ನೀರು ವ್ಯರ್ಥ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

7

ನೀರು ವ್ಯರ್ಥ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

Published:
Updated:
ನೀರು ವ್ಯರ್ಥ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟದ ರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆಯಲ್ಲಿ ವಾರದಲ್ಲಿ ಎರಡು ದಿನ ಸಾವಿರಾರು ಲೀಟರ್ ಜಕ್ಕಲಮಡಗು ಜಲಾಶಯದ ಕುಡಿಯುವ ನೀರು ಕಳೆದ ಒಂದೂವರೆ ವರ್ಷದಿಂದ ಸೋರಿಕೆಯಾಗಿ ವ್ಯರ್ಥವಾಗಿ ಚರಂಡಿಗೆ ಸೇರುವ ಜತೆಗೆ ಈ ದಾರಿಯಲ್ಲಿ ಸಂಚರಿಸುವ ಸವಾರರಿಗೆ ಮತ್ತು ಪಾದಚಾರಿಗಳು ವಿಪರೀತ ಕಿರಿಕಿರಿ ಉಂಟು ಮಾಡುತ್ತಿದೆ.

ಕೆಳಗಿನ ತೋಟ ಪ್ರದೇಶಕ್ಕೆ ಜಕ್ಕಲ ಮಡಗು ಜಲಾಶಯದ ನೀರು ಪೂರೈಸಲು ಹಾಕಿದ್ದ ಮಾರ್ಗವನ್ನು ಕೆಳ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಸ್ಥಳಾಂತರಿಸಿ ಸೇತುವೆ ಒಳಗೆ ಅಳವಡಿಸಲಾಗಿತ್ತು. ಸೇತುವೆಯಲ್ಲಿ ಹಾದು ಹೋಗಿರುವ ನೀರು ಪೂರೈಕೆ ಕೊಳವೆ ಮಾರ್ಗ ಹಾನಿಗೊಂಡು ವರ್ಷಗಳೇ ಉರುಳಿದರೂ ಅದನ್ನು ಸರಿಪಡಿಸಿ ನೀರು ಪೋಲಾಗುವುದನ್ನು ತಡೆಯುವ ಕೆಲಸ ಈವರೆಗೆ ನಡೆಯಲೇ ಇಲ್ಲ.

ನಗರದ ವಿವಿಧೆಡೆ ನೀರಿನ ಹಾಹಾಕಾರ ಇರುವ ಸಂದರ್ಭದಲ್ಲಿ ಕೂಡ ಇಲ್ಲಿ ಸಾವಿರಾರು ಲೀಟರ್‌ ನೀರು ಚರಂಡಿ ಸೇರುತ್ತಲೇ ಇತ್ತು. ಅದು ಇಂದಿಗೂ ಮುಂದುವರಿದೇ ಇದೆ. ಹತ್ತಾರು ಕಿ.ಮೀ ದೂರದಲ್ಲಿರುವ ಜಲಾಶಯದ ನೀರನ್ನು ಶುದ್ಧೀಕರಿಸಿ ನಗರಕ್ಕೆ ತಂದ ನೀರು ವ್ಯರ್ಥವಾಗುವುದು ಕಂಡು ಈ ಭಾಗದ ಜನರು ನಗರಸಭೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಿಪ್ಪೇನಹಳ್ಳಿ ಬಳಿ ಇರುವ ಜಕ್ಕಲಮಡಗು ನೀರು ಸಂಸ್ಕರಣಾ ಘಟಕದಿಂದ ಸರ್ಕಾರಿ ಪದವಿಪೂರ್ವ (ಜೂನಿಯರ್) ಕಾಲೇಜಿನ ಹಿಂಭಾಗದಲ್ಲಿರುವ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತದೆ. ಟ್ಯಾಂಕ್‌ ಮೂಲಕ 20, 21ಮತ್ತು 22ನೇ ವಾರ್ಡ್‌ಗಳಿಗೆ ಪ್ರತಿ ವಾರಕ್ಕೊಮ್ಮೆ ನೀರು ಹರಿಸಲಾಗುತ್ತದೆ. ಹೀಗೆ ನೀರು ಬಿಟ್ಟಾಗಲೆಲ್ಲ ಈ ಸೇತುವೆಯಲ್ಲಿ ನೀರು ಸದಾ ಹನಿಯುತ್ತಲೇ ಇರುತ್ತದೆ. ಆಗೆಲ್ಲ ಜನ ಕಿರಿಕಿರಿ ಅನುಭವಿಸುತ್ತ, ಹಿಡಿಶಾಪ ಹಾಕುತ್ತಲೇ ಈ ದಾರಿಯಲ್ಲಿ ಸಾಗುತ್ತಾರೆ.

ಇನ್ನು ವಾಹನ ಸವಾರರು ಸೋರುವ ನೀರಿನಿಂದ ತಪ್ಪಿಸಿಕೊಳ್ಳಲು ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ಸಂಚಾರ ಮಾರ್ಗದಲ್ಲಿ ನುಗ್ಗುತ್ತಾರೆ. ಇದ

ರಿಂದ ಅಪಘಾತಗಳು ಉಂಟಾದರೆ ಯಾರು ಹೊಣೆ ಎನ್ನುವುದು ಸ್ಥಳೀಯರ ಪ್ರಶ್ನೆ.

ಸುಮಾರು 15 ರಿಂದ 20 ಕುಟುಂಬಗಳಿಗೆ ಸಾಕಗುವಷ್ಟು ನೀರು ಈ ಸೇತುವೆಯಲ್ಲಿ ಪ್ರತಿ ವಾರಕ್ಕೆ ಸೋರಿ ಚರಂಡಿ ಪಾಲಾಗುತ್ತಿದೆ. ಈ ನಿರಂತರ ಪ್ರಕ್ರಿಯೆಯಿಂದ ಸೇತುವೆ ದಿನೇ ದಿನೇ ಶಿಥಿಲ ಸ್ಥಿತಿಗೆ ತಲುಪುತ್ತಿದೆ. ಇಷ್ಟಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಮುಂದಾಗದೇ ಇರುವುದು ಸ್ಥಳೀಯರು ಕೆರಳುವಂತೆ ಮಾಡಿದೆ.

‘ಬೆಸಿಗೆಯಲ್ಲಿ ಜನ ಕುಡಿಯುವ ನೀರಿಗೆ ಬಾಯಿ ಬಾಯಿ ಬಿಡುತ್ತಾರೆ. ಅಷ್ಟಕ್ಕೂ ಕೆಳಗಿನ ತೋಟ ಪ್ರದೇಶಕ್ಕೆ ಈವರೆಗೆ ಸರಿಯಾಗಿ ಕುಡಿಯುವ ನೀರು ಹರಿಸಿಯೇ ಇಲ್ಲ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಸೇತುವೆಯಲ್ಲಿ ಮಳೆ ನೀರಂತೆ ಧೋ ಎಂದು ಸುರಿದು ಪೋಲಾಗುತ್ತಿರುವುದು ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಕಳವಳ ಹುಟ್ಟಿಸದಿರುವುದು ದುರಂತ’ ಎಂದು ಶಾಂತಿನಗರ ನಿವಾಸಿ ಸುಲೇಮಾನ್ ಹೇಳಿದರು.

‘ಜಿಲ್ಲಾಡಳಿತ ಈ ಹಿಂದೆ ನೀರು ಸೋರುವುದನ್ನು ಫೋಟೊ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ ಎಂದೆಲ್ಲ ಪ್ರಚಾರ ಮಾಡಿತ್ತು. ಯಾರಿಗೆ ಕೊಟ್ಟರು ಬಹುಮಾನ? ಜಿಲ್ಲಾ ಕ್ರೀಡಾಂಗಣಕ್ಕೆ ವಿವಿಧ ಕಾರಣಕ್ಕೆ ಎಡತಾಕುವ ಅನೇಕ ಅಧಿಕಾರಿಗಳ ಕಣ್ಣಿಗೆ ಈ ಅಧ್ವಾನ ಗೋಚರಿಸಿದೆ. ಆದರೆ ಈವರೆಗೆ ಯಾರೊಬ್ಬರೂ ನೀರನ್ನು ಸಂರಕ್ಷಿಸುವ ಕಾಳಜಿ ತೋರಿ ತುರ್ತಾಗಿ ಕ್ರಮಕ್ಕೆ ಮುಂದಾಗಿದ್ದು ನೋಡಿಲ್ಲ. ಅಧಿಕಾರಿಗಳ ಜಾಣ ಕುರುಡಿಗೆ ಮರುಗಬೇಕೋ ಅಥವಾ ನಾಚಿಕೆಪಡಬೇಕೋ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಹುತೇಕ ಸವಾರರು ಸೇತುವೆಯಿಂದ ಸುರಿಯುವ ನೀರು ರೊಚ್ಚು ನೀರು ಭಾವಿಸಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಸೇತುವೆ ಕೆಳಗೆ ಹರಸಾಹಸ ಮಾಡುತ್ತಾರೆ. ಇಲ್ಲಿ ಮೊದಲೇ ಪಾದಚಾರಿ ಮಾರ್ಗವಿಲ್ಲ. ಹೀಗಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು ಸೇತುವೆ ಕೆಳಗೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾರೆ. ಇದೇ ಹೊತ್ತಿನಲ್ಲಿ ಏಕಮುಖ ಸಂಚಾರದಲ್ಲೇ ಒಮ್ಮೊಮ್ಮೆ ಎಲ್ಲ ಕಡೆಗಳಿಂದ ಸವಾರರು ನುಗ್ಗುತ್ತಾರೆ. ಇದರಿಂದ ಪಾದಚಾರಿಗಳು ಪ್ರಾಣ ಭಯದಲ್ಲಿ ನಡೆಯುವ ಸ್ಥಿತಿ ಆಗಾಗ ನಿರ್ಮಾಣವಾಗುತ್ತಲೇ ಇರುತ್ತದೆ’ ಎಂದು ಎಚ್‌.ಎಸ್.ಗಾರ್ಡನ್‌ ನಿವಾಸಿ ಗೋವಿಂದರಾಜು ಹೇಳಿದರು.

‘ಇಲ್ಲಿ ನೀರು ಸೋರುವ ಬಗ್ಗೆ ನಗರಸಭೆ, ರೈಲ್ವೆಯವರಿಗೆ ದೂರು ಹೇಳಿ, ಹೇಳಿ ನಮಗೆ ನಾಚಿಕೆ ಬಂದಿದೆ. ಆದರೆ ಅಧಿಕಾರಿಗಳು ಮಾತ್ರ ಸಮಸ್ಯೆ ಅರಿತುಕೊಂಡು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಒಂದೂವರೆ ವರ್ಷವಾದರೂ ಪೋಲಾಗುವ ಕುಡಿಯುವ ನೀರು ತಡೆಯುವ ಚಿಕ್ಕ ಕೆಲಸ ಮಾಡಲು ಆಗುತ್ತಿಲ್ಲ ಎಂದರೆ ನಮ್ಮ ವ್ಯವಸ್ಥೆ ಎಷ್ಟು ಜಡಗಟ್ಟಿದೆ ಊಹಿಸಿ. ಜಿಲ್ಲಾಡಳಿತ ಏನು ಮಾಡುತ್ತಿದೆ. ನೀರಿನ ಬಗ್ಗೆ ಬರೀ ವೇದಿಕೆ ಮೇಲೆ ಭಾಷಣ ಮಾಡಿದರೆ ಸಾಕೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸೇತುವೆಯಲ್ಲಿ ನೀರು ಸೋರಿಕೆಯಾಗುವ ಸಮಸ್ಯೆ ನಗರಸಭೆಯವರು ನಮ್ಮ ಗಮನಕ್ಕೆ ತಂದಿದ್ದಾರೆ. ನಾನು ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿರುವೆ. ಒಂದು ವಾರದ ಒಳಗೆ ಸೇತುವೆಯಲ್ಲಿರುವ ಪೈಪ್‌ಲೈನ್‌ನ ರಿಪೇರಿ ಕಾರ್ಯ ನಡೆಯಲಿದೆ’ ಎಂದು ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ರಾಮರಾವ್‌ ತಿಳಿಸಿದರು.

* * 

ಕುಡಿಯುವ ನೀರು ಚರಂಡಿಗೆ ಹರಿಸಿ, ಆಗಾಗ ವಾರ್ಷಿಕ ಶ್ರಾದ್ಧದಂತೆ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯಾಗಾರ, ಉಪನ್ಯಾಸ ಮಾಡಿಸಿದರೆ ಏನು ಫಲ?

ಅವಿನಾಶ್, ಸಾಮಾಜಿಕ ಹೋರಾಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry