ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ?

7

ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ?

Published:
Updated:
ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ?

ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ರಸ್ತೆ ಹಾಗೂ ನಿಲುಗಡೆ ಸೌಲಭ್ಯದ ಕೊರತೆಯಿಂದ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚಾರ ದಟ್ಟಣೆಯಾಗುತ್ತಿದೆ. ನಗರ ವ್ಯಾಪ್ತಿಯೊಳಗಿನ ಮುಖ್ಯ ರಸ್ತೆಗಳು ತುಂಬ ಚಿಕ್ಕದಾಗಿವೆ. ಹಬ್ಬ, ಜಾತ್ರೆ, ವಿಶೇಷ ದಿನಗಳಲ್ಲಿ ಬಹುತೇಕ ರಸ್ತೆಗಳ ಬದಿಯಲ್ಲೇ ವಾಹನಗಳು ಕಿಕ್ಕಿರಿದು ಬರುತ್ತವೆ.

ನಗರದ ಯಾವುದೇ ಪ್ರದೇಶದಲ್ಲೂ ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳವನ್ನು ನಿಗದಿ ಪಡಿಸದೇ ಇರುವುರಿಂದ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ತೋಂಟದಾರ್ಯ ಮಠದ ಎದುರಿನಿಂದ ಟಾಂಗಾಕೂಟದವರೆಗೆ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಸರತಿಯಂತೆ ವಾರದಲ್ಲಿ ಮೂರು ದಿನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ವಾಹನ ಸವಾರರು ಇದನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಸ್ಥಳದ ಕೊರತೆಯಿಂದ ಎಲ್ಲಿ ಬೇಕೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಾರೆ.

ನಗರದ ಮಹೇಂದ್ರಕರ್ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಬಸವೇಶ್ವರ ವೃತ್ತ, ತರಕಾರಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಹಳೆ ಜಿಲ್ಲಾಸ್ಪತ್ರೆ, ರೋಟರಿ ವೃತ್ತದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಪ್ರತಿನಿತ್ಯ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ಸಣ್ಣ ಅಪಘಾತಗಳು ಇಲ್ಲಿ ಸಾಮಾನ್ಯವಾಗಿವೆ. ಪ್ರತ್ಯೇಕ ವಾಹನ ನಿಲುಗಡೆಗೆ ಸ್ಥಳ ಇಲ್ಲದಿರುವುದರಿಂದ ಸಂಜೆ ವೇಳೆ ಎಲ್ಲಿ ಬೇಕೆಂದರಲ್ಲಿ ವಾಹನಗಳು ನಿಲ್ಲುವುದರಿಂದ ಈ ಪ್ರದೇಶಗಳು ಜನರು ಮತ್ತು ವಾಹನಗಳಿಂದ ತುಂಬಿರುತ್ತವೆ. ಪಾದಚಾರಿ ಮಾರ್ಗವೂ ಸೇರಿದಂತೆ ಅರ್ಧ ರಸ್ತೆಯನ್ನೇ ವಾಹನ ನಿಲುಗಡೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳೇ ಇಲ್ಲ. ಇಲ್ಲಿನ ಬಹುತೇಕ ರಸ್ತೆಗಳು ಕಿರಿದಾಗಿವೆ. ಜವಳ ನಾಲಾ (ದೊಡ್ಡ ಚರಂಡಿ) ಮೇಲೆ ಸ್ಲ್ಯಾಬ್‌ ಹಾಕಿ ಅದರ ಮೇಲಿನ ಸ್ಥಳದಲ್ಲಿ ಪಾರ್ಕಿಂಗ್‌ಗಾಗಿ ಪ್ರತ್ಯೇಕ ಜಾಗ ನಿಗದಿಪಡಿಸಲಾಗುವುದು ಎಂದು ನಗರಸಭೆ ಕಳೆದ ಎರಡು ವರ್ಷಗಳಿಂದ ಹೇಳುತ್ತಾ ಬರುತ್ತಿದೆ. ಆದರೆ, ಇದು ಇನ್ನೂ ಭರವಸೆಯಾಗಿಯೇ ಉಳಿದಿದೆ. ಇದನ್ನು ಹೊರತುಪಡಿಸಿದರೆ ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಬೇರೆ ಯಾವ ಮಾರ್ಗೋಪಾಯವನ್ನೂ ಸ್ಥಳೀಯ ಆಡಳಿತ ಕಂಡುಕೊಂಡಿಲ್ಲ. ‘ಇತ್ತೀಚೆಗೆ ಪೊಲೀಸ್‌ ಇಲಾಖೆ ವಾಹನ ದಟ್ಟಣೆ ನಿಯಂತ್ರಣಕ್ಕೆ ಶಿಸ್ತು ಕ್ರಮ ಕೈಗೊಂಡಿದೆ. ಈ ರೀತಿ ನಗರಸಭೆ ಕೂಡ ವಾಹನ ನಿಲುಗಡೆಗೆ ಪರಿಹಾರ ಕಂಡುಕೊಳ್ಳಬೇಕು. ನಗರಸಭೆ ಮಾಡಬೇಕಾದ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ’ ಎಂದು ನಗರದ ನಿವಾಸಿಗಳಾದ ನಾಗರಾಜ ಬಾರಕೇರ, ಚಂದ್ರಶೇಖರ ಒತ್ತಾಯಿಸಿದರು.

‘ನಗರದಲ್ಲಿ ಎಲ್ಲಿಯೂ ವಾಹನ ನಿಲುಗಡೆ ಪರಿಕಲ್ಪನೆಯೇ ಇಲ್ಲ. ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ರಾಷ್ಟ್ರೀಕೃತ ಬ್ಯಾಂಕುಗಳ ಎದುರೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿಲ್ಲ. ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವವರು ಅದರ ಕೆಳಗೆ ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಬೇಕು. ವಾಹನ ನಿಲುಗಡೆ ಕಲ್ಪಿಸಬೇಕಾದ ಸ್ಥಳವನ್ನೇ, ಗೋದಾಮು ರೀತಿ ನಿರ್ಮಿಸಿ, ಅದನ್ನು ಅನೇಕರು ಬಾಡಿಗೆಗೆ ನೀಡಿದ್ದಾರೆ. ಇದನ್ನೆಲ್ಲಾ ನಿರ್ವಹಿಸಬೇಕಾದ ನಗರಸಭೆ ಕಣ್ಣುಮುಚ್ಚಿಕೊಂಡು ಕುಳಿತಿದೆ’ ಎಂದು ನಗರದ ನಿವೃತ್ತ ಶಿಕ್ಷಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಾಹನ ನಿಲುಗಡೆ ವಿಚಾರವಾಗಿ ಇತ್ತೀಚೆಗೆ ನಗರದ ಬ್ಯಾಂಕ್‌ ರಸ್ತೆಯಲ್ಲಿ ಸಂಭವಿಸಿದ ಹಲ್ಲೆ ಘಟನೆ ನಂತರ ಎಚ್ಚೆತ್ತುಕೊಂಡಿರುವ ಸಂಚಾರ ಪೊಲೀಸರು, ಸಂಚಾರ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಎಲ್ಲಿ ಬೇಕೆಂದರಲ್ಲಿ ವಾಹನ ನಿಲ್ಲಿಸುವುದು, ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು, ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದಿದ್ದರೆ ದಂಡ ವಿಧಿಸುತ್ತಿದ್ದಾರೆ. ಸಂಚಾರ ನಿಯಮ ಬಿಗಿಗೊಂಡ ಬೆನ್ನಲ್ಲೇ, ಸವಾರರು ಎಚ್ಚೆತ್ತುಕೊಂಡಿದ್ದಾರೆ. ಇದರಿಂದ ವಾಹನಗಳ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ. ಪೊಲೀಸರ ಕ್ರಮವಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

‘ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ನಗರಸಭೆ ವಾಹನ ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸ್ಥಳೀಯ ಆಡಳಿತ ಕಲ್ಪಿಸ

ಬೇಕು. ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ನೆರವನ್ನೂ ಪಡೆದುಕೊಳ್ಳಬೇಕು’ ಎಂದು ನಗರದ ನಿವಾಸಿ ಮಂಜುನಾಥ ಬಳ್ಳಾರಿ ಆಗ್ರಹಿಸಿದರು.

* * 

ಸಾರ್ವಜನಿಕ ವಾಹನ ನಿಲುಗಡೆಗಾಗಿ ನಗರದ 3 ಕಡೆ ಸ್ಥಳ ಗುರುತಿಸಲಾಗಿದೆ. ಇಲ್ಲಿ ಮ್ಯಾಪಿಂಗ್ ಮಾಡಲಾಗುವುದು. ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.

ಕೆ.ಸಂತೋಷಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry