ಹಳೆಯ ವಿದ್ಯಾರ್ಥಿಗಳಿಗೆ ಮಹೋತ್ಸವ ಜವಾಬ್ದಾರಿ

7

ಹಳೆಯ ವಿದ್ಯಾರ್ಥಿಗಳಿಗೆ ಮಹೋತ್ಸವ ಜವಾಬ್ದಾರಿ

Published:
Updated:
ಹಳೆಯ ವಿದ್ಯಾರ್ಥಿಗಳಿಗೆ ಮಹೋತ್ಸವ ಜವಾಬ್ದಾರಿ

ಶ್ರವಣಬೆಳಗೊಳ: ಅಂಬಿಕಾ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಯಶಸ್ವಿ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅನೇಕರು ಮಾಧ್ಯಮ, ಕೃಷಿ, ವ್ಯಾಪರ, ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಅವರ ಶ್ರದ್ಧೆ. ಹಳೆಯ ವಿದ್ಯಾರ್ಥಿಗಳ ಸಂಘವು ಮಹೋತ್ಸವಕ್ಕೆ ಒಳ್ಳೆಯ ತಂಡ ಒದಗಿಸಿ 17 ಭೋಜನ ಶಾಲೆಗಳ ನಿರ್ವಹಣೆ, ಅತಿಥಿ ಗಣ್ಯರ ಸ್ವಾಗತ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವಿಕೆ, ಗ್ರಾಮದಲ್ಲಿ ಅಗತ್ಯವಾಗಿ ಬೇಕಿರುವುದನ್ನು ಗಮನಿಸಿ ಮಹೋತ್ಸವದ ಯಶಸ್ಸಿಗೆ ಶ್ರಮಿಸಬೇಕು ಎಂದರು.

ಟಿ.ವಿ ಪರದೆ ಮೇಲೆ ನನ್ನ ಊರು, ಗುರು, ಓದಿದ ಶಾಲೆಯ ಪರಿಚಯ ಮಾಡಿಸಿದ್ದು ಸಂತೋಷ ಕೊಟ್ಟಿದೆ. ಪಾಠ ಮಾಡಿದ ಗುರುಗಳನ್ನು ಎಂದಿಗೂ ಮರೆಯಬಾರದು. ದಕ್ಷಿಣ ಕನ್ನಡ ಜಿಲ್ಲೆಗೆ ಹೋದಾಗಲೆಲ್ಲಾ ಪೂರ್ವಾಶ್ರಮದ ಮನೆಗೆ ಭೇಟಿ ಕೊಡದೇ ತಮಗೆ ಅಕ್ಷರಾಭ್ಯಾಸ ಮಾಡಿಸಿದ ಇಗ್ನೇಷಿಯನ್‌ ಡಿಸೋಜಾ ಮತ್ತು ಅವರ ಪತ್ನಿ ಲೂಸಿ ಡಿಸೋಜಾ ಗುರುಗಳನ್ನು ಭೇಟಿ ಮಾಡುತ್ತಿದ್ದನ್ನು ಸ್ವಾಮೀಜಿ ನೆನಪಿಸಿಕೊಂಡರು.

ಈ ಶಾಲೆಯ ಸಂಪೂರ್ಣ ಯಶಸ್ಸು ಗೊಮ್ಮಟವಾಣಿ ಸಂಪಾದಕ ಎಸ್‌.ಎನ್‌.ಅಶೋಕ್‌ ಕುಮಾರ್‌ ಗೆ ಸಲ್ಲಬೇಕು ಎಂದ ಸ್ವಾಮೀಜಿ, ಶಾಲೆಯ ಯಶಸ್ಸಿಗೆ ಕಾರಣರಾದ ದಿವಂಗತ ಪ್ರೇಂಸೇನ್‌ ಹಾಗೂ ಶಾಂತಮ್ಮರವರ ಸೇವೆಯನ್ನು ಸ್ಮರಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಶಾಲೆಯ ಕಂಪ್ಯೂಟರ್‌ ಲ್ಯಾಬ್‌ ಉಪಕರಣಗಳಿಗೆ ₹ 1 ಲಕ್ಷ ಅನುದಾನವನ್ನು ಶಾಸಕರ ನಿಧಿಯಿಂದ ನೀಡಲಾಗುವುದು. ಶಾಲಾ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಸಾಕಮ್ಮ ಹೆಸರಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ₹ 50,000 ಠೇವಣಿ ಇರಿಸಿತು. ಸಂಘದ ವತಿಯಿಂದ ಶಾಲೆಗೆ ಕಂಪ್ಯೂಟರ್‌, ಗಂಟೆ, ಪ್ರೊಜೆಕ್ಟರ್‌, ಮೈಕ್‌ಸೆಟ್, ಶುದ್ಧ ಕುಡಿಯುವ ನೀರಿನ ಉಪಕರಣಗಳ್ನು ಕೊಡುಗೆಯಾಗಿ ನೀಡಲಾಯಿತು.

ಶಾಂತಿಯ ಘಂಟೆ ಬಾರಿಸುವ ಮೂಲಕ ಹಿರಿಯ ಶಿಕ್ಷಕಿ ಶಾಂತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಅಂಬಿಕಾ ಪುಷ್ಪಗುಚ್ಛ ಎಂಬ ಸ್ಮರಣ ಸಂಚಿಕೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು. ಶಾಲೆಯಲ್ಲಿ ಈ ವರೆಗೆ ಸೇವೆ ಸಲ್ಲಿಸಿದ 167 ಶಿಕ್ಷಕರ ಪೈಕಿ 120 ಮಂದಿಯನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್‌ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್‌, ಮುಖ್ಯಶಿಕ್ಷಕ ಡಿ.ಪುಷ್ಪರಾಜ್‌, ವೃಷಭ್‌ದಾಸ್‌, ಪದ್ಮಶ್ರೀ ಇದ್ದರು. ಹಳೆ ವಿದ್ಯಾರ್ಥಿ ವಜ್ರಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನೇಂದ್ರ ನಿರೂಪಿಸಿದರು. ಮೋಹನ್‌ ಬಾಬು, ಕವಿತಾ ರಾಜೇಶ್‌, ಸುನೀಲ್‌ ಕುಂಭೇನಹಳ್ಳಿ, ಕಬ್ಬಾಳು ಯತೀಶ್‌ ಹಾಜರಿದ್ದರು. ಎಸ್‌.ಜಿ.ಲೋಕೇಶ್‌ ನಿರೂಪಿಸಿದರು.

ಮೆರವಣಿಗೆಯಲ್ಲಿ ಚನ್ನಮ್ಮ, ರಾಯಣ್ಣ

ಸಮಾವೇಶದ ಅಂಗವಾಗಿ ಅಂಬಿಕಾ ಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಮೆರವಣಿಗೆ ಗಮನ ಸೆಳೆಯಿತು. ಬೆಳಗ್ಗೆ ವಿಂಧ್ಯಗಿರಿಯ ಮಹಾ ದ್ವಾರದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಕ್ಕಳು ಸರಸ್ಪತಿ, ಶಾರದಾ ದೇವಿ, ಅಕ್ಕಮಹಾದೇವಿ, ಕಿತ್ತೂರು ರಾಣಿ ಚನ್ನಮ್ಮ, ಭುವನೇಶ್ವರಿ, ಸಂಗೊಳ್ಳಿ ರಾಯಣ್ಣ ವೇಷದಲ್ಲಿ ಕಂಗೊಳಿಸಿ ಮೆರವಣಿಗೆ ಮೆರುಗು ಹೆಚ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry