ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ನೀಡಿ

7

ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ನೀಡಿ

Published:
Updated:

ರಬಕವಿ ಬನಹಟ್ಟಿ: ‘ಹಟಗಾರ ಸಮಾಜದ ಶೇ 1.5ರಷ್ಟು ವಿದ್ಯಾರ್ಥಿಗಳು ಮತ್ತು ಶೇ 0.4 ರಷ್ಟು ಹೆಣ್ಣು ಮಕ್ಕಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಸಮಾಜದವರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು’ ಎಂದು ವಿಜಯಪುರದ ಸಿಕ್ಯಾಬ್‌ ಕಾಲೇಜು ಪ್ರಾಧ್ಯಾಪಕ ಡಾ.ಸಂಗಮೇಶ ಮೇತ್ರಿ ತಿಳಿಸಿದರು.

ಅವರು ಶನಿವಾರ ಇಲ್ಲಿನ ಜೇಡರ ದಾಸಿಮಯ್ಯ ದೇವಸ್ಥಾನದ ಆವರಣದಲ್ಲಿ ನಡೆದ ರಾಜ್ಯ ಹಟಗಾರ ಸಮಾಜ–ಬೆಂಗಳೂರು ಮತ್ತು ಸ್ಥಳೀಯ ಹಟಗಾರ ಸಮಾಜದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಹಟಗಾರ ಸಮಾಜ ಸಂಘಟನಾ ಸಮಾವೇಶದಲ್ಲಿ ಉಪನ್ಯಾಸ ನೀಡಿದರು.

‘ಹಟಗಾರ ಎಂಬ ಕೀಳರಿಮೆ ಬೇಡ. ಸಮಾಜ ಸಂಘಟನೆ ಆಗಬೇಕಾದರೆ ಪ್ರಭುತ್ವ ಮತ್ತು ಅಧಿಕಾರ ಮುಖ್ಯ. ಪ್ರತಿಯೊಂದು ಗ್ರಾಮದಲ್ಲೂ ಸಮಾಜ ಸಂಘಟನೆಯಾಗಬೇಕು. ಸಮಾಜ ಬಾಂಧವರ ಕಾರ್ಯಗಳನ್ನು ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು. ಇಂದು ಬಹಳಷ್ಟು ಹಟಗಾರರು ನೇಕಾರಿಕೆಯ ವೃತ್ತಿಯಿಂದ ದೂರ ಹೋಗುತ್ತಿದ್ದಾರೆ. ನೇಕಾರಿಗೆ ಸಂಬಂಧಪಟ್ಟ 27 ಪಂಗಡಗಳು ಒಂದಾಗಬೇಕು’ ಎಂದರು.

ಶೈಲಜಾ ನುಚ್ಚಿ ಮಾತನಾಡಿ, ‘ಮನುಷ್ಯನ ಬದುಕಿಗೆ ಬೆಲೆ ಬರಬೇಕಾದರೆ ಅವನು ಸಮಾಜದಲ್ಲಿ ಒಬ್ಬನಾಗಿ ಬದುಕಬೇಕು. ಮನುಷ್ಯ ಹುಟ್ಟುವಾಗಲೇ ಅನೇಕ ಋಣ ಬಾಧೆಯನ್ನು ಹೊತ್ತುಕೊಂಡು ಬಂದಿರುತ್ತಾನೆ. ಅದರಲ್ಲಿ ಹೆತ್ತವರ, ಸಮಾಜ, ದೇವರ ಋಣಗಳು ಅತ್ಯಂತ ಮುಖ್ಯವಾಗಿವೆ. ಇವೆಲ್ಲವುಗಳನ್ನು ನಾವು ತೀರಿಸಲು ಪ್ರಯತ್ನಿಸಬೇಕು’ ಎಂದರು.

‘ಸಮಾಜದ ಸಂಘಟನೆ ಮಾಡಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಬ್ಬರು ಪರಸ್ಪರ ಚರ್ಚಿಸಿ ಸಮಸ್ಯೆಗಳನ್ನು ನಿವಾರಿಸಿಕೊಂಡು ಸಮಾಜದ ಸಂಘಟನೆಯಲ್ಲಿ ಭಾಗವಹಿಸಬೇಕು. ಜೇಡರ ದಾಸಿಮಯ್ಯನವರಂತೆ ನಾವು ಕೂಡಾ ಶುದ್ಧವಾದ ಕಾಯಕ, ದಾಸೋಹದ ಮೂಲಕ

ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಬೇಕು’ ಎಂದರು.

ರಾಷ್ಟ್ರೀಯ ಹಟಗಾರ ಸಮಾಜದ ಅಧ್ಯಕ್ಷ ಕಿಶೋರ ಗಿರವಾಳಕರ್‌, ರಾಜ್ಯ ಗೌರವಾಧ್ಯಕ್ಷ ಡಾ.ಎಂ.ಎಸ್‌.ದಡ್ಡೆನ್ನವರ, ಅಧ್ಯಕ್ಷ ಮತ್ತು ನಿವೃತ್ತ ಡಿವೈಎಸ್‌ಪಿ ಆರ್‌.ಸಿ.ಘಾಳಿ, ರಾಜ್ಯ ಮಹಿಳಾ ಹಟಗಾರ ಘಟಕದ ಅಧ್ಯಕ್ಷೆ ಶಾಂತಾ ಮಂಡಿ, ರಾಜಶೇಖರ ಮಾಲಾಪುರ, ಶಂಕರ ಜುಂಜಪ್ಪನವರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ಹುನ್ನೂರು ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರ, ನೀರಲಕೇರಿಯ ಘನಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಹಾನಂದ ಕುಳ್ಳಿ ಪ್ರಾರ್ಥಿಸಿದರು. ನೂಲಿನ ಗಿರಣಿಯ ಅಧ್ಯಕ್ಷ ಶಂಕರ ಸೋರಗಾವಿ ಸ್ವಾಗತಿಸಿದರು. ಉಪನ್ಯಾಸಕಿ ಚಂದ್ರಪ್ರಭಾ ಬಾಗಲಕೋಟ ನಿರೂಪಿಸಿದರು. ಮಲ್ಲಿಕಾರ್ಜುನ ಬಾಣಕಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry