ಕಳೆಗಟ್ಟಿದ ಬೆಟ್ಟದಪುರ ದನಗಳ ಜಾತ್ರೆ

7

ಕಳೆಗಟ್ಟಿದ ಬೆಟ್ಟದಪುರ ದನಗಳ ಜಾತ್ರೆ

Published:
Updated:
ಕಳೆಗಟ್ಟಿದ ಬೆಟ್ಟದಪುರ ದನಗಳ ಜಾತ್ರೆ

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ಧ ಜಾನುವಾರು ಜಾತ್ರೆ 4 ವರ್ಷಗಳ ಬಳಿಕ ಮತ್ತೆ ಮೇಳೈಸಿದೆ. ಸಾಕಷ್ಟು ಸಂಖ್ಯೆಯಲ್ಲಿ ರಾಸುಗಳು ಬಂದಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಹಳ್ಳಿಕಾರ್ ತಳಿಯ ಎತ್ತುಗಳು ಗಮನಸೆಳೆಯುತ್ತಿವೆ.

ನೀರಿನ ಅಭಾವದಿಂದ ಜಾತ್ರೆ ಸ್ಥಗಿತಗೊಂಡಿತ್ತು. ಈ ಬಾರಿ ಉತ್ತಮ ಮಳೆಯಾಗಿ ಕೆರೆ–ಕಟ್ಟೆ ತುಂಬಿರುವುದರಿಂದ ನೀರಿನ ಕೊರತೆ ಇಲ್ಲ. ಇದರಿಂದ ಈ ಬಾರಿ ಜಾತ್ರೆ ಸೇರಿದೆ.

ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ ಜಾತ್ರೆಯಲ್ಲಿ ಬಸವನಿಗೆ (ಬೆಳ್ಳಿ ಬಸವ) ವಿಶೇಷ ಸ್ಥಾನ ಇದೆ. ರೈತರು ಜಾನುವಾರುಗಳಲ್ಲಿ ದೈವಿಕ ಭಾವ ತೋರುತ್ತಾರೆ. ಭಾರಿ ಮೌಲ್ಯದ ಜಾನುವಾರುಗಳಿಗೆ ಅಲಂಕಾರ ಮಾಡಿ, ಪೂಜಿಸಿ ವಿಶೇಷವಾದ ವಾದ್ಯ ಮೇಳ ದೊಂದಿಗೆ ಮೆರವಣಿಗೆ ಮಾಡಿ ಜಾತ್ರೆಗೆ ಕರೆ ತರುತ್ತಿದ್ದಾರೆ.

ಇದು ತಾಲ್ಲೂಕಿನಲ್ಲಿ ನಡೆಯುವ ಏಕೈಕ ದನಗಳ ಜಾತ್ರೆಯಾಗಿದೆ. ಆದ್ದರಿಂದ ರೈತರು ಸಹ ಉತ್ಸಾಹದಿಂದ ಕೃಷಿಗೆ ಬೇಕಾದ ಜಾನುವಾರು ಖರೀದಿಗೆ ಬರುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ಜಾನುವಾರು ಬರುತ್ತಿವೆ. ಜೋಡೆತ್ತುಗೆ ಕನಿಷ್ಠ ₹ 45 ಸಾವಿರದಿಂದ ₹ 1.66 ಲಕ್ಷದವರೆಗೆ ದರವಿದ್ದು, ಈಗಾಗಲೇ 350ರಿಂದ 500ಕ್ಕೂ ಹೆಚ್ಚು ಜೋಡಿ ಮಾರಾಟವಾಗಿವೆ.

ಬೆಟ್ಟದಪುರದ ರಮೇಶ್‌ ಅವರ ₹ 1.66 ಲಕ್ಷ ಮೌಲ್ಯದ ನಾಲ್ಕು ಹಲ್ಲಿನ ಹಳ್ಳಿಕಾರ್ ಜೋಡೆತ್ತು ಗಮನ ಸೆಳೆಯುತ್ತಿವೆ. ಅಲ್ಲದೆ, ತಾಲ್ಲೂಕಿನ ಸಾಲುಕೊಪ್ಪಲು ಗ್ರಾಮದ ಯಜಮಾನ ಅಣ್ಣೇಗೌಡ ಎಂಬುವವರ ₹ 1.20 ಲಕ್ಷ ಮೌಲ್ಯದ 2 ಹಲ್ಲಿನ ಹೋರಿಗಳು ಆಕರ್ಷಿಸುತ್ತಿವೆ. ಬೆಟ್ಟದಪುರದ ಸಾಂಕೇತ್ ಬೀದಿಯ ಚಂದ್ರು ಅವರಿಗೆ ಸೇರಿದ ₹ 1.10 ಲಕ್ಷ ಮೌಲ್ಯದ ಹಲ್ಲಾಗದಿರುವ ಎತ್ತುಗಳು ಮತ್ತೊಂದು ಆಕರ್ಷಣೆ ಆಗಿದೆ.

‘ರಾಸುಗಳಿಗೆ ಉತ್ತಮ ಮೈಕಟ್ಟು ಹಾಗೂ ಹೊಳಪು ಬರುವಂತೆ ಪ್ರತಿ ನಿತ್ಯ ರವೆ ಬೂಸಾ, ಬೆಣ್ಣೆ, ಹಾಲು, ಹುಳ್ಳಿ ನುಚ್ಚು, ಕಡ್ಲೆಹಿಂಡಿ, ರವೆ ತುಪ್ಪ, ಹಸಿ ಜೋಳದ ಕಡ್ಡಿ, ಹುರುಳಿ ಸೊಪ್ಪು, ರಾಗಿ ಮತ್ತು ಭತ್ತದ ಹುಲ್ಲು ನೀಡಲಾಗುತ್ತದೆ’ ಎಂದು ರೈತರು ಮಾಹಿತಿ ನೀಡಿದರು.

ಪಶು ವೈದ್ಯಾಧಿಕಾರಿಗಳಾದ ಡಾ.ಹನುಮಂತರಾವ್, ಡಾ.ರವಿ ಕುಮಾರ್, ಡಾ.ಸಂದೇಶ್, ಪಶು ಪರೀಕ್ಷ ಕರಾದ ರಮೇಶ್, ಸುರೇಶ್ ಹಾಗೂ ಸಿಬ್ಬಂದಿ ಜಾತ್ರೆಯಲ್ಲಿಯೇ ಬಿಡಾರ ಹೂಡಿದ್ದು, ಜಾನುವಾರು ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.

‘ಪ್ರತಿ ದಿನ ಅಂದಾಜು 20ರಿಂದ 30 ರಾಸುಗಳಿಗೆ ಸಾಮಾನ್ಯ ಪ್ರಾಥಮಿಕ ತೊಂದರೆಗಳಾದ ಅಜೀರ್ಣ, ಭೇದಿ, ಕಾಲು ನೋವು ಹಾಗೂ ಜ್ವರಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಎಡಿಎ ಡಾ.ಚಾಮರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾನುವಾರುಗಳಿಗೆ ಯಾವುದೇ ಸುಂಕ ವಿಧಿಸಿಲ್ಲ. ವಿದ್ಯುತ್, ಕುಡಿಯುವ ನೀರು, ಪೊಲೀಸ್ ರಕ್ಷಣೆ ಇತರೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಪ್ರಚಾರ ಮಾಡಿ ಅದ್ಧೂರಿಯಾಗಿ ಜಾತ್ರೆ ಮಾಡಲಾ ಗುವುದು’ ಎಂದು ಉಪತಹಶೀಲ್ದಾರ್ ಕುಬೇರ್ ಹೇಳಿದರು.

‘ಅಗತ್ಯ ಪ್ರಚಾರ ಮಾಡದೆ ತುರ್ತಾಗಿ ಜಾತ್ರೆ ಆಯೋಜಿಸಿದ್ದರೂ ರೈತರು ಮತ್ತು ಜಾನುವಾರಿಗೆ ಸೂಕ್ತ ಸೌಲಭ್ಯ ಒದಗಿಸಲಾಗಿದೆ’ ಎಂದು ಕೊಣಸೂರು ಗ್ರಾಮದ ರೈತ ಅಶೋಕ್ ಹೇಳಿದರು. ಫೆ.2ರಂದು ಶಿಡ್ಲುಮಲ್ಲಿಕಾರ್ಜುನ ರಥೋತ್ಸವ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

* * 

ಜಾತ್ರೆಗೆ ಬಂದು ಮೂರು ದಿನವಾಗಿದೆ. ಸಕಲ ಸೌಲಭ್ಯ ಒದಗಿಸಲಾಗಿದೆ. ಅವಘಡಗಳು ಸಂಭವಿಸದಂತೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ

ಪ್ರದೀಪ್ ಕುಮಾರ್, ರೈತ, ಕಾಡನೂರು, ಹೊಳೇನರಸೀಪುರ ತಾಲ್ಲೂಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry