ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದ ಕೃಷಿ; ಸಮೃದ್ಧ ಫಲ

ಅಂಡಗಿ ಕರಿಬಸಪ್ಪ ಗೌಡರ ಸಾಧನೆ
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

‘ಎಷ್ಟ್ ಬೇಕಾದ್ರೂ ಕಲಿರಿ, ತಿರ್ಗಾ ಮನೆಗ್ ಬಂದು ಕೃಷಿ ಮಾಡ್ರಿ ಎಂದು ನಮ್ಮ ಮನೆಯ ಎಲ್ಲ ಗಂಡು ಮಕ್ಕಳಿಗೆ ನಾನು ತಾಕೀತು ಮಾಡಿದ್ದೆ. ಉನ್ನತ ಶಿಕ್ಷಣ ಮುಗಿಸಿ ಮನೆಗೆ ಬಂದಿರುವ ದೊಡ್ಡ ಮಗ ಈಗ ದುಡಿಯಲು ಹೊಲಕ್ಕೆ ಹೋಗುತ್ತಾನೆ. ಸ್ವಾವಲಂಬನೆ, ಆತ್ಮವಿಶ್ವಾಸದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿದ್ದರೆ ಅದು ಕೃಷಿಯಿಂದ ಮಾತ್ರ ಸಾಧ್ಯ’ ಎನ್ನುತ್ತ ಕರಿಬಸಪ್ಪ ಗೌಡರು ಮನೆಯ ಪಕ್ಕದಲ್ಲಿದ್ದ ಕುರಿ ದೊಡ್ಡಿಗೆ ಕರೆದೊಯ್ದರು.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಅರೆಬಯಲು ಸೀಮೆಯಂತಿರುವ ಅಂಡಗಿಯಲ್ಲಿ ದೊಡ್ಡ ಜಮೀನ್ದಾರರಾಗಿರುವ ಕರಿಬಸಪ್ಪ ಗೌಡರು ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿ, ಹಲವು ಬಾರಿ ಯಶಸ್ಸು ಕಂಡವರು, ಕೆಲವು ಬಾರಿ ಕೈಸುಟ್ಟುಕೊಂಡವರು. ‘ನನ್ನ ಬ್ಯಾಚಿನಲ್ಲಿ ನಾನೊಬ್ಬನೇ ಎಸ್ಸೆಸ್ಸೆಲ್ಸಿ ಪಾಸಾದಾಗ, ಅಪ್ಪ ಮುಂದೆ ಓದು ಎಂದು ಹುರಿದುಂಬಿಸಿದರು. ಹೆಚ್ಚು ಓದಿಕೊಂಡರೆ ನೌಕರಿ ಮಾಡುವ ಮನಸ್ಸಾಗಬಹುದೆಂಬ ಕಾರಣಕ್ಕೆ ನಾನು ನೇಗಿಲು ಹಿಡಿಯುವುದನ್ನೇ ನೆಚ್ಚಿದೆ. ಹೊಲದಲ್ಲಿ ಕೆಲಸ ಮಾಡಿದ ಅನುಭವವಿಲ್ಲ. ಆದರೂ ಹೊಸತನ್ನು ಮಾಡಬೇಕೆಂಬ ಹುಮ್ಮಸ್ಸು. 1999ರ ಹೊತ್ತಿಗೆ ಕಾಕಡಾ ಮಲ್ಲಿಗೆ ಬೆಳೆಗಾರನಾಗಿ 20 ಜನರಿಗೆ ಉದ್ಯೋಗದಾತನಾದೆ. ಪ್ರತಿದಿನ ಬೆಳಿಗ್ಗೆ ಹೂಗಳನ್ನು ಕೊಯ್ದು ಶಿವಮೊಗ್ಗ ಮಾರುಕಟ್ಟೆಗೆ ಕಳುಹಿಸುತ್ತಿದ್ದೆ. ದಿನಕ್ಕೆ ₹1000 ಗಳಿಕೆಯಾಗುತ್ತಿತ್ತು. ಸತತ ಎಂಟು ವರ್ಷಗಳ ಮಲ್ಲಿಗೆ ಕೃಷಿಗೆ ವಿದಾಯ ಹೇಳಲು ಜಲಕ್ಷಾಮ ಕಾರಣ ವಾಯಿತು’ ಎನ್ನುತ್ತ ಅವರು ದೊಡ್ಡಿಯಲ್ಲಿದ್ದ ಕುರಿಗಳನ್ನು ಲೆಕ್ಕ ಹಾಕಿದರು.

(ಕೊಟ್ಟಿಗೆ ಪಕ್ಕದಲ್ಲಿ ಸಗಣಿ, ಕುರಿಗೊಬ್ಬರದೊಂದಿಗೆ ಸಾವಯವ ಕಷಾಯ ಸೇರಿಸಿ ಮಾಡಿದ ಗೊಬ್ಬರವನ್ನು ಗೌಡರು ತೋರಿಸಿದರು)

‘ಮತ್ತೆ ಹೊಸ ಕೃಷಿಯ ಹುಡುಕಾಟದಲ್ಲಿದ್ದ ನನಗೆ ಕುರಿ ಸಾಕಣೆ ಆಕರ್ಷಕವಾಗಿ ಕಂಡಿತು. ಆರಂಭದಲ್ಲಿ ಆರು ಕುರಿ ಸಾಕಿದೆವು. ಲಾಭ ಖಚಿತವೆಂಬ ಅನುಭವವಾದ ಮೇಲೆ ₹1.60 ಲಕ್ಷ ಖರ್ಚು ಮಾಡಿ 50 ಕುರಿ ತಂದೆವು, ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ, ₹4.40 ಲಕ್ಷ ಲಾಭವಾಯಿತು. ತಮ್ಮ ನಾಗರಾಜ ಗೌಡ ಇದೇ ಲಾಭದಲ್ಲಿ ಬುಲೆಟ್ ಗಾಡಿ ಖರೀದಿಸಿದ. ವರ್ಷಕ್ಕೆ 10 ಲೋಡ್ ಸಿಗುತ್ತಿದ್ದ ಕುರಿಗೊಬ್ಬರವನ್ನು ಅಡಿಕೆ ತೋಟಕ್ಕೆ ಹಾಕಿದೆ. ಅಡಿಕೆ ಮರಗಳು ಸೊಂಪಾಗಿ ಬೆಳೆದು, ದಷ್ಟಪುಷ್ಟವಾದ ಗೊನೆ ಬಿಡಲಾರಂಭಿಸಿದವು. ಮಾಂಸಕ್ಕಾಗಿ ಕುರಿ ಮಾರಾಟ ಮಾಡಲು ಮನಸ್ಸಿಗೆ ನೋವಾಗುತ್ತಿತ್ತು. ಅದಕ್ಕೆ ಕುರಿ ಸಾಕಣೆ ಕಡಿಮೆ ಮಾಡಿದೆ. ಈಗ 14 ಕುರಿಗಳಷ್ಟೇ ಇವೆ’ ಎಂದು ಕುರಿ ಸಾಕಣೆಯ ಯಶೋಗಾಥೆ ಹೇಳುತ್ತ ಗದ್ದೆಯ ಕಡೆಗೆ ನಡೆದರು. ನಾನು ಹಾಗೂ ನಾಗರಾಜ ಗೌಡರು ಅವರ ಹಿಂದೆ ಹೆಜ್ಜೆ ಹಾಕಿದೆವು.

40 ಎಕರೆ ಜಮೀನಿನ ಒಡೆಯರಾಗಿರುವ ಗೌಡರು ಅಡಿಕೆ, ಬಾಳೆ, ಭತ್ತ, ಶುಂಠಿ, ಅರಿಶಿನ, ಗೋವಿನಜೋಳ, ಅನಾನಸ್, ಚಿಕ್ಕು, ಮಾವು ಬೆಳೆಯುತ್ತಾರೆ. ‘ಜವಾರಿ ತಳಿಯ ಅರಿಶಿನವನ್ನು ಸಾವಯವದಲ್ಲಿ ಬೆಳೆದಿದ್ದೇವೆ. ಹೊರ ಜಿಲ್ಲೆಯ ಅನೇಕ ಕೃಷಿಕರು, ವಿಜ್ಞಾನಿಗಳು ನಮ್ಮ ಗದ್ದೆಗೆ ಬಂದು ಬೆಳೆ ನೋಡಿ ಹೋಗುತ್ತಾರೆ. 20 ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತೇವೆ. ಇನ್ನುಳಿದ ಭೂಮಿಯನ್ನು ಸಾವಯವಕ್ಕೆ ಒಳಪಡಿಸುವ ಕನಸು ನನ್ನದು. ಸುಭಾಷ್ ಪಾಳೇಕರರ ಶೂನ್ಯ ಕೃಷಿಯನ್ನು ಅನುಸರಿಸುತ್ತೇವೆ. ಜೊತೆಗೆ ಬೆಳೆಗಳಿಗೆ ರೋಗ ಬಂದಾಗ ಗೋಮೂತ್ರ, ಹುಳಿ ಮಜ್ಜಿಗೆ ಸಿಂಪರಣೆ ಪರಿಣಾಮಕಾರಿ. ಕೆಲವು ರೋಗಗಳಿಗೆ ಲಕ್ಕಿಸೊಪ್ಪು, ಕುಣಗಲ, ಸೀತಾಪೇರಲ, ಕಕ್ಕಿ ಸೊಪ್ಪು, ತುಳಸಿ ಮಿಶ್ರಣದ ಕೃಷಿ ಕಷಾಯ ರಾಮಬಾಣ, ಇದರಂತೆ ಬೆಳ್ಳುಳ್ಳಿ ಕಷಾಯ, ಬಾಂದ್ರಿ ತಂಬಾಕಿನ ಕಷಾಯ ಸಹ’ ಎಂದು ಅವರು ವಿವರಿಸಿದರು.

(ಅರಿಶಿನದ ಹೊಲದಲ್ಲಿ ನಾಗರಾಜ ಗೌಡ ಮತ್ತು ಕರಿಬಸಪ್ಪ ಗೌಡ ಸಹೋದರರು)

‘ಸುಗಂಧರಾಜ, ಗುಲಾಬಿ ಕೃಷಿ ಮಾತ್ರ ನನ್ನ ಕೈ ಹಿಡಿಯಲಿಲ್ಲ. ಇವೆರಡು ಬೆಳೆ ಬೆಳೆದು ನಷ್ಟ ಅನುಭವಿಸಿದ್ದು ಬಿಟ್ಟರೆ, ಕೃಷಿ ನನಗೆ ನಷ್ಟವಾಗಿ ಕಾಣಲಿಲ್ಲ. ತಮ್ಮ ನಾಗರಾಜ ಉದ್ಯೋಗ ಮಾಡುವ ಉತ್ಸಾಹದಲ್ಲಿ ಮನೆ ಸಮೀಪ ಅಕ್ಕಿ ಗಿರಣಿ ಆರಂಭಿಸಿದ. ಅದಕ್ಕೆ ಮಾಡಿದ ಸಾಲವನ್ನು ನಾವು ಕೃಷಿ ಲಾಭದಿಂದಲೇ ತೀರಿಸಿದೆವು. ಆಗಲೇ ಅಂದುಕೊಂಡೆ, ಎಂದಿದ್ದರೂ ನಮಗೆ ವ್ಯವಸಾಯ ಪ್ರಥಮ, ವ್ಯಾಪಾರ ಮಧ್ಯಮ ಎನ್ನುವ ಸತ್ಯವನ್ನು. ಸಣ್ಣ ಮಗ ಕಲಿತ ಮೇಲೆ ಉದ್ಯೋಗ ಮಾಡಲು ಬೆಂಗಳೂರಿಗೆ ಹೊರಟಿದ್ದ. ಅಲ್ಲಿ ಕೊಡುವ ಸಂಬಳವನ್ನು ನಾನು ಇಲ್ಲಿಯೇ ಕೊಡುತ್ತೇನೆ ಎಂದು ಮನೆಯಲ್ಲಿ ಉಳಿಸಿಕೊಂಡಿದ್ದೇನೆ. ಪದವಿ ಪೂರೈಸಿದ ಮೇಲೆ ಮನೆಗೆ ಬರುವಂತೆ ತಮ್ಮನ ಮಗನಿಗೂ ತಿಳಿಸಿದ್ದೇನೆ. ಕೃಷಿಯೇ ನಮಗೆ ನಿತ್ಯ ಅನ್ನ ನೀಡುವ ಬದುಕು’ ಎಂದ ಗೌಡರು ಬೆಟ್ಟದೆಡೆಗೆ ಕರೆದೊಯ್ದರು.

ಅಲ್ಲಿ ಅವರು ಒಂದು ಸಾವಿರ ಸಾಗವಾನಿ, ಮೂರು ಸಾವಿರ ಸಿಲ್ವರ್ ಓಕ್ ಸಸಿಗಳನ್ನು ಬೆಳೆದಿದ್ದಾರೆ. ಒಂದು ದಶಕದಿಂದ ನಿರಂತರ ನೀರಿನ ಬರ ಅನುಭವಿಸುತ್ತಿರುವ ಅವರು ತೋಟ, ಜಮೀನಿನ ಸುತ್ತ ನೀರಿಂಗಿಸುವ ಮಾದರಿ ಗಳನ್ನು ರಚಿಸಿದ್ದಾರೆ. ಗೌಡರ ಕೃಷಿ ಸಾಧನೆಗೆ ಶ್ರೇಷ್ಠ ಕೃಷಿಕ, ಸಾವಯವ ಕೃಷಿಕ ಪ್ರಶಸ್ತಿಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT