ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಬ್ಬ ವಿಶಿಷ್ಟ ಕಾವಲುಗಾರ

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಒಂದೇ ಸಮನೆ ಗ್ರೂರ್... ಗ್ರೂರ್... ಎನ್ನುವ ಶಬ್ದ ಹೊರಡಿಸುವ ಇದು 15 ಎಕರೆ ತೋಟಕ್ಕೆ ಹುಳ, ಹುಪ್ಪಟೆ, ಕಳ್ಳಕಾಕರು ಬಾರದಂತೆ ನೋಡಿಕೊಳ್ಳುವ ಕಾವಲುಗಾರ. ಈ ಕಾವಲುಗಾರನನ್ನು ಕಂಡರೆ ಪುಟ್ಟ ಹುಳಗಳಿಗೆ ಮಾತ್ರವಲ್ಲದೆ ದೊಡ್ಡ ಹಾವುಗಳಿಗೂ ನಡುಕ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದ ರೈತ ವೆಂಕಟೇಶ್ ಎಂಬುವವರ ತೋಟದಲ್ಲಿರುವ ಈ ಕಾವಲುಗಾರ ಒಂದು ಉಷ್ಟ್ರಪಕ್ಷಿ! ಅದು ತೋಟದಲ್ಲಿ ಬರುವ ಹಾವು, ಚೇಳು, ಹುಳುಗಳನ್ನು ತಿಂದು ಹಾಕುತ್ತಿದೆ.

ನಾಲ್ಕೈದು ವರ್ಷಗಳ ಹಿಂದೆ ತೋಟದಲ್ಲಿ ಹಾವುಗಳ ಕಾಟ ಹೆಚ್ಚಾಗಿತ್ತು, ಮನೆಯಲ್ಲಿ ಸಾಕಿದ ನಾಯಿಗಳಿಗೆ ಕಚ್ಚಿದ್ದರಿಂದ ಅವುಗಳು ಸಾವನ್ನಪ್ಪಿದ್ದವು, ಅದಲ್ಲದೆ ಕೆಲಸ ಮಾಡುವವರಿಗೂ ಹಾವುಗಳು ಕಚ್ಚಿದ್ದವು. ಒಮ್ಮೆ ತಮ್ಮ ಗುರು ಕನ್ನೇಶ್ವರ ಮಲ್ಲಪ್ಪ ಸ್ವಾಮೀಜಿ ಅವರ ಬಳಿ ಈ ರೈತ ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ತಮ್ಮಲ್ಲಿದ್ದ ಉಷ್ಟ್ರ ಪಕ್ಷಿಯನ್ನು ನೀಡಿ, ಇದನ್ನು ಸಾಕು ಎಂದು ಹೇಳಿದರು. ಮೊದ ಮೊದಲು ಇದನ್ನು ಸಾಕುವುದು ಕಷ್ಟವಾದರೂ ಹಾಗೇ ತೋಟದಲ್ಲಿ ಸ್ವೇಚ್ಛವಾಗಿ ಓಡಾಡಿಕೊಂಡು ಇರಲಿ ಎಂದು ಬಿಟ್ಟರು. ಕಾಲಕ್ರಮೇಣ ಈ ಪಕ್ಷಿ ತೋಟಕ್ಕೆ ಹೊಂದಿಕೊಂಡು ಸುಮಾರು 4 ವರ್ಷಗಳಿಂದ ಅಲ್ಲಿಯೇ ಉಳಿದಿದೆ.

‘ನಮ್ಮ ತೋಟದಲ್ಲಿ ಅಡಿಕೆ, ಬಾಳೆ, ತೆಂಗು, ಸಪೋಟ ಗಿಡಗಳಿವೆ. ಸೇವಂತಿ, ಚೆಂಡು ಹೂಗಳನ್ನು ಬೆಳೆಯುತ್ತಿದ್ದೇವೆ. ನಾಗರ, ಹಸಿರು, ಕೊಳಕುಮಂಡಲ, ಕುಚ್ಚಿ ಹಾವು, ಕೆಟ್ಟಹುಳು ಹೀಗೆ ಹಲವಾರು ಹಾವುಗಳ ಕಾಟ ನಮ್ಮ ತೋಟದಲ್ಲಿ ಹೆಚ್ಚಾಗಿತ್ತು. ಇದರಿಂದ ತೋಟಕ್ಕೆ ಕೆಲಸಗಾರರು ಬರಲು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ಮನೆಯವರು ಸಹ ಇಲ್ಲಿ ವಾಸಿಸಲು ಭಯಪಡುವ ಸಂದರ್ಭದಲ್ಲಿ ಈ ಉಷ್ಟ್ರ ಪಕ್ಷಿ ಆಪದ್ಭಾಂದವನಾಗಿ ಬಂತು. ಇಂದಿಗೂ ಯಾವುದೇ ಅಪಾಯವಿಲ್ಲದೆ ನಾವು ಜೀವಿಸುತ್ತಿದ್ದೇವೆ. ಅಲ್ಲದೆ ಕಳ್ಳರ ಕಾಟ ಸಹ ತಪ್ಪಿದೆ’ ಎಂದು ವೆಂಕಟೇಶ್‌ ಅವರ ಸಹೋದರ ರಾಮದಾಸ್‌ ಹೇಳುತ್ತಾರೆ.

ತೋಟಕ್ಕೆ ಯಾರೇ ಹೊಸಬರು ಬಂದರೂ ಅವರನ್ನು ಪರೀಕ್ಷಿಸುತ್ತದೆ, ಮೂಸಿ ಅವರ ಗುರುತು ಹಿಡಿಯುವ ಗುಣವನ್ನು ಇದು ಬೆಳೆಸಿಕೊಂಡಿದೆ. ಹೊಸಬರು ಎಂದಾಕ್ಷಣ ಅವರ ಮೇಲೆ ಎರಗುತ್ತದೆ. ತೋಟದಿಂದ ಹೊರ ಹೋಗುವವರಿಗೆ ಗುಟುರು ಹಾಕುತ್ತದೆ. ಮಾಲೀಕರ ಜೊತೆಯಲ್ಲಿ ಬಂದರೆ ಸುಮ್ಮನೆ ಇರುವ ಈ ಪಕ್ಷಿ, ಬೇರೆ ಸಂದರ್ಭದಲ್ಲಿ ಒಬ್ಬರೇ ಬಂದವರನ್ನು ಕುಕ್ಕಿದ್ದು ಉಂಟು.

ಸ್ವೇಚ್ಛವಾಗಿ ತೋಟದ ಎಲ್ಲಾ ಕಡೆಗಳಲ್ಲಿ ಓಡಾಡಿ ರಕ್ಷಣೆಯನ್ನು ನೀಡುತ್ತಿರುವ ಈ ಪಕ್ಷಿಯೂ ಅಲ್ಲಿಯೇ ಸಿಗುವ ಹುಳು, ಹುಪ್ಪಟೆಗಳನ್ನು ತಿಂದು ಬದುಕುತ್ತಿದೆ. ಮಾಲೀಕರು ಕೊಡುವ ಮುದ್ದೆ, ಅನ್ನ, ರೊಟ್ಟಿಯನ್ನೂ ತಿನ್ನುತ್ತಿದೆ.

ಪಕ್ಷಿಯ ಬಗ್ಗೆ: ಭೂಮಿಯ ಮೇಲೆ ಬದುಕಿರುವ ಅತಿ ದೊಡ್ಡ ಪಕ್ಷಿ ಎನಿಸಿದ ಇದಕ್ಕೆ ಹಾರಲು ಆಗದು. ಆದರೆ ಬಲು ವೇಗವಾಗಿ ಓಡಬಲ್ಲುದು. ಆಫ್ರಿಕಾ ದೇಶಗಳ ಮರಳು ಕಾಡು ಇದರ ಪ್ರಧಾನ ನೆಲೆ. ಇದರ ರೆಕ್ಕೆಗಳಲ್ಲಿ ಹಲವು ಟೊಳ್ಳುಕಾಂಡದ ದಪ್ಪಗರಿಗಳಿವೆ. ತಲೆ ಸಣ್ಣದು. ಕತ್ತು ಉದ್ದ. ಎರಡರ ಮೇಲೂ ಗರಿಗಳ ಹೊದಿಕೆಯಿಲ್ಲ. ಅಗಲವಾದ ಚಪ್ಪಟೆಯ ಕೊಕ್ಕು ಇದಕ್ಕಿದೆ. ಕಾಲುಗಳು ಉದ್ದವಾಗಿದ್ದು ಬಲವಾಗಿವೆ. ಪ್ರತಿ ಕಾಲಿನಲ್ಲಿ ಎರಡು ಬೆರಳುಗಳು ಮಾತ್ರ ಇವೆ. ಕೆಳಭಾಗದಲ್ಲಿ ಮೆತ್ತೆ ಇದೆ. ಒಂದು ಕಾಲುಬೆರಳು ಮತ್ತೊಂದಕ್ಕಿಂತ ಉದ್ದವಾಗಿದೆ. ಇವನ್ನು ಸರ್ವಭಕ್ಷಕಗಳೆಂದು ಕರೆದರೂ ತಿನ್ನುವುದು ಸಾಮಾನ್ಯವಾಗಿ ಗಿಡಗಂಟೆಗಳನ್ನೇ.

ಸಾಮಾನ್ಯವಾಗಿ ಒಂದು ಹೆಣ್ಣು ಹಕ್ಕಿ ಒಂದು ಸಲಕ್ಕೆ ಒಂದು ಮೊಟ್ಟೆ ಇಡುತ್ತದೆ. ಇದನ್ನು ಗಂಡು ಮೊದಲೇ ತೋಡಿದ ಬಿಲಗಳಲ್ಲಿ ಅಡಗಿಸುತ್ತದೆ. ಮೊಟ್ಟೆಗಳಿಗೆ ಕಾವುಕೊಟ್ಟು ಕಾಪಾಡುವ ಕೆಲಸವನ್ನು ಎರಡೂ ಹಕ್ಕಿಗಳು ನಿರ್ವಹಿಸುತ್ತವೆ. ಮರಿ ಹುಟ್ಟಿದಾಗಲೇ ಅದಕ್ಕೆ ಗರಿಗಳ ಹೊದಿಕೆ ಇರುತ್ತದೆ. ಅದು ಸ್ವತಂತ್ರವಾಗಿ ತಿರುಗಾಡಿ ತಾಯಿ–ತಂದೆಗಳ ಸಹಾಯವಿಲ್ಲದೆ ಆಹಾರವನ್ನು ಹುಡುಕಿಕೊಳ್ಳಬಲ್ಲುದು. ಈಗೀಗ ನಮ್ಮ ದೇಶದಲ್ಲೂ ಈ ಪಕ್ಷಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದನ್ನು ಸಾಕುವ ಪ್ರವೃತ್ತಿಯೂ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT