ಅಂಗನವಾಡಿ ಕೇಂದ್ರದ ಛಾವಣಿಯಲ್ಲಿ ಸೌರ ಮಂಡಲ!

7

ಅಂಗನವಾಡಿ ಕೇಂದ್ರದ ಛಾವಣಿಯಲ್ಲಿ ಸೌರ ಮಂಡಲ!

Published:
Updated:
ಅಂಗನವಾಡಿ ಕೇಂದ್ರದ ಛಾವಣಿಯಲ್ಲಿ ಸೌರ ಮಂಡಲ!

ಕಾರವಾರ: ಸರ್ಕಾರ ಬಾಲಸ್ನೇಹಿ ಯೋಜನೆಯಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಬಣ್ಣ ಬಳಿದು, ಚಿತ್ರ ಬಿಡಿಸಲು ನೀಡಿರುವ ಅನುದಾನವನ್ನು ಬಳಸಿಕೊಂಡು ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿನೂತನ ಪ್ರಯೋಗವೊಂದನ್ನು ಮಾಡಿದೆ. ಈ ಪ್ರಯೋಗಕ್ಕೆ ಇದೀಗ ಎಲ್ಲೆಡೆ ಶ್ಲಾಘನೆ ಕೂಡ ವ್ಯಕ್ತವಾಗಿದೆ.

ಹೌದು, ನಗರದ ಸಾವಂತವಾಡದ ಅಂಗನವಾಡಿ ಕೇಂದ್ರದ ಕಟ್ಟಡದ ಒಳ ಭಾಗದ ಛಾವಣಿಗೆ ಸೌರ ಮಂಡಲದ ಚಿತ್ರ ಬಿಡಿಸುವ ಮೂಲಕ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವ ವಿಶಿಷ್ಟ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.

ಅಂಗನವಾಡಿ ಕೇಂದ್ರಗಳ ಗೋಡೆಗಳಿಗೆ ಬಣ್ಣ ಬಳಿಯಲು ಸರ್ಕಾರ ಬಾಲಸ್ನೇಹಿ ಯೋಜನೆಯಡಿ ರಾಜ್ಯದ ಪ್ರತಿ ಕೇಂದ್ರಕ್ಕೆ ₹ 10 ಸಾವಿರ ಅನುದಾನ ಬಿಡುಗಡೆ ಮಾಡಿದೆ. ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ, ಸುಸ್ಥಿತಿಯಲ್ಲಿರುವ ಹಾಗೂ ಎಲ್ಲ ರೀತಿಯ ಮೂಲಭೂತ ಸೌಕರ್ಯವನ್ನು ಒಳಗೊಂಡಿರುವ ಕೇಂದ್ರಗಳ ಗೋಡೆಗಳ ಮೇಲೆ ಬಣ್ಣದಲ್ಲಿ ಶೈಕ್ಷಣಿಕ ಮಾಹಿತಿಗಳನ್ನೊಳಗೊಂಡ ಚಿತ್ರಗಳನ್ನು ಬಿಡಿಸಲಾಗುತ್ತದೆ.

ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದು, ಅದರನ್ವಯ ಪುಟಾಣಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅಕ್ಷರ ಮಾಲೆ, ಮರ– ಗಿಡಗಳು, ಪ್ರಾಣಿ– ಪಕ್ಷಿಗಳು, ಹಣ್ಣು– ಹಂಪಲು, ಬಾಲ್ಯ ವಿವಾಹ ಕಾಯ್ದೆಯ ಕುರಿತು ತಿಳಿವಳಿಕೆ ಮೂಡಿಸುವ ಚಿತ್ರ ಮತ್ತು ಕಾನೂನಿನ ಮಾಹಿತಿಗಳನ್ನು ಸಾಮಾನ್ಯವಾಗಿ ಗೋಡೆಗಳ ಮೇಲೆ ಬರೆಯಲಾಗುತ್ತದೆ.

‘ಜಿಲ್ಲೆಯ ಪ್ರತಿ ತಾಲ್ಲೂಕಿನ 20 ಅಂಗನವಾಡಿ ಕೇಂದ್ರಗಳಲ್ಲಿಯೂ ಇದೇ ರೀತಿ ಬಣ್ಣ ಬಳಿದು, ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಆದರಲ್ಲಿ ಇಲ್ಲಿನ ಸಾವಂತವಾಡದ ಅಂಗನವಾಡಿ ಕೇಂದ್ರದ ಛಾವಣಿಗೆ ಸೌರಮಂಡಲದ ಚಿತ್ರ ಬಿಡಿಸುವ ಮೂಲಕ ವಿನೂತನ ಪ್ರಯೋಗ ಮಾಡಿದ್ದೇವೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಬಾಹ್ಯಾಕಾಶ, ಆಕಾಶಕಾಯಗಳು, ಸೌರಮಂಡಲದ ಬಗ್ಗೆ ತಿಳುವಳಿಕೆ ಬರಲೆಂದು ಈ ರೀತಿ ಮಾಡಲಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ತಿಳಿಸಿದರು.

‘ಸ್ಥಳೀಯ ಕಲಾವಿದರಿಗೆ ಈ ಚಿತ್ರ ಬಿಡಿಸಲು ನೀಡಲಾಗಿತ್ತು. ಅವರು ಇದಕ್ಕಾಗಿ ಮೂರು ದಿನ ಪಡೆದು ಚಿತ್ರಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಕೂಡ ಇದೇ ರೀತಿ ಬೇರೆ ಬೇರೆ ಮಾಹಿತಿಗಳನ್ನು ಆಧರಿಸಿದ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂಥ ಚಿತ್ರಗಳನ್ನು ಛಾವಣಿ ಮೇಲೆ ಬರೆಯಲು ಉದ್ದೇಶಿಸಿದ್ದೇವೆ. ಸರ್ಕಾರಕ್ಕೆ ನಮ್ಮ ಪ್ರಯತ್ನವನ್ನು ತಿಳಿಸಿದ್ದು, ಅವರು ಕೂಡ ಶ್ಲಾಘಿಸಿದ್ದಾರೆ’ ಎಂದು ತಿಳಿಸಿದರು.

* * 

ಸರ್ಕಾರದಿಂದ ಬರುವ ಅನುದಾನಗಳು ಕಡಿಮೆ ಇರುವುದರಿಂದ ಸಂಘ– ಸಂಸ್ಥೆಗಳು, ದಾನಿಗಳು ಇಲಾಖೆಯೊಂದಿಗೆ ಕೈ ಜೋಡಿಸಿದರೆ ಮಕ್ಕಳಿಗೆ ಉಪಯೋಗವಾಗುವಂಥ ವಿನೂತನ ಪ್ರಯೋಗಗಳನ್ನು ಮಾಡಬಹುದುದಾಗಿದೆ

– ರಾಜೇಂದ್ರ ಬೇಕಲ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry