ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಕಡ್ಡಾಯಗೊಳ್ಳಲಿ; ಜಾಗೃತಿ ಹೆಚ್ಚಲಿ

Last Updated 29 ಜನವರಿ 2018, 8:35 IST
ಅಕ್ಷರ ಗಾತ್ರ

ವಿಜಯಪುರ: ಗಣರಾಜ್ಯೋತ್ಸವದ ದಿನದಿಂದ (ಜ 26ರ) ನಗರವೂ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಪೊಲೀಸರು ಮತ್ತೊಮ್ಮೆ, ಬೈಕ್‌ ಸವಾರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎರಡ್ಮೂರು ವರ್ಷದ ಅವಧಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಧರಿಸಿ ಬೈಕ್‌ ಓಡಿಸುವುದು ಕಡ್ಡಾಯಗೊಳ್ಳುತ್ತಿರುವುದು ಇದು ನಾಲ್ಕನೇ ಬಾರಿ. ಸುಪ್ರೀಂಕೋರ್ಟ್‌ ಕಠಿಣ ತೀರ್ಪು ನೀಡಿ, ಕಾನೂನುಬದ್ಧಗೊಳಿಸಿದ್ದರೂ ನಗರ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬಂದಿದ್ದು ಮಾತ್ರ ಅಷ್ಟಕ್ಕಷ್ಟೇ.

ಡಿ.ಪ್ರಕಾಶ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭ ಮೊದಲ ಬಾರಿಗೆ ಹೆಲ್ಮೆಟ್‌ ಕಡ್ಡಾಯದ ಆದೇಶ ಜಾರಿಗೊಳಿಸಿದ್ದರು. ಇದು ಒಂದೆರೆಡು ತಿಂಗಳಷ್ಟೇ ಚಾಲ್ತಿಯ ಲ್ಲಿತ್ತು. ಎಸ್‌.ಎನ್‌.ಸಿದ್ಧರಾಮಪ್ಪ ಅಧಿ ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ಕಡ್ಡಾಯವಾಗಿ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ಮುಂದಾ ದಾಗ ಮತ್ತೆ ಹೆಲ್ಮೆಟ್‌ ಕಡ್ಡಾಯ ಜಾರಿಯಾಯ್ತು.

ಕೆಲ ತಿಂಗಳಲ್ಲೇ ಮತ್ತೆ ಯಥಾಸ್ಥಿತಿ ಮುಂದುವರೆಯಿತು. ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ಹೆಚ್ಚಿದಂತೆ ಹೆಲ್ಮೆಟ್‌ ಬಳಕೆ ಬಗ್ಗೆ ಸಿದ್ಧರಾಮಪ್ಪ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಮುಂದಾದರು. ಎಲ್ಲೆಡೆ ಕಡ್ಡಾಯಗೊಳಿಸಿದರು. ಕೆಲ ದಿನ ಬಳಸಿದ ಬೈಕ್‌ ಸವಾರರು ನಂತರ ಬೇಸಿಗೆಯ ನೆಪವೊಡ್ಡಿ ಬಳಸಲಿಲ್ಲ.

ಐಜಿಪಿ ಸೂಚನೆ: ಇದೀಗ ಉತ್ತರ ವಲಯ ಐಜಿಪಿ ಅಲೋಕ್‌ಕುಮಾರ್‌ ಹೆಲ್ಮೆಟ್‌ ಕಡ್ಡಾಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಹೆಲ್ಮೆಟ್‌ ಕಡ್ಡಾಯದ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲಾ ಪೊಲೀಸರು ಐಜಿಪಿ ಆದೇಶ ಪಾಲನೆಗಾಗಿ ಅಷ್ಟೇ ಉತ್ಸಾಹದಿಂದ ಶುಕ್ರವಾರ, ಶನಿವಾರ ಕಾರ್ಯಾಚರಿಸಿದ್ದಾರೆ. ಮೊದಲ ದಿನವೇ ವಿಜಯಪುರ ನಗರ ವ್ಯಾಪ್ತಿಯಲ್ಲಿ 563 ಪ್ರಕರಣ ದಾಖಲಿಸಿ, ₹ 56300 ದಂಡ ವಸೂಲಿ ಮಾಡಿ, ಆರಂಭ ಶೂರತ್ವ ಮೆರೆದಿದ್ದಾರೆ.

ಎರಡನೇ ದಿನವಾದ ಶನಿ ವಾರ ಇನ್ನಷ್ಟು ಚುರುಕಿನಿಂದ ಹೆಲ್ಮೆಟ್‌ ಬಳಸದೆ ವಾಹನ ಚಲಾಯಿ ಸುತ್ತಿದ್ದ ಬೈಕ್‌ ಸವಾರರನ್ನು ತಡೆದು, ವಾಹನದ ದಾಖಲಾತಿ ಪರಿಶೀಲನೆಯನ್ನೂ ನಡೆಸಿ, ದಾಖಲಾತಿ ಇಲ್ಲದಿರುವುದಕ್ಕೆ ಸೇರಿದಂತೆ, ಹೆಲ್ಮೆಟ್‌ ಬಳಸದಿರುವುದಕ್ಕೆ ದಂಡ ವಿಧಿಸಿದ್ದಾರೆ.

ಆದರೆ ಮೂರನೇ ದಿನವಾದ ಭಾನುವಾರ ರಜೆ ಎಂಬ ಕಾರಣವೋ, ಸಂಚಾರ ಪೊಲೀಸರ ನಿರುತ್ಸಾಹವೋ ಎಲ್ಲೂ ಹೆಲ್ಮೆಟ್‌ ಇಲ್ಲದೆ ಚಲಿಸುತ್ತಿದ್ದ ವಾಹನ ಸವಾರರನ್ನು ತಡೆದು ದಂಡ ವಿಧಿಸಿದ ದೃಶ್ಯಾವಳಿ ಗೋಚರಿಸಲಿಲ್ಲ.

ಕಟ್ಟುನಿಟ್ಟುಗೊಳಿಸಿ: ‘ಈ ಹಿಂದಿನ ಮೂರು ಬಾರಿಯೂ ಹೆಲ್ಮೆಟ್‌ ಕಡ್ಡಾ ಯವನ್ನು ಪೊಲೀಸರು ಕಾಟಾಚಾರಕ್ಕೆ ನಡೆಸಿದರು. ಇದರ ಪರಿಣಾಮ ಜನರು ಬಳಸಲಿಲ್ಲ. ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸದವರನ್ನು ಹಿಡಿದು, ಯಾವ ಮುಲಾಜಿಗೆ ಒಳಗಾಗದೆ ನಿರಂತರವಾಗಿ ದಂಡ ವಿಧಿಸಿದ್ದರೆ, ಈ ವೇಳೆಗೆ ಬೈಕ್‌ ಸವಾರರೇ ಹೆಲ್ಮೆಟ್‌ ಧರಿಸಿ ಚಲಿಸುತ್ತಿದ್ದರು’ ಎಂದು ನಗರದ ನಿವಾಸಿ ಎನ್‌.ಎ.ಮಮದಾಪುರ ತಿಳಿಸಿದರು.

‘ಒಂದೆಡೆ ಪೊಲೀಸರ ನಿರುತ್ಸಾಹ. ಮತ್ತೊಂದೆಡೆ ವಾಹನ ಸವಾರರಲ್ಲಿ ಹೆಲ್ಮೆಟ್‌ ಬಳಸಲು ನಿರಾಸಕ್ತಿ. ಇದೀಗ ಐಜಿಪಿ ಅಲೋಕ್‌ಕುಮಾರ್‌ ಆಸಕ್ತಿಯಿಂದ ಮತ್ತೆ ಹೆಲ್ಮೆಟ್‌ ಕಡ್ಡಾಯಗೊಂಡಿದೆ. ಈ ಬಾರಿಯೂ ನಾಲ್ಕು ದಿನದ ಪತ್ರಿಕಾ ಪ್ರಚಾರಕ್ಕೆ ಸೀಮಿತವಾಗದೆ, ಅಪಘಾತಗಳಲ್ಲಿ ವಾಹನ ಸವಾರರ ಸಾವು ತಪ್ಪಿಸುವ ನೈಜ ಕಾಳಜಿಯನ್ನು ಜಿಲ್ಲಾ ಪೊಲೀಸರು ಪ್ರದರ್ಶಿಸಬೇಕು.

ಯುವ ಉತ್ಸಾಹಿ ಎಸ್‌ಪಿ, ಎಎಸ್‌ಪಿ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ನಿತ್ಯ ವೃತ್ತಗಳಲ್ಲಿ ನಿಂತು ಕಾರ್ಯ ನಿರ್ವಹಿಸಲು ಪೊಲೀಸರ ಕೊರತೆಯಿದೆ ಎಂಬ ಸಬೂಬು ಹೇಳಬಾರದು. ಸಿಬ್ಬಂದಿ ಕೊರತೆಯಿದ್ದರೆ ತಾತ್ಕಾಲಿಕವಾಗಿ ಹೋಂಗಾರ್ಡ್‌ ಸಿಬ್ಬಂದಿಯ ಸೇವೆ ಪಡೆಯಲು ಮುಂದಾಗಬೇಕು. ಸವಾರರು ಇದಕ್ಕೆ ಸಾತ್ ನೀಡಬೇಕು’ ಎಂದು ಮಮದಾಪುರ ಹೇಳಿದರು.

* * 

ಹೆಲ್ಮೆಟ್‌ ಕಡ್ಡಾಯ ಜಾರಿ ಯಾದರೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ತಲೆಗೆ ಪೆಟ್ಟು ಬಿದ್ದು ಮೃತಪಡುವ ಪ್ರಮಾಣ ವ್ಯಾಪಕವಾಗಿ ಕಡಿಮೆಯಾಗಲಿದೆ
ಎನ್‌.ಎ.ಮಮದಾಪುರ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT