4

ಅನೈತಿಕ ಚಟುವಟಿಕೆ ತಾಣ ಸಮುದಾಯ ಭವನ

Published:
Updated:
ಅನೈತಿಕ ಚಟುವಟಿಕೆ ತಾಣ ಸಮುದಾಯ ಭವನ

ಮಂಡ್ಯ: ನಗರದ ಹೊರವಲಯದ ಎಸ್‌.ಡಿ.ಜಯರಾಂ ಬಡಾವಣೆಯಲ್ಲಿ 11 ವರ್ಷಗಳ ಹಿಂದೆ ನಿರ್ಮಾಣವಾದ ಸಮುದಾಯಭವನ ಒಂದು ಇಂದಿಗೂ ಉದ್ಘಾಟನಾ ಭಾಗ್ಯ ಕಂಡಿಲ್ಲ. ಸಾಮುದಾಯಿಕ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಾಗಿದ್ದ ಈ ಸರ್ಕಾರಿ ಕಟ್ಟಡ ಯಾವ ಕೆಲಸಕ್ಕೂ ಬಾರದೆ ಅನಾಥವಾಗಿ ನಿಂತಿದೆ.

ಮೈಷುಗರ್‌ ಕಾರ್ಖಾನೆಯಿಂದ ಒಂದು ಕಿ.ಮೀ ದೂರ, ಉಮ್ಮಡಹಳ್ಳಿ ರಸ್ತೆ ಯಲ್ಲಿ ಈ ಕಟ್ಟಡವಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಮನಸ್ಸು ಮಾಡಿದ್ದರೆ ಭವನವನ್ನು ಉದ್ಘಾಟಿಸಿ ಸಾಮಾನ್ಯ ಜನರ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ನೀಡ ಬಹುದಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಸಮುದಾಯ ಭವನ ಗಿಡಗಂಟಿಗಳ ಒಳಗೆ ಮುಳುಗಿ ಹೋಗಿದೆ. ನಗರ ಮಾತ್ರವಲ್ಲದೆ ಸಮೀಪ ದಲ್ಲಿರುವ ಉಮ್ಮಡಹಳ್ಳಿ, ಸಾತನೂರು, ಕೀಲಾರ, ಈಚಗೆರೆ ಮುಂತಾದ ಗ್ರಾಮಗಳ ಜನರು ಈ ಭವನವನ್ನು ಬಳಸಿಕೊಳ್ಳಬಹುದಾಗಿತ್ತು. ಆದರೆ ಕಟ್ಟಡ ಯಾರ ಬಳಕೆಗೂ ಬಾರದೆ ಪಾಳು ಬಿದ್ದಿದೆ.

ಭವನದ ಸುತ್ತಲೂ ಗಿಡ ಬೆಳೆದು ಕೊಂಡಿವೆ. ಸುತ್ತಲೂ ಇರುವ ಕಿಟಕಿಗಳ ಗಾಜು ಒಡೆದು ಹೋಗಿವೆ. ಗಿಡಗಳ ಬಳ್ಳಿಗಳು ಕಿಟಕಿಯಿಂದ ಸಮುದಾಯ ಭವನದ ಒಳಕ್ಕೂ ಚಾಚಿಕೊಂಡಿದೆ. ಭವನದ ಮುಂಭಾಗದಲ್ಲಿ ಎರಡು ಕಂಬಗಳ ಕೆನಾಪಿ ಇದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಎರಡೂ ಕಡೆ ಒಂದೊಂದು ಕೊಠಡಿಗಳಿವೆ. ಮುಂದೆ ಹಾಲ್‌ ಇದೆ. ಒಂದು ವೇದಿಕೆ ನಿರ್ಮಾಣ ಮಾಡಲಾಗಿದೆ. ಮೂರು ಗುಂಟೆಯಷ್ಟು ಜಾಗದಲ್ಲಿ ಭವನ ನಿರ್ಮಾಣ ಮಾಡ ಲಾಗಿದೆ. ಜೊತೆಗೆ ಭವನದ ಸುತ್ತಲೂ ಸಾಕಷ್ಟು ಜಾಗ ಇದೆ. ಮುಂದೆ ಉಮ್ಮಡಹಳ್ಳಿ ರಸ್ತೆ ಇದೆ. ಇನ್ನೂ ಸ್ಪಲ್ಪ ಮುಂದೆ ಬೆಂಗಳೂರು–ಮೈಸೂರು ರೈಲು ಮಾರ್ಗವಿದೆ. ಸಮೀಪದಲ್ಲೇ ರಾಷ್ಟ್ರೀಯ ಹೆದ್ದಾರಿ ಇದೆ.

‘ಎಸ್‌.ಡಿ.ಜಯರಾಂ ಬಡಾವಣೆ ಯಲ್ಲಿ ಸಾಕಷ್ಟು ಮನೆಗಳು ನಿರ್ಮಾಣವಾ ಗಿದ್ದರೆ ಈ ಭವನ ಅನಾಥವಾಗುತ್ತಿರಲಿಲ್ಲ. ಕುಡಿಯುವ ನೀರಿನ ಸೌಲಭ್ಯ ಇಲ್ಲದ ಕಾರಣ ಇಲ್ಲಿ ಜನರು ಮನೆ ನಿರ್ಮಿಸಲು ಹಿಂಜರಿಯುತ್ತಿದ್ದಾರೆ. ಜನವಸತಿ ಇಲ್ಲದ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿರುವ ಕಾರಣ ಅದು ಪಾಳುಬಿದ್ದಿದೆ’ ಎಂದು ಬಡಾವಣೆಯ ನಿವಾಸಿ ಮಹೇಶ್‌ಗೌಡ ಹೇಳಿದರು.

ಅಂಬರೀಷ್ ಸಂಸದರಾಗಿದ್ದ ವೇಳೆ ‘ಸ್ಥಳೀಯ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ’ ಅಡಿ ಒಟ್ಟು ₹ 9 ಲಕ್ಷ ವೆಚ್ಚದಲ್ಲಿ ಈ ಭವನ ನಿರ್ಮಾಣ ಮಾಡಲಾಗಿದೆ. ಈ ಭವನದ ಕಾಮಗಾರಿ 1999ರಲ್ಲೇ ಆರಂಭವಾಗಿದೆ. ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ₹ 5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಹಣ ಸಾಲದ ಕಾರಣ ಕಾಮಗಾರಿ ಕೆಲ ಕಾಲ ನಿಂತು ಹೋಗಿತ್ತು. ನಂತರ 2005–06ನೇ ಸಾಲಿನಲ್ಲಿ ₹ 3 ಲಕ್ಷ ಬಿಡುಗಡೆ ಮಾಡಲಾಗಿದೆ. ಅದೂ ಸಾಲದೆ ಮತ್ತೆ 2007 ರಲ್ಲಿ ಮತ್ತೆ ₹ 1 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. 2007ರಲ್ಲಿ ಕಾಮಗಾರಿ ಮುಗಿದರೂ ಕಟ್ಟಡ ಅಧಿಕಾರಿಗಳು ಉದ್ಘಾಟನೆ ನೆರವೇರಿಸಿ ಸಾರ್ವಜನಿಕರ ಬಳಕೆಗೆ ನೀಡಿಲ್ಲ. ಸಂಸದರಾಗಿದ್ದ ಅಂಬರೀಷ್‌ ನಂತರ ಶಾಸಕ, ಮಂತ್ರಿಯಾದರು. ಆಮೇಲೆ ಎಲ್ಲವನ್ನು ಮರೆತುಬಿಟ್ಟರು ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಕುಡುಕರ ಹಾವಳಿ, ಪ್ರೇಮ ಬರಹ: ಭವನದ ತುಂಬೆಲ್ಲ ಕುಡುಕರು ಬಿಸಾಡಿರುವ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು, ನೀರಿನ ಖಾಲಿ ಬಾಟಲಿಗಳು ಚೆಲ್ಲಾಡುತ್ತಿವೆ. ಅಲ್ಲದೆ ಗೋಡೆಗಳ ಮೇಲೆ ಇದ್ದಿಲಿನಿಂದ ಹೃದಯದ ಚಿಹ್ನೆ ಬರೆದು ತಮ್ಮಿಷ್ಟದ ಹುಡುಗ, ಹುಡುಗಿಯರು ಹೆಸರು ಬರೆಯಲಾಗಿದೆ. ಅಲ್ಲದೆ ಕೆಲವರು ಕಲ್ಲಿನಿಂದ ಹೆಸರು ಬರೆದು ಬಣ್ಣ, ಸಿಮೆಂಟ್‌ ಲೇಪನವನ್ನು ಕಿತ್ತು ಹಾಕಿದ್ದಾರೆ.

‘ರಾತ್ರಿಯ ವೇಳೆ ಇಲ್ಲಿ ಒಬ್ಬರೇ ಓಡಾಡಲು ಭಯವಾಗುತ್ತದೆ. ಮೊಬೈಲ್‌ ಲೈಟ್‌ ಬೆಳಕಿನಲ್ಲಿ ಕುಡಿಯುತ್ತಾ ಕುಳಿತಿರುತ್ತಾರೆ. ಕೆಲವರು ಕುಡಿದು ಬೆಳಿಗ್ಗೆವರೆಗೂ ಇಲ್ಲೇ ಬಿದ್ದು ಒದ್ದಾಡುತ್ತಿರುತ್ತಾರೆ. ಮಹರ್ನವಮಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ಕುಡಿದು ಸಾಲಾಗಿ ಮಲಗಿರುತ್ತಾರೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಹೇಳಿದರು.

‘ಸಮುದಾಯಭವನ ಪಾಳು ಬಿದ್ದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಶೀಘ್ರವೇ ಅಧಿಕಾರಿಗಳನ್ನು ಸಂಪರ್ಕಿಸಿ ಕಟ್ಟಡವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚನೆ ನೀಡುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry