ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಜಿ ಪೆಳಿ’ಯ ಸ್ವಗತ

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ನಾನೊಂದು ಮೈಯೆಲ್ಲಾ ಮುಳ್ಳಿರುವ ಬೇಲಿ ಪೊದೆ ಸಸ್ಯ. ಕನ್ನಡ ನಾಡಿನ ಎಲ್ಲ ಪ್ರದೇಶದಲ್ಲಿ ಕಂಡು ಬಂದರೂ ನನ್ನ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಕಾರಣ ನಾನೊಂದು ಮುಳ್ಳು ಗಿಡವಾಗಿರುವುದು. ನಾನು ಪಾಳುಬಿದ್ದ ಕೋಟೆ, ಊರ ಹೊರವಲಯದ ಹೊಲಗಳ ಅಂಚಿನಲ್ಲಿ, ಹಾದಿ ಬದಿಯಲ್ಲಿ ಅನಾಥನಂತೆ ಬೆಳೆದರೂ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವೆ. ನನ್ನನ್ನು ಗಂಜಿ ಪೆಳಿ, ಸಕಪತ, ಎಗಚಿ, ಉಪ್ಪು ಗೋಜೆ, ಬಿಳಿ ಉಪ್ಪಿ ಗಿಡ ಎಂಬೆಲ್ಲಾ ಹೆಸರಿನಿಂದ ಕರೆಯುತ್ತಾರೆ. ಸಸ್ಯ ವಿಜ್ಞಾನಿಗಳು ನನ್ನನ್ನು ವೈಜ್ಞಾನಿಕವಾಗಿ ಅಜೀಮ ಟೆಟ್ರಾಕ್ಯಾಂತ ಎಂದು ಕರೆದು ಸಾಲ್ವಡೊರೇಸಿ ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ.

ನಾನು ಸುಮಾರು ಮೂರು ಮೀಟರ್‌ ಎತ್ತರವಾಗಿ ಬೆಳೆಯುವೆ. ನನ್ನ ಕಿರುಕೊಂಬೆಗಳು ನಾಲ್ಕು ಕೋನಾಕೃತಿಯಲ್ಲಿವೆ. ಅದರ ಮೇಲೆ ಸೂಕ್ಷ್ಮ ರೋಮಗಳಿವೆ. ಅಂಡಾಕಾರದ ಎಲೆಗಳು ಕಾಂಡದ ಮೇಲೆ ಜೋಡಣೆ ಹೊಂದಿರುತ್ತವೆ. ತುದಿಯಲ್ಲಿ ಸೂಜಿಯಂತಿರುವ ಚೂಪಾದ ಮುಳ್ಳನ್ನು ಹೊಂದಿರುವೆ. ಎಲೆಯ ಕಂಕುಳಲ್ಲಿ ಮಾಸಲು ಬಿಳುಪಿನ ಅತಿ ಸಣ್ಣ ಹೂಗಳು ಅರಳುತ್ತವೆ. ನನ್ನ ಮೈ ಮೇಲೆಲ್ಲಾ ಮುಳ್ಳೊ ಮುಳ್ಳು. ಪ್ರತಿ ಗಿಣ್ಣಿನಲ್ಲಿ ನಾಲ್ಕು ಮುಳ್ಳುಗಳಿದ್ದು ಇವು ಮೂರು ಸೆಂಟಿ ಮೀಟರ್‌ನಷ್ಟು ಉದ್ದವಾಗಿವೆ. ಮುಳ್ಳುಗಳು ನಿಮಗೆ ಏನಾದರೂ ಚುಚ್ಚಿಬಿಟ್ಟರೆ ಅಯ್ಯೋ ಪಾಪ ಜೇನು ಕಚ್ಚಿದ ಅನುಭವವಾಗುತ್ತದೆ. ಎಲೆ-ಕಕ್ಷೆಗಳು ಮತ್ತು ಕವಲೊಡೆಯುವ ತುದಿಯಲ್ಲಿ ಕದಿರು ಗೊಂಚಲುಗಳಲ್ಲಿ ಅತೀ ಚಿಕ್ಕದಾದ ಬಿಳಿ ಹೂವುಗಳು ಹುಟ್ಟಿಕೊಳ್ಳುತ್ತವೆ.

ಈ ಹೂವುಗಳು ಗುಂಪಾಗಿದ್ದು ಏಕಲಿಂಗಿಗಳಾಗಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆ ಆಗಿರುತ್ತವೆ. ಪರಾಗ ಸ್ಪರ್ಶ ಹೊಂದಿದ ಹೆಣ್ಣು ಹೂಗಳು ಹಸಿರಾದ ಕಾಯಾಗಿ ನಂತರ ಮಾಗಿ ಬಿಳುಪಾದ ಗಂಜಿಯಂತಿರುವ ಹಣ್ಣಾಗುತ್ತವೆ. ನೋಡಲು ಗಂಜಿಯಂತಿರುವ ಈ ಹಣ್ಣುಗಳಿಂದ ನನಗೆ ಗಂಜಿ ಪೆಳೆ ಎಂಬುದು ಅನ್ವರ್ಥವಾಗಿ ಬಂದಿದೆ. ಈ ಹಣ್ಣುಗಳು ಮೈಮೇಲೆಲ್ಲಾ ಇದ್ದಾಗ ಮುತ್ತಿನಮಣಿಗಳಂತೆ ಕಾಣುತ್ತವೆ. ಈ ಗಂಜಿ ಹಣ್ಣಿನಲ್ಲಿ ಕರಿದಾಗ 1-2 ಬೀಜಗಳಿವೆ.

ನಾನು ಸಣ್ಣ ಉಪ್ಪಿ ಚಿಟ್ಟೆಗಳ ಕಂಬಳಿಹುಳಿವಿನ ಆಹಾರ ಸಸ್ಯವಾಗಿದ್ದೇನೆ. ನನ್ನ ಎಲೆಗಳ ಮೇಲೆ ಸಣ್ಣ ಉಪ್ಪಿ ಚಿಟ್ಟೆಯು ಮೊಟ್ಟೆ ಇಟ್ಟು ಹೋಗುತ್ತದೆ. ಮೊಟ್ಟೆಯಿಂದ ಹೊರಬಂದ ಕಂಬಳಿಹುಳುಗಳು ನನ್ನ ಚಿಗುರೆಲೆಗಳನ್ನು ತಿಂದು ಕೋಶಾವಸ್ಥೆಗೆ ತಲುಪಿ, ಆ ಕೋಶದಿಂದ ಫ್ರೌಢ ಚಿಟ್ಟೆಯು ಹೊರಬಂದು ಈ ಪ್ರಕೃತಿಯಲ್ಲಿ ಒಂದಾಗುತ್ತದೆ. ಕೆಲ ಕೀಟಗಳು ಶತ್ರುಗಳಿಂದ ತಪ್ಪಿಸಿಕೊಳ್ಳಲು ಛದ್ಮವೇಷಧಾರಿಗಳಾಗಿ ನನ್ನನ್ನು ಅವಲಂಬಿಸಿವೆ. ಇನ್ನೂ ಕೆಲ ಚಿಟ್ಟೆಗಳು ಮಾಗಿದ ನನ್ನ ಹಣ್ಣಿನರಸವನ್ನು ತಮ್ಮ ಹೀರುಗೊಳವೆಯಿಂದ ಹೀರಿ, ಹಿರಿಹಿರಿ ಹಿಗ್ಗುತ್ತವೆ. ಕೆಲ ಚಿಟ್ಟೆಗಳು ಎಲೆಯ ಮೇಲೆ ಆಶ್ರಯ ಪಡೆದು ವಿಶ್ರಾಂತಿ ಪಡೆಯುತ್ತವೆ. ಕೆಲ ಪಕ್ಷಿಗಳು ನನ್ನ ಹಣ್ಣನ್ನು ತಮ್ಮ ಮರಿಗಳಿಗೆ ಆಹಾರವಾಗಿ ನೀಡುವುದಲ್ಲದೇ ತಾವೂ ಭಕ್ಷಿಸುತ್ತವೆ. ನನ್ನ ಹಣ್ಣುಗಳು ಪಕ್ಷಿ ಹೊಟ್ಟೆ ಸೇರಿ ಜೀರ್ಣಕ್ರಿಯೆ ನಡೆದು ಅವು ಹಾಕುವ ಹಿಕ್ಕೆಯ ಜೊತೆಯಲ್ಲಿ ಬೀಜಗಳು ನೆಲ ಸೇರಿ ವರುಣನ ಸಿಂಚನವಾದಾಗ ಭೂತಾಯಿಯ ಒಡಲಿನಿಂದ ಮೊಳಕೆಯೊಡೆದು ನನ್ನ ವಂಶಾಭಿವೃದ್ಧಿ ಆಗುತ್ತದೆ. ನನ್ನ ಮತ್ತು ಪಕ್ಷಿ-ಕೀಟಗಳ ನಂಟು ಯುಗ ಯುಗಗಳಿಂದ ಸಾಗಿ ಬಂದಿದೆ.

ಬೇಲಿ ಸಸ್ಯವಾಗಿ ಔಷಧಿಯ ಗುಣವುಳ್ಳ ನಾನು, ನಿಮಗೆ ಅನೇಕ ರೋಗಗಳಿಗೆ ಔಷಧೋಪಚಾರ ನೀಡುವೆ. ಇಲಿ ಕಡಿತದ ನಂಜನ್ನು ನಿವಾರಿಸಲು, ಸ್ತ್ರೀಯರಿಗೆ ಕಾಡುವ ಅಧಿಕ ರಜಸ್ರಾವ ಕಡಿಮೆ ಮಾಡಲು, ವಿಷ ಸೇವಿಸಿದವರಿಗೆ ವಾಂತಿ ಮಾಡಿಸಲು, ವಾತ ರೋಗ ಹೋಗಲಾಡಿಸಲು, ಅಧಿಕ ಭೇದಿ ವಾಸಿಯಾಗಲು, ಉಗುರು ಸುತ್ತು ನಿವಾರಿಸಲು, ಆಸ್ತಮಾ, ಕೆಮ್ಮು ನಿವಾರಿಸಲು ಅತೀ ಅವಶ್ಯವಿರುವೆ. ಪಶುಗಳಿಗೆ ಆವರಿಸುವ ನರಡಿ (ಗುಲ್ಮರೋಗ) ನಿವಾರಣೆಗಾಗಿ ನನ್ನನ್ನು ಉಪಯೋಗಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬೇಲಿ ಗಿಡವೆಂದು ನನಗೆ ಕೊಡಲಿ ಏಟು ನೀಡಿ ನನ್ನ ಕುಲದವರನ್ನು ಮಾರಣ ಹೋಮ ಮಾಡುತ್ತಿರುವಿರಿ. ನಾನು ಇಷ್ಟೆಲ್ಲಾ ಪಕ್ಷಿ-ಕೀಟ-ಪ್ರಾಣಿಗಳಿಗೆ ಆಹಾರವಾಗಿ ನಿಮಗೆಲ್ಲಾ ಔಷಧಿ ಸಸ್ಯವಾಗಿ, ಗಾಳಿ ನೀಡಿ ಉಪಯೋಗಕಾರಿಯಾಗಿ ನಿಸರ್ಗದಲ್ಲಿ ಒಬ್ಬನಾಗಿರುವೆ. ಆದರೆ ನನ್ನನ್ನು, ನಮ್ಮನ್ನು ಪ್ರಕೃತಿಯಲ್ಲಿ ಹಾಳುಮಾಡುತ್ತಿರುವ ನೀವು ಯಾರಿಗಾಗಿದ್ದೀರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT