ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಪಡೆಯಲು ದುಂಬಾಲು ಬಿದ್ದಿಲ್ಲ

Last Updated 29 ಜನವರಿ 2018, 9:37 IST
ಅಕ್ಷರ ಗಾತ್ರ

ಚೇಳೂರು: ‘ನಾನು ಮತದಾರರಿಗೆ ಹಾಗೂ ಪಕ್ಷದ ಹೈಕಮಾಂಡ್‌ಗೆ ಆಸೆ ತೋರಿಸಿ, ಸುಳ್ಳು ಪೊಳ್ಳು ಭರವಸೆಗಳು ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ದುಂಬಾಲು ಬಿದ್ದಿಲ್ಲ’ ಎಂದು ಮಾಜಿ ಶಾಸಕ ಎನ್.ಸಂಪಂಗಿ ಹೇಳಿದರು.

ಪಟ್ಟಣದ ಆಯೋಜಿಸಿದ್ದ ಚೇಳೂರು ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಅಧಿಕಾರ ಅವಧಿಯಲ್ಲಿ ಶಾಶ್ವತ ನೀರಾವರಿ, ಚಿಕ್ಕಬಳ್ಳಾಪುರ ನೂತನ ಜಿಲ್ಲೆ, ಗುಡಿಬಂಡೆ ವಿಧಾನಸಭಾ ಕ್ಷೇತ್ರ ಮಾಡುವುದು ಕುರಿತಂತೆ ಅನೇಕ ಬೇಡಿಕೆಗಳ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದೇನೆ’ ಎಂದು ತಿಳಿಸಿದರು.

‘ಇದೀಗ ಚೇಳೂರನ್ನು ತಾಲ್ಲೂಕು ಮಾಡಲು ನಾನು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇನೆ. ಆದರೆ ಹಾಲಿ ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಚೇಳೂರಿನ ಜನತೆ ಪ್ರಜ್ಞಾವಂತರು, ರಾಜಕೀಯ ಜ್ಞಾನ ಹೊಂದಿದ್ದಾರೆ. ಯಾವ ಪಕ್ಷದಲ್ಲಿ ಯಾವ ನಿಷ್ಠಾವಂತ ನಾಯಕನನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರ ಅವರಿಗೆ ಚೆನ್ನಾಗಿ ತಿಳಿದಿದೆ’ ಎಂದರು.

‘ಮುಂಬರುವ ಚುನಾವಣೆಯಲ್ಲಿ ಉತ್ತಮ ನಾಯಕರನ್ನು ಜನರೇ ನಿರ್ಧರಿಸುತ್ತಾರೆ. ನಾನು ಶಾಸಕನಾಗಿದ್ದ ಸಮಯದಲ್ಲಿ ಮಾಡಿರುವ ಜನಪರ ಕೆಲಸಗಳು ಜನರಿಗೆ ಚೆನ್ನಾಗಿ ತಿಳಿದಿವೆ. ಆದ್ದರಿಂದ ನನಗೆ ಯಾವುದೇ ರೀತಿಯಾದ ಪ್ರಚಾರಗಳು ಬೇಕಾಗಿಲ್ಲ. ನನ್ನ ಶಾಸಕ ಅವಧಿಯಲ್ಲಿ ಮಂಜೂರು ಆಗಿರುವ ಕಾಮಗಾರಿಗಳಿಗೆ ಹಾಲಿ ಶಾಸಕರು ನಾಮಫಲಕಗಳು ಹಾಕಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಗ್ಧ ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡಿ ಮತ ಪಡೆದು ಅಧಿಕಾರಕ್ಕೆ ಏರಿ ಮತದಾರರಿಗೆ ವಂಚನೆ ಮಾಡಿರುವುದು ಸಮಂಜಸವಲ್ಲ. ಓಟಿಗಾಗಿ ನೋಟು ಪಡೆದು ಐದು ವರ್ಷ ನೀರು, ರಸ್ತೆ, ಆರೋಗ್ಯವಿಲ್ಲದೆ ಪರಿತಪಿಸುತ್ತಿರುವ ಜನರ ಕಷ್ಟಗಳನ್ನು ದೇವರೇ ನೋಡಬೇಕಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮಾಚನಪಲ್ಲಿ ಬಿ.ನಾರಾಯಣಸ್ವಾಮಿ ಮಾತನಾಡಿ, ‘ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಶಾಸಕರು ಆರೋಪಿಗಳನ್ನು ಜತೆಗೆ ಕರೆದುಕೊಂಡು ಕಾರ್ಯಕ್ರಮಗಳಿಗೆ ತಿರುಗಾಡುತ್ತಿದ್ದಾರೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಬಣ್ಣದ ಮಾತನಾಡುವ ನಯವಂಚಕರಿಗೆ ಶಾಸಕರು ಆದ್ಯತೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ಕಳೆದ ಐದು ವರ್ಷದ ಅವಧಿಯಲ್ಲಿ ಸೌಲಭ್ಯಗಳಿಲ್ಲದೆ ಜನರು ಸೊರಗುತ್ತಿದ್ದಾರೆ. ಇಂದಿಗೂ ಅನೇಕ ಕುಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅದರ ಕಡೆ ಗಮನ ಸಹ ನೀಡದವರು ಸಮಾಜ ಸೇವೆಯ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಪುಲಗಲ್ ಪಿ.ರಾಧಾಕೃಷ್ಣಾ, ಜಿ.ವಿ.ಕೃಷ್ಣಾರೆಡ್ಡಿ, ಪಾತೂರು ವೆಂಕಟರವಣರೆಡ್ಡಿ, ಎಸ್.ಎ.ಸುಬ್ರಮಣ್ಯಂ, ಜಿ.ವಿ.ಚಿನ್ನರಾಮರೆಡ್ಡಿ, ರಸೂಲ್ ಖಾನ್, ಮೇಸ್ತ್ರಿ ಗಂಗುಲಪ್ಪ, ಟಿ.ಶಿವಣ್ಣ, ಅದಂಕಿ ಶ್ರೀನಿವಾಸ್, ಕೆ.ಎನ್.ಸೋಮಶೇಖರ, ಪೂಲ ಜಯಶೇಖರ, ಪೂಲ ಕೃಷ್ಣಮೂರ್ತಿ, ಚನ್ನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT