ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮೂಲಗಳತ್ತ ಅನುಮಾನದ ಹುತ್ತ

Last Updated 29 ಜನವರಿ 2018, 6:53 IST
ಅಕ್ಷರ ಗಾತ್ರ

ಭಾರತೀನಗರ: ಕೊಕ್ಕರೆಗಳ ಸರಣಿ ಸಾವಿನಿಂದ ಗಮನ ಸೆಳೆದಿರುವ ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಕೊಕ್ಕರೆಗಳ ನಿರಂತರ ಸಾವಿಗೆ ಇದುವರೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಕೊಕ್ಕರೆಗಳು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನ ಮೂಲಗಳ ಕುರಿತು ಪಶು ವೈದ್ಯಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸತ್ತಿರುವ ಕೊಕ್ಕರೆಗಳ ಸಾವಿನ ಕುರಿತು ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವೈದ್ಯಕೀಯ ವರದಿಯಲ್ಲಿ ಹಕ್ಕಿಜ್ವರದ ಲಕ್ಷಣ ಸತ್ತ ಕೊಕ್ಕರೆಗಳಲ್ಲಿ ಪತ್ತೆಯಾಗಿಲ್ಲ. ಬದಲಾಗಿ ಜಂತು ಹುಳುಗಳು ಕೊಕ್ಕರೆ ಸಾವಿಗೆ ಕಾರಣ ಎಂದು ತಿಳಿಸಿದೆ.

ಪಶು ವೈದ್ಯಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಕ್ಕರೆಗಳು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನ ಮೂಲಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಕ್ಕರೆಬೆಳ್ಳೂರು ಗ್ರಾಮದ ಕೆರೆ, ಕಟ್ಟೆ, ಅಲ್ಲದೇ ಪಕ್ಕದಲ್ಲೇ ಹರಿಯುವ ಶಿಂಷಾ ನದಿ, ಮಾದರಹಳ್ಳಿ ಸಮೀಪದ ಸೂಳೆಕೆರೆಗಳನ್ನು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳು ಆಹಾರ ಮತ್ತು ನೀರಿಗಾಗಿ ಹೆಚ್ಚಾಗಿ ಅವಲಂಬಿಸಿವೆ. ಅಲ್ಲಿಯ ನೀರು ಕೊಕ್ಕರೆಗಳ ಸಾವಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

‘ಕೊಕ್ಕರೆಗಳ ಚಲನವಲನದ ಬಗ್ಗೆ, ಕೊಕ್ಕರೆಗಳು ಆಹಾರ, ನೀರಿಗಾಗಿ ಅವಲಂಬಿಸಿರುವ ಕೆರೆಗಳ ಬಗ್ಗೆ ಮಾಹಿತಿ ತಿಳಿಸುವಂತೆ ಅರಣ್ಯಾಧಿಕಾರಿಗಳನ್ನು ಕೋರಲಾಗಿದೆ. ಅಲ್ಲಿನ ನೀರನ್ನು ಪರೀಕ್ಷೆಗೆ ಕಳುಹಿಸುವಂತೆ ಸಲಹೆ ನೀಡಲಾಗಿದೆ’ ಎಂದು ಪಶು ವೈದ್ಯ ಡಾ. ಎ. ಸತೀಶ್‌ ತಿಳಿಸಿದರು.

‘ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ 190 ಮರಗಳ ಮೇಲೆ ಹೆಜ್ಜಾರ್ಲೆಗಳು ವಾಸಿಸುತ್ತವೆ. ಅದರಲ್ಲಿ 7 ಮರಗಳ ಮೇಲೆ ವಾಸಿಸುವ ಕೊಕ್ಕರೆಗಳು ಮಾತ್ರವೇ ಸಾವಿಗೀಡಾಗುತ್ತಿವೆ. ಅದರಲ್ಲೂ 2 ಮರಗಳ ಮೇಲೆ ಕೂರುವ ಕೊಕ್ಕರೆಗಳು ಹೆಚ್ಚು ಮೃತಪಟ್ಟಿವೆ. ಹೆಜ್ಜಾರ್ಲೆ ಎಂದಿಗೂ ಒಂಟಿ ಇರುವುದಿಲ್ಲ. ಗುಂಪಾಗಿ ವಾಸ ಮಾಡುತ್ತವೆ. 1 ಮರದಲ್ಲಿ ಅವಿಭಕ್ತ ಕುಟುಂಬದಂತೆ ಎಲ್ಲವೂ ಒಟ್ಟಿಗಿರುತ್ತವೆ. ಆಹಾರ ಹುಡುಕಲು ಕೂಡ ಜೊತೆಯಲ್ಲೇ ತೆರಳುತ್ತವೆ. ಕೊಕ್ಕರೆಗಳ ಸಾವಿಗೆ ಕೆರೆಯ ನೀರೇ ಕಾರಣವಾದರೆ ಇಡೀ ಕೆರೆಗೆ ಔಷಧಿ ಸಿಂಪಡಿಸಲು ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.

ಆರಂಭದಲ್ಲಿ ಕೊಕ್ಕರೆಗಳ ಸಾವು ತಡೆಗಟ್ಟಲು ಕೊಕ್ಕರೆಗಳ ವಾಸಸ್ಥಳಗಳಿಗೆ ರೋಗನಿರೋಧಕ ಔಷಧಿ ಸಿಂಪಡಣೆ ಮಾಡಿ ಸುಮ್ಮನಾಗಿದ್ದೆವು. ಇದರಿಂದ ಕೊಕ್ಕರೆಗಳ ಸಾವು ನಿಯಂತ್ರಣಕ್ಕೆ ಬಂದಿತ್ತು. ಮತ್ತೆ ಕೊಕ್ಕರೆಗಳು ಸಾವನ್ನಪ್ಪುತ್ತಿರುವ ಕಾರಣ ಔಷಧಿ ಸಿಂಪಡಣೆ ಮಾಡಲು ಆರಂಭಿಸಿದ್ದೇವೆ ಎಂದು ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT