ಔಷಧೀಯ ಸಸ್ಯ ಬೇವಿಗೆ ಚಹಾ ಸೊಳ್ಳೆ ಕಾಟ!

6

ಔಷಧೀಯ ಸಸ್ಯ ಬೇವಿಗೆ ಚಹಾ ಸೊಳ್ಳೆ ಕಾಟ!

Published:
Updated:
ಔಷಧೀಯ ಸಸ್ಯ ಬೇವಿಗೆ ಚಹಾ ಸೊಳ್ಳೆ ಕಾಟ!

ತುಮಕೂರು/ಹುಳಿಯಾರು: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೇವಿನ ಮರಗಳಿಗೆ ಚಹಾ ಸೊಳ್ಳೆ (ಟೀ ಮಸ್ಕಿಟೊ ಬಗ್) ಬಾಧೆ ಹಬ್ಬಿದೆ. ಮರಗಳು ಇದ್ದಕ್ಕಿದ್ದಂತೆ ಸುಳಿಯಿಂದ ಒಣಗಲು ಆರಂಭಿಸುತ್ತವೆ. ಅಂತಿಮವಾಗಿ ಇಡೀ ಮರವೇ ಒಣಗುತ್ತದೆ. ಕೆಲವು ಕಡೆಗಳಲ್ಲಿ ಮರಗಳು ಪೂರ್ಣವಾಗಿ ಒಣಗಿದ್ದರೆ ಮತ್ತೆ ಕೆಲವು ಮರಗಳು ಒಣಗಲು ಆರಂಭಿಸಿವೆ. ಏಕಾಏಕಿ ನಡೆಯುತ್ತಿರುವ ಈ ಪ್ರಕ್ರಿಯೆಯಿಂದ ರೈತರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಪರಿಹಾರ ನೀಡಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹೇರಳವಾಗಿ ಬೇವಿನ ಮರಗಳು ನಾಶವಾಗುತ್ತಿವೆ.

ಕೀಟ ಬಾಧೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಹಜ ಬೇಸಾಯ ಶಾಲೆ ಮತ್ತು ತುಮಕೂರು ವಿಜ್ಞಾನ ಕೇಂದ್ರದ ಸದಸ್ಯರು ಇತ್ತೀಚೆಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಅವರಿಗೆ ಮನವಿ ಸಹ ಸಲ್ಲಿಸಿದ್ದಾರೆ. ‘ಈ ಬಗ್ಗೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವೆ’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು.

‘ಈ ಕೀಟಗಳು ದಕ್ಷಿಣ ಕನ್ನಡ, ಕೇರಳದ ಕಾಸರಗೋಡಿನ ಸುತ್ತಮುತ್ತ ಗೋಡಂಬಿ ಗಿಡಗಳಿಗೆ ಈ ಹಿಂದೆ ಹಬ್ಬಿದ್ದವು. ಇವುಗಳ ನಿಯಂತ್ರಣಕ್ಕೆ ಎಂಡೋಸಲ್ಫಾನ್ ನಂತಹ ಅಪಾಯಕಾರಿ ಕೀಟನಾಶಕ ಸಿಂಪಡಿಸಲಾಗಿತ್ತು. ಈಗ ಈ ಕೀಟ ಜಿಲ್ಲೆಯ ಎಲ್ಲೆಡೆ ಬೇವಿನ ಮರಗಳಿಗೆ ವ್ಯಾಪಕವಾಗಿ ಹರಡಿದೆ. ಬೇವಿನ ಸುಳಿಯಿಂದ ಮರ ಒಣಗಲು ಆರಂಭಿಸುತ್ತದೆ. ನಂತರ ಇಡೀ ಮರವೇ ನಾಶವಾಗುತ್ತದೆ’ ಎನ್ನುವರು ಸಹಜ ಬೇಸಾಯ ಶಾಲೆಯ ಸಂಚಾಲಕ ಡಾ.ಮಂಜುನಾಥ್ ಹಾಗೂ ವಿಜ್ಞಾನ ಕೇಂದ್ರದ ಸಿ.ಯತಿರಾಜು.

‘ಕೆಲವು ಮರ ಪೂರ್ಣವಾಗಿ ಒಣಗಿದೆ. ಕೆಲವು ಮರಗಳು ಹಂತ ಹಂತವಾಗಿ ಒಣಗುತ್ತಿವೆ. ಭವಿಷ್ಯದಲ್ಲಿ ಈ ಬಾಧೆ ಹಲಸು, ಸೀಬೆ, ಮಾವು ಸೇರಿದಂತೆ ಇತರ ಮರಗಳಿಗೂ ಹರಡಬಹುದು. ಆದ್ದರಿಂದ ತಕ್ಷಣವೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಬೇವು ಔಷಧೀಯ ಸಸ್ಯ. ಇಂತಹ ಸಸ್ಯಕ್ಕೆ ರೋಗ ಹರಡಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮಧ್ಯಮ ವರ್ಗದವರು ಮನೆಗಳ ನಿರ್ಮಾಣಕ್ಕೆ, ಕೃಷಿ ಉಪಕರಣಗಳ ತಯಾರಿಕೆ ಹಾಗೂ ಮನೆಯ ಪೀಠೋಪಕರಣಗಳನ್ನು ಸಿದ್ಧಗೊಳಿಸಲು ಬೇವನ್ನು ಬಳಸುವರು. ಉತ್ತಮವಾದ ಮರ ಒಳ್ಳೆಯ ಆದಾಯವನ್ನೂ ತಂದುಕೊಡುತ್ತದೆ.

ಹಬ್ಬಿದ ರೋಗ

‘ನಮ್ಮ ಜಮೀನಿನಲ್ಲಿ 100 ಕೊಕೋ ಗಿಡಗಳಿವೆ. ಇದರಲ್ಲಿ ನಾಲ್ಕೈದು ಗಿಡಗಳು ಚಹಾ ಸೊಳ್ಳೆ ಬಾಧೆಗೆ ತುತ್ತಾಗಿವೆ. ಕಾಂಡ ಚೆನ್ನಾಗಿಯೇ ಇರುತ್ತದೆ. ಆದರೆ ಮೇಲಿನಿಂದ ಗಿಡ ಒಣಗುತ್ತಿದೆ. ಎರಡು ಮೂರು ದಿನಕ್ಕೆ ಗಿಡ ನಾಶದ ಹಂತ ತಲುಪುತ್ತದೆ’ ಎನ್ನುವರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೋಡಿ ಹೊಸಹಳ್ಳಿಯ ರೈತ ಬಸವರಾಜು.

‘ನನ್ನ ಜಮೀನು ಸೇರಿದಂತೆ ಸುತ್ತಮುತ್ತಲಿನ ಜಮೀನುಗಳಲ್ಲಿರುವ 20ರಿಂದ 30 ಬೇವಿನ ಗಿಡಗಳು ಒಣಗಿವೆ. ಈ ರೀತಿ ಏಕೆ ಆಗುತ್ತಿದೆ ಎಂದು ನಾವು ಚಿಂತಿಸುವಷ್ಟರಲ್ಲಿ ಗಿಡ ನಾಶವಾಗುವ ಮಟ್ಟಕ್ಕೆ ಬಂದಿರುತ್ತದೆ. ಜೀವಾಮೃತ, ಹಸುವಿನ ಗಂಜಲವನ್ನೂ ಹಾಕಿದೆವು. ಆದರೂ ಪ್ರಯೋಜನಕ್ಕೆ ಬರಲಿಲ್ಲ. ಆ ಮೇಲೆ ಅರ್ಥವಾಯಿತು. ಇದು ವೈರೆಸ್‌ನಿಂದ ಬರುವ ರೋಗ ಎಂದು. ಯಾವ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆಯನ್ನೇನೂ ಮಾಡಿಲ್ಲ’ ಎಂದು ವಿವರಿಸಿದರು.

ಆತಂಕ

ಬೇವನ್ನು ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಭತ್ತ, ರಾಗಿ, ತರಕಾರಿ, ಮಾವು ಹರಡುವ ರೋಗ ತಡೆಗೂ ಬೇವಿನ ಎಣ್ಣೆಯನ್ನು ಕ್ರಿಮಿನಾಶಕವಾಗಿ ಬಳಸುತ್ತೇವೆ. ಈಗ ಬೇವಿಗೆ ರೋಗ ತಗುಲಿರುವುದು ಆತಂಕ ತರಿಸಿದೆ ಎಂದು ಸಾಮಾಜಿಕ ಹೋರಾಟಗಾರ ಜವಾಹರ್‌ ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಅಧ್ಯಯನ ನಡೆಸಬೇಕು. ಮರ ವಿಜ್ಞಾನಿಗಳನ್ನು ಕರೆಸಬೇಕು. ರೋಗ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ವಿಸ್ತರಣೆ ಸಾಧ್ಯತೆ

ಈ ರೋಗ ತೆಂಗು, ಅಡಿಕೆ, ಮಾವು, ಹಲಸು ಬೆಳೆಗೆ ಹಬ್ಬಿದರೆ ಇಡೀ ಜಿಲ್ಲೆಯ ತೋಟಗಾರಿಕೆಯೇ ಸರ್ವನಾಶವಾಗಲಿದೆ. ಜಿಲ್ಲಾಡಳಿತ ರೋಗದ ಬಗ್ಗೆ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಪರಿಸರ ವಿಜ್ಞಾನಿ ಸಿ.ಯತಿರಾಜು ಆಗ್ರಹಿಸಿದರು.

ಜಿಲ್ಲೆಯಲ್ಲಿ ಬೇವು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ತೋಟಗಾರಿಕೆ ಬೆಳೆಗಳ ಪಕ್ಕದಲ್ಲಿಯೇ ಬೇವಿನ ಮರಗಳಿವೆ. ಎರಡು–ಮೂರು ವರ್ಷಗಳ ಹಿಂದೆ  ಅಲಲ್ಲಿ ಈ ರೋಗ ಕಂಡು ಬರುತ್ತಿತ್ತು. ಆದರೆ  ಈ ವರ್ಷ ದೊಡ್ಡ ಪ್ರಮಾಣದಲ್ಲೇ ಹರಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry