ಹುಟ್ಟಿದ ಐದೇ ದಿನದಲ್ಲಿ ಹಸುಗೂಸು ಸಾವು

7
ವೈದ್ಯರ ನಿರ್ಲಕ್ಷ್ಯ: ಪೋಷಕರ ಆರೋಪ

ಹುಟ್ಟಿದ ಐದೇ ದಿನದಲ್ಲಿ ಹಸುಗೂಸು ಸಾವು

Published:
Updated:

ಬೆಂಗಳೂರು: ಶ್ರೀರಾಂಪುರದ ಬಿಬಿಎಂಪಿ ಆಸ್ಪತ್ರೆಯಲ್ಲಿ 5 ದಿನಗಳ  ಹಿಂದೆ ಜನಿಸಿದ್ದ ಗಂಡು ಶಿಶುವೊಂದು ಜಾಂಡಿಸ್‌ ಕಾಯಿಲೆಯಿಂದ ಅಸುನೀಗಿದೆ.

ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದೇ ಶಿಶುವಿನ ಸಾವಿಗೆ ಕಾರಣ ಎಂದು ಶಿಶುವಿನ ತಂದೆ ಕ್ರಿಶ್ಚಿಯನ್‌ ಕಾಲೊನಿಯ ಸಂತೋಷ್‌ ಕುಮಾರ್‌ ಆರೋಪಿಸಿದ್ದಾರೆ.

ಸಂತೋಷ್‌ ಅವರ ಪತ್ನಿ ಸುನೀತಾ ಜ.24ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಹಜ ಹೆರಿಗೆಯಾಗಿತ್ತು. ಹುಟ್ಟಿದ ಮಗು 2.8 ಕೆ.ಜಿ ತೂಕವಿತ್ತು. ಇದು ಎರಡನೇ ಮಗು ಆಗಿದ್ದರಿಂದ ತಾಯಿ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

‘ಜ.26ರ ಮಧ್ಯರಾತ್ರಿವರೆಗೂ ಮಗು ಆರೋಗ್ಯವಾಗಿಯೇ ಇತ್ತು. ರಾತ್ರಿ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡಿತು. ಬಾಣಂತಿಯೇ ತಕ್ಷಣ ಎದ್ದು ಹೋಗಿ ಶುಶ್ರೂಷಕಿಯರಿಗೆ ವಿಷಯ ತಿಳಿಸಿದರು. ಚಿಕಿತ್ಸೆ ನೀಡುವಂತೆ ಗೋಗರೆದರೂ ಅವರು ಸ್ಪಂದಿಸಲಿಲ್ಲ. ವೈದ್ಯರೂ ತಪಾಸಣೆ ನಡೆಸಲಿಲ್ಲ’ ಎಂದು ಎಂದು ಸುನೀತಾ ಅವರ ತಾಯಿ ಸಾವಿತ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ನಂತರ ಮರು ದಿನ ಬೆಳಿಗ್ಗೆ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿಂದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿತು ಎಂದರು.

‘ಮಗು ಚಿಂತಾಜನಕ ಸ್ಥಿತಿಗೆ ತಲುಪುವವರೆಗೂ ಗಮನ ಕೊಡದೆ, ನಿರ್ಲಕ್ಷ್ಯ ಮಾಡಿದರು. ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೇ ಮೊದಲೇ ಹೇಳಿದ್ದರೆ ಮಗುವಿನ ಜೀವ ಉಳಿಯುತ್ತಿತ್ತು. ಇಂತಹ ಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಗಳಲ್ಲಿ ಬಡವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ’ ಎಂದು ಕಣ್ಣೀರಾದರು.

‘ಸಾಮಾನ್ಯ ಜಾಂಡಿಸ್‌ಗೆ ನಮ್ಮಲ್ಲೇ ಚಿಕಿತ್ಸೆ ಇದೆ. ಶಿಶುವಿಗೆ ಪೆಥಾಲಜಿಕಲ್‌ ಜಾಂಡಿಸ್‌  ಕಾಣಿಸಿಕೊಂಡಿದ್ದರಿಂದ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದೆವು. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಜಾಂಡಿಸ್‌ ಉಲ್ಬಣಿಸಿ ಮಗು ಸತ್ತಿದೆ’ ಎಂದು ಡಾ.ಭಾರತಿ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry