ಸರ್ಕಾರಿ ನಿವೇಶನ–ದಾರಿ ಯಾವುದಯ್ಯಾ

7

ಸರ್ಕಾರಿ ನಿವೇಶನ–ದಾರಿ ಯಾವುದಯ್ಯಾ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮನೆನಿವೇಶಗಳನ್ನು ಹಂಚುವಾಗ ಅಲ್ಲಿಗೆ ಸಂಪರ್ಕಿಸುವ ರಸ್ತೆಗೆ ಜಾಗವನ್ನೂ ಕಲ್ಪಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದಲ್ಲಿ ಅವರು ಬಂಟ್ವಾಳದ ವೇದಾವತಿ ಎಂಬವರ ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡುವಾಗ ಮನೆಗಳಿಗೆ ರಸ್ತೆಯನ್ನೂ ಕಲ್ಪಿಸಬೇಕಾಗುತ್ತದೆ. ಒಂದುವೇಳೆ ಖಾಸಗಿ ಜಮೀನಿನ ನಡುವೆ ಮನೆ ನಿವೇಶನ ನೀಡಿದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡು, ನಿವಾಸಿಗಳಿಗೆ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರಿಗೆ ಸೂಚಿಸಿದರು.

ಇದಕ್ಕೆ ಉತ್ತರಿಸಿ ಜಿಲ್ಲಾಧಿಕಾರಿ, ಇಂತಹ ಹಲವು ಪ್ರಕರಣಗಳಿರುವುದು ಗಮನಕ್ಕೆ ಬಂದಿದೆ. ಅಲ್ಲಿ ಪರಿಸ್ಥಿತಿ ನೋಡಿಕೊಂಡು ಒಮ್ಮತದ ಅಭಿಪ್ರಾಯ ಪಡೆದುಕೊಂಡು ನಿರ್ಣಯಿಸಬೇಕಾಗುತ್ತದೆ ಎಂದರು.

ದಾರಿಯ ವಿಷಯಕ್ಕೆ ಸಂಬಂಧಿಸಿದ ಕಾವಳಮೂಡೂರಿನ ವಿಜಯ್‌ ಪ್ರಭು ಎಂಬವರ ಅರ್ಜಿ ವಿಚಾರಣೆ ಸಂದರ್ಭ ಮತ್ತೆ ವಿಷಯ ಪ್ರಸ್ತಾಪಿಸಿದ ಉಪಲೋಕಾಯುಕ್ತರು, ಸರ್ಕಾರಿ ಜಾಗದ ನಡುವೆ ಖಾಸಗಿ ಜಾಗವಿದ್ದಾಗ, ಸರ್ಕಾರಿ ಜಾಗ ಪಡೆದು ಮನೆ ಕಟ್ಟಿದವರಿಗೆ ದಾರಿ ಹೇಗೆ ದೊರೆಯಬೇಕು ಎಂದು ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರು. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಹಲವು ಮನೆಗಳಿದ್ದು, ಕಂದಾಯ ಇಲಾಖೆಯಾಗಲೀ, ಪಂಚಾಯಿತಿ ರಾಜ್‌ ಇಲಾಖೆಯಾಗಲೀ ಈ ವಿಷಯದ ಮೇಲೆ ನಿಯಂತ್ರಣ ಹೊಂದಿಲ್ಲ. ಆದ್ದರಿಂದ ರಸ್ತೆ ಸಂಪರ್ಕವಿಲ್ಲದ ಮನೆಗಳ ಕುರಿತು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಅವರು ಇನ್ನೊಂದು ತಿಂಗಳೊಳಗೆ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಆದೇಶ ನೀಡಿದರು.

ಅಂಗನವಾಡಿ ಶಿಕ್ಷಕಿ ಜಯಂತಿ ಎಂಬವರು ದೂರು ಸಲ್ಲಿಸಿ, ತಮ್ಮ ಜನ್ಮದಿನಾಂಕ 1956 ಆಗಿ ದ್ದರೂ, ನಿವೃತ್ತಿ ಸಂದರ್ಭದಲ್ಲಿ 1986 ಎಂದು ಅಧಿಕಾರಿಗಳು ಉಲ್ಲೇ ಖಿಸಿದ್ದಾರೆ. ಇದರಿಂದ ತಮಗೆ ಪಿಂಚಣಿ ದೊರೆಯುತ್ತಿಲ್ಲ ಎಂದು ದೂರಿದರು. ದೂರು ಕೇಳಿ ಸಿಟ್ಟಿಗೆದ್ದ ಉಪಲೋಕಾಯುಕ್ತರು, ಒಂದೋ ಅವರಿಗೆ ಕೆಲಸ ಮಾಡಲು ಅವಕಾಶ ನೀಡಿ, ಬಾಕಿ ಸಂಬಳವನ್ನು ಕೊಡಬೇಕು. ಅಥವಾ ತಪ್ಪನ್ನು ಸರಿಪಡಿಸಿ ಪಿಂಚಣಿ ದೊರೆಯುವಂತೆ ಮಾಡಬೇಕು ಎಂದು ಸೂಚಿಸಿದರು.

ಬಂಟ್ವಾಳ ತಹಶೀಲ್ದಾರ್ ವಿರುದ್ಧ ಅಸಮಾಧಾನ: ಬಂಟ್ವಾಳ ತಹಶೀಲ್ದಾರ್‌ ಅವರು ಪ್ರತಿವಾದಿಯಾಗಿ ಹಲವು ಬಾರಿ ನಿಲ್ಲಬೇಕಾದಾಗ ಹಾಗೂ ಕೆಲ ಪ್ರಕರಣಗಳಲ್ಲಿ ತಹಶೀಲ್ದಾರ್‌ ಅವರ ಲೋಪವನ್ನು ಗುರುತಿಸಿ ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದೇ ಮನೆಗೆ ಎರಡು ಡೋರ್ ನಂಬ್ರ, ಒಂದೇ ಜಾಗಕ್ಕೆ ಎರಡು ಖಾತೆ ದೊರೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬಂಟ್ವಾಳದ ಸೂರ್ಯನಾರಾಯಣ ಭಟ್ ಎಂಬವರು ದೂರು ಸಲ್ಲಿಸಿ, ನಮ್ಮ ಕುಮ್ಕಿ ಜಾಗದಲ್ಲಿ ಕೊಳವೆ ಬಾವಿ ತೋಡಿದ್ದು, ವಿದ್ಯುತ್‌ ಕಂಬವನ್ನೂ ಅನುಮತಿ ಇಲ್ಲದೇ ಹಾಕಲಾಗಿದೆ. ವ್ಯಕ್ತಿಯೊಬ್ಬರು ಗುಡಿಸಲು ಕಟ್ಟಿದ್ದು, ಅದನ್ನು ಸಕ್ರಮ ಮಾಡುವ ಪ್ರಯತ್ನ ನಡೆದಿದೆ ಎಂದರು.

ಒಂದು ದಿನದ ಮಟ್ಟಿಗೆ ಗುಡಿಸಲು ಹಾಕಿದರೆ ಅದನ್ನು 94ಸಿ ಅಡಿಯಲ್ಲಿ ಪರಿಗಣಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಉಪಲೋಕಾಯುಕ್ತರು, ಅನವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸಬಾರದು ಎಂದು ತಾಕೀತು ಮಾಡಿದರು.

ಕುವೈಟ್‌ನಲ್ಲಿ ವಾಸವಾಗಿರುವ ಎನ್‌ಆರ್‌ಐಯೊಬ್ಬರು ತಮ್ಮ ಜಾಗದಲ್ಲಿ ಜಮೀನು ಮಂಜೂರಾತಿ ಮಾಡುವಂತೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಂಟ್ವಾಳದ ಚಂದ್ರಶೇಖರ್ ಶೆಟ್ಟಿ ಎಂಬವರು ಅಹವಾಲು ಸಲ್ಲಿಸಿದಾಗ ಮತ್ತೆ ತಹಶೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡು, 15 ದಿನಗಳೊಳಗೆ ದಾಖಲೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ಆರ್‌. ರವಿ, ಪೊಲೀಸ್‌ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry