ತೆಗ್ಗು ಜನತೆಯ ವಿದ್ಯಾಭಿಮಾನ...

7

ತೆಗ್ಗು ಜನತೆಯ ವಿದ್ಯಾಭಿಮಾನ...

Published:
Updated:
ತೆಗ್ಗು ಜನತೆಯ ವಿದ್ಯಾಭಿಮಾನ...

ಮೂಲ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿ ಬಹುತೇಕ ಕಡೆಗಳಲ್ಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಸ್ಥಳೀಯ ವಿದ್ಯಾಭಿಮಾನಿಗಳು ಮನಸ್ಸು ಮಾಡಿದರೆ ಇಂತಹ ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಾಯಿಸಲು ಸಾಧ್ಯ ಎನ್ನುವುದಕ್ಕೆ ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಪ್ರತ್ಯಕ್ಷ ಸಾಕ್ಷಿ. ವಿಶಿಷ್ಟ ಕಲ್ಪನೆಗಳ ನವೀಕರಣಗೊಂಡಿರುವ ಈ ಶಾಲೆ ಇದೀಗ ರಾಜ್ಯಕ್ಕೆ ಮಾದರಿಯಾಗುವಂತಿದೆ.

ಒಂದು ವರ್ಷದ ಹಿಂದೆ ತೆಗ್ಗು ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡದ ದುರಸ್ತಿಗೆ ಮುಂದಾಗುವ ಬದಲು ತೆರವುಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ಶಾಲೆ ಮುಚ್ಚುವ ಭೀತಿ ಎದುರಾಗಿತ್ತು, ಆದರೆ, ಇದಕ್ಕೆ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಊರಿನ ಶಿಕ್ಷಣ ಪ್ರೇಮಿಗಳು ಅವಕಾಶ ನೀಡಲಿಲ್ಲ. ಬದಲಾಗಿ ಜ್ಞಾನ ದೇಗುಲದ ನವೀಕರಣ ಕಾರ್ಯಕ್ಕೆ ಮುಂದಾದರು. ಕೃಷಿ, ಕಲೆ, ಕಲಿಕಾ ಪ್ರೀತಿಯ ವಿಶಿಷ್ಟ ಕಲ್ಪನೆಗಳ ಮೂಲಕ ಈ ಜ್ಞಾನದೇಗುಲಕ್ಕೆ ಹೊಸ ರೂಪ ನೀಡಿ, ಇಲ್ಲಿನ ಶೈಕ್ಷಣಿಕ ಕ್ರಾಂತಿಯನ್ನು ಚಿನ್ನದ ಹಬ್ಬ ಆಚರಣೆಯ ಮೂಲಕ ರಾಜ್ಯಮಟ್ಟಕ್ಕೆ ಪಸರಿಸುವ ಕೆಲಸ ಮಾಡಿದ್ದಾರೆ.

ಅದ್ಭುತ ಕಲ್ಪನೆಗಳು ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಗಳ ಮೂಲಕ ಜೀವಕಳೆ ಪಡೆದ ಈ ಜ್ಞಾನ ದೇಗುಲದಲ್ಲಿ ಇದೀಗ ‘ತೆಗ್ಗು ತೇರು’ ಚಿನ್ನದ ಹಬ್ಬ ಕಾರ್ಯಕ್ರಮ ನಡೆದಿದೆ. ಸ್ಥಳೀಯ ಶಿಕ್ಷಣ ಪ್ರೇಮಿಗಳು ವಿವಿಧ ವ್ಯವಸ್ಥೆಗಳನ್ನು ದಾನದ ರೂಪದಲ್ಲಿ ಈ ಜ್ಞಾನದೇಗುಲಕ್ಕೆ ಸಮರ್ಪಿಸಿ ಚಿನ್ನದ ಹಬ್ಬಕ್ಕೆ ಮೆರುಗು ತುಂಬಿದ್ದಾರೆ. ಇಲ್ಲಿ ₹36 ಲಕ್ಷ ವೆಚ್ಚದಲ್ಲಿ ಒಟ್ಟು 47 ವಿವಿಧ ಕಾಮಗಾರಿಗಳು ನಡೆದಿದ್ದು, ಈ ಚಿನ್ನದ ಹಬ್ಬದ ಕೊಡುಗೆಗಳು ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿವೆ. ಒಂದು ವರ್ಷದ ಹಿಂದೆ ಬೀಳುವ ಸ್ಥಿತಿಯಲ್ಲಿದ್ದ ಶಾಲೆ ಇದೀಗ ರಾಜ್ಯಮಟ್ಟದಲ್ಲಿ ಬೆಳೆದು ನಿಲ್ಲುವಂತೆ ಆಗಿದೆ.

ಶಿಕ್ಷಣ ಎಂದರೆ ಬರೀ ತರಗತಿಯೊಳಗೆ ಪಾಠ ಮಾಡುವುದು ಮಾತ್ರ ಅಲ್ಲ. ಮಕ್ಕಳನ್ನು ಕಲಿಕೆಯ ಜೊತೆಗೆ ಕೃಷಿ ಚಟುವಟಿಕೆಯತ್ತ ಪ್ರೇರೇಪಿಸುವುದು, ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವುದು, ಸಾಮಾಜಿಕ ಜ್ಞಾನ ತುಂಬುವುದು. ಸಾಹಿತ್ಯದ ಕಡೆಗೆ ಮಕ್ಕಳ ಮನಸ್ಸನ್ನು ಸೆಳೆಯುವುದು, ಮಕ್ಕಳು ಲೋಕ

ಜ್ಞಾನ ಪಡೆದುಕೊಳ್ಳಲು ಹಾಗೂ ದೈನಂದಿನ ಆಗು ಹೋಗುಗಳ ಬಗ್ಗೆ ಅರಿತುಕೊಳ್ಳಲು ಪೂರಕ ವಾತಾವರಣ ಸೃಷ್ಟಿಸುವುದು... ಇತ್ಯಾದಿ ವಿಚಾರಗಳನ್ನು ಬಿಂಬಿಸುವ ವ್ಯವಸ್ಥೆಗಳು ತೆಗ್ಗು ಶಾಲೆಯಲ್ಲಿ ಕವಿ ಹೃದಯದ ಸೃಜನಶೀಲ ಶಿಕ್ಷಕ ರಮೇಶ್ಉಳಯ ಅವರ ಪರಿಕಲ್ಪನೆಯಲ್ಲಿ ವ್ಯವಸ್ಥಿತವಾಗಿ ರೂಪುಗೊಂಡಿವೆ.

ಸರಳ ಸಜ್ಜನಿಕೆಯ ಜನಸ್ನೇಹಿ ವ್ಯಕ್ತಿತ್ವದ ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸ್ವರಮನೆ ಅವರ ಚಿಂತನೆಗೆ, ಅವರ ಪತಿಯೂ ಆಗಿರುವ ಸಹ ಶಿಕ್ಷಕ ರಮೇಶ್ ಉಳಯ ಅವರು ಒತ್ತು ನೀಡಿ ಶಾಲಾ ಪರಿಸರಕ್ಕೆ ಮೆರುಗು ತುಂಬಿದ್ದಾರೆ. ಉಳಯ ಅವರ ಕಲ್ಪನೆಯ ಸೃಷ್ಟಿಗೆ ಊರಿನ ಕೊಡುಗೈ ದಾನಿಗಳು, ಶಾಲೆಯಲ್ಲಿ ಈ ಹಿಂದೆ ವಿದ್ಯಾಭ್ಯಾಸ ಮಾಡಿದ್ದ ಹಳೆ ವಿದ್ಯಾರ್ಥಿಗಳು, ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳು, ಚಿನ್ನದ ಹಬ್ಬ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಯವರು ಹಾಗೂ ವಿದ್ಯಾಭಿಮಾನಿಗಳು ಬಣ್ಣ ಹಚ್ಚಿದ ಪರಿಣಾಮವಾಗಿ ಇದೀಗ ತೆಗ್ಗು ಶಾಲೆ ವರ್ಣಮಯಗೊಂಡಿದ್ದು, ಇಡೀ ಶಾಲೆಯ ಚಿತ್ರಣವೇ ಬದಲಾಗಿದೆ.

ಶಾಲೆಯ ಗೋಡೆಗಳು ವರ್ಲಿ ಚಿತ್ರಗಳೊಂದಿಗೆ ಕಂಗೊಳಿಸುತ್ತಿವೆ. ಶಾಲೆಯ ವಠಾರದಲ್ಲಿ ಪ್ರತ್ಯೇಕ ಗ್ರಂಥಾಲಯ ಕಟ್ಟಡ ಸುಂದರವಾಗಿ ರೂಪುಗೊಂಡಿದೆ. ಶಾಲೆಯ ಹಸಿರು ಮರಗಳ ನಡುವೆ ವಿನೂತನ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಲಿಕಾ ವನ, ಕಲಿಕಾ ಮನೆ, ಕೃಷಿ ತರಬೇತಿ ಕೇಂದ್ರ, ರಾಷ್ಟ್ರೀಯ ಚಿಹ್ನೆಗಳ ಮಂಟಪ, ಮಕ್ಕಳ ಬಾಲಗೋಕುಲ, ಕಾರಂಜಿ, ಸ್ಮಾರ್ಟ್ ಕ್ಲಾಸ್ ಇತ್ಯಾದಿ ವ್ಯವಸ್ಥೆಗಳು ಪರಿಸರಕ್ಕೆ ವಿಶೇಷ ಮೆರುಗು ನೀಡಿವೆ. ಮಕ್ಕಳ ಕಲಿಕೆಗೆ ಉತ್ತೇಜಕ ವಾತಾವರಣ ಕಲ್ಪಿಸಿವೆ. ಶಾಲೆಯ ಪಕ್ಕದಲ್ಲಿಯೇ ನಿರ್ಮಾಣಗೊಂಡ ಅಡಿಕೆ ತೋಟ ಮಕ್ಕಳ ಮನಸ್ಸಿನಲ್ಲಿ ಕೃಷಿ ಪ್ರೇಮ ಬಿತ್ತುವಂತಿದೆ. ನೂತನವಾಗಿ ನಿರ್ಮಿಸಲಾದ ಆವರಣ ಗೋಡೆ, ತಡೆಗೋಡೆ ಶಾಲೆಯ ಅಂದವನ್ನು ಹೆಚ್ಚಿಸಿವೆ.

ಶಾಲೆಯ ಎದುರು ಸುಂದರ ಧ್ವಜಸ್ತಂಭ ನಿರ್ಮಾಣಗೊಂಡಿದೆ. ಹೊಸದಾಗಿ ಶಾಲಾ ಮುಖ್ಯದ್ವಾರ ನಿರ್ಮಿಸಲಾಗಿದೆ. ₹6 ಲಕ್ಷ ವೆಚ್ಚದಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳು ಕೈತೊಳೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಂಪ್ಯೂಟರ್, ಪ್ರಿಂಟರ್, ಟೀವಿ, ಧ್ವನಿವರ್ಧಕ ವ್ಯವಸ್ಥೆಗಳೂ ಇಲ್ಲಿವೆ. ಕಾರ್ಯಕ್ರಮ ನಡೆಸಲು ಬೇಕಾದ ಆಸನದ (ಕುರ್ಚಿ) ವ್ಯವಸ್ಥೆಯೂ ಇದೆ. ಇಲ್ಲಿ ನಡೆದ ಎಲ್ಲಾ ವ್ಯವಸ್ಥೆಗಳು ದಾನಿಗಳ ಕೊಡುಗೆಯಾಗಿವೆ. ಒಂದು ವರ್ಷದ ಹಿಂದೆ ಈ ಶಾಲೆಗೆ ಬಂದವರು ‘ಇಲ್ಲಿ ಏನಿದೆ?’ ಎಂದು ಪ್ರಶ್ನಿಸುತ್ತಿದ್ದರು. ಆದರೆ, ಪ್ರಸ್ತುತ ಇಲ್ಲಿಗೆ ಬರುವವರಲ್ಲಿ ‘ಇಲ್ಲಿ ಏನಿಲ್ಲ ಎಂದು ಕೇಳಿ?’ ಎಂದು ಹೆಮ್ಮೆಯಿಂದ ಕೇಳುವಂತಾಗಿದೆ. ಇದೇ ಇಲ್ಲಿನ ಬದಲಾವಣೆ.

ವರ್ಷದ ಹಿಂದೆ ಬೀಳುವ ಸ್ಥಿತಿಯಲ್ಲಿದ್ದ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಿ ನವೀಕರಿಸುವಲ್ಲಿ ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮತ್ತು ಅವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರು ದೊಡ್ಡ ಪಾತ್ರ ವಹಿಸಿದ್ದರು. ಆ ಬಳಿಕ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಉದ್ಯಮಿ ಜಯಂತ ನಡುಬೈಲು ಹಾಗೂ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ ಮಾಲೀಕ ಗೋಕುಲ್‌ದಾಸ್ ಅವರು ಸಹಕಾರ ನೀಡಿದ್ದರು. ಊರಿನ ವಿದ್ಯಾಭಿಮಾನಿಗಳು ಒಂದೊಂದು ಕೊಡುಗೆ ನೀಡುವ ಮೂಲಕ ಇಲ್ಲಿನ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಊರ ಮಂದಿಯಿಂದಲೇ ನಡೆದ ಕ್ರಾಂತಿಯನ್ನು ಸರ್ಕಾರ ಗುರುತಿಸಿ, ಮನ್ನಣೆ ನೀಡುವ ಕೆಲಸ ಮಾಡಿದಲ್ಲಿ ಇಲ್ಲಿನ ಮಂದಿಯ ಪ್ರಯತ್ನ ಸಾರ್ಥಕವಾದೀತು. ಜೊತೆಗೆ ಇತರರಿಗೂ ಈ ಕಾರ್ಯ ಪ್ರೇರಣೆ ಆದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry