು ಗುಜರಿಗೆ ಹಾಕಿದರೆ ಮಾತ್ರ, ಹೊಸ ಆಟೊ ಖರೀದಿಗೆ ₹30 ಸಾವಿರ ಸಬ್ಸಿಡಿ ನೀಡುವುದಾಗಿ ಸಾರಿಗೆ ಇಲಾಖೆ ಈ ಹಿಂದೆ ತಿಳಿಸಿತ್ತು.

ಈ ಕ್ರಮಕ್ಕೆ ಆಟೊ ಮಾಲೀಕರು ಹಾಗೂ ಚಾಲಕರು ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಆಟೊಗಳನ್ನು ಗುಜರಿಗೆ ಹಾಕುವುದು ಸರಿಯಲ್ಲ. ಈ ಸೂಚನೆಯನ್ನು ತಿದ್ದುಪಡಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದರು. ಈ ಬೇಡಿಕೆಗೆ ಮಣಿದಿರುವ ಇಲಾಖೆ ಹೊಸ ಪ್ರಸ್ತಾವ ಸಿದ್ಧಪಡಿಸಿದೆ.

‘ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. 2 ಸ್ಟ್ರೋಕ್‌ ಆಟೊಗಳನ್ನು ಗುಜರಿಗೆ ಹಾಕಲು ಇಷ್ಟವಿಲ್ಲದವರು ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಸಿಕೊಳ್ಳಬಹುದು. ಅವರಿಗೂ ₹30 ಸಾವಿರ ಸಹಾಯಧನ ನೀಡಲು ಅವಕಾಶವಿದೆ. ಅದಕ್ಕೆ ಕಾರ್ಯದರ್ಶಿಯವರ ಅನುಮತಿ ಕೋರಿದ್ದೇವೆ’ ಎಂದು ಬಿ.ದಯಾನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯದರ್ಶಿ ಅವರ ಒಪ್ಪಿಗೆ ಸಿಕ್ಕ ಬಳಿಕ ಪ್ರಸ್ತಾವವು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಹೋಗಲಿದೆ. ಅವರ ಅನುಮತಿ ಸಿಕ್ಕ ನಂತರವೇ ಹೊಸ ಸೂಚನೆ ಜಾರಿಗೆ ಬರಲಿದೆ. ನಂತರವೇ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ, ಸಹಾಯಧನ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಭಣಗುಡುತ್ತಿವೆ ಗುಜರಿ ಕೇಂದ್ರಗಳು: ಆಟೊಗಳನ್ನು ಗುಜರಿ ಮಾಡುವುದಕ್ಕಾಗಿ ಬಜಾಜ್‌ ಕಂಪನಿಯ ಡೀಲರ್‌ಷಿಪ್‌ ಪಡೆದಿರುವ ಖಿವ್‌ರಾಜ್‌ ಪ್ರೈವೇಟ್‌ ಲಿಮಿಟೆಡ್‌ನವರು ನೆಲಮಂಗಲದ ಬಳಿ ತಿಂಗಳ ಹಿಂದೆ ಗುಜರಿ ಕೇಂದ್ರ ಆರಂಭಿಸಿದ್ದಾರೆ. ಟಿವಿಎಸ್‌ ಹಾಗೂ ಅ‍ಪೇ ಕಂಪನಿ ಸಹ ಪೀಣ್ಯ ಹಾಗೂ ಗೊರಗುಂಟೆಪಾಳ್ಯದಲ್ಲಿ ಕೇಂದ್ರಗಳನ್ನು ತೆರೆದಿವೆ. ಆಟೊಗಳನ್ನು ಗುಜರಿಗೆ ಹಾಕಲು ಯಾರೂ ಮುಂದಾಗುತ್ತಿಲ್ಲ. ಹಾಗಾಗಿ ಈ ಕೇಂದ್ರಗಳು ಭಣಗುಡುತ್ತಿವೆ. ಇದು ಸಹ ಇಲಾಖೆ ಹೊಸ ಪ್ರಸ್ತಾವ ಸಲ್ಲಿಸಲು ಕಾರಣವಾಗಿದೆ.

‘ದಿನಕ್ಕೆ 100ರಿಂದ 150 ಆಟೊಗಳನ್ನು ಗುಜರಿ ಮಾಡುವ ಮೂರು ಯಂತ್ರಗಳು ನೆಲಮಂಗಲ ಕೇಂದ್ರದಲ್ಲಿವೆ. 12 ಸಿಬ್ಬಂದಿ ಇದ್ದಾರೆ. ಅವರಿಗೆ ಸದ್ಯಕ್ಕೆ ಯಾವುದೇ ಕೆಲಸವಿಲ್ಲ. ಆಟೊಗಳು ಬಾರದ ಬಗ್ಗೆ ಕೇಂದ್ರದವರು ಮಾಹಿತಿ ನೀಡಿದ್ದಾರೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಬ್ಯಾಟರಿ ಅಳವಡಿಕೆಗೆ ₹2.10 ಲಕ್ಷ:  ಎಲೆಕ್ಟ್ರಿಕ್‌ ಬ್ಯಾಟರಿಯನ್ನು 2 ಸ್ಟ್ರೋಕ್‌ ಆಟೊಗೆ ಅಳವಡಿಸಲು ₹2.10 ಲಕ್ಷ ವೆಚ್ಚವಾಗಲಿದೆ. ಗುಣಮಟ್ಟದ ಬ್ಯಾಟರಿ ಒದಗಿಸುವ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ ಬಳಿಕ ಅದನ್ನು ಬಿಡುಗಡೆ ಮಾಡಲಿದ್ದೇವೆ. ಚಾಲಕರು, ತಮ್ಮಿಷ್ಟದ ಕಂಪನಿ ಬ್ಯಾಟರಿ ಹಾಕಿಸಿಕೊಳ್ಳಬಹುದು. ಬಳಿಕವೇ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸೋಮಶೇಖರ್‌, ‘ದೇಸಿ ಹಾಗೂ ಚೀನಾ ನಿರ್ಮಿತ ಬ್ಯಾಟರಿಗಳು ಲಭ್ಯ ಇವೆ. ಬ್ಯಾಟರಿಗೆ ತಕ್ಕಂತೆ ಆಟೊದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಬೇಕು’ ಎಂದರು.

‘ಗುಜರಿ ಹಾಕಬೇಕೆಂಬ ಸೂಚನೆಯನ್ನು ತಿದ್ದುಪಡಿ ಮಾಡುತ್ತಿರುವುದು ಒಳ್ಳೆಯ ತೀರ್ಮಾನ. ಅದರ ಜೊತೆಗೆ ಸಹಾಯಧನದ ಮೊತ್ತವನ್ನು ₹30 ಸಾವಿರದಿಂದ ₹ 50 ಸಾವಿರಕ್ಕೆ ಏರಿಸಬೇಕು. ಉಳಿದ ಮೊತ್ತವನ್ನು ಹೊಂದಿಸಲು ಇಲಾಖೆಯೇ  ಬ್ಯಾಂಕ್‌ನಿಂದ ಸಾಲ ಕೊಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಆಟೊ ನಿರ್ವಹಣೆ ಸುಲಭ : ಹೆಚ್ಚು ಹೊಗೆ ಉಗುಳುವ 2 ಸ್ಟ್ರೋಕ್ ಆಟೊಗಳ ನಿರ್ವಹಣೆ ಕಷ್ಟ. ಅವುಗಳಿಗೆ ಎಲೆಕ್ಟ್ರಿಕ್‌ ಬ್ಯಾಟರಿಗಳನ್ನು ಅಳವಡಿಸಿದರೆ ನಿರ್ವಹಣೆ ಸುಲಭ ಎನ್ನುತ್ತಾರೆ ಚಾಲಕರು.

‘ತಿಂಗಳಿಗೆ ಇಂಧನಕ್ಕೆ ಏನಿಲ್ಲವೆಂದರೂ ₹ 6,000 ಖರ್ಚಾಗುತ್ತದೆ. ಆಯಿಲ್ ಬದಲಾವಣೆ, ಸಣ್ಣ–‍ಪುಟ್ಟ ದುರಸ್ತಿಗೆ ₹1,500 ತೆಗೆದಿಡಬೇಕು. ಬ್ಯಾಟರಿ ಅಳವಡಿಸಿ ಒಮ್ಮೆ ಚಾರ್ಚ್‌ ಮಾಡಿದರೆ 100 ಕಿ.ಮೀವರೆಗೆ ಆಟೊ ಓಡಿಸಬಹುದು’ ಎಂದು ಚಾಲಕ ರಾಮಚಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry