ಹೇಗಿರುವೆ ಫಲ್ಗುಣಿಯಮ್ಮ?

7

ಹೇಗಿರುವೆ ಫಲ್ಗುಣಿಯಮ್ಮ?

Published:
Updated:
ಹೇಗಿರುವೆ ಫಲ್ಗುಣಿಯಮ್ಮ?

ಟಿ.ಎನ್‌. ಸೀತಾರಾಮ್‌ ಅವರ ‘ಮುಕ್ತ’ ಧಾರಾವಾಹಿಯ ಕೆಲ ಸಂಚಿಕೆಗಳಲ್ಲಿ ಫಲ್ಗುಣಿ ನದಿಯ ಹರಿವಿದೆ. ಮಲ್ಲಿಕಾರ್ಜುನ ಸ್ವಾಮಿ ಕುಟುಂಬದ ಜಮೀನು ಫಲ್ಗುಣಿ ನದಿ ದಂಡೆ ಮೇಲಿರುವ ಉಲ್ಲೇಖ ಧಾರಾವಾಹಿಯಲ್ಲಿದೆ. ಧಾರಾವಾಹಿಯ ಕತೆಯೊಂದನ್ನು ವಿಸ್ತರಿಸುವಾಗ ನದಿಯ ಉಲ್ಲೇಖವೇನೂ ಬೇಕಾಗುವುದಿಲ್ಲ. ಆದರೆ ‘ಮುಕ್ತ’ದಲ್ಲಿ ಕತೆಯ ಓಘಕ್ಕೆ ಫಲ್ಗುಣಿ ಆಪ್ತತೆಯೊಂದನ್ನು ತಂದುಕೊಡುತ್ತದೆ. ಹೀಗೆ ನದಿಯ ಪ್ರಸ್ತಾಪವೇ ಊರಿನ ನೆಮ್ಮದಿಗೆ ನದಿ ಎಷ್ಟೊಂದು ಮುಖ್ಯ ಎನ್ನುವುದನ್ನು ಬಿಂಬಿಸಿದೆ.

ಪಶ್ಚಿಮ ಘಟ್ಟದಿಂದ ಧುಮುಕುವ ಹತ್ತಾರು ನದಿಗಳು ಕರಾವಳಿಯಲ್ಲಿ ಅರಬ್ಬಿ ಸಮುದ್ರ ಸೇರುವ ಧಾವಂತದಲ್ಲಿ ಹರಿಯುತ್ತವೆ. ಫಲ್ಗುಣಿ ನದಿಯೂ ಕುದುರೆಮುಖದಲ್ಲಿ ಹುಟ್ಟಿ ಸಣ್ಣದೊಂದು ಪ್ರಯಾಣದೊಂದಿಗೆ ನೇತ್ರಾವತಿಯ ಒಡಗೂಡಿ ಸಮುದ್ರ ಸೇರುತ್ತಾಳೆ. ಹೆಚ್ಚೇನೂ ಪ್ರಸಿದ್ಧಿಗೆ ಬಾರದೇ ಚೆಂದಾಗಿ ಇದ್ದ ನದಿ ಕಳೆದ ವರ್ಷ ಕರಾವಳಿಯಲ್ಲಿ ಭಾರೀ ಸುದ್ದಿ ಮಾಡಿತು. ಬಜಪೆ ಬಳಿಯ ಮರವೂರು ಎಂಬಲ್ಲಿ ಕಿಂಡಿ ಅಣೆಕಟ್ಟಿನ ಬಳಿ ಸತ್ತ ರಾಶಿ ರಾಶಿ ಮೀನುಗಳು ಜಮೆಯಾಗಲಾರಂಭಿಸಿದವು. ಮೀನುಗಾರರು ದೋಣಿಗೆ ಮೀನು ತುಂಬಿ ತುಂಬಿ ದಡಕ್ಕೆ ರಾಶಿ ಹಾಕಲಾರಂಭಿಸಿದರು. ದೊಡ್ಡ ದೊಡ್ಡ ಟಿಪ್ಪರ್‌ ಲಾರಿಗಳನ್ನು ತಂದು ಸತ್ತ ಮೀನುಗಳನ್ನು ಕೊಂಡೊಯ್ದು ತ್ಯಾಜ್ಯದ ಗುಂಡಿಗೆ ಸುರಿಯಲಾಯಿತು. ನದಿ ಮಲಿನಗೊಳ್ಳುತ್ತಿರುವುದಾಗಿ ಅಲ್ಲೊಂದು ಇಲ್ಲೊಂದು ಧ್ವನಿ ಕೇಳುತ್ತಿದ್ದರೂ, ಪರಿಸ್ಥಿತಿ ಗಂಭೀರಕ್ಕೆ ತಿರುಗಿದೆ ಎಂಬುದನ್ನು ಜನರಿಗೆ ತಿಳಿಸಬೇಕಾದರೆ ಲೋಡುಗಟ್ಟಲೆ ಮೀನುಗಳು ಸಾಯಬೇಕಾಯಿತು.

ಆಗ ಸ್ಥಳೀಯರು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಲು ಶುರು ಮಾಡಿದರು. ‘ಜನರು ಸುಮಾರು ಮೂರ್ನಾಲ್ಕು ತಿಂಗಳು ಪ್ರತಿಭಟನೆ ನಡೆಸಿ, ಮನವಿ, ಆಗ್ರಹಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಇದರ ಪರಿಣಾಮವಾಗಿ ಕಳೆದ ವರ್ಷ ಈ ನದಿಯ ಮಾಲಿನ್ಯ ಅಧ್ಯಯನಕ್ಕಾಗಿ ಸಮಿತಿಯನ್ನು ರಚಿಸಲಾಯಿತು. ಅಷ್ಟರಲ್ಲಿ ಮಳೆಗಾಲ ಬಂದದ್ದರಿಂದ ನದಿಯ ಕೊಳೆಯನ್ನು ಮಳೆಯೇ ತೊಳೆದ ಹಾಗಾಗಿ ಸಮಿತಿ ಮೌನವಾಗಿಬಿಟ್ಟಿತು’ ಎನ್ನುವ ಜೋಕಟ್ಟೆ 62ನೇ ತೋಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೆಸಿಲ್ಲ ಮೊಂತೆರೊ ನದಿಯನ್ನು ಅಪಾರವಾಗಿ ಪ್ರೀತಿಸುವವರು.

(ನದಿಗೆ ಸೇರುತ್ತಿರುವ ತ್ಯಾಜ್ಯ)

ಕಳೆದ ವರ್ಷ ಮರೆತ ಸಮಸ್ಯೆ ಇದೀಗ ಮತ್ತೆ ಹೆಡೆಯೆತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದವೇ ಚುನಾವಣಾ ವಿಷಯವಲ್ಲ. ನಾಗರಿಕ ಸಮಸ್ಯೆಗಳೂ ಚುನಾವಣೆಯನ್ನು ನಿರ್ಧರಿಸಬೇಕು ಎಂಬುದು ಈ ನದಿ ದಂಡೆ ಮೇಲೆ ವಾಸಿಸುವ ಸಂತ್ರಸ್ತ ನಾಗರಿಕರ ಆಗ್ರಹ. ಕೆಂಜಾರು, ಪಡುಕೋಡಿ, ಬಂಗ್ರಕೂಳೂರು, ಮೇಲುಕೊಪ್ಪಲು, ಕುಂಜತ್‌ಬೈಲ್‌, ಮರಕಡ ಹೀಗೆ ಹತ್ತಾರು ಗ್ರಾಮಗಳ ಜನತೆಯ ಧ್ವನಿಯಿದು. ಹಾಗಾಗಿ ಮತ್ತೆ ಶುರುವಾಗಿದೆ ನದಿ ಉಳಿಸಿ ಅಭಿಯಾನ.

‘ನದಿ ದಂಡೆಯ ಮೇಲೆ ಮನೆಯಿದ್ದರೂ, ಎರಡೇ ಅಡಿ ಆಳದಲ್ಲಿ ನೀರು ಸಿಗುವಂತಿದ್ದರೂ ಇಲ್ಲಿನ ಗ್ರಾಮಸ್ಥರು ಆ ನೀರನ್ನು ಕುಡಿಯುವಂತಿಲ್ಲ. ಮಹಾನಗರ ಪಾಲಿಕೆ ಕೊಡುವ ನೀರಿಗೇ ಕಾಯಬೇಕು. ಈ ನದಿಯಲ್ಲಿ ಕಾಲಿಳಿಬಿಟ್ಟು ಕುಳಿತು ಕೊಳ್ಳುವಂತಿಲ್ಲ. ಮರುವಾಯಿ ಮೀನುಗಳನ್ನು ಹೆಕ್ಕಿ ಅಡುಗೆ ಮಾಡುವಂತಿಲ್ಲ. ಕಾಲುಗಳು ಮೈ ಕೈ ತುರಿಕೆ ಶುರು ಆಗುತ್ತದೆ. ಗ್ರಾಮಸಭೆಯಲ್ಲಿ ಎಷ್ಟೇ ಚರ್ಚೆಗಳಾದರೂ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎನ್ನುತ್ತಾ ಪ್ರೆಸಿಲ್ಲಾ ಬೇಸರಿಸಿಕೊಳ್ಳುತ್ತಾರೆ.

ಮರುವಾಯಿ ಮೀನುಗಳು ವಿಷಕಾರಿ ಆಗಿರುವುದರಿಂದ ಮಾರಾಟ ಮಾಡುವುದೂ ಇಲ್ಲ ಎನ್ನುವ ಮೀನುಗಾರ ನಿತಿನ್‌ ಫೆರಾವೊ ಇದೀಗ ಇತರ ಉದ್ಯೋಗದತ್ತ ಮುಖ ಮಾಡಿದ್ದಾರೆ. ಊರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ರವಿ ಫೆರಾವೊ ವಿವರಿಸುತ್ತಾರೆ.

ಸಾವಿರಾರು ಕೃಷಿಕರಿಗೆ, ನಾಗರಿಕರಿಗೆ ನೀರುಣಿಸುತ್ತ, ಸುಗ್ಗಿ ಬೆಳೆಯವರೆಗೂ ನೀರಾವರಿಗೆ ಆಧಾರವಾಗುತ್ತಾ ಕುದುರೆ ಮುಖದಿಂದ ಬಜಪೆಯವರೆಗೆ ಫಲ್ಗುಣಿಯಮ್ಮ ನಿರಾಳವಾಗಿ ಹರಿಯುತ್ತಾಳೆ. ಆದರೆ ನಗರ ಪ್ರವೇಶಿಸುತ್ತಲೇ ಹರಿವು ದುಸ್ತರವಾಗಿಬಿಡುತ್ತದೆ. ಬಜಪೆಯಿಂದ ಮಂಗಳೂರಿನ ಸುಲ್ತಾನ್‌ ಬತ್ತೇರಿವರೆಗೆ ತ್ಯಾಜ್ಯದ ಹಳ್ಳಗಳು ನದಿಯನ್ನು ಸೇರುತ್ತಲೇ ಇವೆ. ಸಾಲು ಸಾಲು ಕೈಗಾರಿಕೆಗಳು, ಅಲ್ಲಿ ಕೆಲಸ ಮಾಡುವವರಿಗಾಗಿ ನಿರ್ಮಾಣವಾದ ಬೃಹತ್‌ ಜನವಸತಿಗಳು ನದಿಯನ್ನು ಅವಲಂಬಿಸಿದ್ದು ಕುಡಿಯುವ ನೀರಿಗಾಗಿ ಅಲ್ಲ. ತ್ಯಾಜ್ಯ ಹರಿಬಿಡಲು.

‘ಎಸ್‌ಇಝಡ್‌, ಎಂಆರ್‌ಪಿಎಲ್‌, ಅದಾನಿ ವಿಲ್ಮಾರ್‌, ರುಚಿ ಗೋಲ್ಡ್‌, ಟೋಟಲ್‌ ಗ್ಯಾಸ್‌ ಹೀಗೆ ನೂರಾರು ಕೈಗಾರಿಕೆಗಳು ಈ ಪ್ರದೇಶದಲ್ಲಿವೆ. ಮಧ್ಯಮ ಗಾತ್ರದ ಕೈಗಾರಿಕೆಗಳು ತಮ್ಮದೇ ಆದ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಹೊಂದಿವೆ ಎಂದು ಆರ್‌ಟಿಐ ಮೂಲಕ ನಾನು ಪಡೆದ ಮಾಹಿತಿ ವಿವರಿಸುತ್ತದೆ. ಆದರೆ ನದಿ ದಂಡೆಗೆ ಒತ್ತಿಕೊಂಡಿರುವ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಇರುವ ನೂರಾರು ಸಣ್ಣ ಕೈಗಾರಿಕೆಗಳಿಗೆ ಒಂದು ಕೇಂದ್ರೀಕೃತ ತ್ಯಾಜ್ಯ ಸಂಸ್ಕರಣ ಘಟಕವಿಲ್ಲ. ನದಿಯನ್ನು ಸೇರುವ ತೋಡುಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಹರಿದು ಬರುವ ತ್ಯಾಜ್ಯದ ಮೂಲ ಯಾವುದು ಎಂದು ಹುಡುಕುವುದೇ ಈಗ ಸಮಸ್ಯೆಯಾಗಿಬಿಟ್ಟಿದೆ’ ಎಂದು ವಿವರಿಸುತ್ತಾರೆ ಹೋರಾಟಗಾರ ಮುನೀರ್‌ ಕಾಟಿಪಳ್ಳ.

(ಮಾರಾಟಕ್ಕೆ ಸಂಗ್ರಹಿಸಿದ ಮರುವಾಯಿ ಚಿಪ್ಪಿನ ರಾಶಿ)

ಸ್ವಾಂತಂತ್ರ್ಯ ಸಂದರ್ಭದಲ್ಲಿ ಮತ್ತು ಅದಕ್ಕೂ ಮುನ್ನ ಫಲ್ಗುಣಿ ನದಿ ಇಡೀ ಕರಾವಳಿ ಪ್ರದೇಶ ಮತ್ತು ಘಟ್ಟವನ್ನು ಬೆಸೆಯುವ ದಾರಿಯಾಗಿತ್ತು. ವಿದೇಶದಿಂದ ಸಮುದ್ರದ ಮಾರ್ಗದಲ್ಲಿ ಬರುವ ಸರಕು ಸಾಮಗ್ರಿಗಳು ಫಲ್ಗುಣಿಯ ನದಿಯಲ್ಲಿ ಮಳಲಿ ಎಂಬ ಊರಿಗೆ ಸಂಚರಿಸಿ ಅಲ್ಲಿಂದ ಕುದುರೆಗಾಡಿಯ ಮೂಲಕ ಪಶ್ಚಿಮಘಟ್ಟದ ದಾರಿಯನ್ನು ಏರುತ್ತಿದ್ದವು.

‘ಮರವೂರು ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ನಮ್ಮೂರಲ್ಲಿ ಅಂತರ್ಜಲ ಚೆನ್ನಾಗಿದೆ. ಕೆಲವೇ ಅಡಿಗಳಲ್ಲಿ ನೀರು ಸಿಗುತ್ತದೆ. ಆದರೆ ಎಣ್ಣೆ ಪಸೆ ಇರುವ ನೀರನ್ನು ಯಾವುದಕ್ಕೂ ಬಳಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಲ್ಲಿ ವೃಷಭಾವತಿ ಎಂಬ ನದಿ ಕಲುಷಿತ ಆದ ಬಗ್ಗೆ, ಬೆಳ್ಳಂದೂರು ಕೆರೆಯಲ್ಲಿ ವಿಷದ ನೊರೆ ಬಂದ ಬಗ್ಗೆ ಕೇಳಿದ್ದೇವೆ. ಅಂತಹ ಪರಿಸ್ಥಿತಿ ಬರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಅದಕ್ಕಾಗಿ ನಾವು ಪ್ರತಿಭಟನೆ ಶುರು ಮಾಡಿದ್ದೇವೆ ’ ಎನ್ನುತ್ತಾರೆ ಶಕುಂತಲ.

ಫಲ್ಗುಣಿ ನದಿ ನೇತ್ರಾವತಿಯ ಜೊತೆಸೇರಿ ಸಮುದ್ರ ಸೇರುವ ಮುನ್ನ ಸಿಗುವ ಸುಲ್ತಾನ್‌ ಬತ್ತೇರಿ ಎಂಬ ಅಳಿವೆ ಬಾಗಿಲು ವಿಶಿಷ್ಟ ಪ್ರದೇಶ. ನದಿ ದಂಡೆಯಲ್ಲಿ ನಿಂತರೆ ನಿಧಾನವಾಗಿ ಸಾಗುವ ನೀರರಾಶಿ. ಕಣ್ಣೆತ್ತಿ ದಿಟ್ಟಿಸಿದರೆ ನದಿಯ ಆ ದಂಡೆ ಸುಸ್ಪಷ್ಟ. ಮತ್ತೂ ದಿಗಂತದತ್ತ ಕಣ್ಣು ಹಾಯಿಸಿದರೆ ಓ ಅಲ್ಲಿ ಕಾಣುತ್ತದೆ ಸಮುದ್ರ. ಸಮುದ್ರದೊಡನೆ ಜೂಟಾಟ ಆಡುವಂತೆ ಮರೆಮರೆಯಾಗಿ ಹರಿಯುವ ಲಜ್ಜೆದುಂಬಿದ ಫಲ್ಗುಣಿ. ನದಿಯೂ, ಸಮುದ್ರವೂ ಸಮಾನಾಂತರವಾಗಿ ಹರಿಯುವ ಅಪರೂಪದ ನೋಟಕ್ಕೆ ವೇದಿಕೆಯಾಗಿದೆ ಸುಲ್ತಾನ್‌ ಬತ್ತೇರಿ. ಆದರೆ ಈ ಅಳಿವೆ ಬಾಗಿಲಿನಲ್ಲಿ ಕಾಣುವುದು ಕೊಳಕು ನೀರು. ಆಗೀಗ ಮೂಗಿಗೆ ಅಡರುವ ಕಡುವಾಸನೆ.

ನೇತ್ರಾವತಿ, ಮಹದಾಯಿ, ಕೃಷ್ಣೆ ತುಂಗೆಯರಂತೆ ಪ್ರಸಿದ್ಧಿಯ ಬೆಳಕಿಗೆ ಬಿದ್ದವಳಲ್ಲ ಈ ಫಲ್ಗುಣಿಯಮ್ಮ. ಆದರೆ ಆಕೆ ಕರಾವಳಿಯ ಜೀವನಾಡಿ. ಎಚ್‌. ನಾಗವೇಣಿ ಅವರು ಬರೆದ ಐತಿಹಾಸಿಕ ‘ಗಾಂಧಿಬಂದ’ ಕಾದಂಬರಿಯಲ್ಲಿ ಗಾಂಧಿಯನ್ನು ನೋಡಲು ಇದೇ ಫಲ್ಗುಣಿಯನ್ನು ಈಜಿ ನೂರಾರು ಮಂದಿ ಪ್ರಯಾಣಿಸಿದ ವಿಸ್ತೃತ ಉಲ್ಲೇಖವಿದೆ.

ಸಿಪಿಎಂನ ಹಿರಿಯ ನಾಯಕರಾಗಿದ್ದ, ಸಂಸದರೂ ಆಗಿದ್ದ ಬಿ.ವಿ. ಕಕ್ಕಿಲ್ಲಾಯ ಅವರ ‘ಬರೆಯದ ಪುಟಗಳು’ ಎಂಬ ಪುಸ್ತಕದಲ್ಲಿ ಫಲ್ಗುಣಿ ನದಿಯೇ ವ್ಯಾಪಾರ ಕೇಂದ್ರವಾಗಿರುವ ವಿಷಯವಿದೆ. ದೋಣಿಯಲ್ಲಿ ಸಾಗುವ, ಕೆಲಸ ಮಾಡುವ ಕಾರ್ಮಿಕರು ಮತ್ತು ಶ್ರಮಿಕರನ್ನು ಕಕ್ಕಿಲ್ಲಾಯರು ದೋಣಿಯಲ್ಲಿ ಸಾಗುತ್ತಾ ಸಂಘಟನೆ ಮಾಡಿದ್ದರು. ಅತೀ ಹೆಚ್ಚು ಹೆಂಚಿನ ಕಾರ್ಖಾನೆಗಳೂ ಇದೇ ನದಿ ದಂಡೆಯಲ್ಲಿದ್ದ ಇತಿಹಾಸವಿದೆ. ಪುರಾತನ ಕಾಲದಿಂದ ಸ್ವಚ್ಛವಾಗಿ ಹರಿದ ನದಿ.

(ನದಿಗೆ ಸೇರುತ್ತಿರುವ ತ್ಯಾಜ್ಯ)

‘ಸ್ಫಟಿಕದಂತಹ ನೀರು. ಹಚ್ಚ ಹಸಿರಿನ ದಂಡೆಗಳು. ಭರಪೂರ ಕೃಷಿ ಜೀವನದ ಆಧಾರವಾಗಿರುವ ಫಲ್ಗುಣಿಯನ್ನು ಈಗಲೇ ರಕ್ಷಿಸಿಕೊಳ್ಳಬೇಕು. ಮಂಗಳೂರಿನ ಅಭಿವೃದ್ಧಿಯ ಗೀಳಿಗೆ ಫಲ್ಗುಣಿ ಬಲಿಯಾಗಬಾರದು. ಮಾಲಿನ್ಯದಿಂದ ಮತ್ತು ಮರಳುಗಾರಿಕೆಯಿಂದ ಆಕೆಯನ್ನು ರಕ್ಷಿಸಬೇಕಾಗಿದೆ. ಆ ಮೂಲಕ ನಮ್ಮನ್ನೇ ನಾವು ರಕ್ಷಿಸಬೇಕಾಗಿದೆ’ ಎಂದು ಆವೇಶ ಭರಿತರಾಗಿ ಮಾತನಾಡುತ್ತಾರೆ ಪರಿಸರವಾದಿ ಶಶಿಧರ್‌ ಶೆಟ್ಟಿ.

‘ಎಲ್ಲ ಧರ್ಮದವರೂ ಒಂದಾಗಿ ನಡೆಸುತ್ತಿರುವ ಈ ಹೋರಾಟದತ್ತ ಮಂಗಳೂರಿನ ರಾಜಕೀಯದವರು ಗಮನ ಹರಿಸಬೇಕು. ಕೋಮುಗಲಭೆಗಿಂತ ಕುಡಿಯುವ ನೀರು ಅಮೂಲ್ಯ ಎಂಬುದನ್ನು ರಾಜಕೀಯ ನಾಯಕರು ಎಂದು ಅರ್ಥ ಮಾಡಿಕೊಳ್ಳುತ್ತಾರೋ ಏನೋ’ ಎನ್ನುವುದು ಅವರ ನೋವಿನ ದನಿ.

ಇದನ್ನೂ ಓದಿ: ಒಂದೇ ದಿನದಲ್ಲಿ ನದಿಗೆ ಕಟ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry