ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಘನಾಶಿನಿ’ಯ ಬೆರಗು ತೆರೆದಿಡುವ ಸಾಕ್ಷ್ಯಚಿತ್ರ

Last Updated 29 ಜನವರಿ 2018, 8:47 IST
ಅಕ್ಷರ ಗಾತ್ರ

ಕುಮಟಾ: ಸ್ಥಳೀಯ ರೋಟರಿ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರದರ್ಶನಗೊಂಡ ಅಶ್ವಿನಕುಮಾರ ಭಟ್ಟ ಹಾಗೂ ಸಹನಾ ಬಾಳಕಲ್ ದಂಪತಿ ನಿರ್ಮಿಸಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರ ವೀಕ್ಷಕರನ್ನು ನಿಬ್ಬೆರಗಾಗಿಸಿತು.

ಗಂಗಾ ನದಿಗಿಂತ ಪುರಾತನ ಹಾಗೂ ಆಣೆಕಟ್ಟುಗಳಿಲ್ಲದ ದೇಶದ ಏಕೈಕ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನಾಶಿನಿ ನದಿಯ ಸುಮಾರು 124 ಕಿಲೋಮೀಟರ್ ದೂರದ ಪಯಣದ ಘಟ್ಟ ಪ್ರದೇಶದಲ್ಲಿ ಕೆಲವು ಜಲಪಾತಗಳು, ಕರಾವಳಿಯಲ್ಲಿ ವಿಶಾಲ ಹರಿವು ಮಾತ್ರ ಕಾಣುತ್ತವೆ.

‘ದಟ್ಟ ಪಶ್ಚಿಮ ಘಟ್ಟ ಕಾಡುಗಳಲ್ಲಿ ಅದು ಸಾಗಿ ಬರುವ ಮನೋಹರ ನೋಟ, ಅಘನಾಶಿನಿ ಕೊಳ್ಳದ ವಿಶಿಷ್ಟ ಜಲಚರ, ಪ್ರಾಣಿ, ಪಕ್ಷಿ ಪ್ರಬೇಧ, ಅಪರೂಪದ ಸಸ್ಯ ಸಂಕುಲ,ಕಾಡನ್ನು ಉಳಿಸಲು ಹಿಂದೆ ಕೈಕೊಳ್ಳುತ್ತಿದ್ದ ಪಾರಂಪರಿಕ ಆಚರಣೆಯ ಕುರುಹುಗಳನ್ನು ಸಾಕ್ಷ್ಯ ಚಿತ್ರ ಸಾಕ್ಷೀಕರಿಸುತ್ತದೆ’  ಎಂದು ಸಾಕ್ಷ್ಯ ಚಿತ್ರ ತಂಡದ ಮುಖ್ಯಸ್ಥರಾದ ಅಶ್ವಿನಕುಮಾರ ಭಟ್ಟ ಹಾಗೂ ಸಹನಾ ಬಾಳಕಲ್ ದಂಪತಿ ಅನುಭವ ಹಂಚಿಕೊಂಡರು.

‘ತಾಯಿಯಂತಿರುವ ‘ಅಘನಾಶಿನಿ’ ಸಾಕ್ಷ್ಯ ಚಿತ್ರದಲ್ಲಿ ತನ್ನ ಕತೆಯನ್ನು ಹೇಳುವ ರೀತಿ ಕೂಡ ವಿಶಿಷ್ಟವಾಗಿದೆ. ಸಾಕ್ಷ್ಯ ಚಿತ್ರದಲ್ಲಿ ನದಿ ಸುಮ್ಮನೆ ಹರಿದು ಸಮುದ್ರ ಸೇರುವುದಿಲ್ಲ. ಅದು ಹರಿದಲ್ಲೆಲ್ಲ ಬದುಕು ಕಟ್ಟಿಕೊಂಡ ಜನರ ಜೀವನ, ಕಲೆ, ಸಂಸ್ಕೃತಿ ಸೇರಿಯೇ ಅಘನಾಶಿನಿಯ ಕತೆಯಾಗುತ್ತದೆ.

‘ನದಿಕೊಳ್ಳದಲ್ಲಿ ಮಡಚಿದ ಮೊಳಕಾಲುಗಳಂತೆ ಕಂಡು ಬರುವ ಅಪರೂಪದ ರಾಮಪತ್ರೆ ಜಡ್ಡಿ ಬೆಟ್ಟ, ಕಾಲಿಟ್ಟರೆ ಬೇಸಿಗೆಯಲ್ಲೂ ಹೂತು ಹೋಗುವಂಥ ಜೌಗು ಪ್ರದೇಶ, ಹುಲಿಯಪ್ಪ, ಅಮ್ಮನವರು, ಮಹಾಸತಿ ಮೂರ್ತಿಯನ್ನೊಳಗೊಂಡ ದೇವರ ಕಾಡು, ಜಗತ್ತಿನಲ್ಲಿಯೇ ಅಪರೂಪದ ಜೀವಿ ಎನಿಸಿಕೊಂಡ ಸಿಂಗಳಿಕ ವನ ಎಲ್ಲ ಇರುವುದು ಕುಮಟಾ–ಸಿದ್ದಾಪುರ ನಡುವಿನ ದೊಡ್ಡಮನೆ ಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ. ಘಟ್ಟದ ಕೆಳ ಭಾಗದಲ್ಲಿ ನದಿಯಲ್ಲಿ ಬೆಳಚು ತೆಗೆಯುವುದನ್ನು ಅಂಡರ್ ವಾಟರ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ್ದು ವಿಶೆಷ ಎನಿಸುತ್ತದೆ.

‘ಸಿಂಗಳಿಕಗಳನ್ನು ಸೆರೆ ಹಿಡಿಯುವಾಗ ಅವುಗಳನ್ನು ಅಧ್ಯಯನ ಮಾಡಿರುವ ತಜ್ಞರ ತಂಡದ ಸಹಾಯ ಬಳಸಿಕೊಳ್ಳಬೇಕಾಯಿತು. ತಜ್ಞರ ತಂಡದ ಸದಸ್ಯರನ್ನು ಕಂಡಾಗ ಸಿಂಗಳಿಕಗಳು ಕೊಂಚ ಸಹಕರಿಸುತ್ತಿದ್ದವು. ಅವು ಕಂಡ ಮಾಹಿತಿ ಪಡೆದ ನಾವು ತಕ್ಷಣ ಬೆಂಗಳೂರಿನಿಂದ ಹೊರಟು ಅಘನಾಶಿನಿ ಕೊಳ್ಳ ತಲುಪುವುದರಲ್ಲಿ ಮತ್ತೆ ಕಾಡಿನಲ್ಲಿ ಮಾಯವಾಗಿಬಿಡುತ್ತಿದ್ದವು. ಹಲವು ಪ್ರಯತ್ನಗಳ ನಂತರ ಒಮ್ಮೆ ಅವುಗಳನ್ನು ಹತ್ತಿರದಿಂದ ನೋಡಿ ಚಿತ್ರೀಕರಿಸುವ ಭಾಗ್ಯ ಲಭಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಕ್ಲಬ್ ಹಿರಿಯ ಸದಸ್ಯ ಮುರಳೀಧರ ಪ್ರಭು, ‘ಕುಮಟಾದಲ್ಲಿ ರೋಟರಿ ಹಾಗೂ ಯುಗಾದಿ ಉತ್ಸವ ಸಮಿತಿ ಕೆರೆ ಹೂಳೆತ್ತುವ ಕಾರ್ಯ ನಡೆಸುತ್ತಿದೆ. ಇಲ್ಲಿಯ ಜನರಿಗೆ ಎಲ್ಲವನ್ನೂ ನೀಡುವ ಅಘನಾಶಿನಿ ಅಕ್ಷರಶ: ತಾಯಿಯಾಗಿದ್ದಾಳೆ. ನಮ್ಮೊಂದಿಗೆ ಸಮಾನ ಮನಸ್ಕರು ಕೈಜೋಡಿಸಿದರೆ ನದಿ, ಕೆರೆ ಸಂರಕ್ಷಣೆ ಸಾಧ್ಯ. ಅಘನಾಶಿನಿ ಸಾಕ್ಷ್ಯ ಚಿತ್ರ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಈ ಚಿತ್ರವನ್ನು ವೀಕ್ಷಿಸುವ ಮೊದಲ ಹಕ್ಕು ತಾಲ್ಲೂಕಿನ ಜನತೆಗಿದೆ’ ಎಂದರು.

‘ಖುಷಿ’ ಪರಿಸರ ಸಂಸ್ಥೆಯ ಸದಸ್ಯೆ ನಿವೃತ್ತ ಪ್ರಾಧ್ಯಾಪಕಿ ಗೀತಾ ನಾಯಕ, ಸದಸ್ಯೆ ಸಸ್ಯಶಾಸ್ತ್ರಜ್ಞೆ ರೂಪಾ ನಾಯ್ಕ, ಉದ್ಯಮಿ ಕಾಶಿನಾಥ ನಾಯಕ, ತ್ರಿವಿಕ್ರಮ ಪೈ ಸಂವಾದದಲ್ಲಿ ಪಾಲ್ಗೊಂಡರು. ಜಿ.ಎಸ್.ಹೆಗಡೆ, ರೋಟರಿ ಅಧ್ಯಕ್ಷ ವಸಂತರ ರಾವ್ ಹಾಗೂ ಪರಿಸರಾಸಕ್ತೆ ಆ್ಯನಾ ಇದ್ದರು. ಸುರೇಶ ಭಟ್ಟ ನಿರೂಪಿಸಿದರು.

ಅದ್ಭುತ ಸಾಹಸ

‘ತದಡಿ–ಅಘನಾಶಿನಿ ಸುತ್ತ ಬೆಳಚು ತೆಗೆಯಲು ಹೆಂಗಸರು ಒಂದು ನಿಮಿಷದವರೆಗೆ ಉಪ್ಪು ನೀರಲ್ಲಿ ಉಸಿರುಕಟ್ಟಿಕೊಂಡು ಮುಳುಗುವ ಸಾಸಹ ನಿಬ್ಬೆರಗಾಗಿಸುವಂಥದ್ದು. ಅಘನಾಶಿನಿ ಅಧ್ಯಯನಕ್ಕೆ ಆರು ತಿಂಗಳು ಹಿಡಿದರೆ, ವರ್ಷದ ಎಲ್ಲ ಋತುಗಳಲ್ಲಿ ನದಿಯಲ್ಲಾಗುವ ಬದಲಾವಣೆ ಚಿತ್ರೀಕರಿಸಲು ಮತ್ತೆ ಸುಮಾರು ಒಂದುವರೆ ವರ್ಷ ಬೇಕಾಯಿತು’ ಎಂದು ಸಾಕ್ಷ್ಯ ಚಿತ್ರ ತಂಡದ ಮುಖ್ಯಸ್ಥರಾದ ಅಶ್ವಿನಕುಮಾರ ಭಟ್ಟ ಹಾಗೂ ಸಹನಾ ಬಾಳಕಲ್ ದಂಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT