ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಮೂಡಿಸಿದರೂ ಬದಲಾಗದ ಜನ

Last Updated 29 ಜನವರಿ 2018, 9:36 IST
ಅಕ್ಷರ ಗಾತ್ರ

ಚಾಮರಾಜನಗರ: ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶಗಳ ಜನರ ಮನವೊಲಿಕೆಯಲ್ಲಿ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದರೂ, ನಗರ ಪ್ರದೇಶದಲ್ಲಿ ಬಯಲು ಶೌಚಾಲಯ ಸಮಸ್ಯೆ ಇನ್ನೂ ತೀವ್ರವಾಗಿ ಕಾಡುತ್ತಿದೆ.

ನಗರದ ಕೆಲವು ಬಡಾವಣೆಗಳಲ್ಲಿನ ಕುಟುಂಬಗಳು, ನಗರಸಭೆ ಅಧಿಕಾರಿಗಳ ಪ್ರಯತ್ನದ ಹೊರತಾಗಿಯೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿಲ್ಲ. ಇದರ ಪರಿಣಾಮ ನಗರವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಸಾಧ್ಯವಾಗಿಲ್ಲ.

ಇನ್ನೊಂದೆಡೆ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಜನಸಾಮಾನ್ಯರು ಪರದಾಡು ವಂತಾಗಿದೆ. ಕಾರ್ಯ ನಿರ್ವಹಿಸುತ್ತಿದ್ದ ಶೌಚಾಲಯಗಳಿಗೂ ಬೀಗ ಹಾಕಲಾಗಿದ್ದು, ಪರ ಊರು ಗಳಿಂದ ಬಂದ ಜನರು ಶೌಚಾಲಯ ಹುಡುಕಿಕೊಂಡು ಅಲೆಯುವ ಅನಿವಾರ್ಯತೆ ಎದುರಾಗಿದೆ.

ಬಯಲು ಬಿಡಲು ಒಲ್ಲದವರು: ನಗರದ ಅನೇಕ ವಾರ್ಡ್‌ಗಳಲ್ಲಿ ಶೌಚಾಲಯದ ಸಮಸ್ಯೆ ಇದೆ. ಸ್ಥಿತಿವಂತರು, ಜಾಗವುಳ್ಳವರು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಸರ್ಕಾರದಿಂದ ಪ್ರೋತ್ಸಾಹಧನ ಸಿಗುತ್ತಿದ್ದರೂ ಅನೇಕರು ಶೌಚಾಲಯ ಕಟ್ಟಿಸಿಕೊಳ್ಳಲು ಮನಸು ಮಾಡುತ್ತಿಲ್ಲ. ಖಾಲಿ ನಿವೇಶನಗಳು, ಜನ ಓಡಾಟವಿರದ ಸ್ಥಳಗಳು, ರೈಲು ನಿಲ್ದಾಣದ ಸಮೀಪದ ಜಾಗ ಮುಂತಾದವುಗಳನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ.

ಬೆಳಿಗ್ಗೆ ಬೆಳಕು ಹರಿಯುವ ಮುನ್ನ ಮತ್ತು ಸಂಜೆ ಕತ್ತಲು ಕವಿದ ಬಳಿಕ ಶೌಚಕ್ಕಾಗಿ ಬಯಲಿಗೆ ತೆರಳುವ ಸಂಖ್ಯೆ ನಗರ ಪ್ರದೇಶದಲ್ಲಿ ಕಡಿಮೆಯಾಗಿಲ್ಲ.

ಶೌಚಾಲಯ ನಿರ್ಮಿಸಿಕೊಳ್ಳಲು ಕೆಲವು ಕುಟುಂಬಗಳಿಗೆ ಜಾಗದ ಕೊರತೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ್ಡ್‌ನಲ್ಲಿಯೂ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುವುದು. 13 ವಾರ್ಡ್‌ಗಳಲ್ಲಿ ಈಗಾಗಲೇ ಶೌಚಾಲಯಗಳನ್ನು ಕಟ್ಟಲಾಗಿದೆ. ಇನ್ನೂ ಒಟ್ಟು 26 ಶೌಚಾಲಯ ನಿರ್ಮಿಸಬೇಕಿದ್ದು, 15 ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಗಳು ಪೂ‌ರ್ಣಗೊಂಡರೆ ಈ ಕಾಮಗಾರಿಗಳು ವೇಗವಾಗಿ ನಡೆಯಲಿವೆ ಎಂದು ನಗರಸಭೆ ಆರೋಗ್ಯಾಧಿಕಾರಿ ಶರವಣ ತಿಳಿಸಿದರು.

ಈ ಶೌಚಾಲಯಗಳ ನಿರ್ವಹಣೆಯನ್ನು ನಿವೃತ್ತ ಪೌರಕಾರ್ಮಿಕರಿಗೆ ವಹಿಸಲಾಗುವುದು. ಇವುಗಳ ಬಳಕೆಗೆ ₹1 ದರ ವಿಧಿಸಲಾಗುವುದು. ಈ ಹಣ ಶೌಚಾಲಯದ ನಿರ್ವಹಣೆ ಮತ್ತು ವೇತನಕ್ಕೆ ಬಳಕೆಯಾಗಲಿದೆ ಎಂದರು.

ಸಾರ್ವಜನಿಕರಿಗೆ ಬಯಲೇ ಗತಿ: ವೈಯಕ್ತಿಕ ಶೌಚಾಲಯಗಳ ನಿರ್ಮಾಣದತ್ತ ಗಮನಹರಿಸಿರುವ ನಗರಸಭೆ, ಅತ್ತ ಸಾರ್ವಜನಿಕರಿಗೆ ಶೌಚಾಲಯಗಳ ಅನುಕೂಲ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಿದೆ ಎಂದು ದೂರುತ್ತಾರೆ ನಗರದ ನಿವಾಸಿ ಮಹದೇವಸ್ವಾಮಿ.

ಕೆ.ಎಸ್‌.ಆರ್‌.ಟಿ.ಸಿ. ಮತ್ತು ಖಾಸಗಿ ಬಸ್‌ ನಿಲ್ದಾಣಗಳನ್ನು ಹೊರತುಪಡಿಸಿ ನಗರದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಸಂತೇಮರಹಳ್ಳಿ ವೃತ್ತದಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನು ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕಾಗಿ ಒಡೆಯಲಾಗಿದೆ.

ಮಾರಿಗುಡಿ ದೇವಸ್ಥಾನದ ಸಮೀಪದ ಶೌಚಾಲಯಕ್ಕೆ ಬೀಗಮುದ್ರೆ ಬಿದ್ದಿದೆ. ಹೀಗಾಗಿ ಹಳ್ಳಿ, ಬೇರೆ ಪ್ರದೇಶಗಳಿಂದ ನಗರಕ್ಕೆ ಬಂದ ಜನರು ಶೌಚಕ್ಕಾಗಿ ಈ ಎರಡು ಬಸ್‌ ನಿಲ್ದಾಣಗಳಿಗೆ ಹೋಗಬೇಕಾದ ಸ್ಥಿತಿ ಇದೆ. ತೀರಾ ಅನಿವಾರ್ಯವಾದಾಗ ಖಾಸಗಿ ಲಾಡ್ಜ್‌ಗಳಲ್ಲಿ ಹತ್ತಾರು ರೂಪಾಯಿ ತೆತ್ತು ಶೌಚಾಲಯ ಬಳಸಿಕೊಳ್ಳುವಂತಾಗಿದೆ.

ಪಡಿತರಕ್ಕೆ ಕತ್ತರಿ: ಚಿಂತನೆ

ನಗರದ ಕೆಲವು ಬಡಾವಣೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಕೂಡ ನೀಡಿದ್ದರೂ ಕೆಲವರು ಕಟ್ಟಡ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿಲ್ಲ. ಮಾರ್ಚ್‌ ಅಂತ್ಯದ ಒಳಗೆ ಜಿಲ್ಲೆಯನ್ನು ಬಯಲು ಶೌಚ ಮುಕ್ತವನ್ನಾಗಿಸುವ ಜಿಲ್ಲಾ ಪಂಚಾಯಿತಿಯ ಗುರಿಗೆ ನಗರ ಪ್ರದೇಶದಲ್ಲಿಯೇ ತೊಡಕುಂಟಾಗಿದೆ.

ಶೌಚಾಲಯ ನಿರ್ಮಿಸಿಕೊಂಡಿರುವ ದಾಖಲೆಯ ಚಿತ್ರ ಹೊಂದಿದ್ದವರಿಗೆ ಮಾತ್ರ ಪಡಿತರ ನೀಡುವ ನೀತಿಯನ್ನು ಗ್ರಾಮೀಣ ಭಾಗಗಳಲ್ಲಿ ಜಾರಿಗೆ ತರಲಾಗಿದೆ. ಅದನ್ನು ನಗರದಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ನಗರಸಭೆ ಅಧಿಕಾರಿ ಶರವಣ ತಿಳಿಸಿದರು.

ಮನವೊಲಿಕೆಯ ಕಸರತ್ತು ಫಲಿಸದೆ ಇರುವಾಗ ಪಡಿತರಕ್ಕೆ ಕತ್ತರಿ ಹಾಕುವ ನಿರ್ಧಾರ ಅನಿವಾರ್ಯವಾಗುತ್ತದೆ. ಈ ಭಯದಿಂದಾದರೂ ಶೌಚಾಲಯ ಕಟ್ಟಿಕೊಳ್ಳಲು ಜನ ಮುಂದಾಗುತ್ತಾರೆ ಎನ್ನುವುದು ನಗರಸಭೆ ಲೆಕ್ಕಾಚಾರ.

ಜತೆಗೆ, ಶೌಚಾಲಯ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳ ನೆರವು ಪಡೆದುಕೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅಧಿಕ ಮಕ್ಕಳಿರುವ ಜೆಎಸ್‌ಎಸ್‌, ವಿಎಚ್‌ಪಿ, ಸೇವಾ ಭಾರತಿ, ಸರ್ಕಾರಿ ಪದವಿಪೂರ್ವ ಕಾಲೇಜು ಮುಂತಾದೆಡೆ ತೆರಳಿ ವಿದ್ಯಾರ್ಥಿಗಳಲ್ಲಿ ಮಾಹಿತಿ ನೀಡಿ ಅವರ ಮೂಲಕ ಪೋಷಕರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಆರಂಭಿಸಲಿದ್ದಾರೆ.

* *

ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ್ಡ್‌ನಲ್ಲಿಯೂ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುವುದು.
ಶರವಣ, ನಗರಸಭೆ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT