ಮುಂಜಾಗ್ರತೆಗಾಗಿ ಪೋಲಿಯೊ ಹನಿ ಹಾಕಿಸಿ

7

ಮುಂಜಾಗ್ರತೆಗಾಗಿ ಪೋಲಿಯೊ ಹನಿ ಹಾಕಿಸಿ

Published:
Updated:
ಮುಂಜಾಗ್ರತೆಗಾಗಿ ಪೋಲಿಯೊ ಹನಿ ಹಾಕಿಸಿ

ಬೆಳಗಾವಿ: ‘ಭಾರತ ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಿ ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಪತ್ರ ನೀಡಿದೆ. ಆದರೂ ನೆರೆಯ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಪ್ರಕರಣಗಳು ಕಂಡುಬರುತ್ತಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷ ನಮ್ಮಲ್ಲಿ ಲಸಿಕೆ ಹಾಕಲಾಗುತ್ತಿದೆ’ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಾರ್ತಾ ಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ವಡಗಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೋಷಕರು 0-5 ವರ್ಷ ವಯಸ್ಸಿನೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಹಾಕಿಸಿದ್ದರೂ ಈಗಲೂ ಕೊಡಿಸಬೇಕು’ ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ‘ಭಾರತ ಪೋಲಿಯೊ ಮುಕ್ತವಾಗಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಬೇಕು’ ಎಂದರು.

ಜಿಲ್ಲಾ ಪ‍ಂಚಾಯ್ತಿ ಸಿಇಒ ಆರ್‌.ರಾಮಚಂದ್ರನ್, ‘ಪೋಷಕರು ವೈದ್ಯರ ಸಲಹೆಯಂತೆ ಮಕ್ಕಳಿಗೆ ಎಲ್ಲ ಲಸಿಕೆಗಳನ್ನೂ ಕಾಲಕಾಲಕ್ಕೆ ತಪ್ಪದೇ ಹಾಕಿಸಬೇಕು. ಶೌಚಾಲಯ ಹೊಂದಿರದೇ ಇರುವವರು ಸರ್ಕಾರದಿಂದ ದೊರೆಯುವ ಅನುದಾನ ಉಪಯೋಗಿಸಿಕೊಂಡು ನಿರ್ಮಿಸಿಕೊಳ್ಳಬೇಕು’ ಎಂದು ಹೇಳಿದರು.

ಪಾಲಿಕೆ ಸದಸ್ಯ ರತನ ಮಾಸೇಕರ, ‘ಸದೃಢ ಭಾರತದ ನಿರ್ಮಾಣಕ್ಕಾಗಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮಹತ್ವದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು. ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ಮನೋಹರ ಹಲಗೇಕರ, ಸಂಜಯ ಸವ್ವಾಸೇರಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡ

ಗೌಡ, ಡಾ.ಸಿದ್ದಲಿಂಗಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ, ವೈದ್ಯಾಧಿಕಾರಿ ಡಾ.ಎಂ.ಬಿ. ಬಾಳಪ್ಪನವರ ಇದ್ದರು. ಅತಿಥಿಗಳು ಸಾಂಕೇತಿಕವಾಗಿ ಐವರಿಗೆ ಲಸಿಕೆ ಹಾಕಿದರು. ಡಿಎಚ್‌ಒ ಡಾ.ಅಪ್ಪಾಸಾಬ ನರಟ್ಟಿ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಸಿ.ಜಿ. ಅಗ್ನಿಹೋತ್ರಿ ಹಾಗೂ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪಿ.ಯಲಿಗಾರ ನಿರೂಪಿಸಿದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಐ.ಪಿ.ಗಡಾದ ವಂದಿಸಿದರು.

ಕಣಬರಗಿಯಲ್ಲಿ: ಮಹಿಳಾ ಕಲ್ಯಾಣ ಸಂಸ್ಥೆ, ಕಣಬರಗಿಯ ನಗರ ಕುಟುಂಬ ಕಲ್ಯಾಣ ಕೇಂದ್ರದಿಂದ ಮೊದಲನೇ ಸುತ್ತಿನ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಭಾನುವಾರ ನಡೆಯಿತು. ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಗುವಿಗೆ ಲಸಿಕೆ ಹಾಕಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ.ಅನುಪಮಾ ತುಕ್ಕಾರ ಮಾತನಾಡಿದರು. ಕೇಂದ್ರದ ಸಿಬ್ಬಂದಿ ಶಾಹೀನ ಹೊಂಬಳ ನಿರೂಪಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರೀಯಂಕಾ ಉಂಡಿ ವಂದಿಸಿದರು.

ಕೆಎಲ್‌ಇ ಆಸ್ಪತ್ರೆಯಲ್ಲೂ ಪಲ್ಸ್ ಪೋಲಿಯೊ ಕೇಂದ್ರ ಸ್ಥಾಪನೆ

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಲ್ಲಿ ಸರ್ಕಾರವು ಕೈಗೊಳ್ಳುತ್ತಿರುವ ಹೆಜ್ಜೆಗಳು ಅತ್ಯಂತ ಮಹತ್ವದ್ದಾಗಿವೆ. ಖಾಸಗಿ ವಲಯದವರೂ ಕೈಜೋಡಿಸುವುದರಿಂದ ಆರೋಗ್ಯಯುತ ಸಮುದಾಯ ನಿರ್ಮಾಣ ಸಾಧ್ಯವಾಗಿಸಬಹುದಾಗಿದೆ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಆರ್.ಜಿ.ನೆಲವಿಗಿ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿ ನೂತನವಾಗಿ ಪೋಲಿಯೊ ಕೇಂದ್ರ ಆರಂಭಿಸಿದ್ದು, 100 ಮಕ್ಕಳಿಗೆ ಲಸಿಕೆ ಹಾಕಲಾಯಿತು. ಮಕ್ಕಳ ತಜ್ಞೆ ಡಾ.ಅನಿತಾ ಮೊದಗೆ ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry