ಯೋಗ್ಯ ಪ್ರತಿನಿಧಿ ಆಯ್ಕೆ ಯುವಕರ ಕೈಯಲ್ಲಿದೆ

7

ಯೋಗ್ಯ ಪ್ರತಿನಿಧಿ ಆಯ್ಕೆ ಯುವಕರ ಕೈಯಲ್ಲಿದೆ

Published:
Updated:
ಯೋಗ್ಯ ಪ್ರತಿನಿಧಿ ಆಯ್ಕೆ ಯುವಕರ ಕೈಯಲ್ಲಿದೆ

ಕಡೂರು: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಪ್ರಜಾವಾಣಿ’ ವೋಟ್ ಮಾಡೋಣ ಬನ್ನಿ-ಯುವ ಅಭಿಯಾನ ಯಶಸ್ವಿಯಾಯಿತು.

ಪ್ರಥಮ ಬಾರಿ ಓಟ್ ಚಲಾಯಿಸಲು ಸಿದ್ಧರಾಗಿರುವ ಮತ್ತು ಒಂದೆರಡು ಪಂಚಾಯಿತಿ ಮಟ್ಟದಲ್ಲಿ ಮತದಾನ ಮಾಡಿರುವವರ ಸಂಖ್ಯೆಯೇ ಹೆಚ್ಚಿತ್ತು. ಪ್ರಜಾಪ್ರಭುತ್ವದ ಮಹತ್ವ, ಮತದಾನದ ಹಕ್ಕು, ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ, ಎಲೆಕ್ಟ್ರಾನಿಕ್ ಮತ ಯಂತ್ರದ ಬಳಕೆ, ನೋಟಾ, ಹಣದಿಂದ ಮತ ಖರೀದಿಸುವಿಕೆ, ಚುನಾವಣೆಯಲ್ಲಿ ಯುವಕರ ಪಾತ್ರ.. ಹೀಗೆ ಹತ್ತು ಹಲವು ವಿಚಾರಗಳು ಅಭಿಯಾನದಲ್ಲಿ ಪ್ರಸ್ತಾಪವಾದರೆ ಚುನಾವಣೆಯಲ್ಲಿ ಬದಲಾವಣೆ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ರಾಜ್ಯಶಾಸ್ತ್ರ, ಗಣಿತ, ಅರ್ಥಶಾಸ್ತ್ರ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಯೋಗೀಶ್ ಪ್ರಸ್ತಾವಿಕವಾಗಿ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಅತ್ಯಂತ ಮಹತ್ವವಾದುದು. ನಮ್ಮ ಒಂದೊಂದು ಮತವೂ ನಮ್ಮನ್ನಾಳುವ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮನ್ನು ಆಳುವವರನ್ನು ನಾವೇ ಅರಿಸುವ ಹಕ್ಕನ್ನು ನಮಗೆ ಪ್ರಜಾಪ್ರಭುತ್ವ ನೀಡಿದೆ’

ಜನರಿಂದ ಆಯ್ಕೆಯಾದವರು ಅವರ ನಿರೀಕ್ಷೆಯನ್ನು ಹುಸಿ ಮಾಡಿದರೆ ಜನರೇ ಅವರನ್ನು ತಿರಸ್ಕರಿಸುವ ಹಕ್ಕೂ ನಮ್ಮದೇ ಆಗಿದೆ. ಪ್ರಜಾಪ್ರಭುತ್ವದ ಚೆಲುವು ಇದು. ಚುನಾವಣೆಯಲ್ಲಿ ಯಾವುದೇ ಅಮಿಷಕ್ಕೊಳಗಾಗದೆ ಸಚ್ಚಾರಿತ್ರ್ಯ ಹೊಂದಿದ ಉಮೇದುವಾರರನ್ನು ಆಯ್ಕೆ ಮಾಡಬೇಕು. ಅಂತಹ ಅತ್ಯಂತ ಮಹತ್ತರ ಜವಾಬ್ದಾರಿಯನ್ನು ಪ್ರಜಾಪ್ರಭುತ್ವ ನಮಗೆ ನೀಡಿದೆ. ಈ ಬಗ್ಗೆ ಜನತೆಯಲ್ಲಿ ಬಹುಮುಖ್ಯವಾಗಿ ಯುವಕರಲ್ಲಿ ಅರಿವು ಮೂಡಿಸುವ ‘ಪ್ರಜಾವಾಣಿ’ಯ ಪ್ರಯತ್ನ ಸ್ತುತ್ಯರ್ಹ’ ಎಂದರು.

ಉಪನ್ಯಾಸಕ ಸೋಮಶೇಖರ್ ಮಾತನಾಡಿ, ‘ಚುನಾವಣೆಯ ಸಮಯದಲ್ಲಿ ಮತದಾನದ ಹಕ್ಕು ಮೊದಲು 21 ವರ್ಷವಿತ್ತು. ಪ್ರಸ್ತುತ ಅದು 18 ವರ್ಷಕ್ಕೆ ಇಳಿದಿದೆ. ದೇಶದಲ್ಲಿ ಶೇ 42ರಷ್ಟು ಇರುವ ಯುವಜನತೆ ತಮ್ಮ ಮತದಾನದ ಹಕ್ಕನ್ನು ಸಮರ್ಥ ಅಭ್ಯರ್ಥಿಗೆ ಚಲಾಯಿಸಿ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಬಹುದು. ವಿಪರ್ಯಾಸವೆಂದರೆ ಇವತ್ತಿಗೂ ಯುವಜನತೆಯಲ್ಲಿ ಅನೇಕರು ಚುನಾವಣಾ ಗುರುತಿನ ಚೀಟಿಯನ್ನು ಮಾಡಿಸಿಯೇ ಇಲ್ಲ. ಇದು ನಿಜಕ್ಕೂ ಅಕ್ಷಮ್ಯ’ಎಂದರು.

‘ಚುನಾವಣೆಯನ್ನು ನಡೆಸುವುದು ಚುನಾವಣಾ ಆಯೋಗ. ಚುನಾವಣೆಯ ಕಟ್ಟುಪಾಡುಗಳನ್ನು ನಿಗದಿಪಡಿಸುವುದು ಅದೇ. ಟಿ.ಎನ್.ಶೇಷನ್ ಅವರು ಮುಖ್ಯ ಚುನಾವಣಾ ಅಯುಕ್ತರಾದ ನಂತರ ಇಂತಹ ಒಂದು ಆಯೋಗವಿದೆ ಎಂಬ ವಿಚಾರ ಪ್ರತಿಯೊಬ್ಬರಿಗೂ ತಿಳಿಯಿತು. ಒಮ್ಮೆ ಆಯ್ಕೆಯಾದರೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಅವಕಾಶವಿಲ್ಲದ ಕಾರಣದಿಂದ ನಮ್ಮ ಮತವನ್ನು ಸ್ವತಃ ವಿವೇಚನೆಯಿಂದ ಸೂಕ್ತ ಅಭ್ಯರ್ಥಿಗೆ ಚಲಾಯಿಸಬೇಕು. ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಮಗೆ ನೀಡಿರುವ ಹಕ್ಕನ್ನು ನಾವೇ ಬಳಕೆ ಮಾಡಿಕೊಳ್ಳದಿರುವುದು ನಮ್ಮ ನಿರ್ಲಕ್ಷ್ಯ ಅಥವಾ ನಿರಾಸಕ್ತಿಯ ದ್ಯೋತಕವಾಗುತ್ತದೆ. ಹಾಗಾಗಿ ನಮಗೆ ಇರುವ ಹಕ್ಕನ್ನು ಬಳಕೆ ಮಾಡಿಕೊಳ್ಳಬೇಕು’ ಎಂದರು.

ಪ್ರಭಾರಿ ಪ್ರಾಚಾರ್ಯ ಪ್ರೊ.ಸಮೀವುಲ್ಲಾ ಮಾತನಾಡಿ, ‘ನಮ್ಮ ಸರ್ಕಾರವನ್ನು ಮುನ್ನಡೆಸುವವರನ್ನು ಆಯ್ಕೆ ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ ಮತದಾನ. ಅದು ಪ್ರಜಾಪ್ರಭುತ್ವ ನಮಗೆ ನೀಡಿರುವ ಪರಮ ಅಧಿಕಾರ. ಅದರ ಬಗ್ಗೆ ಅರಿವು ಮೂಡಿಸುವುದು ಪ್ರಸ್ತುತ ಅನಿವಾರ್ಯ. ‘ಪ್ರಜಾವಾಣಿ’ ಈ ನಿಟ್ಟಿನಲ್ಲಿ ಯುವ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದ ಆಶಯಗಳನ್ನು ಯುವಜನತೆ ಮನಗಾಣಬೇಕು. ಪತ್ರಿಕೆಯ ಆಶಯ ಯಶಸ್ವಿಯಾಗಲಿ’ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ದೊರೇಶ್,ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಕುಮಾರ್ ಇದ್ದರು.

ಬಾಲುಮಚ್ಚೇರಿ, ಕಡೂರು

* * 

ಹಣ ನೀಡಿ ಮತಗಳನ್ನು ಖರೀದಿಸುವ ಪ್ರವೃತ್ತಿ ನಡೆಯುತ್ತಿದ್ದು, ಮತದಾರರೂ ಹಣವಿದ್ದವನಿಗೆ ಮತ ನೀಡುವ ವಿದ್ಯಮಾನ ಸಾಮಾನ್ಯವಾಗಿದೆ. ಈ ರೀತಿ ಆಯ್ಕೆಯಾದರೆ ನಮಗೆ ಸಿಗುವ ಆಡಳಿತ ಎಂಥಹುದು ಎಂಬುದನ್ನು ನಾವು ಯೋಚಿಸಬೇಕಾಗಿದೆ.

ನಾಗರಾಜು,ದ್ವಿತೀಯ ಎಂ.ಕಾಂ.ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry