ಸೆಕ್ಟರ್ ನಂ.6: ಅನೈರ್ಮಲ್ಯ ತಾಂಡವ

7

ಸೆಕ್ಟರ್ ನಂ.6: ಅನೈರ್ಮಲ್ಯ ತಾಂಡವ

Published:
Updated:
ಸೆಕ್ಟರ್ ನಂ.6: ಅನೈರ್ಮಲ್ಯ ತಾಂಡವ

ಬಾಗಲಕೋಟೆ: ರಸ್ತೆಯುದ್ದಕ್ಕೂ ರಾಶಿ, ರಾಶಿಯಾಗಿ ಬಿದ್ದಿರುವ ಕೋಳಿಗಳ ಪುಕ್ಕಗಳ ತ್ಯಾಜ್ಯ. ಮಣ್ಣು, ಕಟ್ಟಡದ ಕಲ್ಲುಗಳ ಜೊತೆಗೆ ಸುತ್ತಮುತ್ತಲ ಪ್ರದೇಶದ ತುಂಬಾ ಹರಡಿಕೊಂಡಿರುವ ಪ್ಲಾಸ್ಟಿಕ್‌ ವಸ್ತುಗಳ ಕಸದ ರಾಶಿ. ಇದು ನವನಗರದ ಸೆಕ್ಟರ್ ನಂ. 6ರಲ್ಲಿ ಕಂಡುಬರುವ ದೃಶ್ಯಗಳು...

ನಗರದ ಹೆಚ್ಚಿನ ರಸ್ತೆ ಬದಿಗಳೆಲ್ಲ ತ್ಯಾಜ್ಯದಿಂದ ತುಂಬಿ ತುಳುಕುತ್ತಿವೆ. ಅನೈರ್ಮಲ್ಯದಿಂದಾಗಿ ವಾತಾವರಣ ಗಬ್ಬೆದ್ದು ನಾರುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ನಿತ್ಯ ಇಲ್ಲಿ ಹಾಕಿರುವ ಕೋಳಿ ಪುಕ್ಕಗಳ ಮಜ್ಜನ ಗ್ಯಾರಂಟಿ. ಮೂಗು ಮುಚ್ಚಿಕೊಂಡೆ ಸಂಚರಿಸಬೇಕಾದ ದುಸ್ಥಿತಿ ಇಲ್ಲಿಯವರಿಗೆ ಒದಗಿದ್ದು, ಸ್ಥಳೀಯ ಆಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ನಾಗರಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಆದರೂ ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರಸಭೆ ಅಧಿಕಾರಿಗಳು ನಗರ ವನ್ನು ಸ್ವಚ್ಛನಗರ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಚರಂಡಿ, ರಸ್ತೆಗಳ ಕಾಮಗಾರಿ ಕೈಗೊಂಡಿದ್ದಾರೆ. ಆದರೆ, ಕೆಲವು ಕೋಳಿ ಅಂಗಡಿಗಳ ಮಾಲೀಕರು ಕೋಳಿ ಪುಕ್ಕಗಳ ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿ ಯುತ್ತಿದ್ದಾರೆ. ಚರಂಡಿ ಕಾಮಗಾರಿಯ ಸಂದರ್ಭದಲ್ಲಿ ಬರುವ ಕಸ, ಕಡ್ಡಿಗಳ ರಾಶಿಯನ್ನು ತಂದು ಇಲ್ಲಿಯೇ ಹಾಕುತ್ತಿದ್ದಾರೆ. ಅದು ಇಡೀ ರಸ್ತೆಯನ್ನೇ ಆವರಿಸಿಕೊಳ್ಳುತ್ತಿದೆ. ಇದರಿಂದ ಸುತ್ತಲಿನ ಪರಿಸರ ಹಾಳಾಗಿದ್ದು, ನಾಗರಿಕರಿಗೆ ಸಂಕಟ ತಂದೊಡ್ಡಿದೆ.

‘ರಸ್ತೆಯ ಬದಿಯಲ್ಲಿ ಸುರಿದಿರುವ ತ್ಯಾಜ್ಯ, ಮಣ್ಣು ಗಾಳಿ ಮಳೆಗೆ ರಸ್ತೆ ಮೇಲೆ ಶೇಖರಣೆ ಆಗುತ್ತಿದೆ. ರಸ್ತೆಗಳು ಕೂಡಾ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಅಪಘಾತಗಳು ಸಂಭವಿಸಿವೆ’ ಎಂದು ವಾಹನ ಸವಾರ, ಅಜಯಕುಮಾರ ಕಳಕಾಪುರ ಆರೋಪಿಸುತ್ತಾರೆ. ‘ಎಲ್ಲೆಂದರಲ್ಲೆ ತ್ಯಾಜ್ಯ ಬಿಸಾಡುವುದನ್ನು ನಿಲ್ಲಿಸಿ, ವಿಲೇವಾರಿಗೆ ನಿರ್ದಿಷ್ಟ ನಿಯಮ ರೂಪಿಸಬೇಕು’ ಎಂಬುದು ಕಳಕಾಪುರ ಅವರ ಒತ್ತಾಯವಾಗಿದೆ.

ಗಾಳಿ ಬೀಸಿದರೆ ಸಾಕು ದುರ್ನಾತ ಶುರುವಾಗುತ್ತದೆ. ಇದರಿಂದಾಗಿ ಹಂದಿ ಹಾವಳಿಯೂ ಶುರುವಾಗಿದೆ. ಈ ಅನೈರ್ಮಲ್ಯದಿಂದ ಈ ಬಡಾವಣೆಗಳಲ್ಲಿ ಸಂಜೆ ಮಾತ್ರವಲ್ಲ, ಹಗಲು ಹೊತ್ತಿನಲ್ಲೂ ಕೂಡಾ ವಿಪರೀತ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಹಾಗಾಗಿ ಹಗಲು ಹೊತ್ತಿನಲ್ಲಿಯೂ ಕೂಡಾ ಸೊಳ್ಳೆ ಪರದೆ ಬಳಸುವಂತಾಗಿದೆ ಎಂಬುದು ನಿವಾಸಿಗಳ ಅಳಲಾಗಿದೆ.

‘ನಗರಸಭೆಯ ಈ ನಿರ್ಲಕ್ಷ್ಯ ಧೋರಣೆ ಇಲ್ಲಿ ನೆಲೆಸಿರುವ ಮಂದಿಯ ನೆಮ್ಮದಿಯನ್ನು ಹಾಳು ಮಾಡಿದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡು ಈ ಕಸವನ್ನು ತೆರವುಗೊಳಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು’ ಎಂದು ಮಹದೇವಪ್ರಸಾದ್‌, ಸಂಗಮೇಶ ಪೂಜಾರಿ ಹಾಗೂ ಸಿದ್ದಪ್ಪ ಒತ್ತಾಯಿಸಿದ್ದಾರೆ.

ರಸ್ತೆ ಬದಿಬಿದ್ದ ಕಸದ ರಾಶಿಗೆ ಬೆಂಕಿ: ರಸ್ತೆಯ ಪಕ್ಕದಲ್ಲಿ ತಂದು ಸುರಿದ ಕಸದ ರಾಶಿಗೆ ಎಲ್ಲೆಂದರಲ್ಲೆ ಬೆಂಕಿ ಹಚ್ಚಿ ಪರಿಸರ ಹಾಳು ಮಾಡಲಾಗುತ್ತಿದೆ. ರಸ್ತೆ ಬದಿ ನೆಟ್ಟಿರುವ ಗಿಡಗಳಿಗೂ ಕೂಡಾ ಇದರಿಂದ ಹಾನಿಯಾಗುತ್ತಿದ್ದರೂ ಈ ಬಗ್ಗೆ ಗಮನ ಹರಿಸದೇ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ನಗರಸಭೆ ಅಧಿಕಾರಿ ಯನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಪ್ರಯತ್ನಿಸಿ ದರೂ ಅವರು ಕರೆ ಸ್ವೀಕರಿಸಲಿಲ್ಲ.

ಮಹಾಂತೇಶ ಮಸಾಲಿ

ಸೆಕ್ಟರ್‌ನಲ್ಲಿ ಮನೆಗಳು ಚೆಂದವಾಗಿ ನಿರ್ಮಾಣವಾಗಿವೆ. ಅಲ್ಲಿಗೆ ಕಾಲಿಟ್ಟರೆ ಅನೈರ್ಮಲ್ಯ ಕಣ್ಣಿಗೆ ರಾಚುತ್ತದೆ. ಇದರಿಂದ ಸೊಳ್ಳೆ, ಹಂದಿ ಕಾಟ ಶುರುವಾಗಿದೆ

ಮಂಜುನಾಥ. ಎಚ್ ಸ್ಥಳೀಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry