ದೇಶಕ್ಕೆ ಕಾವಿಧಾರಿಗಳ ಕೊಡುಗೆ ಅಪಾರ

7

ದೇಶಕ್ಕೆ ಕಾವಿಧಾರಿಗಳ ಕೊಡುಗೆ ಅಪಾರ

Published:
Updated:

ಚನ್ನಗಿರಿ: ಭಾರತದ್ದು ಸಂತರ, ಮಹಾಂತರ ಇತಿಹಾಸ. ಸಾವಿರಾರು ವರ್ಷಗಳಿಂದ ಅದ್ಭುತವಾದ ಪರಂಪರೆ ದೇಶಕ್ಕೆ ಇದೆ. ಇಂತಹ ಮಹಾನ್ ದೇಶಕ್ಕೆ ಕಾವಿಬಟ್ಟೆಧಾರಿಗಳ ಕೊಡುಗೆ ಅಪಾರವಾದದ್ದು ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲಾ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ನಡೆದ ಬಸವತತ್ವ ಸಮ್ಮೇಳನ ಹಾಗೂ ವಿಶ್ವಗುರು ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ನೆಲದ ಇತಿಹಾಸ ದಿಕ್ಕು ತಪ್ಪಿದ ಸಂದರ್ಭದಲ್ಲಿ ಅದನ್ನು ಸರಿದಾರಿಗೆ ತರುವ ಮಹತ್ತರ ಕಾರ್ಯವನ್ನು ನಾಡಿನ ಕಾವಿಧಾರಿಗಳು ಮಾಡುತ್ತಾ ಬಂದಿದ್ದಾರೆ. ಜ್ಞಾನವನ್ನು ಯಾರಿಂದಲೂ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ದೇಶದ ಇತಿಹಾಸದ ಬಗ್ಗೆ ನಾವು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಆಡು ಭಾಷೆಯಲ್ಲಿ ವಚನಗಳನ್ನು ರಚಿಸಿ ಹೊಸ ವೈಭವ ತಂದುಕೊಟ್ಟವರು 12 ನೇ ಶತಮಾನದ ಶಿವಶರಣರು. ಈ ನಾಡಿನ ಕನ್ನಡ ಸಾಹಿತ್ಯಕ್ಕೆ ಶಿವಶರಣ ಕೊಡುಗೆ ಅನನ್ಯವಾದದ್ದಾಗಿದೆ. ನಾವೆಲ್ಲಾ ಒಂದಾಗಿ, ಒಟ್ಟಾಗಿ ಹೆಜ್ಜೆಯನ್ನು ಇಡಬೇಕಾಗಿದೆ. ತಮ್ಮತನವನ್ನು ಈ ಸಮಾಜದಲ್ಲಿ ಪ್ರತಿಷ್ಠಾಪನೆ ಮಾಡುವುದು ಅಗತ್ಯವಾಗಿ ಆಗಬೇಕಾಗಿದೆ’ ಎಂದರು.

ಜಮಖಂಡಿ ಬಸವ ಜ್ಞಾನ ಗುರುಕುಲ ಹೊನ್ನೂರಿನ ಈಶ್ವರ ಮಂಟೂರ್ ಮಾತನಾಡಿ, ‘ಮಾನವರು ಮಣ್ಣನ್ನು ಆಳಿದರೆ, ಮಹಾತ್ಮರು ಮನಸ್ಸನ್ನು ಆಳುತ್ತಾರೆ. ಬಸವತತ್ವ ಭಾರತ ದೇಶದ ತತ್ವವಾಗಿದೆ. ಬಸವತತ್ವವೇ ಕನ್ನಡನಾಡಿನ ಜೀವಾಳವಾಗಿದೆ. ಬಸವಣ್ಣ ಅವರು ಒಂದು ವರ್ಗ, ಜಾತಿ, ಜನಾಂಗ ಅಥವಾ ಧರ್ಮಕ್ಕೇ ಸೀಮಿತವಾಗಿಲ್ಲ. ವಿಶ್ವಕ್ಕೆ ಸಂಬಂಧಪಟ್ಟಂತಹ ವಿಶ್ವಗುರು ಬಸವಣ್ಣರಾಗಿ ಕನ್ನಡ ಭಾಷೆಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡಿದರು. ಸಮಾನತೆಯ ಹರಿಕಾರರಾಗಿ ಜಾತಿಯನ್ನು ಹೋಗಲಾಡಿಸಲು ಶ್ರಮಿಸಿದರು. ಭವ್ಯ ಭಾರತ ಬೆಳೆಯಲು ಬುದ್ಧಿವಂತಿಕೆಯಿಂದ ಸಾಧ್ಯವಿಲ್ಲ. ಹೃದಯವಂತಿಕೆಯಿಂದ ಮಾತ್ರ ದೇಶ ಬೆಳೆಯಲು ಸಾಧ್ಯ. ಆದ್ದರಿಂದ ಬಸವಣ್ಣ ಅವರನ್ನು ನಾವು ಮರೆತರೆ ಎಂದಿಗೂ ಉಳಿಗಾಲ ಇರುವುದಿಲ್ಲ’ ಎಂದು ಹೇಳಿದರು.

ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ಈ ನಾಡಿಗೆ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ನಾವೆಲ್ಲಾ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ನಾನು ಎಂದಿಗೂ ಕೂಡ ಗುರುಗಳ ಆಜ್ಞೆಯನ್ನು ಪಾಲಿಸಿಕೊಂಡು ಬಂದಿದ್ದೇನೆ.

ಗುರುಗಳ ಮುಂದೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಒಟ್ಟಾರೆ ಸಮಾನತೆ ಸಿಗದ ಹೊರತು ಈ ದೇಶ ಹಾಗೂ ನಾಡಿನ ಅಭಿವೃದ್ಧಿ ಅಸಾಧ್ಯ’ ಎಂದು ತಿಳಿಸಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ. ‘ವಿರಕ್ತ ಮಠದ ಅನೇಕ ದಶಕಗಳಿಂದ ಬಸವತತ್ವವನ್ನು ಪ್ರಚಾರ ಮಾಡುತ್ತಾ ಬಂದಿದೆ. ಜನರಲ್ಲಿ ಅಧ್ಮಾತ ಜಾಗೃತಿಯನ್ನು ಮೂಡಿಸುವುದು ಮಠದ ಉದ್ದೇಶ. ಜಾತಿ, ಜಾತಿಗಳ ನಡುವೆ ದೊಡ್ಡ ಕಂದಕ ಏರ್ಪಟ್ಟಿದೆ. ಜಾತಿಯ ಸಂಕೋಲೆಯನ್ನು ಕಿತ್ತೊಗೆದು ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದರು.

ಶಾಸಕ ವಡ್ನಾಳ್ ರಾಜಣ್ಣ, ಮಾಜಿ ಶಾಸಕ ಮಹಿಮ ಪಟೇಲ್, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಹಿರೇಕೆರೂರು ಸರ್ವಜ್ಞ ಟ್ರಸ್ಟ್ ಅಧ್ಯಕ್ಷ ಎಸ್.ಎಸ್.ಪಾಟೀಲ್, ಪುರಸಭೆ ಅಧ್ಯಕ್ಷೆ ಶಿವರತ್ನಮ್ಮ, ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕುರ್ಕೆ ಮಠದ ಶಶಿಶೇಖರ ಸಿದ್ಧಬಸವ ಸ್ವಾಮೀಜಿ, ಕೊಡ್ಲಿಪೇಟೆ ಮಠದ ಸದಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ದುಬೈನ ಉದ್ಯಮಿ ಸರ್ವೋತ್ತಮ ಶೆಟ್ಟಿ, ಮುಂಬೈನ ಜಾಕೀರ್ ಅಬ್ದುಲ್ ರಜಾಕ್‌ ಶೇಖ್, ಬೆಂಗಳೂರಿನ ಸಿಂಚನಾ ಎಂಟರ್‌ಪ್ರೆಸ್‌ನ ಎ.ಎಸ್.ದರ್ಶನ್ ವಿಶ್ವಗುರು ಪ್ರಶಸ್ತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry