ಕೈಗಳ ಚಮತ್ಕಾರಕ್ಕೆ ಅರಳುವ ಕಲಾಕೃತಿಗಳು!

7

ಕೈಗಳ ಚಮತ್ಕಾರಕ್ಕೆ ಅರಳುವ ಕಲಾಕೃತಿಗಳು!

Published:
Updated:
ಕೈಗಳ ಚಮತ್ಕಾರಕ್ಕೆ ಅರಳುವ ಕಲಾಕೃತಿಗಳು!

ಯಾದಗಿರಿ: ‘ಆ ಕೈಗಳು ಒಂದು ಹಿಡಿಯಷ್ಟು ಮಣ್ಣು ತೆಗೆದುಕೊಂಡವು. ಬಡಿಗೆ ಹಿಡಿದು ಗರಗರನೇ ತಿರುಗಿಸಲು ಟಿಗರಿಯ ವೇಗ ಹೆಚ್ಚಿತು. ಹನಿನೀರು ಚುಮುಕಿಸಿಕೊಂಡ ಆ ಕೈಗಳು ಹದವಾಗಿ ಒತ್ತಲು ಶುರು ಮಾಡಿದವು. ಮಣ್ಣು ಹೂವಿನಂತೆ ಅರಳತೊಡಗಿತು. ನೋಡನೋಡುತ್ತಿದ್ದಂತೆ ಮಣ್ಣಿನೊಳಗೆ ಬೆರೆತ ಕೈಬೆರಳುಗಳ ಚಮತ್ಕಾರಕ್ಕೆ ಅಂತಿಮವಾಗಿ ಮಣ್ಣು ಹೂಜಿಯ ರೂಪ ಪಡೆಯಿತು. ಟಿಗರಿಯಿಂದ ಬೇರ್ಪಟ್ಟ ಹೂಜಿಯ ಸೌಂದರ್ಯಕ್ಕೆ ಎಲ್ಲರೂ ಮನಸೋತರು..’

ನಗರ ವಿದ್ಯಾಮಂದಿರದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸಿರಿಧಾನ್ಯ ಮೇಳ, ಫಲಪುಷ್ಟ ಪ್ರದರ್ಶನದ ಮೂಲೆಯೊಂದರಲ್ಲಿ ಮಣ್ಣು ಮತ್ತು ಕೈಗಳ ಸಮೀಕರಣದಿಂದ ಜನರ ಮನಸೂರೆಗೊಳಿಸಿದವರು ಈಶಣ್ಣ ಕುಂಬಾರ.

ಈಶಣ್ಣ ಕುಂಬಾರ ನಗರದ ಕುಂಬಾರರ ಕಾಲೊನಿ ನಿವಾಸಿ. ಕುಟುಂಬದ ಪಾರಂಪರಿಕ ಕುಂಬಾರಿಕೆ ಕಸುಬು ರೂಢಿತಗವಾಗಿದ್ದರೂ, ಕುಂಬಾರಿಕೆಯನ್ನು ಜನಾಕರ್ಷವಾಗಿಸುವ ನಿಟ್ಟಿನಲ್ಲಿ ಸಾಮಾನ್ಯ ಮಡಿಕೆ, ಕುಡಿಕೆಯಿಂದ ಹೊರಬಂದು ಜನರಿಗಿಷ್ಟವಾಗುವ ಅಗತ್ಯ ಸಾಮಗ್ರಿಗಳನ್ನು ಮಣ್ಣಿನಿಂದ ತಯಾರಿಸಿಕೊಡುವಲ್ಲಿ ನೈಪುಣ್ಯತೆ ಪಡೆದಿದ್ದಾರೆ.

ಸ್ಟೀಲ್, ಸಿಲ್ವರ್, ಹಿತ್ತಾಳೆ, ತಾಮ್ರ ಹೀಗೆ ನಾನಾ ಆಕರ್ಷಕ ವಸ್ತುಗಳಿಗೆ ಪೈಪೋಟಿಗೆ ಕುಂಬಾರಿಕೆ ಕಸುಬು ಕಳಾಹೀನಗೊಂಡಿತು ಎನ್ನುವಾಗಲೇ ಸಾಂಪ್ರದಾಯಿಕ ಕುಂಬಾರಿಕೆಯಲ್ಲಿ ನಾನಾ ಪ್ರಯೋಗಗಳನ್ನು ನಡೆಸಿರುವ ಈಶಣ್ಣ ಅದರಲ್ಲಿ ಯಶಸ್ಸು ಕಂಡಿದ್ದಾರೆ. ನಿಮಗೆ ಗಟ್ಟಿಮುಟ್ಟಾದ ಕಲಾಕೃತಿ ರೂಪದ ಮಡಿಕೆ, ಕುಡಿಕೆ ಬೇಕಿದ್ದರೆ ಈಶಣ್ಣನವರ ಬಳಿ ಹೋಗಿ ಸಿಗುತ್ತವೆ ಎನ್ನುವಷ್ಟರ ಮಟ್ಟಿಗೆ ಈಶಣ್ಣ ನಗರದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಅಸಾಧ್ಯ ಏನಿದೆ ಸ್ವಾಮಿ?:

ಅಪ್ಪ, ತಾತಾನಿಂದ ಕಲಿತ ವಿದ್ಯೆ ಇದು. ಅಪ್ಪ, ತಾತನ ಕಾಲದಲ್ಲಿ ಜನರು ಮಡಿಕೆ, ಕುಡಿಕೆಗಳಿಗೆ ಮುಗಿಬೀಳುತ್ತಿದ್ದರು. ಜನರ ಬೇಡಿಕೆ ಈಡೇರಿಸಿದರೆ ಸಾಕು ಎನ್ನುವಷ್ಟು ಕುಂಬಾರಿಕೆ ಕೆಲಸ ಅವರಿಗಿತ್ತು. ಬದುಕು ಕೂಡ ಸುಸೂತ್ರವಾಗಿತ್ತು. ಆದರೆ, ನಮ್ಮ ಕಾಲದಲ್ಲಿ ಏನೆಲ್ಲಾ ಬಂದವು. ಜನ ಮಡಿಕೆ, ಕುಡಿಕೆಯನ್ನು ಬೇಸಿಗೆಯಲ್ಲಿ ಸ್ಮರಿಸುವಂತಾಯಿತು. ಅದೂ ಕೂಡ ನೀರಿನ ಮಡಿಕೆ ಮಾತ್ರ. ಆಗ ತುಂಬಾ ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯವಾಗಿ ಮಾಡುವ ನಮ್ಮ ಕುಂಬಾರಿಕೆ ಕಸುಬಿನಲ್ಲಿ ಒಂದಷ್ಟು ಪ್ರಯೋಗಗಳು ನಡೆಯಬೇಕು ಅನ್ನಿಸಿತು.

ಮೊದಮೊದಲು ಮಣ್ಣು ಮಾತೇ ಕೇಳುತ್ತಿರಲಿಲ್ಲ. ಒರಟು ಕೈಗಳು ಮೊಂಡುತನ ಬಿಡುತ್ತಿರಲಿಲ್ಲ. ಇದನ್ನೆಲ್ಲಾ ಬಿಟ್ಟು ಎಲ್ಲಿಯಾದರೂ ವಲಸೆ ಹೋಗುವ ಬಗ್ಗೆ ಯೋಚಿಸಿದೆ. ಆದರೆ, ಹುಟ್ಟಿದ ನೆಲದ ನಂಟು ಒಪ್ಪಲಿಲ್ಲ. ಕಸರತ್ತು ಬಿಡಲಿಲ್ಲ. ಈಗ ನೀರಿನ ಹೂಜಿ, ಹಣದ ಹುಂಡಿ, ಆಕರ್ಷಕ ನೀರು ಬಳಕೆಯ ಮಡಿಕೆ, ಕುಡಿಕೆ ಮಾಡಲು ಶುರು ಮಾಡಿದೆ. ಮಡಿಕೆ, ಕುಡಿಕೆಗಳು ಕಲಾಕೃತಿಗಳ ರೂಪ ಪಡೆಯುತ್ತಿದ್ದಂತೆ ಬೇಡಿಕೆಯೂ ಹೆಚ್ಚಿತು. ಗಾಳಿಪಟವಾಗಿದ್ದ ಬದುಕು ಈಗ ಸ್ಥಿರವಾಗಿದೆ. ಮನಸ್ಸು ಮಾಡಿದರೆ ಅಸಾಧ್ಯ ಏನಿದೆ ಸ್ವಾಮಿ? ಎಂದು ಈಶಣ್ಣ ಬದುಕಿನ ಹಿಂದಣ ಹೆಜ್ಜೆ ಸ್ಮರಿಸಿದರು.

ನಗರದ ಚರ್ಚ್‌ ಮುಂದಿನ ಜಿಲ್ಲಾ ಆಸ್ಪತ್ರೆ ಸಂಪರ್ಕ ಹಾದಿ ಬದಿಯ ಜಾಗ ಈಶಣ್ಣ ಅವರ ಕಾಯಂ ಸ್ಥಳ. ಅಲ್ಲಿ ರಾಶಿರಾಶಿ ಕಲಾಕೃತಿಯಂತೆ ಕಾಣುವ ಮಣ್ಣಿನ ಮಡಿಕೆ, ಕುಡಿಕೆ ಸೇರಿದಂತೆ ಬಗೆಬಗೆಯ ಮಣ್ಣಿನ ವಸ್ತುಗಳು ಕಾಣಿಸುತ್ತವೆ. ಜನಾಕರ್ಷಣೆ ಹೆಚ್ಚಿರುವ ಕಾರಣ ಈಶಣ್ಣ ಸ್ವಲ್ಪ ಬೆಲೆಯನ್ನು ದುಬಾರಿ ಹೇಳುತ್ತಾರೆ. ಚೌಕಾಸಿ ಮಾಡಿದರೆ ನಗುತ್ತಾ ತಗೊಳ್ಳಿ ಅನ್ನುತ್ತಾರೆ.

ನಗರದ ಕುಂಬಾರರ ಕಾಲೊನಿಯಲ್ಲಿ ಹತ್ತಾರು ಕುಂಬಾರ ಕುಟುಂಬಗಳಿವೆ. ಸಾಂಪ್ರದಾಯಿಕ ಕುಂಬಾರಿಕೆಯಿಂದ ಕೆಲವರು ವಿಮುಖರಾಗಿದ್ದಾರೆ. ಜಿಲ್ಲಾಡಳಿತ ಕೂಡ ಕುಂಬಾರರ ಕುಲಕಸುಬು ರಕ್ಷಿಸುವ ನಿಟ್ಟಿನಲ್ಲಿ ಇಲ್ಲಿನ ಕುಂಬಾರ ಕುಟುಂಬಗಳಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿಲ್ಲ. ಕೆಲ ಕುಂಬಾರರ ಮನೆಗಳು ಶಿಥಿಲಗೊಂಡಿದ್ದರೂ, ಸರ್ಕಾರ ವಸತಿ ಭಾಗ್ಯ ಕಲ್ಪಿಸಿಲ್ಲ ಎನ್ನುತ್ತಾರೆ ಕುಂಬಾರ ಕುಟುಂಬದ ಸದಸ್ಯರು.

ಆದರೆ, ನಗರದ ಈಶಣ್ಣ ಜಿಗುಟು ಜೇಡಿಮಣ್ಣಿನಂತೆ ಹಠ ಹಿಡಿದು ಕುಂಬಾರಿಕೆಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಅದರಲ್ಲಿ ಯಶಕಂಡು ಬದುಕು ಕಟ್ಟಿಕೊಂಡಿದ್ದಾರೆ.

* * 

ಮಡಿಕೆ, ಕುಡಿಕೆ ಬಳಕೆಯಿಂದ ಕಾಯಿಲೆಗಳು ವಾಸಿಯಾಗುತ್ತವೆ. ನೀರು ರುಚಿಸುತ್ತದೆ. ಆಹಾರ ಕೆಡುವುದಿಲ್ಲ ಎಂಬ ಕಾರಣಗಳಿಂದಾಗಿ ಜನರು ಮಡಿಕೆ, ಕುಡಿಕೆಯತ್ತ ಮರಳಿದ್ದಾರೆ.

ಈಶಣ್ಣ ಕುಂಬಾರ

ಮಡಿಕೆ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry