ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ತ್ಯಾಜ್ಯ; ಸೌಂದರ್ಯಕ್ಕೆ ಧಕ್ಕೆ

Last Updated 29 ಜನವರಿ 2018, 10:06 IST
ಅಕ್ಷರ ಗಾತ್ರ

ಹಾಸನ: ನಗರದ ಸುತ್ತ ಮುತ್ತಲಿನ ಖಾಲಿ ಜಾಗ, ರಸ್ತೆ ಬದಿ ಹಾಗೂ ಕೆರೆ ಅಂಗಳದಲ್ಲಿ ಕಟ್ಟಡದ ಅವಶೇಷ ಮತ್ತು ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ನಗರದ ಡೇರಿ ವೃತ್ತದ ಸಮೀಪ ಬಿ.ಎಂ. ರಸ್ತೆಯ ಎರಡು ಬದಿಯಲ್ಲಿ ಕಟ್ಟಡಗಳ ಅವಶೇಷ, ಕೋಳಿ, ಮಾಂಸ ಅಂಗಡಿಗಳ ತ್ಯಾಜ್ಯವನ್ನು ಸುರಿದು ಗಲೀಜು ಮಾಡಲಾಗಿದೆ. ಅಲ್ಲದೇ ಬೇಲೂರಿಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯ ಉದ್ದೂರು ಸಮೀಪ ರಸ್ತೆ ಎರಡು ಬದಿ ಕಸದ ರಾಶಿ ಕಾಣಬಹುದು. ಹುಣಸಿನ ಕೆರೆ ಸಮೀಪವೂ ತ್ಯಾಜ್ಯ ಸುರಿಯುತ್ತಿರುವುದರಿಂದ ಪಕ್ಷಿಗಳಿಗೆ ತೊಂದರೆ ತಪ್ಪಿದಲ್ಲ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ.

ಕಾಮಗಾರಿ ಅರ್ಧಕ್ಕೆ ನಿಂತಿರುವ ನಗರದ ಹಬೀಬ್‌ ಸಾ ಮಿಲ್‌ ರಸ್ತೆ ಅಕ್ಕಪಕ್ಕ ತ್ಯಾಜ್ಯ ಬಿಸಾಡಲಾಗುತ್ತಿದೆ. ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಗೊರೂರು ರಸ್ತೆ ಸಂತೆಪೇಟೆ ಸಮೀಪ ಇದೇ ರೀತಿ ಸುರಿದಿದ್ದ ಕಸದ ರಾಶಿ ತೆರವು ಮಾಡಲು ನಗರಸಭೆ ₹ 1 ಕೋಟಿ ಖರ್ಚು ಮಾಡಬೇಕಾಯಿತು.

‘ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದೆ. ಹಳೆ ಮನೆಗಳನ್ನು ನೆಲಸಮ ಮಾಡಿ, ಹೊಸ ಮನೆ ಅಥವಾ ಕಟ್ಟಡ ನಿರ್ಮಿಸಲಾಗುತ್ತಿದೆ. ಹೀಗೆ ಎಲ್ಲೆಂದರಲ್ಲಿ ಕಟ್ಟಡದ ಅವಶೇಷ ತಂದು ಹಾಕುವುದು ಸರಿಯಲ್ಲ. ನಗರಸಭೆ ಇದನ್ನು ತಪ್ಪಿಸಲು ಮುಂದಾಗಬೇಕು’ ಎಂದು ಬಿ. ಕಾಟಿಹಳ್ಳಿ ನಿವಾಸಿ ಮಂಜುನಾಥ್ ಆಗ್ರಹಿಸಿದರು.

‘ನಗರದ ಸುತ್ತಮುತ್ತಲ ಕೆರೆ ಅಂಗಳದಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಬೇಕು. ಜತೆಗೆ ನಗರದಲ್ಲಿ ಶೇಖರಣೆ ಆಗುವ ಕಸವನ್ನು ಸಂಸ್ಕರಿಸಿ ಮರು ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ಮಾಡಬೇಕು. ಇಲ್ಲವಾದಲ್ಲಿ ನಗರಸಭೆಯೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸರಸ್ವತಿಪುರಂ ನಿವಾಸಿ ರಾಜೇಗೌಡ ಸಲಹೆ ನೀಡಿದರು.

‘ರಸ್ತೆ ಬದಿ ಎಚ್ಚರಿಕೆ ಫಲಕ ಹಾಕಾಲಾಗಿದೆ. ಹಾಗಿದ್ದರೂ ಕಟ್ಟಡ ಅವಶೇಷ ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯ ಸುರಿಯುತ್ತಿದ್ದಾರೆ. ಕೆಲವರಿಗೆ ದಂಡ ಸಹ ವಿಧಿಸಲಾಗಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲೂ ಈ ಬಗ್ಗೆ ನಾಗರಿಕರು ಪ್ರಸ್ತಾಪಿಸಿದ್ದಾರೆ. ಮುಂದಿನ ಬಜೆಟ್ ನಲ್ಲಿ ಘನತ್ಯಾಜ್ಯ ವಿಲೇವಾರಿಗೆ ನೀಡುವ 14ನೇ ಹಣಕಾಸು ಮತ್ತು ಎಸ್ಎಫ್ ಸಿ ಅನುದಾನ ಬಳಸಿಕೊಂಡು ನಗರದ ಹೊರಭಾಗದಲ್ಲಿ ಕಟ್ಟಡ ತ್ಯಾಜ್ಯ ಪುಡಿ ಮಾಡಿ ಅದರಿಂದ ಇಟ್ಟಿಗೆ ಅಥವಾ ಬೇರೆ ವಸ್ತು ತಯಾರಿಸಿ ಉಪಯೋಗಿಸುವ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ’ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್‌ ಹೇಳಿದರು.

* * 

ತ್ಯಾಜ್ಯ ಸುರಿದರೆ ದಂಡ ವಿಧಿಸಲಾಗುವುದು ಎಂದು ಫಲಕ ಅಳವಡಿಸಿದರೂ ರಾತ್ರಿ ವೇಳೆ ಬಂದು ಸುರಿಯಲಾಗುತ್ತಿದೆ
ಎಚ್.ಎಸ್. ಅನಿಲ್ ಕುಮಾರ್
ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT