ಉದ್ಘಾಟನೆಗೆ ಸಜ್ಜಾಗುತ್ತಿದೆ ಜಿಲ್ಲಾ ಕ್ರೀಡಾಂಗಣ

7

ಉದ್ಘಾಟನೆಗೆ ಸಜ್ಜಾಗುತ್ತಿದೆ ಜಿಲ್ಲಾ ಕ್ರೀಡಾಂಗಣ

Published:
Updated:
ಉದ್ಘಾಟನೆಗೆ ಸಜ್ಜಾಗುತ್ತಿದೆ ಜಿಲ್ಲಾ ಕ್ರೀಡಾಂಗಣ

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನದಲ್ಲಿ ಹೊಸ ಸ್ವರೂಪ ಪಡೆದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಶೀಘ್ರದಲ್ಲೆ ಉದ್ಘಾಟನೆಯಾಗಲಿದೆ.

ಕ್ರೀಡಾಂಗಣ ಸುತ್ತಲೂ ಪ್ಷೇಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯ ಮುಗಿದಿದೆ. ಟ್ರೇಸ್ ಹೊದಿಕೆ ಕಾಮಗಾರಿ ನಡೆಯುತ್ತಿದ್ದು, ಒಂದು ವಾರದಲ್ಲಿ ಪೂರ್ಣವಾಗುವುದು. ಈ ಎಲ್ಲ ಕಾಮಗಾರಿಗಳಿಗೆ ₹ 3.08 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮೈದಾನಕ್ಕೆ ಸಮಾನಾಂತರವಾಗಿ ಮಳೆ ನೀರು ಹೊರಹೋಗಲು ಚರಂಡಿ ನಿರ್ಮಿಸುವ ಕೆಲಸ ಬಾಕಿಯಿದ್ದು, ಇದಕ್ಕಾಗಿ ಅಂದಾಜು ₹35 ಲಕ್ಷ ಬೇಕಾಗುತ್ತದೆ ಎನ್ನುತ್ತಾರೆ ಕಾಮಗಾರಿಗಳ ಉಸ್ತುವಾರಿ ವಹಿಸಿಕೊಂಡಿರುವ ಕ್ಯಾಶುಟೆಕ್ ಎಂಜಿನಿಯರುಗಳು.

ಕ್ರೀಡಾಂಗಣಕ್ಕೆ ಹೊಂದಿಕೊಂಡು ₹1.65 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಕ್ರೀಡಾ ಉದ್ದೇಶಕ್ಕಾಗಿ ಈ ಕಟ್ಟಡವು ಬಳಕೆಯಾಗಲಿದೆ. ಈ ಕಟ್ಟಡದಲ್ಲಿ ಗಣ್ಯರು ಕುಳಿತು ಆಟ ವೀಕ್ಷಿಸಬಹುದು. ಜಿಮ್ ಅಭ್ಯಾಸಕ್ಕಾಗಿ ಈ ಕಟ್ಟಡದಲ್ಲಿ ಕೋಣೆಗಳನ್ನು ಮೀಸಲಿಟ್ಟಿದ್ದಾರೆ. ಕ್ರೀಡಾಂಗಣದೊಳಗೆ ಮೈದಾನ (ಪೆವಿಲಿಯನ್) ನಿರ್ಮಾಣದ ಹೊಣೆಯನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳು ಹೊತ್ತಿದ್ದಾರೆ.

ಸದ್ಯಕ್ಕೆ ಮಣ್ಣಿನ ಮೈದಾನ ನಿರ್ಮಾಣ ನಡೆಯುತ್ತಿದೆ. ಅದರಲ್ಲಿ ಓಟದ ಟ್ರ್ಯಾಕ್ ಕೂಡಾ ಸಿದ್ಧಪಡಿಸಲಾಗುತ್ತದೆ. ಫೆಬ್ರುವರಿ ಎರಡನೇ ವಾರದೊಳಗೆ ಈ ಕೆಲಸ ಪೂರ್ಣಗೊಳಿಸಲು ಎಂಜಿನಿಯರುಗಳಿಗೆ ಜಿಲ್ಲಾಡಳಿತವು ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಜಿಲ್ಲಾ ಕ್ರೀಡಾಂಗಣ ಉದ್ಘಾಟಿಸುವ ಕಾರ್ಯಕ್ರಮ ಯೋಜಿಸಲಾಗಿದೆ ಎನ್ನುವುದು ಜಿಲ್ಲಾಡಳಿತದ ವಿವರಣೆ.

ಕ್ರೀಡಾಂಗಣ ಉದ್ಘಾಟನೆ ಬಳಿಕವೂ ಕ್ರೀಡೆಗೆ ಸಂಬಂಧಿಸಿದ ಸಾಕಷ್ಟು ಕಾಮಗಾರಿಗಳನ್ನು ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಜಿಲ್ಲಾಡಳಿತ ಯೋಜಿಸಿ ಅನುಷ್ಠಾನ ಮಾಡುತ್ತಿದೆ. ಈಗ ನಿರ್ಮಾಣವಾದ ಗ್ಯಾಲರಿ ಮೈದಾನದೊಳಗೆ ಅಥ್ಲೆಟಿಕ್ ಆಟಗಳಿಗೆ ಮಾತ್ರ ಅವಕಾಶವಾಗುತ್ತದೆ. ಇನ್ನುಳಿದ ಕ್ರೀಡಾ ಪ್ರಕಾರಗಳಿಗೆ ಪ್ರತ್ಯೇಕ ಮೈದಾನಗಳನ್ನು ಸಿದ್ಧಪಡಿಸಿ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಸಕ್ತರಿಗೆ ಉತ್ತೇಜನ ನೀಡಲಾಗುತ್ತಿದೆ.

2017-18ನೇ ಸಾಲಿನ ಎಚ್‌ಕೆಆರ್‌ಡಿಬಿ ಅನುದಾನ ವೆಚ್ಚಕ್ಕಾಗಿ ಮಾಡಿರುವ ಕ್ರೀಯಾಯೋಜನೆಯಲ್ಲಿ ಹಲವು ಮೈದಾನ ನಿರ್ಮಿಸುವುದನ್ನು ಸೇರ್ಪಡೆ ಮಾಡಲಾಗಿದೆ. ಕ್ರಿಯಾಯೋಜನೆ ಅನುಮೋದನೆಯಾದರೆ, ಲಾಂಗ್ ಟೆನ್ನಿಸ್ ಆಟದ ಎರಡು ಮೈದಾನಗಳು, ಬಾಸ್ಕೆಟ್‍ಬಾಲ್ ಆಟದ ಎರಡು ಮೈದಾನಗಳು ಹಾಗೂ ವಾಲಿಬಾಲ್ ಆಟದ ಎರಡು ಮೈದಾನಗಳನ್ನು ನಿರ್ಮಿಸಲಾಗುತ್ತದೆ.

* * 

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‍ಕೆಆರ್‍ಡಿಬಿ)ಯಿಂದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ ಅನುದಾನ ಬಂದಿದೆ. ಹಂತಹಂತವಾಗಿ ಕಾಮಗಾರಿ ಪೂರ್ಣವಾಗುತ್ತಿವೆ.

– ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry